ಅಂಕಣ

ಬೆಲೆಬಾಳುವ ವಜ್ರ: ಮನೋಲ್ಲಾಸ

Webdesk - Ravikanth
| ಡಾ.ವಿ.ಎಚ್.ಮೂಲಿಮನಿ
ಸಂಜೆಯಾಯಿತು, ದಿನಪೂರ್ತಿ ನಡೆಯುತ್ತಿದ್ದ ಸನ್ಯಾಸಿ ಊರ ಹೊರಗೆ ಇದ್ದ ಅರಳಿಕಟ್ಟೆಯ ಮೇಲೆ ವಿಶ್ರಮಿಸಿಕೊಳ್ಳಲೆಂದು ಕುಳಿತನು. ಆಗ ಓರ್ವ ಶೆಟ್ಟಿಯು ಓಡೋಡಿ ಬಂದನು. ‘ಸ್ವಾಮಿ ನನಗೆ ಕೊಡಿ, ನನ್ನ ಕಲ್ಲನ್ನು ನನಗೆ ಕೊಡಿ’ ಎಂದು ಅಂಗಲಾಚಿದನು. ‘ಯಾವ ಕಲ್ಲು’ ಎಂದು ಸನ್ಯಾಸಿಯು ಆಶ್ಚರ್ಯದಿಂದ ಕೇಳಲು ಆ ಶೆಟ್ಟಿ ವಿವರಿಸಿದನು. ‘ಸ್ವಾಮಿ! ನಿನ್ನೆ ರಾತ್ರಿ ನನ್ನ ಕನಸಿನಲ್ಲಿ ಪರಮೇಶ್ವರನು ಬಂದಿದ್ದನು. ನಾನು ಸಂಪತ್ತನ್ನು ಕೇಳಲು, ಶಿವನು ಎಲ್ಲ ಸಂಪತ್ತನ್ನು ಕರುಣಿಸುವ ಅಮೂಲ್ಯ ವಜ್ರದ ಕಲ್ಲು ತಮ್ಮ ಬಳಿ ಇರುವುದಾಗಿಯೂ, ತಾವು ಈ ದಿನ ಸಂಜೆಗೆ ಇಲ್ಲಿಗೆ ಬರುವುದಾಗಿಯೂ, ತಮ್ಮ ಬಳಿ ಅದನ್ನು ನಾನು ತೆಗೆದುಕೊಳ್ಳಬಹುದು ಎಂದು ಹೇಳಿದನು.

ಸ್ವಾಮಿ! ದಯವಿಟ್ಟು ಆ ಕಲ್ಲನ್ನು ನನಗೆ ಕೊಡಿ‘ ಎಂದನು. ಸನ್ಯಾಸಿಯು ತನ್ನ ಜೋಳಿಗೆಯೊಳಗೆ ಕೈ ಹಾಕಿ ಒಂದು ವಜ್ರದ ಕಲ್ಲನ್ನು ತೆಗೆದನು. ಅದು ಒಂದು ಮಗುವಿನ ತಲೆಯಷ್ಟು ದೊಡ್ಡದಾಗಿದ್ದ ವಜ್ರವಾಗಿತ್ತು. ಅದನ್ನು ಶೆಟ್ಟಿಗೆ ಕೊಡುತ್ತಾ, ‘ಓಹೋ ಪರಶಿವನು ಬಹುಶಃ ಈ ಕಲ್ಲಿನ ಬಗ್ಗೆಯೇ ಹೇಳಿರಬೇಕು. ನಿನಗೆ ಬೇಕಿದ್ದರೆ ತೆಗೆದುಕೊ’ ಎಂದು ವಜ್ರದ ಕಲ್ಲನ್ನು ಶೆಟ್ಟಿಗೆ ನೀಡಿ ತಪಸ್ಸಿಗೆ ಕುಳಿತನು. ಜಗತ್ತಿನಲ್ಲಿ ದೊಡ್ಡದಾದ ಈ ಕಲ್ಲನ್ನು ಮಾರಿದರೆ ತಾನು ಊಹಿಸಿಕೊಳ್ಳಲು ಸಾಧ್ಯವಿದ್ದಷ್ಟು ಶ್ರೀಮಂತನಾಗುವುದು ಖಚಿತ ಎಂದು ಶೆಟ್ಟಿಗೆ ಅನಿಸಿತು. ಕೂಡಲೇ ಮನೆಗೆ ಹೊರಟನು. ಆದರೆ, ಶೆಟ್ಟಿಗೆ ಇಡೀ ರಾತ್ರಿ ನಿದ್ರೆ ಬರಲಿಲ್ಲ. ಹಾಸಿಗೆಯಲ್ಲಿಯೇ ಹೊರಳಾಡುತ್ತಿದ್ದನು. ಶೆಟ್ಟಿಯು ಮರುದಿನ ಸೂರ್ಯೋದಯದ ಮೊದಲೇ ಸನ್ಯಾಸಿಯ ಬಳಿಗೆ ಬಂದನು. ‘ಸ್ವಾಮಿ ಈ ವಜ್ರದ ಕಲ್ಲನ್ನು ನೀವು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಇಷ್ಟು ಬೆಲೆಬಾಳುವ ವಜ್ರವನ್ನು ಕೇಳಿದ ಕೂಡಲೇ ನೀಡಬಲ್ಲ ಹೃದಯವನ್ನು ನನಗೆ ಕೊಡಿ’ ಎಂದನು.

ಪ್ರಾಪಂಚಿಕ ಸುಖಕ್ಕಿಂತ ಮಾನವೀಯ ಮೌಲ್ಯಗಳು ದೊಡ್ಡವು. ಯಾವನು ತ್ಯಾಗ ಮಾಡುತ್ತಾನೆಯೋ ಅವನು ಮಾತ್ರ ಮಹಾಕಾರ್ಯಗಳನ್ನು ಸಾಧಿಸಬಲ್ಲ. ಬುದ್ಧನು ರಾಜ್ಯಭೋಗವನ್ನು ತ್ಯಾಗ ಮಾಡಿ ಜ್ಞಾನ ಸಂಪಾದಿಸಿದ್ದರಿಂದ ರಾಜನಾಗಿ ಮಾಡಬಹುದಾಗಿದ್ದ ಸೇವೆಗಿಂತಲೂ ಹೆಚ್ಚಿನ ಸೇವೆಯನ್ನು ಮಾಡಲು ಸಾಧ್ಯವಾಯಿತು. ಮಹಾತ್ಮ ಗಾಂಧಿಯವರು ಮಹಾತ್ಯಾಗ ಮಾಡಿದ ಮೇಲೆಯೇ ಸಮಗ್ರ ಭಾರತದ ಜನ ಅವರನ್ನು ಅನುಸರಿಸಿ ನಡೆದರು. ಅವರೊಂದಿಗೆ ಸಹಕರಿಸಿದರು. ಅವರೊಂದಿಗೆ ಪ್ರಾಣ ಕೊಟ್ಟರು. ಸ್ವಾತಂತ್ರ್ಯವನ್ನು ಪಡೆದರು. ಆದ್ದರಿಂದ ನಿಜವಾದ ಮಹಾಕಾರ್ಯವೆಂಬುದೇನಾದರೂ ಸಾಧಿಸಬೇಕಾದರೆ, ನಿಜವಾದ ಸೇವೆ ಸಲ್ಲಬೇಕಾದರೆ ಅಲ್ಲಿ ಪರಿಪೂರ್ಣವಾದ ತ್ಯಾಗ ಇರಲೇ ಬೇಕಾಗುತ್ತದೆ. ಇದನ್ನೇ ಸ್ವಾಮಿ ವಿವೇಕಾನಂದರು ಘಂಟಾಘೊಷವಾಗಿ ಸಾರುತ್ತಾರೆ. ಮಹಾಕಾರ್ಯಗಳು ಮಹಾತ್ಯಾಗದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿರುವುದಲ್ಲಿ ವಾಸ್ತವವಿದೆ.

(ಲೇಖಕರು ನಿವೃತ್ತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)