ಅಂಕಣ

ಯುಪಿಐನಲ್ಲಿ ಪೂರ್ವ ಅನುಮೋದಿತ ಸಾಲ; ಏನಿದು ಹೊಸ ಹೆಜ್ಜೆ?

Webdesk - Ravikanth

| ನಾಗೇಶ ಜಿ. ವೈದ್ಯ

ರಿಸರ್ವ್ ಬ್ಯಾಂಕ್, ಏಪ್ರಿಲ್ 6ರ ವಿತ್ತೀಯ ನೀತಿ ಸಮಿತಿಯು ಸಭೆಯಲ್ಲಿ, ಹೆಚ್ಚುವರಿ ಕ್ರಮವಾಗಿ ಬ್ಯಾಂಕ್​ಗಳಲ್ಲಿ ಪೂರ್ವ ಮಂಜೂರಾದ ಸಾಲದ ಮಿತಿಯನ್ನು ಏಕೀಕೃತ ಪಾವತಿಗಳ ಇಂಟರ್ಫೆಸ್ (ಯುಪಿಐ) ಮೂಲಕ ಪಡೆಯಲು ಅನುಮತಿಸಿದೆ. ವಿವಿಧ ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್​ಗೆ ಕ್ರೋಢೀಕರಿಸುವ ಈ ತಂತ್ರಜ್ಞಾನ, ಇನ್ನು ಮುಂದೆ ಸಾಲದ ಖಾತೆಯನ್ನೂ ಒಳಗೊಳ್ಳಲಿದೆ.

ಹಣಕಾಸಿನ ಸೇರ್ಪಡೆ ಯೋಜನೆ, ನೇರ ಲಾಭ ವರ್ಗಾವಣೆ, ನೋಟು ಅಮಾನ್ಯೀಕರಣ ಹಾಗೂ ಕರೊನಾ ಸಾಂಕ್ರಾಮಿಕಗಳು ಯುಪಿಐ ಅನ್ನು ಗ್ರಾಹಕರು ಉಪಯೋಗಿಸಲು ಅಪರಿಮಿತ ಅವಕಾಶವನ್ನು ಒದಗಿಸಿಕೊಟ್ಟಿತು. ಕಳೆದ ಜೂನ್​ನಲ್ಲಿ ರುಪೆ ಕ್ರೆಡಿಟ್ ಕಾರ್ಡ್ ಗಳನ್ನು ಯುಪಿಐಗೆ ಜೋಡಿಸಲು ಅನುಮತಿಸಲಾಯಿತು. ಇದು ತಮ್ಮ ಖಾತೆಯಲ್ಲಿನ ಹಣವನ್ನು ಉಪಯೋಗಿಸದೇ ಪಾವತಿ ಮಾಡಲು ಅನುಕೂಲ ಕಲ್ಪಿಸಿತು. ಹಾಗೆಯೇ ಕಾರ್ಡ್ ಸದಾ ತಮ್ಮೊಂದಿಗೆ ಒಯ್ಯಬೇಕಾದ ಅನಿವಾರ್ಯತೆಯನ್ನು ದೂರಮಾಡಿತು. ಅಲ್ಲಿಯವರೆಗೆ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಶುಲ್ಕವನ್ನು ನೀಡುತ್ತಿದ್ದ ವ್ಯಾಪಾರಿಗಳಿಗೂ ಶುಲ್ಕದ ಹಣವನ್ನು ಉಳಿಸಲು ಸಹಕಾರಿಯಾಯಿತು. ಪ್ರಸ್ತುತ ಚಿಲ್ಲರೆ ಡಿಜಿಟಲ್ ಪಾವತಿಯ ಶೇ.75ರಷ್ಟನ್ನು ಯುಪಿಐ ನಿರ್ವಹಿಸುತ್ತದೆ. ವೇಗವಾಗಿ, ತಡೆರಹಿತ ನಗದು ರಹಿತ ಪಾವತಿಗಳನ್ನು ಸಕ್ರಿಯಗೊಳಿಸುವ ಯುಪಿಐ, ಮಾರ್ಚ್ ತಿಂಗಳಿನಲ್ಲಿ 14 ಲಕ್ಷ ಕೋಟಿ ರೂಪಾಯಿ ಮೌಲ್ಯದ 868 ಕೋಟಿ ವಹಿವಾಟುಗಳನ್ನು ದಾಖಲಿಸಿದೆ.

ಯುಪಿಐ ಈಗ ಅಂತಾರಾಷ್ಟೀಯ

ಫೆಬ್ರವರಿಯಲ್ಲಿ ಭಾರತ ಮತ್ತು ಸಿಂಗಾಪುರ್​ನಲ್ಲಿ ವಾಸಿಸುವ ಜನರು ಪರಸ್ಪರ ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡಲಾಗಿದೆ. ಹಾಗೆಯೇ ಜಿ20 ದೇಶಗಳಿಂದ ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೂ ಯುಪಿಐ ಬಳಕೆ ಸಾಧ್ಯವಾಗಿದೆ. ಇದು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್​ಗಳನ್ನು ಒಳಗೊಳ್ಳಲಿದೆ.

ಹೊಸ ಶುಲ್ಕ ಲಾಗು: ಏಪ್ರಿಲ್ 1 ರಿಂದ, 2000 ರೂ.ಗಿಂತ ಹೆಚ್ಚಿನ ಮೊತ್ತದ ವಹಿವಾಟಿನ ಮೇಲೆ, ಪಾವತಿಯನ್ನು ಸ್ವೀಕರಿಸುವ ವ್ಯಾಪಾರಿಯು ಶೇ.0.5 ರಿಂದ ಶೇ.1.1 ವಿನಿಮಯ ಶುಲ್ಕ ಜಾರಿಗೆ ಬಂದಿದೆ. ಆದರೆ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ.

ಏನಿದು ಹೊಸ ಹೆಜ್ಜೆ?

ಪ್ರಸ್ತುತ ಯುಪಿಐ ವಹಿವಾಟುಗಳಿಗಾಗಿ ಬ್ಯಾಂಕ್​ಗಳಲ್ಲಿನ ಠೇವಣಿ ಖಾತೆಗಳನ್ನು ಬಳಸಲಾಗುತ್ತದೆ. ಒಟ್ಟು ಯುಪಿಐ ವಹಿವಾಟುಗಳಲ್ಲಿ ಶೇ.99.9 ಜೋಡಿಸಲಾದ ಬ್ಯಾಂಕ್ ಖಾತೆಗಳಿಂದಲೇ ನಡೆಯುತ್ತದೆ. ಇದರ ಹೊರತಾಗಿ, ವ್ಯಾಲೆಟ್​ಗಳಂಥ ಸಾಧನಗಳೂ ಇವೆ. ಈಗ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಪೂರ್ವ ಅನುಮೋದಿತ ಸಾಲದ ಮೊತ್ತವನ್ನು ಕೂಡ ಯುಪಿಐ ಮೂಲಕ ಉಪಯೋಗಿಸಿಕೊಳ್ಳಬಹುದಾಗಿದೆ. ಬ್ಯಾಂಕುಗಳು ತಮ್ಮ ಗ್ರಾಹಕರ ದತ್ತಾಂಶ, ಹಿನ್ನೆಲೆ, ಅರ್ಹತೆಯನ್ನು ಗಮನಿಸಿ, ಅವರಿಗೆ ಸಾಲದ ಮಿತಿಯನ್ನು ಅನುಮೋದಿಸಬಹುದು. ಇದನ್ನೇ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಅಥವಾ ಸಾಲ ಎನ್ನಲಾಗುತ್ತದೆ. ಹಾಗಾಗಿ, ಗ್ರಾಹಕರು ಇನ್ನು ಮುಂದೆ ಯುಪಿಐ ಮೂಲಕ ಖರೀದಿ ಅಥವಾ ಹಣ ವರ್ಗಾವಣೆ ಮಾಡಲು ಠೇವಣಿ ಇರಬೇಕು ಎಂಬುದೇನೂ ಇಲ್ಲ. ಪೂರ್ವ ಅನುಮೋದಿತ ಸಾಲದ ಮಿತಿಯವರೆಗೆ ಯುಪಿಐ ವಹಿವಾಟು ಮಾಡಬಹುದು. ಇದು ಸಾಲಗಾರರಿಗೆ ವಹಿವಾಟಿನ ವೆಚ್ಚವನ್ನೂ ಕಡಿಮೆ ಮಾಡಲಿದೆ.

ವಿನಿಮಯ ಶುಲ್ಕ- ಯಾರಿಗೆ ಎಷ್ಟು?
  • ಇಂಧನ ಶೇ. 0.5
  • ದೂರ ಸಂಪರ್ಕ, ಶಿಕ್ಷಣ, ಉಪಯುಕ್ತತೆ, ಅಂಚೆ ಕಚೇರಿ, ಕೃಷಿಶೇ. 0.7
  • ಸೂಪರ್ ಮಾರ್ಕೆಟ್ ಶೇ. 0.9
  • ವಿಮೆ, ಸರ್ಕಾರ, ಪರಸ್ಪರ ನಿಧಿ (ಮ್ಯೂಚುವಲ್ ಫಂಡ್) ಶೇ. 1.0
  • ಪ್ರಿಪೇಯ್ಡ್ ಪಾವತಿ ಸಾಧನಗಳ ಬಳಕೆಗೆ ಶೇ. 1.1

ಗ್ರಾಹಕರಿಗೆ ಲಾಭವೇ ಲಾಭ

  • ಒಂದೇ ಆಪ್​ನಲ್ಲಿ ಬಹು ಬ್ಯಾಂಕ್ ಖಾತೆಗಳಿಗೆ ಪ್ರವೇಶ
  • ಬಳಕೆ ಸುಲಭ
  • ಅರೆಕ್ಷಣದಲ್ಲಿ ವಹಿವಾಟು
  • ಕ್ಯೂಆರ್ ಕೋಡ್ ಸ್ಕಾ್ಯನ್, ಮೊಬೈಲ್ ಸಂಖ್ಯೆ, ವರ್ಚುವಲ್ ಪಾವತಿ ವಿಳಾಸ ಬಳಸಿ ಹಣ ವರ್ಗಾವಣೆ
  • ಠೇವಣಿಯ ಹೊರತಾಗಿ, ಪೂರ್ವ ಅನುಮೋದಿತ ಸಾಲದ ಮಿತಿಯವರೆಗೆ ಖರ್ಚಿಗೆ ಅವಕಾಶ
  • ಕಾರ್ಡ್ ಬಳಕೆ ಇಲ್ಲ; ಹಾಗಾಗಿ ಕಳೆದುಕೊಳ್ಳುವ ಭಯವಿಲ್ಲ.
  • ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ