ಅಂಕಣ

ಆಟವೆಂದರೆ ಮನರಂಜನೆ ಮಾತ್ರವಲ್ಲ ಬದುಕಿನ ವಿಸ್ಮಯ

ಅಂತರಂಗ ಸಂಪೂರ್ಣವಾಗಿ ನೆಮ್ಮದಿಯನ್ನು ಪಡೆದಿದ್ದರೆ, ಗೆಲುವಾಗಲಿ, ಸೋಲಾಗಲಿ ಪ್ರತಿಯೊಂದು ಅಂಶವೂ ಸುಲಭವಾಗಿ ತೋರುತ್ತದೆ. ಇಡೀ ಜೀವನ ಹೋರಾಟವಿಲ್ಲದೆ ಸುಲಭವಾಗಿ ನಡೆಯುತ್ತದೆ. ಅಂತರಂಗಕ್ಕೆ ನೆಮ್ಮದಿಯಿಲ್ಲದಿದ್ದಾಗ ಪ್ರತಿಯೊಂದೂ ಕಷ್ಟಕರವಾಗಿ ಭಾಸವಾಗುತ್ತದೆ. ಸಣ್ಣಪುಟ್ಟ ವಿಷಯಗಳು ಸಹ ಸಮಸ್ಯೆಯಾಗಿ ಕಂಡುಬರುತ್ತವೆ.

ದೇಹಾರೋಗ್ಯಕ್ಕೆ ಮುಖ್ಯವಾದುದು ಆಟ. ಶಾಲಾದಿನಗಳಲ್ಲಿ ನಾನು ಆಡದ ಆಟಗಳೇ ಇಲ್ಲವೆನ್ನಬಹುದು. ಹಗ್ಗ ಹಿಡಿದು ಮೇಲಕ್ಕೆ ಹತ್ತುವುದು, ದೇಹವನ್ನು ಬಗ್ಗಿಸುವಂತಹ ಜಿಮ್ನಾ್ಯಸ್ಟಿಕ್ಸ್, ಹೊಡೆದಾಟಗಳು, ಕಬಡ್ಡಿ, ಬ್ಯಾಡ್ಮಿಂಟನ್- ಯಾವುದನ್ನೂ ಬಿಡಲಿಲ್ಲ.

ಚಿಕ್ಕವನಾಗಿದ್ದಾಗ ಕ್ರಿಕೆಟ್ ಯಾರೇ ಆಡುತ್ತಿರಲಿ ಅಲ್ಲಿಗೆ ಹೋಗಿ ಸೇರಿಕೊಳ್ಳುತ್ತಿದ್ದೆ. ಅವರು ನನಗೆ ಬ್ಯಾಟ್ ಮಾಡಲು ಬಿಡುತ್ತಿರಲಿಲ್ಲ. ಆದರೆ, ಫೀಲ್ಡ್ ಮಾಡುವಷ್ಟರಲ್ಲೇ ಸಂತೋಷಪಡುತ್ತಿದ್ದೆ. ಈಗಲೂ, ಮಕ್ಕಳು ಆಟವಾಡುತ್ತಿದ್ದರೆ ನಾನಾಗಿಯೇ ಅವರೊಂದಿಗೆ ಸೇರಿಕೊಳ್ಳುತ್ತೇನೆ. ಕಾಲೇಜಿನ ಹಾಕಿ ಟೀಮಿನಲ್ಲಿ ಅವಕಾಶ ಪಡೆದುಕೊಂಡೆ. ಆ ವಯಸ್ಸಿನಲ್ಲಿ ಮೋಟಾರ್ ಸೈಕಲ್​ಗಳನ್ನು ಓಡಿಸುವುದರಲ್ಲಿ ಮತ್ತು ಹಾರಾಟದಲ್ಲಿ ಆಸಕ್ತಿ ಬೇರೆ ಆಟಗಳಿಗಿಂತಲೂ ಹೆಚ್ಚಾಗಿತ್ತು. ಕೆಲವೇ ನಿಮಿಷಗಳು ಗಾಳಿಯಲ್ಲಿ ಹಾರಾಡಲು, ಗಂಟೆಗಳ ಸಿದ್ಧತೆಯನ್ನು ಮಾಡಿಕೊಳ್ಳಬೇಕು.

ನನಗೆ ಆಗ ಇಪ್ಪತ್ತೆರಡು ವಯಸ್ಸಿರಬಹುದು, ಒಮ್ಮೆ ನೀಲಗಿರಿ ಪರ್ವತದಿಂದ ಗ್ಲೈಡರಿನಲ್ಲಿ ಹಾರಾಡಿದೆ. ಎಲ್ಲಿಯೋ ಬಹಳ ದೂರದಲ್ಲಿ ನೆಲಕ್ಕೆ ಇಳಿದೆ. ಸೂರ್ಯನನ್ನು ಹಿಂಬಾಲಿಸಿ ದಿಕ್ಕನ್ನು ಗುರುತಿಸಿ ಅಲ್ಲಿಂದ ನಡೆದು ಬಂದೆ. ರಾತ್ರಿ-ಹಗಲು ಕಾಡುಗಳಲ್ಲಿ ಕಿಲೋಮೀಟರ್​ಗಳು ಲೆಕ್ಕವಿಲ್ಲದೆ ನಡೆದಾಡಿದೆ. ಕೈಯಲ್ಲಿದ್ದ ಒಂದೇ ಒಂದು ಸ್ಯಾಂಡ್​ವಿಚ್ ತಿಂದೆ. ಹಸಿವು ನೀಗಲಿಲ್ಲ. ಅಲ್ಲಲ್ಲಿ ಒಂದೆರಡು ಹಳ್ಳಿಗಳನ್ನು ಸಮೀಪಿಸಿದೆ. ಅಲ್ಲಿದ್ದವರು ತಮಿಳು ಬಿಟ್ಟು ಬೇರೇನನ್ನೂ ಮಾತನಾಡಲಿಲ್ಲ. ನನಗಾದರೋ ಆಗ ತಮಿಳು ಗೊತ್ತಿರಲಿಲ್ಲ. ಹೇಗೋ ಒಂದು ಟೀ ಅಂಗಡಿಯನ್ನು ತಲುಪಿದೆ. ಅಲ್ಲಿ ಬಿಸಿಬಿಸಿಯಾಗಿ ಇಡ್ಲಿ ತಯಾರಾಗಿತ್ತು. ನನಗಿದ್ದ ಹಸಿವೆಯನ್ನು ನೀಗಲು ಸುಮಾರು ಇಪ್ಪತೆôದು ಇಡ್ಲಿಗಳಾದರೂ ಬೇಕಾಗುತ್ತಿತ್ತು. ಆದರೆ, ನನ್ನನ್ನು ಪತ್ತೆ ಮಾಡಲು ನಮ್ಮ ಗುಂಪಿನವರಿಗೆ ಅದೆಷ್ಟು ದಿನಗಳು ಬೇಕಾಗಬಹುದೆಂಬುದು ತಿಳಿಯದು. ಅಂತಹ ಪರಿಸ್ಥಿತಿಯಲ್ಲಿ ಇರುವ ಎಲ್ಲ ಹಣವನ್ನು ಖರ್ಚು ಮಾಡಿಬಿಟ್ಟರೆ ಹೇಗೆ ಎಂದು ಯೋಚಿಸಿ, ಒಂದೂವರೆ ರೂಪಾಯಿ ಕೊಟ್ಟು ಎರಡೇ ಎರಡು ಇಡ್ಲಿಗಳನ್ನು ಖರೀದಿಸಿ, ಅದನ್ನು ತಿಂದೆ. ನನ್ನ ಗುಂಪಿನವರು ಎರಡೂವರೆ ದಿನಗಳ ನಂತರ ನನ್ನನ್ನು ಪತ್ತೆಹಚ್ಚಿದರು.

ಇಷ್ಟಾದರೂ ನನ್ನ ಹಾರಾಡುವ ಆಸೆ ತೀರಲಿಲ್ಲ!

ಸೊರಗಿ ಹೋದ ಹೃದಯವುಳ್ಳ ಮತ್ತು ಕಠಿಣ ಮನಸ್ಸಿನ ಸೆರೆಯಾಳುಗಳಲ್ಲಿಯೂ ಆಟದ ಬಗೆಗೆ ಇರುವ ಆಸಕ್ತಿಯನ್ನು ಕಣ್ಣಾರೆ ಕಂಡವನು ನಾನು. ಮೊದಲನೆಯ ಬಾರಿಗೆ ಕೈದಿಗಳನ್ನು ಭೇಟಿಮಾಡಲು ನನಗೆ ಅನುಮತಿ ದೊರೆತಿತ್ತು. ಸೆರೆಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಗಾಳಿಯಲ್ಲಿಯೇ ಒಂದು ಬಗೆಯ ತೀರಲಾರದ ವೇದನೆ ಹೆಪ್ಪುಗಟ್ಟಿರುವಂತೆ ಭಾಸವಾಯಿತು. ಸುಮಾರು ಇನ್ನೂರು ಮಂದಿ ಕೈದಿಗಳನ್ನು ಆಟದ ಮೈದಾನಕ್ಕೆ ಬರುವಂತೆ ಹೇಳಿದೆ. ‘ನಿಮಗೆ ಯೋಗ ಹೇಳಿಕೊಡಲು ಬರಲಿಲ್ಲ, ನಿಮ್ಮೊಂದಿಗೆ ಚೆಂಡಾಟವನ್ನು ಆಡಲು ಬಂದಿದ್ದೇನೆ’ ಎಂದು ಹೇಳಿದೆ. ಅವರ ಮುಖದಲ್ಲಿ ಆದ ಬದಲಾವಣೆಯನ್ನು ಕಂಡುಕೊಂಡೆ. ಆಟ ಪ್ರಾರಂಭವಾಯಿತು. ಆಟದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದವರು ಸಹ ಹತ್ತು-ಹದಿನೈದು ನಿಮಿಷಗಳ ನಂತರ ಆಟದಲ್ಲಿ ನಿರತರಾಗಿ, ತಲ್ಲೀನರಾಗಿ, ತಮ್ಮನ್ನು ತಾವೇ ಮರೆತರು. ಆಟದಲ್ಲಿ ತನ್ಮಯರಾದ ಅವರು ಕಿರುಚಾಡುತ್ತ, ಕುಪ್ಪಳಿಸುತ್ತ ಮಕ್ಕಳಂತೆ ಆಡಿಕುಣಿದರು. ಆಟ ಮುಗಿದು ಹೊರಡಲು ಸಿದ್ಧವಾದಾಗ ‘ಹೋಗಬೇಡಿ’ ಎಂದು ಕೆಲವರು ನನ್ನ ಕೈ ಹಿಡಿದುಕೊಂಡು ಕಣ್ಣೀರು ಸುರಿಸಿದರು. ಆಟದ ಮಹಿಮೆಯೇ ಅಂತಹುದು.

ಶಂಕರನ್ ಪಿಳ್ಳೆ ಒಮ್ಮೆ ತನ್ನ ಸ್ನೇಹಿತನ ಮನೆಗೆ ಹೋದರು. ಅಲ್ಲಿ ಅವರ ಸ್ನೇಹಿತ ತನ್ನ ನಾಯಿಯೊಂದಿಗೆ ಕುಳಿತುಕೊಂಡು ಚೆಸ್ ಆಡುತ್ತಿದ್ದರು. ಶಂಕರನ್ ಪಿಳ್ಳೆ ಆಶ್ಚರ್ಯದಿಂದ, ‘ಅರೆ, ಇಂತಹ ಬುದ್ಧಿವಂತ ನಾಯಿಯನ್ನು ನಾನು ಇದುವರೆಗೆ ನೋಡಿಯೇ ಇಲ್ಲ’ ಎಂದರು. ‘ನೀನು ಎಣಿಸಿದಂತೆ ಇದೇನು ಅಂತಹ ಬುದ್ಧಿಶಾಲಿಯಲ್ಲ. ಹತ್ತು ಸಲ ಆಡಿದ ಆಟದಲ್ಲಿ ನನ್ನೊಂದಿಗೆ ಅದು ಮೂರು ಬಾರಿ ಸೋತುಹೋಯಿತು’ ಎಂದರು ಆ ಸ್ನೇಹಿತರು. ತಮಾಷೆಯಾಗಿದೆ ಈ ಕಥೆ. ಆದರೆ ಆಟದಲ್ಲಿ ಕೆಲವು ಸಂದರ್ಭಗಳಲ್ಲಿ ಸೋತರೂ ಮತ್ತೆ ಆಡಬೇಕೆಂಬ ಉತ್ಸಾಹ ಅಗತ್ಯ ಎಂಬುದನ್ನು ಆ ನಾಯಿಯಿಂದ ಅಥವಾ ಆ ಸ್ನೇಹಿತರಿಂದ ಕಲಿಯಬಹುದು.

ಆಟದಲ್ಲಿ ಇದೇ ಮುಖ್ಯವಾದ ಅಂಶ. ಗೆಲ್ಲಬೇಕು ಎಂಬುದು ಗುರಿಯಾದರೂ, ಸೋಲನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕೆಂಬ ಮಾನಸಿಕ ಪ್ರಬುದ್ಧತೆ, ಪಕ್ವತೆ ಇದ್ದರೆ ಮಾತ್ರ ಆಟ ಚೆನ್ನಾಗಿರುತ್ತದೆ. ಆಟವಾಡುವಾಗ ಸಂಪೂರ್ಣ ಗಮನ ಆಟದಲ್ಲಿ ಇರಬೇಕೇ ಹೊರತು ಅದರ ಫಲಿತಾಂಶದಲ್ಲಿ ಇರಬಾರದು.

ಯಾವುದೇ ಕಾರ್ಯದಲ್ಲಿದ್ದರೂ, ಸಂಪೂರ್ಣವಾಗಿ ಅದರಲ್ಲಿ ಮುಳುಗದೆ, ತೀವ್ರವಾಗಿ ಅದರಲ್ಲಿ ತಲ್ಲೀನರಾಗದೆ ಇದ್ದಲ್ಲಿ, ಅದು ಪೂರ್ಣ ಸಂತೃಪ್ತಿಯನ್ನು ತಂದುಕೊಡುವುದಿಲ್ಲ. ಕೆಲಸದ ಸ್ಥಳದಲ್ಲಿ ಮಾತ್ರವಲ್ಲ, ನಿಮ್ಮ ತಂದೆ-ತಾಯಂದಿರಲ್ಲಿ, ಹೆಂಡತಿಯೊಂದಿಗೆ, ಗಂಡನೊಂದಿಗೆ, ಮಕ್ಕಳೊಂದಿಗೆ ಸಂಪೂರ್ಣವಾಗಿ ಅರ್ಪಣೆ ಮಾಡಿಕೊಳ್ಳದಿದ್ದರೆ, ಜೀವನ ಎಂಬುದು ಒಂದು ಅರ್ಥಹೀನವಾದ ಹೊರೆಯಾಗುತ್ತದೆ. ಅದರಲ್ಲಿ ಸಂಪೂರ್ಣವಾಗಿ ತಲ್ಲೀನರಾದರೆ ಆಗ ಅದು ಸ್ವರ್ಗ, ಹಾಗಿಲ್ಲದಿದ್ದರೆ ಅದು ನರಕ.

ಸಂಪೂರ್ಣ ತಲ್ಲೀನತೆ ಇಲ್ಲದೆ ನೀವು ಅನುಭವಿಸಿದ ಯಾವುದಾದರೂ ಒಂದು ಅಂಶವಿದೆಯೇ ಹೇಳಿ. ದೇಹ ಹಾಗೂ ಮನಸ್ಸನ್ನು ಪೂರ್ತಿಯಾಗಿ ತಲ್ಲೀನಗೊಳಿಸದೆ, ಪಡೆದ ಗೆಲುವು ಯಾವುದಾದರೂ ಇದೆಯೇ ಎಂಬುದನ್ನು ಯೋಚಿಸಿ. ಜೀವನದ ಯಾವುದೇ ಹಂತದಲ್ಲಿದ್ದರೂ, ಗೆಲುವನ್ನು ಬಹುಮಟ್ಟಿಗೆ ತೀರ್ವನಿಸುವ ಮುಖ್ಯವಾದ ವಿಷಯ ಯಾವುದು? ದೇಹ ಮತ್ತು ಮನಸ್ಸನ್ನು ಯಾವ ಪ್ರಮಾಣದಲ್ಲಿ ನಿಮ್ಮ ಅಧೀನದಲ್ಲಿ ಇರಿಸಿಕೊಳ್ಳಲು ಸಾಧ್ಯ ಎಂಬುದು ಅಗತ್ಯವಿರುವ ಮುಖ್ಯಾಂಶ. ಆಟವೂ ಹಾಗೆಯೇ.

ಒಬ್ಬ ನಾಯಕನಿಗೆ ಮುಖ್ಯವಾಗಿ ಇರಬೇಕಾದ ಗುಣಗಳು ಯಾವುವು? ಕೆಲಸದಲ್ಲಿ ಸಂಪೂರ್ಣವಾಗಿ ತಲ್ಲೀನನಾಗಿರಬೇಕು. ತನ್ನ ಭಾಗದ ಕೆಲಸವನ್ನಾದರೂ ಪರಿಪೂರ್ಣವಾಗಿ ಮಾಡುವಂಥ ಮನಸ್ಸುಳ್ಳವನಾಗಿರಬೇಕು. ಸಾಧನೆ ಮಾಡಬೇಕೆಂಬ ಛಲ ಇರುವುದಾದರೂ, ಸೋಲನ್ನು ಕಂಡಾಗ ಹಿಂದೆಗೆಯದೆ, ಮತ್ತೊಂದು ಅವಕಾಶ ದೊರೆಯಿತೆಂದು ಭಾವಿಸಿ, ಅದನ್ನು ಸಂತೋಷದಿಂದ ಸ್ವೀಕರಿಸುವಂತಹ ಮನಸ್ಸಿರಬೇಕು. ಜೀವನದ ಮುಖ್ಯವಾದ ಅಂಶ ಅದು. ಅಂತರಂಗ ಸಂಪೂರ್ಣವಾಗಿ ನೆಮ್ಮದಿಯನ್ನು ಪಡೆದಿದ್ದರೆ, ಗೆಲುವಾಗಲಿ, ಸೋಲಾಗಲಿ ಪ್ರತಿಯೊಂದು ಅಂಶವೂ ಸುಲಭವಾಗಿ ತೋರುತ್ತದೆ. ಇಡೀ ಜೀವನ ಹೋರಾಟವಿಲ್ಲದೆ ಸುಲಭವಾಗಿ ನಡೆಯುತ್ತದೆ. ಅಂತರಂಗಕ್ಕೆ ನೆಮ್ಮದಿ ಇಲ್ಲದಿದ್ದಾಗ ಪ್ರತಿಯೊಂದೂ ಕಷ್ಟಕರವಾಗಿ ಭಾಸವಾಗುತ್ತದೆ. ಸಣ್ಣಪುಟ್ಟ ವಿಷಯಗಳು ಸಹ ಸಮಸ್ಯೆಯಾಗಿ ಕಂಡುಬರುತ್ತವೆ. ಇವೆಲ್ಲವೂ ಆಟದಲ್ಲಿ ಸಹ ಕಂಡುಬರುವ ಅಂಶಗಳು.

ಈಶ ನಡೆಸಿದ ಗ್ರಾಮೋತ್ಸವದಲ್ಲಿ, ಇಂತಹ ಅಂಶಗಳನ್ನು ಆಟಗಳಲ್ಲಿ ಕಣ್ಣಾರೆ ನೋಡಲು ಸಾಧ್ಯವಾಯಿತು. ಗ್ರಾಮೋತ್ಸವದಲ್ಲಿ ಸುಮಾರು ಮುನ್ನೂರು ಗುಂಪುಗಳು ಆಟಗಳಲ್ಲಿ ಭಾಗವಹಿಸಿದವು. ಮೂರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಇದನ್ನು ವೀಕ್ಷಿಸಿದರು. ಹಳ್ಳಿಗಳಲ್ಲಿ ಜನರ ಮುಂದೆ ಬಂದು ನಿಲ್ಲಲು ಹಿಂದೇಟು ಹಾಕುತ್ತಿದ್ದ ಹಲವರು, ಆಟಗಳಲ್ಲಿ ಪಾಲ್ಗೊಂಡು ತಮ್ಮ ಗುಂಪನ್ನು ಮುನ್ನಡೆಸಲು ತಾವಾಗಿಯೇ ಮುಂದೆ ಬಂದರು. ಅವರಲ್ಲಿ ಹುದುಗಿಕೊಂಡಿದ್ದ ಸಾಮರ್ಥ್ಯ ಹೀಗೆ ಹೊರಬಂದಿತು. ಆಟದಲ್ಲಿ ನಿಮ್ಮೊಂದಿಗೆ ಬೇರೆಯವರನ್ನು ಸೇರಿಸಿಕೊಂಡು ಆತ್ಮೀಯತೆಯನ್ನು ಬೆಳೆಸಿಕೊಳ್ಳುವಂತಹ ಸಹಜ ಸ್ವಭಾವವಿರುತ್ತದೆ. ನಿಮ್ಮ ಗುಂಪಿಗೆ ಸೇರಿದವರು ಎಂಬ ಭಾವನೆಯೊಂದಿಗೆ- ಅಕ್ಕಪಕ್ಕದವರನ್ನು- ನಿಮ್ಮ ಇಷ್ಟಾನಿಷ್ಟಗಳನ್ನು ತೊರೆದು ಸೇರಿಸಿಕೊಳ್ಳುತ್ತೀರಿ. ಎಲ್ಲರೂ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಒಂದೇ ದೃಷ್ಟಿಯನ್ನು ಇರಿಸಿಕೊಂಡು ಒಮ್ಮನಸ್ಸಿನಲ್ಲಿ ಕ್ರಿಯಾಶೀಲರಾಗುತ್ತೀರಿ. ಬೇರೆಯವರನ್ನು ನಿಮ್ಮೊಂದಿಗೆ ಸೇರಿಸಿಕೊಳ್ಳುವ ಗುಣ ಒಂದು ಒಳ್ಳೆಯ ಸಮುದಾಯದ ನಿರ್ವಣಕ್ಕೆ ಅಡಿಪಾಯವಲ್ಲವೆ?

ಆಟದ ಮಹತ್ವವೇನು?: ಅದರಲ್ಲಿ ಅರೆಬರೆ ಮನಸ್ಸಿನಲ್ಲಿ ಪಾಲ್ಗೊಳ್ಳಲಾಗದು. ದೇಹ ಹಾಗೂ ಮನಸ್ಸು ಎರಡನ್ನೂ ಒಂದೇ ಸಮಯದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಆ ಮೂಲಕ ಪ್ರಯೋಜನ ಪಡೆಯುವುದಾಗಿದೆ. ಮೈದಾನದಲ್ಲಿ ಆಟವಾಡುವಂತಹ ಯಾವುದೇ ಆಟವಾದರೂ ದೇಹ, ಮನಸ್ಸು ಪೂರ್ತಿಯಾಗಿ ಅದರಲ್ಲಿ ಬೇರೂರಿದರೆ ಮಾತ್ರ ಸರಿಯಾದ ಆಟವಾಗುತ್ತದೆ.

ಒಂದು ಚೆಂಡನ್ನು ಎತ್ತಿ ಎಸೆಯಬೇಕಾದರೂ ಅದರಲ್ಲಿ ಸಂಪೂರ್ಣವಾದ ಆಸಕ್ತಿ ಇಲ್ಲದಿದ್ದರೆ ಅದು ಸುಲಭವಾಗುವುದಿಲ್ಲ. ಗುರಿಯನ್ನು ಮುಟ್ಟಲು ಅದಕ್ಕೆ ಸರಿಯಾದ ವೇಗ ಅಗತ್ಯ. ಹಾಗೆ ಅದು ನಿಮ್ಮ ಇಷ್ಟದಂತೆ ಮುಟ್ಟಬೇಕಾದರೆ ಅದನ್ನು ನೀವು ಎಸೆಯುವುದರ ಹಿಂದೆ ಒಂದು ವಿಜ್ಞಾನ ಅಡಗಿದೆ. ಜೀವನವೂ ಒಂದು ವಿಜ್ಞಾನದಂತೆಯೇ. ವೇಗ ಹಾಗೂ ತಲ್ಲೀನತೆಯು ಒಂದು ಜೀವನವನ್ನು ಪರಿಪೂರ್ಣಗೊಳಿಸಲು ಅಗತ್ಯ. ಅರೆಬರೆಯಾಗಿ ಜೀವಿಸಿದರೆ ಅದೊಂದು ಚಿತ್ರಹಿಂಸೆ.

ದೇಹ ಹಾಗೂ ಮನಸ್ಸನ್ನು ಹರಿತವಾಗಿ ಇರಿಸಿಕೊಳ್ಳಲು ಹಾಗೂ ಕ್ರಿಯೆಯಲ್ಲಿ ಪೂರ್ಣವಾಗಿ ಮನಸ್ಸನ್ನು ನೆಲೆಗೊಳಿಸಲು ಅದು ಕಲಿಸುವುದರಿಂದ ಆಟ ನನ್ನನ್ನು ಬಹುವಾಗಿ ಆಕರ್ಷಿಸುತ್ತದೆ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ www.isha.sadhguru.org)