ಅಂಕಣ

ನಕಲಿ ವೈದ್ಯರ ಹಾವಳಿ

ಸರ್ಕಾರಿ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ನಿವೃತಿಯಾಗಿದ್ದ 67 ವರ್ಷದ ರಾಮಚಂದ್ರಪ್ಪ 10-12 ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹಲವಾರು ವೈದ್ಯರಿಗೆ ತೋರಿಸಿದರೂ ಪರಿಹಾರ ಸಿಕ್ಕಿರಲಿಲ್ಲ. ಕುಟುಂಬದ ಬಲವಂತದ ಮೇರೆಗೆ ರಾಮಚಂದ್ರಪ್ಪ ಗ್ಯಾಸ್ಟ್ರಿಕ್ ತಜ್ಞರಿಗೆ ತೋರಿಸಿದರು. ಹೊಟ್ಟೆಯಲ್ಲಿ ಹುಣ್ಣಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕೆಂದವರು ಹೇಳಿದರು. ರಾಮಚಂದ್ರಪ್ಪ ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲದ ಕಾರಣ ವೈದ್ಯರು ಅವರಿಗೆ ಪಥ್ಯ ಮಾಡಲು ಸೂಚಿಸಿ, ಕೆಲವು ಮಾತ್ರೆಗಳನ್ನು ಬರೆದುಕೊಟ್ಟರು.

ಪ್ರತಿ 15 ದಿನಕ್ಕೊಮ್ಮೆ ರಾಮಚಂದ್ರಪ್ಪ ಮನೆಯ ಹತ್ತಿರದಲ್ಲಿದ್ದ ಔಷಧ ಅಂಗಡಿಗೆ ಹೋಗಿ ಮಾತ್ರೆಗಳನ್ನು ತರುತ್ತಿದ್ದರು. ಒಂದು ದಿನ ಅವರು ವಾಡಿಕೆಯಂತೆ ಮೆಡಿಕಲ್ ಷಾಪಿಗೆ ಹೋದಾಗ, ಅಲ್ಲಿದ್ದ ಒಬ್ಬ ವ್ಯಕ್ತಿ, ‘ಏನ್ ಸರ್, ನಿಮಗೆ ಹೊಟ್ಟೆ ನೋವಿದೆಯೇ?’ ಎಂದು ಪ್ರಶ್ನಿಸಿದ. ‘ನಿನಗೆ ಹೇಗೆ ಗೊತ್ತಾಯಿತು?’ ಎಂದು ಕೇಳಿದಾಗ, ‘ನಮ್ಮ ತಂದೆಗೂ ಹೀಗೆಯೇ ಆಗಿತ್ತು. ಅವರು ತುಂಬ ನೋವಿನಿಂದ ಬಳಲುತ್ತಿದ್ದರು. ಇದೇ ಮಾತ್ರೆಗಳನ್ನೇ ಸೇವಿಸುತ್ತಿದ್ದರು. ಪರಿಹಾರ ಸಿಗದಿದ್ದಾಗ ಒಂದು ಆಯುರ್ವೆದದ ಎಣ್ಣೆ ಬಳಸತೊಡಗಿದರು. ಅವರಿಗೆ ಹೊಟ್ಟೆ ನೋವೀಗ ಮಾಯವಾಗಿದೆ’ ಎಂದ. ‘ನಾನೀಗಾಗಲೇ ಆಯುರ್ವೆದ ಔಷಧಗಳನ್ನು ಬಳಸಿ ಆಗಿದೆ, ಏನೂ ಉಪಯೋಗವಾಗಿಲ್ಲ’, ಎಂದರು ರಾಮಚಂದ್ರಪ್ಪ. ‘ನೀವು ಒಮ್ಮೆ ಟ್ರೖೆ ಮಾಡಿ ನೋಡಿ, ಇದು ಹೊಟ್ಟೆಗೆ ಹಚ್ಚುವ ವಿಶೇಷ ತೈಲ, ಹಿಮಾಲಯದ ಗಿಡಮೂಲಿಕೆಗಳಿಂದ ಮಾಡಿದ್ದು, ನನ್ನ ತಂದೆ ಅದನ್ನು ಉಪಯೋಗಿಸಲು ಆರಂಭಿಸಿದ ಆರು ತಿಂಗಳಲ್ಲೇ ನೋವು ಮಾಯವಾಯಿತು’, ಎಂದ ಆಗಂತುಕ.

‘ಹಾಗಾದರೆ ಆ ಔಷಧ ಎಲ್ಲಿ ಸಿಗುತ್ತದೆ?’ ಎಂದು ರಾಮಚಂದ್ರ ವಿಚಾರಿಸಿದರು. ಆ ವ್ಯಕ್ತಿ ತನ್ನನ್ನು ಸುರೇಂದ್ರ ಎಂದು ಪರಿಚಯಿಸಿಕೊಂಡು ಮೊಬೈಲ್ ನಂಬರ್ ಕೊಟ್ಟ. ‘ನಿಮಗೆ ಆ ಔಷಧ ತೆಗೆದುಕೊಳ್ಳಬೇಕೆಂಬ ಮನಸ್ಸಾದರೆ ನನ್ನನ್ನು ಸಂರ್ಪಸಿ, ನಾನು ನಿಮ್ಮನ್ನು ನಮ್ಮ ತಂದೆಯ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಔಷಧ ಕೊಡಿಸುತ್ತೇನೆ’, ಎಂದ. ಎರಡು ದಿನಗಳ ನಂತರ ಸುರೆಂದ್ರನನ್ನು ರಾಮಚಂದ್ರಪ್ಪ ಸಂರ್ಪಸಿ ಹೊಸ ಔಷಧ ಬೇಕೆಂದರು. ತಾನು ಬೇರೆ ಊರಿನಲ್ಲಿರುವುದಾಗಿ ತಿಳಿಸಿದ ಆತ ನಂತರ ಫೋನ್ ಮಾಡುವುದಾಗಿ ತಿಳಿಸಿದ. ನಾಲ್ಕು ದಿನಗಳ ನಂತರ ಆತ ರಾಮಚಂದ್ರಪ್ಪರನ್ನು ಸಂರ್ಪಸಿ ಔಷಧ ಪಡೆಯಲು ಕೇಂದ್ರ ಬಸ್ ನಿಲ್ದಾಣದ ಬಳಿಗೆ ಬರಲು ಹೇಳಿದ. ಅವರು ಅಲ್ಲಿಗೆ ಹೋದಾಗ ಆತ ಅವರನ್ನು ಸಮೀಪದ ಬಡಾವಣೆಯಲ್ಲಿದ್ದ ಅಂಗಡಿಗೆ ಕರೆದುಕೊಂಡು ಹೋದ. ಅಂಗಡಿಗೆ ಯಾವುದೇ ನಾಮಫಲಕವಿಲ್ಲದಿದ್ದುದನ್ನು ಗಮನಿಸಿದ ರಾಮಚಂದ್ರಪ್ಪ ಆ ಬಗ್ಗೆ ವಿಚಾರಿಸಿದರು. ಅದು ಆಯುರ್ವೆದ ಔಷಧದ ಅಂಗಡಿಯೆಂದು ಎಲ್ಲರಿಗೂ ತಿಳಿದಿರುವ ಕಾರಣ ಬೋರ್ಡ್ ಹಾಕುವ ಪ್ರಮೇಯವೇ ಬಂದಿಲ್ಲ ಎಂದ ಸುರೇಂದ್ರ. ಆ ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿಯನ್ನು ‘ಆಯುರ್ವೆದ ಪಂಡಿತ ಗಂಗಾಧರ’ ಎಂದು ಪರಿಚಯಿಸಿ ಅವರು ಕೇರಳದ ಹೆಸರಾಂತ ಕೊಟ್ಟಕ್ಕಲ್ ಆಯುರ್ವೆದ ಶಾಲೆಯಲ್ಲಿ ಕಲಿತವರು ಎಂದ ಸುರೇಂದ್ರ.

ರಾಮಚಂದ್ರಪ್ಪರನ್ನು ಪರೀಕ್ಷಾ ಕೊಠಡಿಗೆ ಕರೆದುಕೊಂಡು ಹೋದ ಆ ವೈದ್ಯ ಅಲ್ಲಿ ಅವರನ್ನು ಪರೀಕ್ಷಿಸಿದಂತೆ ಮಾಡಿ, ‘ನಿಮ್ಮ ನಾಡಿ ಮತ್ತು ಇತರ ಪರೀಕ್ಷೆಗಳಿಂದ ನಿಮಗೆ ಹೊಟ್ಟೆಯಲ್ಲಿ ಯಾವುದೇ ಗಂಭೀರ ತೊಂದರೆಯಿಲ್ಲ. ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ತೊಂದರೆ ನಿವಾರಿಸುತ್ತೇನೆ. ಆದರೆ ಇದಕ್ಕಾಗಿ ಕೊಡುವ ಔಷಧದ ಬೆಲೆ ಹೆಚ್ಚು. ವರ್ಷಕ್ಕೆ ಎರಡು ಬಾರಿ ಚಿಕಿತ್ಸೆ ಕೊಡಬೇಕು, ಒಂದು ಬಾರಿಗೆ ಎರಡು ಲಕ್ಷ ಫೀ ಆಗುತ್ತದೆ’ ಎಂದ.

‘ಆಯುರ್ವೆದದ ಟ್ರೀಟ್​ವೆುಂಟ್ ಇಷ್ಟು ದುಬಾರಿಯಾಗಿ ಇರುವುದಿಲ್ಲವಲ್ಲ?’ ಎಂದು ರಾಮಚಂದ್ರಪ್ಪ ಪ್ರಶ್ನಿಸಿದಾಗ, ‘ನಿಮಗೆ ಕೊಡುವ ತೈಲದಲ್ಲಿ ಚಿನ್ನದ ಭಸ್ಮ ಹಾಕಬೇಕು. ಇದಲ್ಲದೆ ಈ ಔಷಧಕ್ಕೆ ಬೇಕಾದ ಮೂಲಿಕೆಗಳು ಹಿಮಾಲಯ ಪರ್ವತದಲ್ಲಿ ಮಾತ್ರ ದೊರೆಯುತ್ತವೆ, ಇನ್ನು ಕೆಲವನ್ನು ಚೀನಾದಿಂದ ತರಿಸಬೇಕು’ ಎಂದ. ಅಲ್ಲಿಯೇ ಇದ್ದ ಸುರೇಂದ್ರ, ‘ಯಜಮಾನರೇ, ಈ ಪಂಡಿತರ ಕೈಗುಣ ಚೆನ್ನಾಗಿದೆ. ಎರಡು ಲಕ್ಷ ರೂಪಾಯಿ ದೊಡ್ಡದಲ್ಲ. ನನ್ನ ತಂದೆಗೂ ಅವರು ಗುಣಪಡಿಸಿದ್ದಾರೆ. ನೀವು ಕಳೆದ ಆರು ವರ್ಷಗಳಲ್ಲಿ ಇಂಗ್ಲಿಷ್ ಔಷಧಕ್ಕೆ ಖರ್ಚು ಮಾಡಿರುವ ವೆಚ್ಚ ಇದಕ್ಕಿಂತ ಹೆಚ್ಚಲ್ಲವೇ? ಖಂಡಿತ ಮುಂದುವರಿಯಿರಿ’ ಎಂದ. ಮಡದಿ, ಮಕ್ಕಳ ಸಲಹೆ ಪಡೆದು ನಿರ್ಧಾರ ತಿಳಿಸುವುದಾಗಿ ಹೇಳಿ ರಾಮಚಂದ್ರಪ್ಪ ಮನೆಗೆ ಮರಳಿದರು.

ಮುಂದಿನ ಭಾನುವಾರ ರಾಮಚಂದ್ರಪ್ಪ ಅಸ್ಟ್ರೇಲಿಯಾದಲ್ಲಿದ್ದ ಪುತ್ರನನ್ನು ಸಂರ್ಪಸಿ ಆತನ ಸಲಹೆ ಕೇಳಿದರು. ‘ಇದೇನೂ ದುಬಾರಿಯಾದ ಚಿಕಿತ್ಸೆಯಲ್ಲ, ಹಣ ನಾನೇ ಕೊಡುವೆ’ ಎಂದು ಆತ ಹೇಳಿದ. ನಂತರ ಸುರೇಂದ್ರನನ್ನು ಸಂರ್ಪಸಿದ ರಾಮಚಂದ್ರಪ್ಪ ತಮ್ಮನ್ನು ಅದೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಲು ತಿಳಿಸಿದರು. ಆಗ ಆತ, ‘ನೀವು ಕೇಂದ್ರ ಮಾರುಕಟ್ಟೆಯಲ್ಲಿನ ಗಾಣದ ಎಣ್ಣೆಯ ಅಂಗಡಿಯಿಂದ ಅದೇ ತಾನೇ ತಯಾರಾದ ಒಂದು ಲೀಟರ್ ತೆಂಗಿನ ಎಣ್ಣೆ ಖರೀದಿಸಿ ತನ್ನಿ’ ಎಂದ.

ರಾಮಚಂದ್ರಪ್ಪ ಸದರಿ ಅಂಗಡಿಗೆ ಹೋಗಿ ಎಣ್ಣೆ ಖರೀದಿಸಿ ಗಂಗಾಧರನ ಕ್ಲಿನಿಕ್​ಗೆ ಹೋದರು. ಅಲ್ಲಿ ಸುರೇಂದ್ರ ಸಹ ಇದ್ದ. ಎಣ್ಣೆಯ ಬಾಟಲ್​ಗೆ ಗಂಗಾಧರ ಮೂರ್ನಾಲ್ಕು ಬೇರೆ ವಿವಿಧ ಪುಡಿಗಳನ್ನು ಬೆರೆಸಿ, ಚೆನ್ನಾಗಿ ಕಲಕಿ ಅದನ್ನು ರಾಮಚಂದ್ರಪ್ಪಗೆ ಮರಳಿಸಿದ. ಇದನ್ನು ಪ್ರತಿ ರಾತ್ರಿ ಕಿಬ್ಬೊಟ್ಟೆ ಮೇಲೆ ಎದೆಯವರೆಗೆ ಸವರಿಕೊಂಡು ಮಲಗಬೇಕು. ಮೂರು ತಿಂಗಳ ಕಾಲ ತಪ್ಪದೆ ಮಾಡಿ ಆನಂತರ ತನ್ನನ್ನು ಬಂದು ಕಾಣಲು ತಿಳಿಸಿದ ಗಂಗಾಧರ ತನ್ನ ಫೀಸೆಂದು ಎರಡು ಲಕ್ಷ ರೂಪಾಯಿ ಹಣ ಕೇಳಿದ. ರಾಮಚಂದ್ರಪ್ಪ ಆ ಮೊತ್ತಕ್ಕೆ ಅವನ ಹೆಸರಿನಲ್ಲಿಯೇ ಒಂದು ಚೆಕ್ ಕೊಟ್ಟರು.

ಅದೇ ರಾತ್ರಿ ಆ ಎಣ್ಣೆಯನ್ನು ಹೊಟ್ಟೆಗೆ ಹಚ್ಚಿಕೊಂಡು ರಾಮಚಂದ್ರಪ್ಪ ಮಲಗಿದರು. ಅರ್ಧಗಂಟೆ ನಂತರ ಅವರ ಮೈಯಲ್ಲಿ ಅಸಾಧಾರಣ ಕಡಿತ ಶುರುವಾಯಿತು. ಬೆಳಗ್ಗೆ ಏಳುವಷ್ಟರಲ್ಲಿ ಎಣ್ಣೆ ಹಚ್ಚಿದ್ದ ಹೊಟ್ಟೆಯ ಭಾಗ ನೀಲಿಗಟ್ಟಿತ್ತು. ಗಾಬರಿಯಿಂದ ವೈದ್ಯ ಗಂಗಾಧರ್​ಗೆ ಫೋನ್ ಮಾಡಿದರು. ‘ಹೊಸ ಔಷಧಕ್ಕೆ ನಿಮ್ಮ ದೇಹವು ತೋರಿಸುತ್ತಿರುವ ರಿಯಾಕ್ಷನ್ ಇದು, ಎರಡು ದಿನಗಳಲ್ಲಿ ಸಾಮಾನ್ಯಸ್ಥಿತಿಗೆ ಬರುತ್ತದೆ, ಚಿಂತಿಸಬೇಡಿ’ ಎಂದ ಆತ.

ಮಾರನೆಯ ರಾತ್ರಿಯೂ ಎಣ್ಣೆಯನ್ನು ಹೊಟ್ಟೆಗೆ ಹಚ್ಚಿದರು. ಬೆಳಗ್ಗೆ ಏಳುವಷ್ಟರಲ್ಲಿ ಚರ್ಮದ ನೋವು ತಾಳಲಾಗಲಿಲ್ಲ. ಗಾಬರಿಯಾದ ಅವರು ದೊಡ್ಡ ಆಸ್ಪತ್ರೆಗೆ ಧಾವಿಸಿದರು. ಅವರನ್ನು ಪರೀಕ್ಷಿಸಿದ ವೈದ್ಯರು ವಿಷತೈಲದಿಂದ ಚರ್ಮದ ಸೊಂಕಾಗಿರುವುದಾಗಿ ತಿಳಿಸಿ ಹಲವಾರು ಆಯಿಂಟ್​ವೆುಂಟ್​ಗಳನ್ನು ಕೊಟ್ಟು ಆಯುರ್ವೆದದ ಎಣ್ಣೆ ಮೈಗೆ ಸೋಕಿಸದಿರಲು ಸೂಚಿಸಿದರು. ಮಾರನೆಯ ದಿನವೇ ರಾಮಚಂದ್ರಪ್ಪ ಗಂಗಾಧರನನ್ನು ಸಂರ್ಪಸಿ ತನಗಾದ ಅನುಭವ ಹೇಳಿ, ಹಣ ವಾಪಸ್ ಕೊಡಲು ಕೋರಿದರು.

‘ನಿಮ್ಮ ಹಣ ಖಂಡಿತ ಮರಳಿಸುವೆ. ಮುಂದಿನ ಸೋಮವಾರ ಸಂಜೆ ಕ್ಲಿನಿಕ್​ಗೆ ಬನ್ನಿ’ ಎಂದ ಗಂಗಾಧರ. ಏತನ್ಮಧ್ಯೆ ಅವರು ಹೊಟ್ಟೆಯ ಮೇಲಾಗಿದ್ದ ಗಾಯಗಳಿಗೆ ಚಿಕಿತ್ಸೆ ಮುಂದುವರಿಸಿದರು. ಸೋಮವಾರ ಸಂಜೆ ಅವರು ಗಂಗಾಧರನ ಅಂಗಡಿಗೆ ಹೋದರೆ ಅದು ಮುಚ್ಚಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಅದರ ಮಾಲೀಕ ಅಂಗಡಿಯನ್ನು ಖಾಲಿ ಮಾಡಿಕೊಂಡು ಹೋಗಿದ್ದನೆಂದು ತಿಳಿಯಿತು. ಅವನ ಮತ್ತು ಸುರೇಂದ್ರನ ಸೆಲ್​ಫೋನ್​ಗಳು ಸ್ವಿಚ್​ಆಫ್ ಆಗಿದ್ದವು. ಕೂಡಲೇ ರಾಮಚಂದ್ರಪ್ಪ ಪೊಲೀಸ್ ಠಾಣೆಗೆ ಹೋದರು. ಅವರ ದೂರನ್ನು ಠಾಣಾಧಿಕಾರಿ ತೆಗೆದುಕೊಳ್ಳಲು ತಯಾರಾಗಲಿಲ್ಲ. ಹಿರಿಯ ಅಧಿಕಾರಿಯೊಬ್ಬರ ಮಧ್ಯಪ್ರವೇಶದ ಮೇರೆಗೆ ಮೋಸದ ದೂರು ದಾಖಲಾಯಿತು. ಗಂಗಾಧರನಿಗೆ ಕೊಟ್ಟಿದ್ದ ಚೆಕ್, ಕೇರಳದ ಒಂದು ಬ್ಯಾಂಕಿನ ಅಕೌಂಟಿಗೆ ಜಮಾ ಆದದ್ದನ್ನು ಗಮನಿಸಿದ ಪೊಲೀಸರು ಅಲ್ಲಿಗೆ ಹೊದರು. ಆ ಅಕೌಂಟ್​ನ ಕೆ.ವೈ.ಸಿ ಮೂಲಕ ಗಂಗಾಧರನ ಸ್ಥಳೀಯ ವಿಳಾಸ ಪತ್ತೆ ಮಾಡಿದರು. ಗಂಗಾಧರನ ಪತ್ನಿ ಆತ ಬೆಂಗಳೂರಿನಲ್ಲಿಯೇ ಇದ್ದಾನೆಂದು ತಿಳಿಸಿ ಅವನ ಮತ್ತೊಂದು ಸೆಲ್​ಫೋನ್ ನಂಬರ್ ಕೊಟ್ಟಳು. ಕೂಡಲೇ ಬೆಂಗಳೂರು ಪೊಲಿಸರು ಅದರ ಲೊಕೇಷನ್ ಮೂಲಕ ಲಾಡ್ಜಿಂಗ್ ಒಂದರಿಂದ ಗಂಗಾಧರನನ್ನು ಬಂಧಿಸಿದರು. ಆತ ಕೇರಳದ ಆಯುರ್ವೆದ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕನಾಗಿದ್ದು ಅಲ್ಲಿಂದ ಹಣ ಗುಳುಂ ಮಾಡಿದ ಆರೋಪದ ಮೇರೆಗೆ ಕೆಲಸ ಕಳೆದುಕೊಂಡು ಬೆಂಗಳೂರಿಗೆ ಬಂದಿದ್ದನೆಂದು ತಿಳಿದಿದ್ದಲ್ಲದೆ ರಾಮಚಂದ್ರಪ್ಪನವರಂತೆಯೇ ಹಲವಾರು ಹಿರಿಯ ನಾಗರಿಕರಿಗೆ ಮೋಸ ಮಾಡಿದ್ದಾಗಿ ತಿಳಿಯಿತು.

ಗಂಗಾಧರನ ಏಜೆಂಟರು ಔಷಧ ಅಂಗಡಿಗಳ ಮುಂದೆ ನಿಂತು ಮಂಡಿನೋವು, ಉಬ್ಬಸ ಮುಂತಾದ ಕಾಯಿಲೆಯಿರುವ ಹಿರಿಯ ನಾಗರಿಕರನ್ನಷ್ಟೇ ಟಾರ್ಗೆಟ್ ಮಾಡುತ್ತಿದ್ದರು.

ಗಂಗಾಧರನ ಹೇಳಿಕೆ ಮೇರೆಗೆ ಸುರೇಂದ್ರನನ್ನೂ ಸೇರಿ ಅವನ ತಂಡದ ನಾಲ್ಕು ಏಜೆಂಟರನ್ನು ಬಂಧಿಸಲಾಯಿತು. ಅವರೆಲ್ಲರಿಗೂ ಗಂಗಾಧರ ತನ್ನ ಫೀಸಿನ ಶೇಕಡ 10ರಷ್ಟನ್ನು ಕಮಿಷನ್ ಎಂದು ಕೊಡುತ್ತಿದ್ದ. ಈ ತಂಡ ಕೇವಲ ಆರು ತಿಂಗಳಲ್ಲಿ ಅರವತ್ತಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಮೋಸಮಾಡಿ 55 ಲಕ್ಷ ರೂ.ಗಳನ್ನು ಗಳಿಸಿತ್ತು. ಮುಂದೆ ನ್ಯಾಯಾಲಯ ಗಂಗಾಧರನಿಗೆ ಐದು ವರ್ಷ ಮತ್ತು ಉಳಿದವರಿಗೆ ಮೂರು ವರ್ಷ ಜೈಲುವಾಸ ವಿಧಿಸಿತು.

‘ಮತ್ತೊಬ್ಬರನ್ನು ನಂಬುವುದು ಕೇವಲ ಶ್ರೀಮಂತರಷ್ಟೇ ತೊಡಗಿಸಿಕೊಳ್ಳಬಹುದಾದ ಒಂದು ರೀತಿಯ ಭೋಗ. ಅದನ್ನು ಬಡವರು (ಮತ್ತು ಮಧ್ಯಮ ವರ್ಗ) ಅನುಭವಿಲಸಾಧ್ಯ’ ಎನ್ನುತ್ತಾನೆ ಆಂಗ್ಲ ಕಾದಂಬರಿಕಾರ ಇ.ಎಂ.ಫಾಸ್ಟರ್. ರಾಮಚಂದ್ರಪ್ಪನಂಥ ಕೆಲವು ಅದೃಷ್ಟಶಾಲಿಗಳು ತಮ್ಮ ಕಳೆದ ಹಣವನ್ನು ಮರಳಿ ಪಡೆದರು. ಇತರರಿಗೆ ಅದು ಕಷ್ಟಸಾಧ್ಯ ಎನ್ನುವುದನ್ನು ನಾಗರಿಕರು ಅರಿತು ನಡೆಯುವುದು ಉತ್ತಮ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)