ಅಂಕಣ

ಡಿಜಿಟಲ್ ಕರೆನ್ಸಿ.. ಪಾವತಿ ಇನ್ನು ಈಸಿ; ಡಿಸೆಂಬರ್ ವೇಳೆಗೆ ಪ್ರಾಯೋಗಿಕವಾಗಿ ಚಲಾವಣೆಗೆ..

ಸರ್ಕಾರಗಳ ನಿಯಂತ್ರಣವಿಲ್ಲದ ಕ್ರಿಪ್ಟೋ ಕರೆನ್ಸಿಗಳು ಜಾಗತಿಕವಾಗಿ ಪರ್ಯಾಯ ಅರ್ಥವ್ಯವಸ್ಥೆ ಸೃಷ್ಟಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ಸರ್ಕಾರ ಪಾಡುಪಡುತ್ತಿವೆ ಯಾದರೂ, ಸದ್ಯಕ್ಕೆ ಸಾಧ್ಯವಾಗಿಲ್ಲ. ಆದರೂ, ಡಿಜಿಟಲ್ ಕರೆನ್ಸಿಯನ್ನು ರೂಪಿಸಿ ಚಲಾವಣೆಗೆ ತರಲು ಕೆಲ ಸರ್ಕಾರಗಳು ಪ್ರಯತ್ನಿಸುತ್ತಿವೆ. ಅವುಗಳ ಪೈಕಿ ಭಾರತ ಸರ್ಕಾರವೂ ಒಂದು. ಡಿಸೆಂಬರ್ ವೇಳೆಗೆ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಪ್ರಯತ್ನಿಸುವುದಾಗಿ ಭಾರತದ ಸೆಂಟ್ರಲ್ ಬ್ಯಾಂಕ್ ಕಳೆದ ವಾರ ಘೋಷಿಸಿತ್ತು. ಈ ವಿದ್ಯಮಾನದ ಕಿರು ಅವಲೋಕನ ಇಲ್ಲಿದೆ.

| ಉಮೇಶ್ ಕುಮಾರ್ ಶಿಮ್ಲಡ್ಕ

ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಪಾವತಿಗಳಿಗೆ ಸಂಬಂಧಿಸಿದ ನವೋನ್ವೇಷಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದಲ್ಲಿ ಅಳವಡಿಸಿಕೊಂಡಿರುವ ಡಿಜಿಟಲ್ ಪಾವತಿ ವ್ಯವಸ್ಥೆ 24*7 ಅವಧಿ ಚಿಲ್ಲರೆ ಮತ್ತು ಸಗಟು ಗ್ರಾಹಕರಿಗೆ ಲಭ್ಯವಿದೆ. ಬಹುತೇಕ ಎಲ್ಲವೂ ನೈಜ ಅವಧಿಯಲ್ಲೇ ವರ್ಗಾವಣೆಗೊಳ್ಳುತ್ತಿವೆ. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ವಹಿವಾಟು ವೆಚ್ಚವೂ ಬಹಳ ಕಡಿಮೆ. ಪಾವತಿ ವ್ಯವಸ್ಥೆಯಲ್ಲಿ ಸಾಕಷ್ಟು ಗಮನಸೆಳೆಯುವ ಮೆನು ಆಪ್ಶನ್​ಗಳೂ ಲಭ್ಯವಿರುವ ಕಾರಣ ಬಳಕೆದಾರ ಸ್ನೇಹಿಯಾಗಿ ರೂಪುಗೊಂಡಿದೆ. ಎಷ್ಟರಮಟ್ಟಿಗೆ ಎಂದರೆ, ಒಂದು ರೂಪಾಯಿಯನ್ನು ಕೂಡ ಯುಪಿಐ ಮೂಲಕ ಪಾವತಿಸಬಹುದಾಗಿದೆ. ಆದ್ದರಿಂದ ಡಿಜಿಟಲ್ ವಹಿವಾಟು ಕಳೆದ ಐದು ವರ್ಷಗಳ ಅವಧಿಯಲ್ಲಿ ಶೇಕಡ 55 ಸರಾಸರಿ ವಾರ್ಷಿಕ ಬೆಳವಣಿಗೆ ದಾಖಲಿಸಿದೆ. ಈ ರೀತಿ ಬೆಳವಣಿಗೆ ನಡೆದಿರುವ ಬೆನ್ನಿಗೆ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)ಯನ್ನು ಡಿಸೆಂಬರ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ತರಲು ಪ್ರಯತ್ನಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಕಳೆದ ವಾರ ಘೋಷಿಸಿತ್ತು. ಪರಿಣತರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪೇಪರ್ ಕರೆನ್ಸಿಗಳು, ನಗದು ಹಣದ ಮೇಲಿನ ಅವಲಂಬನೆ ಕಡಿಮೆ ಮಾಡುವ ಚಿಂತನೆ ಇದರಲ್ಲಿ ಅಡಗಿದೆ. ಜಾಗತಿಕ ಮಟ್ಟದ ಪಾವತಿ ವ್ಯವಸ್ಥೆಯಲ್ಲಿ ಕಡಿಮೆ ವೆಚ್ಚದಲ್ಲಿ ನೈಜ ಸಮಯದಲ್ಲೇ ಹಣದ ವರ್ಗಾವಣೆ ಸಾಧ್ಯವಾಗಿಸುವುದು ಡಿಜಿಟಲ್ ಕರೆನ್ಸಿಯಿಂದ ಸಾಧ್ಯವಾಗಲಿದೆ ಎಂದು ಆರ್​ಬಿಐ ಹೇಳಿದೆ.

ಸಿಬಿಡಿಸಿ ಪರಿಕಲ್ಪನೆ: ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಪರಿಕಲ್ಪನೆ 1980ರ ದಶಕದ್ದು. ಅಮೆರಿಕದ ಅರ್ಥಶಾಸ್ತ್ರಜ್ಞ, ನೊಬೆಲ್ ಪುರಸ್ಕೃತ ಜೇಮ್್ಸ ಟಾಬಿನ್ ಈ ವಿಷಯವನ್ನು ಮಂಡಿಸಿದ್ದರು. ಕಳೆದ ದಶಕದಲ್ಲಷ್ಟೇ ಇದು ಸಾಕಾರ ರೂಪ ಪಡೆಯಿತು ಎಂಬ ಅಂಶವನ್ನು ಆರ್​ಬಿಐ ಕಳೆದ ವಾರ ಪ್ರಕಟಿಸಿದ ವಿಷಯ ಪತ್ರದಲ್ಲಿ ಉಲ್ಲೇಖಿಸಿದೆ.

ಚೀನಾದಲ್ಲಿ ಸಿಬಿಡಿಸಿ: ಸದ್ಯದ ಮಟ್ಟಿಗೆ ಚೀನಾ ಬೃಹತ್ ಪ್ರಮಾಣದಲ್ಲಿ ಸಿಬಿಡಿಸಿ ಪ್ರಯೋಗಕ್ಕೆ ಮುಂದಾಗಿದೆ. 2022ರ ಬೀಜಿಂಗ್ ವಿಂಟರ್ ಒಲಿಂಪಿಕ್ಸ್​ಗೆ ಮುನ್ನ ಸಂಪೂರ್ಣವಾಗಿ ಸಿಬಿಡಿಸಿ ಬಳಕೆಗೆ ಪ್ರಯತ್ನಿಸುತ್ತಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಚೀನಾದ ಎಲೆಕ್ಟ್ರಾನಿಕ್ ಪಾವತಿ ಪ್ರಮಾಣ ಒಟ್ಟು ವಹಿವಾಟಿನ ಶೇ.15 ಮಾತ್ರ ಇದೆ. ಇತ್ತೀಚೆಗೆ ಫೆಬ್ರವರಿಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಯುಎಇ ಮತ್ತು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಪ್ರಾಯೋಗಿಕವಾಗಿ ಸಾಗರೋತ್ತರ ವಹಿವಾಟಿಗೆ ಸಿಬಿಡಿಸಿ ಬಳಸಿವೆ.

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(ಸಿಬಿಡಿಸಿ): ಇದು ಈಗಾಗಲೆ ಚಾಲ್ತಿಯಲ್ಲಿರುವ ಸರ್ಕಾರಗಳ ನಿಯಂತ್ರಣದಲ್ಲಿ ಇಲ್ಲದ ಕ್ರಿಪ್ಟೋಕರೆನ್ಸಿಗಳಿಗೆ ಪರ್ಯಾಯ ಅಲ್ಲ. ಇದು ಸೆಂಟ್ರಲ್ ಬ್ಯಾಂಕ್​ನ ಬಾಧ್ಯತೆಯೊಂದಿಗೆ ಚಲಾವಣೆಗೆ ಬರುವ ಕರೆನ್ಸಿ. ಹಾಗಂತ ಇದು ಪೇಪರ್ ಕರೆನ್ಸಿ ಅಲ್ಲ. ಆದರೆ ಪೇಪರ್ ಕರೆನ್ಸಿ ಕೊಟ್ಟು ಪಡೆಯುವ ಸೇವೆ, ಸಾಮಗ್ರಿಗಳನ್ನು ಸಿಬಿಡಿಸಿ ಕೊಟ್ಟು ಕೂಡ ಪಡೆಯಬಹುದು. ಮಾದರಿಯಲ್ಲಷ್ಟೇ ವ್ಯತ್ಯಾಸ. ಇದು ಖಾಸಗಿಯಾಗಿ ಅಣಬೆಗಳಂತೆ ಹುಟ್ಟಿಕೊಂಡಿರುವ ಕ್ರಿಪ್ಟೋಕರೆನ್ಸಿಯಂತಲ್ಲ ಎಂಬುದು ಇನ್ನೊಂದು ನಿರ್ಣಾಯಕ ಅಂಶ.

ಸಿಬಿಡಿಸಿ ವಹಿವಾಟು ವಿಧಗಳು: ಸಿಬಿಡಿಸಿಗಳಲ್ಲಿ ಎರಡು ವಿಧ. ಹೋಲ್​ಸೇಲ್ ಮತ್ತು ರಿಟೇಲ್ ಒಂದು ವಿಧವಾದರೆ, ಖಾತೆ ಮತ್ತು ಟೋಕನ್ ಆಧಾರಿತ ಇನ್ನೊಂದು. ಸಿಬಿಡಿಸಿ ಚಲಾವಣೆಯಲ್ಲಿ ಅದರ ಚಲಾವಣೆಗೆ ಅನುಗುಣವಾಗಿ ಸಗಟು ಅಥವಾ ಚಿಲ್ಲರೆ ಎಂದು ವರ್ಗೀಕರಿಸ ಬಹುದಾಗಿದೆ. ಸಗಟು ಮಾದರಿಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳು ವಾಣಿಜ್ಯ ಬ್ಯಾಂಕ್​ಗಳ ಗುಂಪಿಗೆ ಮತ್ತು ಕ್ಲಿಯರಿಂಗ್ ಸಂಸ್ಥೆಗಳ ಮಟ್ಟಿಗೆ ಸೀಮಿತವಾಗಿರುತ್ತದೆ. ಇದೇ ರಿಟೇಲ್ ಮಾದರಿಯಲ್ಲಿ ಡಿಜಿಟಲ್ ಕರೆನ್ಸಿ ಕಾಪೋರೇಟ್ಸ್​ನಿಂದ ಹಿಡಿದು ಎಲ್ಲ ಗ್ರಾಹಕರ ಬಳಕೆಗೂ ಲಭ್ಯವಾಗಿರುತ್ತದೆ. ಬ್ಯಾಂಕ್ ಖಾತೆ ಮತ್ತು ಟೋಕನ್ ಆಧಾರಿತ ಡಿಜಿಟಲ್ ಕರೆನ್ಸಿಗಳದ್ದು ಇನ್ನೊಂದು ವಿಧ. ಖಾತೆ ಆಧಾರಿತ ವಹಿವಾಟಿನಲ್ಲಿ ಬ್ಯಾಂಕ್ ಖಾತೆಗಳ ಮೂಲಕ ಡಿಜಿಟಲ್ ಕರೆನ್ಸಿಗಳ ವಹಿವಾಟು ನಡೆಯುತ್ತದೆ. ಟೋಕನ್ ಆಧಾರಿತ ಡಿಜಿಟಲ್ ಕರೆನ್ಸಿಯನ್ನು ಸರಳವಾಗಿ ಪರಿಚಯಿಸಬೇಕು ಎಂದರೆ ಭಾರತ ಸರ್ಕಾರ ಕಳೆದ ತಿಂಗಳು ಬಿಡುಗಡೆ ಮಾಡಿದ ‘ಇ-ರುಪೀ’ಯನ್ನು ಉದಾಹರಿಸಬಹುದು.

ವಿಶ್ವದ ವಿವಿಧೆಡೆ ಪ್ರಯೋಗ: ಜಗತ್ತಿನ ಯಾವುದೇ ದೇಶ ಕೂಡ ದೊಡ್ಡ ಪ್ರಮಾಣದಲ್ಲಿ ಸಿಬಿಡಿಸಿ ಪ್ರಯೋಗವನ್ನು ಇದುವರೆಗೆ ಮಾಡಿಲ್ಲ. ಆದಾಗ್ಯೂ, ಹಲವು ಸೆಂಟ್ರಲ್ ಬ್ಯಾಂಕ್​ಗಳು ಹಂತ ಹಂತವಾಗಿ ಈ ಪ್ರಯೋಗ ಶುರುಮಾಡಿವೆ. ಅದರ ಬಳಕೆಯ ಸಾಧ್ಯತೆ ಮತ್ತು ಅನುಕೂಲವನ್ನು ನಿರ್ಧರಿಸುವ ಪ್ರಯತ್ನ ಮಾಡತೊಡಗಿವೆ. 2016ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ಸಿಬಿಡಿಸಿ ವಿಚಾರದಲ್ಲಿ ಮೊದಲ ಪ್ರಯತ್ನ ಮಾಡಿತು. ನಂತರ ಸೆಂಟ್ರಲ್ ಬ್ಯಾಂಕ್ ಆಫ್ ಸ್ವೀಡನ್, ಪೀಪಲ್ಸ್ ಬ್ಯಾಂಕ್ ಆಫ್ ಚೀನಾ, ಬ್ಯಾಂಕ್ ಆಫ್ ಕೆನಡಾ, ಉರುಗ್ವೆ, ಥಾಯ್ಲೆಂಡ್, ವೆನೆಜುವೆಲಾ, ಸಿಂಗಾಪುರ ಮತ್ತು ಇತರ ದೇಶಗಳ ಸೆಂಟ್ರಲ್ ಬ್ಯಾಂಕ್​ಗಳು ಕೂಡ ಈ ಪ್ರಯೋಗ ಶುರು ಮಾಡಿಕೊಂಡವು.