ಚುನಾವಣಾ ವಿಜಯಗಳು ಮತ್ತು ಜನಪ್ರಿಯತೆ ಇವುಗಳು ಜನರು ಸಾಮಾನ್ಯವಾಗಿ ಗಮನಿಸುವ ಸಂಗತಿ. ಆದರೆ, ಶ್ರಮವರಿಯದ ದುಡಿಮೆ ಮತ್ತು ಸರಿಸಾಟಿಯಿಲ್ಲದ ದೂರದೃಷ್ಟಿ ಮೋದಿಯವರನ್ನು ಜನನಾಯಕನನ್ನಾಗಿ ರೂಪಿಸಿದೆ ಎಂಬುದು ಗಮನಾರ್ಹ. ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದಲೂ ಮೋದಿ ಎದ್ದು ಕಾಣುವಂಥ ಸಾಧಕರಾಗಿ ರೂಪುಗೊಂಡಿದ್ದಾರೆ.
ಅಧಿಕಾರದಲ್ಲಿ ಸುಧಾರಣೆಯೆಂದರೆ ಅದು ರಾಜಕೀಯ ಆತ್ಮಹತ್ಯೆ ಎಂದು ಭಾವಿಸುವ ಕಾಲದಲ್ಲಿ ಅವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡರು, ಗುಜರಾತ್ನ ಇಂಧನ ಕ್ಷೇತ್ರವನ್ನು ಸುಧಾರಿಸಿದರು, ರಾಜ್ಯದ ಪ್ರತಿ ಮನೆಗೂ ವಿದ್ಯುಚ್ಛಕ್ತಿ ಒದಗಿಸಿದರು. ಅಷ್ಟು ಮಾತ್ರವಲ್ಲದೆ ಅದನ್ನು ಹೆಚ್ಚುವರಿ ಇಂಧನ-ರಾಜ್ಯವನ್ನಾಗಿ ಮಾಡಿದರು. ಪ್ರಧಾನಿಯಾಗಿಯೂ ಅವರು ದೇಶದ ಪ್ರತಿ ಹಳ್ಳಿಗೂ, ಮನೆಮನೆಗೂ ವಿದ್ಯುತ್ ಒದಗಿಸುವುದನ್ನು ಖಾತರಿಪಡಿಸಿದ್ದಾರೆ.
ಹೂಡಿಕೆ ಸಮಾವೇಶಗಳು ಬಂಡವಾಳ ಹೂಡಿಕೆದಾರರ ರಾಷ್ಟ್ರಮಟ್ಟದ ಸಮಾವೇಶಗಳೇ ಅಪರೂಪವಾಗಿದ್ದ ಸಮಯದಲ್ಲಿ, 2003ರಲ್ಲೇ ಅವರು ‘ವೈಬ್ರಂಟ್ ಗುಜರಾತ್’ ಹೆಸರಿನ ಹೂಡಿಕೆದಾರರ ಶೃಂಗಸಭೆ ಆಯೋಜಿಸಿದರು. ಆಗಿನಿಂದಲೂ ಅಂಥ ಶೃಂಗಸಭೆಗಳು ಗುಜರಾತ್ನಲ್ಲಿ ಸಾಮಾನ್ಯವಾಗಿವೆ. ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಅಲ್ಲಿಗೆ ಧಾವಿಸುತ್ತಾರೆ. ರಾಜ್ಯದಲ್ಲಿ ಮಾಡಿದಂತೆ ದೇಶದಲ್ಲೂ ದಾಖಲೆ ಪ್ರಮಾಣದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಬರುವಂತೆ ಮಾಡಿದ್ದಾರೆ.
ಗುಜರಾತ್ ಮಾದರಿ: ಪ್ರಖ್ಯಾತ ಗುಜರಾತ್ ಮಾದರಿ ಬಗ್ಗೆ ಮತ್ತೆ ಹೆಚ್ಚಾಗಿ ಪರಿಚಯಿಸುವ ಅಗತ್ಯವಿಲ್ಲ. ಅರೆ-ಶುಷ್ಕ ಪ್ರದೇಶಗಳಿದ್ದಾಗ್ಯೂ ಗುಜರಾತ್ ರಾಜ್ಯ ಬಂಪರ್ ಬೆಳೆ ದಾಖಲಿಸಿತು. ಮೂಲಸೌಕರ್ಯ ವಿಚಾರದಲ್ಲೂ ದಾಪುಗಾಲು ಹಾಕಿತು. ಭಾರತದ ಪ್ರಧಾನಿಯಾಗಿ ಮೋದಿ ಹಲವು ದಶಕಗಳ ನಂತರ ರೈತರಿಗೆ ಸ್ವಾತಂತ್ರ್ಯ ಕೊಡಿಸಿದ್ದಾರೆ. ದೇಶದ ಮೂಲಸೌಕರ್ಯ ಕೂಡ ಅಪಾರ ಪ್ರಮಾಣದಲ್ಲಿ ಬೆಳೆದಿದ್ದು ಇನ್ನಷ್ಟು ಅಭಿವೃದ್ಧಿಗೆ ಸಜ್ಜಾಗಿದೆ. ‘ಬೇಟಿ ಬಚಾವೋ ಬೇಟಿ ಪಢಾವೋ’ ಆಂದೋಲನದ ಮೂಲಕ ಹೆಣ್ಣುಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕೆ ಮೋದಿ ಕೊಟ್ಟ ಪ್ರಾಶಸ್ಱ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ನಲ್ಲಿ ಅನುಷ್ಠಾನಗೊಳಿಸಿದ್ದ ‘ಕನ್ಯಾ ಕೆಲವಾನಿ’ ಕಾರ್ಯಕ್ರಮದ ವಿಸ್ತರಣೆ ಇದೆಂಬುದು ಬಹಳ ಜನರಿಗೆ ಗೊತ್ತಿರಲಾರದು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದ ಆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ, ಹುಡುಗಿಯರ ಶಾಲಾ ದಾಖಲಾತಿಗಾಗಿ ಇಡೀ ಸರ್ಕಾರವೇ ಮುಖ್ಯಮಂತ್ರಿ ನೇತೃತ್ವದಲ್ಲಿ ಹಳ್ಳಿಗಳಲ್ಲಿ ವಾಸ್ತವ್ಯ ಹೂಡುತ್ತಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬೇಕು.
ನಿರಂತರವಾಗಿ ತಮಗೆ ತಾವೇ ಸವಾಲು ಹಾಕಿಕೊಳ್ಳುವ ಸಾಮರ್ಥ್ಯವೇ ಮೋದಿ ದೀರ್ಘ ಕಾಲ ಚುನಾಯಿತ ನಾಯಕರಾಗಿ ಮುಂದುವರಿದಿರುವ ಹಿಂದಿನ ಗುಟ್ಟಾಗಿದೆ. ಹೊರಗಿನವರು ಹಾಕುವ ಸವಾಲಿಗಿಂತ ಹೆಚ್ಚು ಆಕ್ರಮಣಾತ್ಮಕವಾಗಿ ತಮಗೆ ತಾವೇ ಅವರು ಸವಾಲುಗಳನ್ನು ಒಡ್ಡಿಕೊಳ್ಳುತ್ತಾರೆ. ಅವರು ಬಹಿರಂಗವಾಗಿಯೇ ಹಾಗೂ ಅಷ್ಟೇ ಶ್ರದ್ಧೆಯಿಂದ ಗುರಿಗಳನ್ನು ನಿಗದಿಪಡಿಸುತ್ತಾರೆ. ನೀತಿಗಳಿಗೆ ಸಂಬಂಧಿಸಿ ಅಧಿಕಾರಶಾಹಿಯಲ್ಲಿ ಜಡತ್ವ ಇರುವುದು ಗೊತ್ತಿದ್ದರೂ ತಮ್ಮ ಪ್ರತಿಯೊಂದು ಮಹತ್ವದ ಯೋಜನೆಗಳಿಗೆ ಪ್ರಧಾನಿ ಮೋದಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸುತ್ತಾರೆ. ಸ್ವಚ್ಛತೆ, ಗ್ರಾಮೀಣ ವಿದ್ಯುದೀಕರಣ, ಎಲ್ಲರಿಗೂ ವಸತಿ, ಶುದ್ಧ ಕುಡಿಯುವ ನೀರು ಅಥವಾ ರೈತರ ಆದಾಯ ದುಪ್ಪಟ್ಟುಗೊಳಿಸುವ ಯೋಜನೆಯೇ ಇರಲಿ, ಮೋದಿಯವರದ್ದು ಪಕ್ಕಾ ಗುರಿಯ ಲೆಕ್ಕಾಚಾರ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅವರ ಆಡಳಿತ ದಕ್ಷ, ಪರಿಣಾಮಕಾರಿ ಮತ್ತು ಸುಧಾರಣಾವಾದಿಯಾದುದು. 2001ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರಿದಾಗಿನಿಂದಲೂ ಅಧಿಕಾರ ವ್ಯವಸ್ಥೆಗೆ ಅವರು ನೀಡಿದ ಸ್ಪರ್ಶವೇ ವಿಭಿನ್ನ ಬಗೆಯದ್ದು. ಆಡಳಿತ ಮತ್ತು ರಾಜಕೀಯ ಸ್ತರದಲ್ಲೇ ಅಪರೂಪ ಎನ್ನುವಂಥ ಮೌಲ್ಯಗಳನ್ನು ಮೋದಿ ಪ್ರತಿನಿಧಿಸುತ್ತಾರೆ. ಆ ಮೂಲಕ ಭಾರತೀಯರ ಮನ ಮುಟ್ಟುತ್ತಾರೆ. ಸ್ವಚ್ಛತೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಪರಿವರ್ತಿಸಿದ ಅವರು ಹೆಚ್ಚೆಚ್ಚು ಸಬ್ಸಿಡಿ ನೀಡುವ ರಾಜಕೀಯ ಸಂಸ್ಕೃತಿ ಇರುವಂಥ ದೇಶದಲ್ಲಿ ಜನರು ಸಬ್ಸಿಡಿ ಬಿಟ್ಟುಕೊಡುವಂತೆ ಪ್ರೇರೇಪಿಸಿದರು. ಬಡವರು ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಪಡೆಯುವಂತೆ ಮಾಡಿದರು.
ಭಾರತ ಒಂದು ಬಹುತ್ವ ಹಾಗೂ ಅಪ್ಪಿಕೊಳ್ಳುವಂಥ ನಾಗರಿಕತೆ ಹೊಂದಿದ ದೇಶ. ಅಸ್ಮಿತೆಗಳನ್ನು ದಾಟಿ ಅಂಗೀಕೃತವಾಗುವುದು ಇಲ್ಲಿ ಸುಲಭ. ಗುಜರಾತಿಯಾದ ನರೇಂದ್ರ ಮೋದಿ, ಉತ್ತರ ಪ್ರದೇಶದ ಒಂದು ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಅವರು ಎಂದಿಗೂ ಯಾವುದೇ ಜಾತಿ, ಸಮುದಾಯ, ವರ್ಗ ಅಥವಾ ಪ್ರಾದೇಶಿಕ ವಿಚಾರಕ್ಕೆ ಕಟ್ಟುಬಿದ್ದವರಲ್ಲ. ಅವುಗಳ ಆಧಾರದಲ್ಲಿ ತಾರತಮ್ಯ ಮಾಡಿದವರೂ ಅಲ್ಲ. ಭಾರತದ ಶ್ರೇಷ್ಠತೆಗಾಗಿ ಎಲ್ಲ ಜನವಿಭಾಗಗಳನ್ನೂ ಒಗ್ಗೂಡಿಸುವ ಶಕ್ತಿ ಅವರಲ್ಲಿದೆ. ಹಾಗಾಗಿಯೇ, ಅಸಾಧ್ಯ ಎಂದು ಭಾವಿಸಲಾದ ಸುಧಾರಣೆಗಳನ್ನೂ ಮೋದಿ ಸಾಕಾರಗೊಳಿಸಿದ್ದಾರೆ.
ದ್ವೇಷಾಸೂಯೆಗಳನ್ನು ಸಹಿಸಿಕೊಂಡು ಘನತೆಯಿಂದ ಬಾಳುವ ಪಾಠವನ್ನು ಭಾರತೀಯ ಪರಂಪರೆ ಕಲಿಸಿದೆ. ಶಕ್ತಿಯಿಂದ ಕೂಡಿದ ಇಂಥ ಮೌನ, ದೃಢ ಹಾಗೂ ಘನತೆಪೂರ್ಣ ಸಂಕಲ್ಪವು ಕ್ರಮೇಣ ಎಲ್ಲ ಋಣಾತ್ಮಕತೆಯನ್ನು ದೂರ ಮಾಡುತ್ತದೆ. ಅದು ಕೂಡ ನರೇಂದ್ರ ಮೋದಿ ಏಳಿಗೆಯ ಕಥನವನ್ನು ಸೂಚಿಸುತ್ತದೆ. ಇಡೀ ವ್ಯವಸ್ಥೆ ಅವರನ್ನು ಗುರಿಯಾಗಿಸಿಕೊಂಡು ಎರಡು ದಶಕಗಳ ಕಾಲ ಅವರ ಗೌರವಕ್ಕೆ ಧಕ್ಕೆ ತರಲು ಯತ್ನಿಸಿತು. ಒಂದು ಸಣ್ಣ ತಪ್ಪು ನಡೆಯೂ ಅವರ ರಾಜಕೀಯ ಪಯಣವನ್ನು ಕೊನೆಗಾಣಿಸಬಹುದಿತ್ತು. ಆದರೆ, ಅಂಥ ತೀಕ್ಷ್ಣವಾದ ಪ್ರತಿಕೂಲ ವಾತಾವರಣದ ನಡುವೆಯೂ ಅವರು ಛಲ ಬಿಡದೆ ಮುಂದೆ ಸಾಗಿ, ಮೊದಲು ತಮ್ಮ ರಾಜ್ಯ ಹಾಗೂ ನಂತರ ಇಡೀ ದೇಶದ ಉನ್ನತಿಗಾಗಿ ದುಡಿದರು, ದುಡಿಯುತ್ತಿದ್ದಾರೆ. ಅವರ ದಿಟ್ಟ ನಡೆಯೇ ಅವರನ್ನು ತಡೆಯಲಾಗದ ಶಕ್ತಿಯಾಗಿಸಿದೆ. ಸವಾಲುಗಳಿಗೆ ಬೆದರದೆ, ವಿರೋಧಗಳಿಗೆ ಎದೆಗುಂದದೆ ಕೆಲಸವನ್ನೇ ಮಂತ್ರವನ್ನಾಗಿಸಿಕೊಂಡು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಶ್ರಮಿಸುತ್ತಿರುವ ಪರಿ ಅನನ್ಯ. ಅವರ ನಾಯಕತ್ವ ಗುಣ ಇತರರಿಗೆ ಮಾದರಿ.
ದೂರದೃಷ್ಟಿತ್ವ ಹಾಗೂ ಅನವರತವಾಗಿ ಕೆಲಸ ಮಾಡುವ ಶಕ್ತಿ ಮೋದಿ ಅವರಲ್ಲಿದೆ. ದೊಡ್ಡ ಯೋಜನೆಯ ದೂರದರ್ಶಿತ್ವ ಮಾತ್ರವಲ್ಲದೆ ಅದನ್ನು ಸಾಧಿಸಲು ದಿನದಿನವೂ ಅಗತ್ಯವಾದ ನಿಖರ ಕಾರ್ಯತಂತ್ರ ಹೆಣೆಯುವ ಚಾಣಾಕ್ಷಮತಿಯೂ ಅವರಲ್ಲಿದೆ. ಸರ್ಕಾರದ ಮುಖ್ಯಸ್ಥರಾಗಿ ಇಪ್ಪತ್ತನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಹೊರಳಿ ನೋಡಿದಾಗ ಅವರ ಹಿಂದಿನ ಸಾಧನೆಗಳು ಅಗಾಧವಾಗಿರಬಹುದು. ಆದರೆ ಇನ್ನೂ ಉತ್ತಮವಾದದ್ದು ಅವರಿಂದ ಸಾಧಿತವಾಗಬೇಕಿದೆ; ಅದುವೇ ಆತ್ಮನಿರ್ಭರ ಭಾರತ. ಈ ಮಹತ್ವದ ಕನಸು ಮೋದಿ ನಾಯಕತ್ವದಲ್ಲಿ ಸಾಕಾರಗೊಳ್ಳುವಂತಾಗಲಿ ಎಂಬುದೇ ಆಶಯ.
(ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)