ಅಂಕಣ

ಬೊಜ್ಜು ನೂರಾರು ರೋಗಗಳ ತಾಯಿ; ಪರಿಹಾರವೇನು?

ಬೊಜ್ಜು ನೂರಾರು ರೋಗಗಳ ತಾಯಿ. ಬೊಜ್ಜಿಗೆ ಮುಖ್ಯ ಕಾರಣ ಹೆಚ್ಚು ತಿನ್ನುವುದು ಮತ್ತು ಕಡಿಮೆ ದೈಹಿಕ ಚಟುವಟಿಕೆ ಹೊಂದಿರುವುದು. ಇವಲ್ಲದೆ ಆನುವಂಶೀಯತೆ, ಚಿಕ್ಕ ವಯಸ್ಸಿನಲ್ಲಿ ಬೆಳೆದ ರೀತಿ, ಕೆಲವು ಔಷಧಗಳು, ಹಾರ್ವೇನ್ ವೈಪರೀತ್ಯ, ಕಡಿಮೆ ಸೇವಿಸಿದರೂ ತೂಕವನ್ನು ಹೆಚ್ಚಿಸಬಲ್ಲ ಜಂಕ್ ಫುಡ್​ಗಳು, ಕರುಳಿನ ಬ್ಯಾಕ್ಟೀರಿಯಾಗಳು ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಬೊಜ್ಜು ಉಂಟಾಗುತ್ತದೆ. ಒಂದೆರಡು ನಮ್ಮ ಕೈಯಲ್ಲಿ ಇಲ್ಲದಿದ್ದರೂ ಬಹುತೇಕ ಕಾರಣಗಳನ್ನು ಸರಿಪಡಿಸಿಕೊಳ್ಳಬಹುದು. ಸಂಸ್ಕರಿಸಿದ ಅಥವಾ ಪ್ಯಾಕ್ಡ್ ಆಹಾರಗಳನ್ನು ಪದೇ ಪದೆ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶಗಳ ಬದಲು ಕೆಟ್ಟ ಕೊಬ್ಬು ಸಿಕ್ಕು ತೂಕವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇನ್ನೊಂದು ಕಾರಣ ಹಲವು ರೀತಿಗಳಲ್ಲಿ ನಾವು ಸೇವಿಸುವ ಸಕ್ಕರೆ. ಅದು ಒಂದು ವಿಷಚಕ್ರದಂತೆ ಕೆಲಸ ಮಾಡುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಕನಿಷ್ಠ ಒಂದು ಗಂಟೆಯಾದರೂ ಪ್ರತಿನಿತ್ಯ ದೈಹಿಕ ಶ್ರಮದಲ್ಲಿ ತೊಡಗಿಕೊಳ್ಳಲೇಬೇಕು. ಇಲ್ಲದೇ ಹೋದರೆ ಒಂದಲ್ಲ ಒಂದು ದಿನ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಒಮ್ಮೆ ಬೊಜ್ಜು ಒಂದು ಹಂತವನ್ನು ದಾಟಿದರೆ ಗುಣಪಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಥೈರಾಯ್ಡ್ ಗೆ ಸಂಬಂಧಿಸಿದ ಅಥವಾ ಪಿಸಿಓಡಿಯಂತಹ ಸಮಸ್ಯೆಗಳು, ಖಿನ್ನತೆಯಂತಹ ಮಾನಸಿಕ ತೊಂದರೆಗಳು ಕೂಡ ಎಷ್ಟೋ ಬಾರಿ ಬೊಜ್ಜಿಗೆ ಕಾರಣವಾಗುತ್ತವೆ. ಇವುಗಳನ್ನು ಗುಣಪಡಿಸಿಕೊಳ್ಳದೇ ಬೊಜ್ಜನ್ನು ಕಡಿಮೆ ಮಾಡಹೋದರೆ ಪ್ರಯೋಜನವಿಲ್ಲ.

ರಾತ್ರಿ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದೇ ಹೋದರೆ ಅದು ಬೊಜ್ಜಿಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಹಾಗಾಗಿ ಕನಿಷ್ಠ ಆರೇಳು ತಾಸು ನಿದ್ದೆ ಮಾಡಲೇಬೇಕು. ಆಯುರ್ವೆದದ ಪ್ರಕಾರ ಹಗಲು ನಿದ್ದೆ, ಬೊಜ್ಜಿಗೆ ಕಾರಣವಾಗುತ್ತವೆ. ಅದರಲ್ಲಿಯೂ ಮಧ್ಯಾಹ್ನ ಊಟದ ನಂತರ ಮಾಡುವ ನಿದ್ದೆಯಿಂದ ಮನುಷ್ಯ ಹಂದಿಯಂತೆ ಕೊಬ್ಬುತ್ತಾನೆ. ಸಮತೋಲನವಿಲ್ಲದ ಆಹಾರ ಸೇವನೆಯಿಂದಲೂ ಬೊಜ್ಜು ಉಂಟಾಗುತ್ತದೆ. ಅಂದರೆ ಕೇವಲ ಕಾಬೋಹೈಡ್ರೇಟ್ ಮಾತ್ರ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಬೊಜ್ಜು ಉಂಟಾಗುತ್ತದೆ. ಆಹಾರ ಸೇವಿಸುವುದು ಕಡಿಮೆ ಇದ್ದರೂ ಮಾನಸಿಕ ಒತ್ತಡ ಅತಿಯಾಗಿದ್ದರೆ ಹಾರ್ವೇನ್ ವ್ಯತ್ಯಾಸದಿಂದಾಗಿ ಬೊಜ್ಜು ಸುಲಭವಾಗಿ ಬಂದು ಬಿಡುತ್ತದೆ. ಬೊಜ್ಜು ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಬಹುತೇಕ ಎಲ್ಲರೂ ಚಿಕ್ಕ ಮಕ್ಕಳಿಗೆ ಕೊಡುತ್ತಿರುವ ಕಾರಣದಿಂದ ಅವರಲ್ಲಿಯೂ ಬೊಜ್ಜಿನ ಸಮಸ್ಯೆ ಕಾಡಲು ಪ್ರಾರಂಭಿಸಿದೆ. ಹಾಗಾಗಿ ಬೊಜ್ಜು ಬರದಂತೆ ನೋಡಿಕೊಳ್ಳುವುದು ಜಾಣತನ.

ಒಂದು ವೇಳೆ ಬೊಜ್ಜು ಬಂದಿದೆ ಎಂದಾದರೆ ಅದನ್ನು ಸರಿಪಡಿಸಿಕೊಳ್ಳಲು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು? ಮೊದಲನೆಯದಾಗಿ ಯಾವುದೇ ಕಾರಣಕ್ಕೂ ಮೇಲೆ ಹೇಳಿದ ಕಾರಣಗಳು ನಮ್ಮ ಜೀವನಶೈಲಿಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ವೈದ್ಯರ ಸಲಹೆಯಂತೆಯೇ ಅನುಸರಿಸುವ ಉಪವಾಸ ಬೊಜ್ಜಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ತ್ರಿಫಲ ಚೂರ್ಣ ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲದೇ ಬೊಜ್ಜನ್ನು ಕಡಿಮೆ ಮಾಡಬಲ್ಲದು. ಹಾಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತ್ರಿಫಲ ಚೂರ್ಣವನ್ನು ಬೆಚ್ಚಗಿನ ನೀರಿಗೆ ಹಾಕಿ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ. ನೆಲ್ಲಿಕಾಯಿ, ಜೇನುತುಪ್ಪ, ಹೆಸರುಬೇಳೆ, ಸೈಂಧವ ಲವಣ, ಸೌತೆಕಾಯಿ, ಬೆಣ್ಣೆ ತೆಗೆದ ಮಜ್ಜಿಗೆ ಮುಂತಾದ ಪದಾರ್ಥಗಳ ಬಳಕೆ ಕೂಡ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ. ಕರಿದ ಪದಾರ್ಥಗಳು, ಉದ್ದಿನಬೇಳೆ, ಮೊಸರು, ಬಾಳೆಹಣ್ಣು ಮುಂತಾದವು ಸ್ವಲ್ಪಮಟ್ಟಿಗೆ ತೂಕವನ್ನು ಹೆಚ್ಚಿಸುತ್ತವೆ. ಹಾಗಾಗಿ ಇವುಗಳನ್ನು ಅಪರೂಪಕ್ಕೊಮ್ಮೆ ಬಳಸಬೇಕು. ಉಪವಾಸ, ಪಥ್ಯ ಅಥವಾ ವ್ಯಾಯಾಮಗಳಿಂದ ತೂಕವನ್ನು ಕಡಿಮೆ ಮಾಡಲಾಗದಷ್ಟು ಬೊಜ್ಜು ಇದ್ದರೆ ಹಲವು ನೈಸರ್ಗಿಕ ಚಿಕಿತ್ಸೆಗಳಿವೆ. ಮಣ್ಣಿನ ಚಿಕಿತ್ಸೆ, ಉದ್ವರ್ತನ, ವಿವಿಧ ರೀತಿಯ ನೀರಿನ ಚಿಕಿತ್ಸೆಗಳು, ವಿಶೇಷ ಪಾನೀಯಗಳು, ಉಗಿ ಸ್ನಾನ, ವಿವಿಧ ರೀತಿಯ ಮಸಾಜ್​ಗಳು, ತೂಕ ಕಡಿಮೆ ಮಾಡಲೆಂದೇ ಇರುವ ವ್ಯಾಯಾಮಗಳು ಮುಂತಾದ ನೈಸರ್ಗಿಕ ಚಿಕಿತ್ಸೆಗಳನ್ನು ಕನಿಷ್ಠ 10 ರಿಂದ 20 ದಿನಗಳ ಕಾಲ ತೆಗೆದುಕೊಳ್ಳುವುದರಿಂದ ಬೊಜ್ಜು ಮತ್ತು ಅದರ ದುಷ್ಪರಿಣಾಮಗಳು ಹತೋಟಿಗೆ ಬರುತ್ತವೆ.