ಅಂಕಣ

ಶುಭ ವಿದಾಯದ ಅದೃಷ್ಟ ಎಲ್ಲರಿಗೂ ಇರುವುದಿಲ್ಲ!

ರೋಹಿತ್ ಶರ್ಮ ಜೀವನದಲ್ಲಿ ಅವಮಾನವೆಂಬುದು ಹೊಸದೇನೂ ಅಲ್ಲ. 2007ರಲ್ಲೇ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ರೋಹಿತ್, ಅಶಿಸ್ತಿನ ಕಾರಣಕ್ಕೆ 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅದಾದ ಬಳಿಕ ಭರ್ಜರಿ ಪುನರಾಗಮನಗೈದ ರೋಹಿತ್ ಆಟಗಾರನಾಗಿ, ನಾಯಕನಾಗಿ ಎತ್ತರಕ್ಕೇರಿದ್ದರು.

ಕೆಲವು ನಿರ್ಧಾರಗಳನ್ನು ತಡಮಾಡದೆ ತೆಗೆದುಕೊಳ್ಳುವುದರಿಂದ ಮುಜುಗರದಿಂದ ಪಾರಾಗಬಹುದು. ಆಸ್ಟ್ರೇಲಿಯಾದ ಮೆಲ್ಬರ್ನ್​ನಲ್ಲಿ ಕಳೆದ ವಾರ ಡ್ರಾ ಮಾಡಿಕೊಳ್ಳಬಹುದಾಗಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಸೋತ ಬೆನ್ನಲ್ಲೇ ನಾಯಕ ರೋಹಿತ್ ಶರ್ಮ ನಾಯಕನಾಗಿ ಹಾಗೂ ಆಟಗಾರನಾಗಿ ವೈಫಲ್ಯದ ಹೊಣೆ ಹೊತ್ತು ವಿದಾಯ ಹೇಳಿಬಿಟ್ಟಿದ್ದರೆ ವ್ಯಕ್ತಿಗತವಾಗಿ ತುಸು ಗೌರವಯುತವಾಗಿರುತ್ತಿತ್ತು. ತಂಡ ಸಂಕಷ್ಟದಲ್ಲಿರುವಾಗ ನಾಯಕನಾಗಿ ನಡುನೀರಿನಲ್ಲಿ ಕೈಬಿಟ್ಟ ಅಪವಾದ ಹೆಗಲೇರುವ ಅಪಾಯ ಇದ್ದರೂ, ಕಳಪೆ ಫಾಮರ್್​ನ ಕಾರಣಕ್ಕೆ ತಂಡಕ್ಕೆ ಹೊರೆ ಆಗಲಾರೆ ಎಂಬ ಸಮರ್ಥನೆ ಇರುತ್ತಿತ್ತು. ಇದೀಗ ಸಿಡ್ನಿಯಲ್ಲಿ 5ನೇ ಟೆಸ್ಟ್ ಆರಂಭಕ್ಕೆ ಇಪ್ಪತ್ನಾಲ್ಕು ಗಂಟೆ ಮುನ್ನ ಅವರು ಆಡುವ ತಂಡದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿರುವುದು ಎಲ್ಲ ಲೆಕ್ಕಾಚಾರದಿಂದಲೂ ತಡವಾಯಿತೆಂದೇ ಹೇಳಬೇಕು.

ಕ್ರಿಕೆಟ್​ನಲ್ಲಿ 37 ನಿವೃತ್ತಿಯ ವಯಸ್ಸೇ. 18 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ, ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕರಾಗಿ, 5 ಬಾರಿ ಐಪಿಎಲ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ರೋಹಿತ್ ಶ್ರೇಷ್ಠ ಎನಿಸಿಕೊಳ್ಳುವುದಕ್ಕೆ ಬೇಕಾದ ಎಲ್ಲ ಸಾಧನೆ ಮಾಡಿಯಾಗಿತ್ತು. ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರಕ್ಕೂ ಅಧಿಕ ರನ್, 31 ಶತಕ, 3 ದ್ವಿಶತಕ ಎಲ್ಲರಿಗೂ ಎಟುಕುವ ಸಾಧನೆಯೂ ಅಲ್ಲ. ಹಾಗೆ ನೋಡಿದರೆ 50 ಏಕದಿನ ಶತಕ ಬಾರಿಸಿರುವ ವಿರಾಟ್ ಕೊಹ್ಲಿಗೆ ಒಮ್ಮೆಯೂ ದ್ವಿಶತಕ ಗಡಿ ಮುಟ್ಟುವುದು ಸಾಧ್ಯವಾಗಿಲ್ಲ. ಹಾಗಿರುವಾಗ ರೋಹಿತ್ ಕ್ರಿಕೆಟಿಗನಾಗಿ ಹೆಮ್ಮೆ ಪಟ್ಟುಕೊಳ್ಳುವುದಕ್ಕೆ ಸಾಕಷ್ಟು ಸಾಧನೆಗಳನ್ನು ಬೆನ್ನಿಗೆ ಕಟ್ಟಿಕೊಂಡಿದ್ದಾರೆ. ಅದೇ ತೃಪ್ತಿಯಿಂದಲೇ ನಿರ್ಗಮಿಸಬಹುದಿತ್ತು.

ಟೆಸ್ಟ್​ಗಳಲ್ಲೂ ಆಡಿದ 67 ಟೆಸ್ಟ್​ಗಳಲ್ಲಿ 12 ಶತಕ, 40 ಸರಾಸರಿಯಲ್ಲಿ 4301 ರನ್ ಗಳಿಸಿರುವುದು ಸಣ್ಣ ಸಾಧನೆಯೇನೂ ಅಲ್ಲ. ಆಸ್ಟ್ರೇಲಿಯಾ ಪ್ರವಾಸವೆನ್ನುವುದು ಅನೇಕ ಶ್ರೇಷ್ಠ ಕ್ರಿಕೆಟಿಗರ ಪಾಲಿಗೆ ವಿದಾಯ ಪ್ರವಾಸವಾಗಿ ಬಿಡುವುದು ಕಾಕತಾಳೀಯ. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಆಸೀಸ್ ಪ್ರವಾಸದ ವೈಫಲ್ಯದ ಬೆನ್ನಲ್ಲೇ ವಿದಾಯ ಪಂದ್ಯಕ್ಕೂ ಕಾಯದೆ ನಿವೃತ್ತರಾಗಿದ್ದರು. ಎಂಎಸ್ ಧೋನಿ ಕೂಡ ಆಸೀಸ್ ಪ್ರವಾಸದ ನಡುವಲ್ಲೇ ಟೆಸ್ಟ್ ನಿವೃತ್ತಿ ಘೋಷಿಸಿದ್ದರು. ಮೊನ್ನೆ ಬ್ರಿಸ್ಬನ್ ಟೆಸ್ಟ್ ಡ್ರಾ ಫಲಿತಾಂಶದ ಬಳಿಕ ಆರ್. ಅಶ್ವಿನ್ ವಿದಾಯ ಘೋಷಿಸಿದ್ದರು. ಮೆಲ್ಬರ್ನ್​ನಲ್ಲಿ ರೋಹಿತ್ ಸರದಿ ಆಗಲು ಅವಕಾಶವಿತ್ತು. ಈಗ ಅವರು ಸಿಡ್ನಿ

ಟೆಸ್ಟ್​ನಿಂದ ಹಿಂದೆ ಸರಿಯುವ ಮೂಲಕ ಪರೋಕ್ಷವಾಗಿ ಟೆಸ್ಟ್ ಕ್ರಿಕೆಟ್​ನಿಂದ ದೂರ ಸರಿಯುವುದು ನಿಶ್ಚಿತವಾಗಿದೆ.

ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿದ್ದ ಅವಧಿ ರೋಹಿತ್ ಶರ್ಮ ನಾಯಕತ್ವದ ಮೇರು ಅವಧಿಯಾಗಿತ್ತು. ನಿಜ, ಅವರು ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್​ನಲ್ಲಿ ಹಾಗೂ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಸೋತಿರಬಹುದು. ಆದರೆ, ಟೆಸ್ಟ್ ಚಾಂಪಿಯನ್​ಷಿಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ಭಾರತ ಫೈನಲ್ ತಲುಪಿದ ರೀತಿ ಅಧಿಕಾರಯುತವಾಗಿತ್ತು. ಭಾರತ ಇತಿಹಾಸದ ಯಾವುದೇ ಏಕದಿನ ವಿಶ್ವಕಪ್​ನಲ್ಲಿ ಇಷ್ಟೊಂದು ಆರ್ಭಟಗೈದು ಫೈನಲ್​ವರೆಗೆ ಸಾಗಿರಲಿಲ್ಲ. ರೋಹಿತ್ ಶರ್ಮ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಆ ಎರಡೂ ಟೂರ್ನಿಗಳಲ್ಲಿ ಶ್ರೇಷ್ಠ ಮಟ್ಟದಲ್ಲಿದ್ದರು.

ಕೆಲವೇ ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆದ್ದಾಗಲೂ ಅಷ್ಟೇ. ರೋಹಿತ್ ನಾಯಕತ್ವ ಹಾಗೂ ಆಟ ಎರಡೂ ಅಪ್ಪಟ ಚಿನ್ನವಾಗಿತ್ತು. 2007ರ ಚೊಚ್ಚಲ ಟಿ20 ವಿಶ್ವಕಪ್ ಬಳಿಕ ಭಾರತ ಮತ್ತೊಮ್ಮೆ ಅದ್ಭುತ ಆಟವಾಡಿ ಚಾಂಪಿಯನ್ ಪಟ್ಟಕ್ಕೇರಿತ್ತು. ಅಂದರೆ, ಭಾರತೀಯ ಕ್ರಿಕೆಟ್ ಪಾಲಿಗೆ ರಾಹುಲ್ ದ್ರಾವಿಡ್- ರೋಹಿತ್ ಶರ್ಮ ಜೋಡಿ ಅದ್ಭುತವಾಗಿತ್ತು. ಅವರಿಬ್ಬರ ತಾಳಮೇಳ ಅನುರೂಪವಾಗಿತ್ತು. ದ್ರಾವಿಡ್ ನಿರ್ಗಮಿಸಿ, ಗೌತಮ್ ಗಂಭೀರ್ ಕೋಚ್ ಆಗಿ ಬಂದ ಮೇಲೆ ಎಲ್ಲವೂ ಬದಲಾಯಿತು.

ಭಾರತೀಯ ಕ್ರಿಕೆಟ್ ಉತ್ಥಾನ ತಂಡ ಮೂರು ಕಾಲಘಟ್ಟಗಳಲ್ಲಿ ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮ ನಾಯಕರಾಗಿದ್ದರು. ಇವರ ಜತೆಗೆ ಪ್ರಚಾರಪ್ರಿಯರಲ್ಲದ, ಹಿನ್ನೆಲೆಯಲ್ಲಿದ್ದುಕೊಂಡು ಕೆಲಸ ನಿರ್ವಹಿಸುವುದನ್ನು ಇಷ್ಟಪಡುವ ಜಾನ್ ರೈಟ್, ಗ್ಯಾರಿ ಕರ್ಸ್ಟನ್, ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಆದರೆ, ಗೌತಮ್ ಗಂಭೀರ್ ಆ ಮೂವರಂತಲ್ಲ. ಅವರು ತಾವೇ ಮುಂಚೂಣಿಯಲ್ಲಿರಲು ಬಯಸುವವರು. ಬಹುಶಃ ಗಂಭೀರ್-ರೋಹಿತ್ ಜೋಡಿ ಹೊಂದಾಣಿಕೆ ಆಗಲೇ ಇಲ್ಲ. ಅದು ಫಲಿತಾಂಶದಲ್ಲೂ ಕಾಣತೊಡಗಿತ್ತು. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್​ವಾಷ್, ಈಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಫಲ್ಯ ತಂಡವನ್ನು ಟೀಕೆಗೆ ಗುರಿಯಾಗಿಸಿತ್ತು.

ಕ್ರಿಕೆಟ್​ನಲ್ಲಿ ಕೆಲವೊಮ್ಮೆ ಅದೃಷ್ಟ ಎನ್ನುವುದೂ ಮುಖ್ಯವಾಗುತ್ತದೆ. 2011ರಿಂದ 2021ರ ಅವಧಿಯಲ್ಲಿ ಕೊಹ್ಲಿ 27 ಟೆಸ್ಟ್ ಶತಕ ಸಿಡಿಸಿದ್ದರು. ಆದರೆ, ಕಳೆದ 4 ವರ್ಷಗಳಲ್ಲಿ ಅವರು ಗಳಿಸಿರುವುದು ಕೇವಲ 3 ಶತಕ. ಇದೇ ಅವಧಿಯಲ್ಲಿ ಇಂಗ್ಲೆಂಡ್​ನ ಜೋ ರೂಟ್ 19 ಶತಕ ಸಿಡಿಸಿದ್ದಾರೆ. ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ 9 ಶತಕ ಬಾರಿಸಿದ್ದರೆ, ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ 7 ಶತಕ ಗಳಿಸಿದ್ದಾರೆ. 2021ರ ಆರಂಭದಲ್ಲಿ ಕೊಹ್ಲಿ 27 ಟೆಸ್ಟ್ ಶತಕ ಗಳಿಸಿದ್ದರೆ, ರೂಟ್ 17 ಶತಕವಷ್ಟೇ ಗಳಿಸಿದ್ದರು. ಆದರೆ, ಸದ್ಯ ಕೊಹ್ಲಿ 30 ಶತಕಗಳಲ್ಲೇ ಕುಂಟುತ್ತಿದ್ದಾರೆ. ರೂಟ್ 17ರಿಂದ 36ಕ್ಕೆ ಜಿಗಿದಿದ್ದಾರೆ. ವಿಲಿಯಮ್ಸನ್ 24ರಿಂದ 33ಕ್ಕೆ, ಸ್ಮಿತ್ 26ರಿಂದ 33ಕ್ಕೆ ಜಿಗಿದಿದ್ದಾರೆ. ಸಚಿನ್​ರ 51 ಟೆಸ್ಟ್ ಶತಕಗಳ ವಿಶ್ವದಾಖಲೆ, 100 ಅಂತಾರಾಷ್ಟ್ರೀಯ ಶತಕಗಳ ಮಹಾದಾಖಲೆ ಕೊಹ್ಲಿಗಿನ್ನು ಎಟುಕುವುದೂ ಅನುಮಾನವೇ. 2024ರಲ್ಲಿ ಕೊಹ್ಲಿ ಆಡಿರುವ 10 ಟೆಸ್ಟ್, 19 ಇನಿಂಗ್ಸ್​ಗಳಿಂದ 24 ಸರಾಸರಿಯಲ್ಲಿ 417 ರನ್ ಮಾತ್ರಗಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲೂ ಅವರು ಪರ್ತ್ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ಬಾರಿಸಿದ 100 ರನ್ ಹೊರತು ಪಡಿಸಿದರೆ, ಉಳಿದ 6 ಇನಿಂಗ್ಸ್ ಗಳಿಂದ 11 ಸರಾಸರಿಯಲ್ಲಿ 67 ರನ್ ಮಾತ್ರ ಗಳಿಸಿದ್ದಾರೆ. ಇಷ್ಟಾಗಿಯೂ, 4 ವರ್ಷಗಳಿಂದ ಬ್ಯಾಟರ್ ಆಗಿ ವೈಫಲ್ಯದ ಮೇಲೆ ವೈಫಲ್ಯ ಕಾಣುತ್ತಿದ್ದರೂ ಭಾರತ ತಂಡದಲ್ಲಿ ಅವರ ಸ್ಥಾನ ಪ್ರಶ್ನಾರ್ಹವಾಗಿಲ್ಲ. ತಂಡಕ್ಕೆ ಅವರು ಹೊರೆ ಎಂದು ಯಾರೂ ಭಾವಿಸುತ್ತಿಲ್ಲ. ಆದರೆ, ರೋಹಿತ್ ಶರ್ಮಗೆ ಇಂಥ ಅದೃಷ್ಟವಿಲ್ಲ.

ರೋಹಿತ್ ವೃತ್ತಿಜೀವನದಲ್ಲಿ 48 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. 12 ಟೆಸ್ಟ್ ಶತಕ, 5 ಟಿ20 ಶತಕ, 31 ಏಕದಿನ ಶತಕ, 3 ಏಕದಿನ ದ್ವಿಶತಕಗಳು ಅವರ ಬ್ಯಾಟ್​ನಿಂದ ಸಿಡಿದಿವೆ. 2015ರ ವಿಶ್ವಕಪ್ ಕ್ವಾರ್ಟರ್​ಫೈನಲ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿ ಭಾರತಕ್ಕೆ ಸೆಮಿಫೈನಲ್​ಗೆ ಬಡ್ತಿ ಕೊಡಿಸಿದ ರೋಹಿತ್, ಇಂಗ್ಲೆಂಡ್​ನಲ್ಲಿ ನಡೆದ 2019ರ ವಿಶ್ವಕಪ್​ನಲ್ಲಿ 5 ಶತಕ ಬಾರಿಸುವ ಮೂಲಕ ಒಂದೇ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆ ಮಾಡಿದ್ದರು. ಮಾತ್ರವಲ್ಲ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಅತೀ ಹೆಚ್ಚು 7 ಶತಕ ಸಿಡಿಸಿದ ದಾಖಲೆ ಅವರ ಹೆಸರಲ್ಲಿದೆ. ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಭರ್ಜರಿ ಟೆಸ್ಟ್ ಸರಣಿ ಗೆಲುವು, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಡ್ರಾ ಮಾಡಿಕೊಂಡಿದ್ದು, ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್​ಗೆ ತಂಡ ಮುನ್ನಡೆಸಿದ್ದು ಅವರ ಪ್ರಮುಖ ಸಾಧನೆಗಳು. ಆದರೂ, 2024ರ ಉತ್ತರಾರ್ಧದಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ 0-3 ವೈಟ್ ವಾಷ್ ಮತ್ತು ಆಸ್ಟ್ರೇಲಿಯಾದಲ್ಲಿ ಆಡಿದ ಮೂರು 3 ಟೆಸ್ಟ್​ಗಳಲ್ಲಿ 2 ಸೋಲು ಅವರ ವೃತ್ತಿಜೀವನಕ್ಕೇ ಮಾರಕವಾಗಿದೆ.

ಅವಮಾನವೆಂಬುದು ರೋಹಿತ್ ಜೀವನದಲ್ಲಿ ಹೊಸದೇನೂ ಅಲ್ಲ. 2007ರಲ್ಲೇ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ರೋಹಿತ್, ಅಶಿಸ್ತಿನ ಕಾರಣಕ್ಕೆ 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅದಾದ ಬಳಿಕ ಭರ್ಜರಿ ಪುನರಾಗಮನಗೈದ ರೋಹಿತ್ ಆಟಗಾರನಾಗಿ, ನಾಯಕನಾಗಿ ಎತ್ತರಕ್ಕೇರಿದ್ದರು. ಆದರೂ, ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದಿಂದ ಅವರನ್ನು ಅವಮಾನಕರವಾಗಿ ಕಿತ್ತುಹಾಕಲಾಗಿತ್ತು. ರೋಹಿತ್ ಭಾರತ ತಂಡದ ನಾಯಕರಾಗಿದ್ದರೂ, ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಪರ ಆಡುವಂತಾಗಿತ್ತು. ಆದರೆ, ಜೀವನದಲ್ಲಿ ಯಶಸ್ಸಿನಷ್ಟೇ ಸಮಚಿತ್ತದಿಂದ ಅವಮಾನವನ್ನೂ ಸಹಿಸುವ ರೋಹಿತ್, ಐಪಿಎಲ್ ನಂತರ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತಕ್ಕೆ ನಾಯಕರಾಗಿ ಪ್ರಶಸ್ತಿ ಕೊಡಿಸಿದ್ದರು.

ರೋಹಿತ್ ಓರ್ವ ಅಪ್ಪಟ ಟೀಮ್ ಮ್ಯಾನ್. ತಂಡದ ಆಟಗಾರರನ್ನು ಅವರು ಯಾವತ್ತೂ ಬಿಟ್ಟುಕೊಟ್ಟವರಲ್ಲ. ಮೈದಾನದಲ್ಲಿ ತಪು್ಪ ಮಾಡುವ ಆಟಗಾರರನ್ನು ಅವರು ತರಾಟೆಗೆ ತೆಗೆದುಕೊಂಡರೂ, ಅಷ್ಟೇ ಅಕ್ಕರೆಯಿಂದಲೂ ನೋಡಿಕೊಳ್ಳುತ್ತಿದ್ದರು. ಪರ್ತ್ ಟೆಸ್ಟ್​ನಲ್ಲಿ ಆರಂಭಿಕರಾಗಿ ಜೈಸ್ವಾಲ್ ಜತೆ ಕೆಎಲ್ ರಾಹುಲ್ ಯಶಸ್ವಿಯಾದಾಗ, 2ನೇ ಟೆಸ್ಟ್​ನಲ್ಲಿ ಅವರಿಗಾಗಿ ತಾವು ಆರಂಭಿಕನ ಸ್ಥಾನ ತ್ಯಾಗ ಮಾಡಿ 6ನೇ ಕ್ರಮಾಂಕದಲ್ಲಿ ಆಡಿದ್ದರು. ಇದೀಗ ತಮ್ಮ ಕಳಪೆ ಫಾಮ್ರ್ ತಂಡಕ್ಕೆ ದುಬಾರಿಯಾಗುತ್ತಿರುವಾಗ ಯಾವುದೇ ಹಿಂಜರಿಕೆ ಇಲ್ಲದೆ ಸಿಡ್ನಿ ಟೆಸ್ಟ್​ಗೆ ತಮ್ಮ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಆದರೆ, ಇನ್ನೇನು ಕೆಲವೇ ತಿಂಗಳಲ್ಲಿ 38ನೇ ವಯಸ್ಸಿಗೆ ಕಾಲಿಡಲಿರುವ ರೋಹಿತ್ ಪಾಲಿಗೆ ಅಧಿಕೃತವಾಗಿ ವಿದಾಯ ಘೋಷಿಸದಿದ್ದರೂ ಟೆಸ್ಟ್ ಕ್ರಿಕೆಟ್ ಮುಚ್ಚಿದ ಬಾಗಿಲು ಎಂದೇ ಭಾವಿಸಬೇಕು. ಟಿ20 ಕ್ರಿಕೆಟ್​ನಿಂದ ಕಳೆದ ವರ್ಷವೇ ನಿವೃತ್ತರಾಗಿರುವ ರೋಹಿತ್, ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದರೆ, ಅವರ ಪಾಲಿಗೆ ಅದೊಂದು ಕೊನೆಯ ಅವಕಾಶವಾಗಬಹುದು. ಒಂದು ವೇಳೆ ಕೋಚ್ ಗಂಭೀರ್ ಕೈಮೇಲಾದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಪಾಲಿಗೆ ಮೆಲ್ಬರ್ನ್ ಟೆಸ್ಟ್ ಪಂದ್ಯವೇ ಕೊನೆಯದಾದರೂ ಆಶ್ಚರ್ಯವಿಲ್ಲ.

ಕಾಫಿ ಬಿಸಿ ಇರುವಾಗಲೇ ಕುಡಿದರೆ ರುಚಿ ಜಾಸ್ತಿ, ನೆನಪುಗಳು ಸಿಹಿ ಇರುವಾಗಲೇ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಲೆ ಜಾಸ್ತಿ. ಬದುಕೆನ್ನುವುದು ಯಾರೋ ಗೀಚಿಹೋದ ಹಣೆಬರಹ ಎಂಬಂತಾಗದೆ, ನಮ್ಮದೇ ನಿರ್ಧಾರವಾಗಿದ್ದರೆ ಅದಕ್ಕೆ ತೂಕ ಜಾಸ್ತಿ. ರೋಹಿತ್​ರ ಹಾಲಿ ಹಣೆಬರಹ ಅವರೇ ಸ್ವತಃ ಬರೆದುಕೊಂಡಿದ್ದೇ ಅಥವಾ ಬಲವಂತವಾಗಿ ಬೇರೆಯವರು ಹೇರಿದ್ದೇ ಎನ್ನುವುದು ಶೀಘ್ರವೇ ತಿಳಿಯಲಿದೆ. ಭಾರತೀಯ ಕಾಲಮಾನ ಶುಕ್ರವಾರ ಮುಂಜಾನೆ 5 ಗಂಟೆಗೆ ಆರಂಭವಾಗುವ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟಾಸ್​ಗೆ ಜಸ್​ಪ್ರೀತ್ ಬುಮ್ರಾ ಆಗಮಿಸಿದರೆ, ಅಲ್ಲಿಗೆ ರೋಹಿತ್ ಶರ್ಮ ಎಂಬ ಅಮೋಘ ಅಧ್ಯಾಯ ಅಧಿಕೃತವಾಗಿ ಮುಗಿಯಿತೆಂದೇ ಅರ್ಥ.

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)