ಅಂಕಣ

ನೂತನ ಸಂವತ್ಸರ ಶಾರ್ವರಿ-ನೀಗಲಿ ನಮ್ಮೆಲ್ಲರ ವರಿ!

Mandara
ಬೇಕಿತ್ತು ಇಷ್ಟು ದಿನ

ಎಲ್ಲರಿಗೂ ಅಗ್ಗದ ಮಾಲು

ಮೇಡ್ ಇನ್ ಚೈನಾ

ಬೆಚ್ಚಿ ಬೀಳುವರು ಈಗ ಜನ

ಚೈನಾ ಅಂದಾಕ್ಷಣ

ಕಾರಣ ಕರೊನಾ!

ಹೌದು. ಚೈನಾದಲ್ಲಿ ಜನ್ಮ ತಾಳಿದ ಕರೊನಾ ವೈರಸ್​ನಿಂದಾಗಿ ಸದಾ ಮಾಲ್, ಸಿನಿಮಾ, ಪಬ್ಬು, ಕ್ಲಬ್ಬು ಎಂದು ಚೈನಿ ಹೊಡೆಯುತ್ತಿದ್ದವರೆಲ್ಲ ಈಗ ಗೃಹಬಂಧನ ಅನುಭವಿಸುವಂತಾಗಿದೆ. ನಮ್ಮ ದೇಶದ ಮೊದಲ ಕರೊನಾ ಸಾವು ಕರ್ನಾಟಕದಲ್ಲಿ ಸಂಭವಿಸಿದ್ದು ಕನ್ನಡಿಗರ ದುರದೃಷ್ಟ. ಕಳೆದ ತಿಂಗಳು ಸಾಹಿತ್ಯ ಸಮ್ಮೇಳನದಿಂದ ಪ್ರಖ್ಯಾತವಾಗಿದ್ದ ಕಲಬುರಗಿ ಈ ತಿಂಗಳು ಕರೊನಾ ಸಾವಿನ ಕಾರಣಕ್ಕೆ ಕುಖ್ಯಾತವಾಯಿತು. ಮುಂಜಾಗ್ರತೆ ಕ್ರಮವಾಗಿ ಸರ್ಕಾರ ರಾಜ್ಯಾದ್ಯಂತ ಬಂದ್ ಘೊಷಿಸಿದ್ದರಿಂದ ಸಭೆ, ಸಮಾರಂಭಗಳು ರದ್ದಾಗಿವೆ. ವ್ಯಾಪಾರ, ವ್ಯವಹಾರಗಳಿಗೆ ಭಾರೀ ಹೊಡೆತ ಬಿದ್ದಿದೆ. ಷೇರು ಬ-ಜಾರು ಒಂದೇ ಸಮನೆ ಜಾರುತ್ತಿದೆ. ಹೊರದೇಶಕ್ಕೆ ಹೋಗುವವರಿಗೆ ವೀಸಾ ಸಿಗುತ್ತಿಲ್ಲ. ಹೋದವರಿಗೆ ವಾಪಾಸು ಬರುವುದು ಕಷ್ಟವಾಗಿದೆ. ದೇಶದ ಒಳಗೂ ಒಬ್ಬರು ಇನ್ನೊಬ್ಬರ ಮನೆಗೆ ಹೋಗಲು ಅನುಮಾನಿಸುತ್ತಿದ್ದಾರೆ. ಕರೊನಾ ಬಾರದಂತೆ ಕಾಪಾಡು ಎಂದು ದೇವರಲ್ಲಿ ಪ್ರಾರ್ಥಿಸೋಣವೆಂದರೆ ಮಂದಿರಗಳಿಗೆ ಹೋಗುವುದಕ್ಕೂ ಆಗುತ್ತಿಲ್ಲ. ಭಕ್ತರೇ, ದಯವಿಟ್ಟು ದೇವಸ್ಥಾನಕ್ಕೆ ಬರಬೇಡಿ ಎಂದು ಪ್ರಸಿದ್ಧ ಮಂದಿರಗಳ ಆಡಳಿತ ಮಂಡಳಿಯವರು ಪ್ರಾರ್ಥಿಸುತ್ತಿದ್ದಾರೆ.

ಇಂಥ ಅಘೊಷಿತ ತುರ್ತು ಪರಿಸ್ಥಿತಿಯಲ್ಲೂ ನಮ್ಮ ನಿಮ್ಮ ಮನೆಗಳಿಗೆ ಬರಲು ಒಬ್ಬ ಅತಿಥಿ ತುದಿಗಾಲಿನಲ್ಲಿ ನಿಂತಿದ್ದಾನೆ. ಆತನಿಗೆೆ ಕರೊನಾ ಭಯವಿಲ್ಲ. ಅದಕ್ಕಿಂತ ಭಯಂಕರವಾದ ವೈರಸ್ಸಿಗೂ ಆತ ಕೇರ್ ಮಾಡುವುದಿಲ್ಲ. ಬರಗಾಲ, ಭೂಕಂಪ, ಸುನಾಮಿ ಇತ್ಯಾದಿ ಯಾವ ಅನಾಹುತ ಸಂಭವಿಸಿದರೂ ಈ ಅತಿಥಿ ಪ್ರತಿ ವರ್ಷ ಸಮಯಕ್ಕೆ ಸರಿಯಾಗಿ ಆಗಮಿಸುತ್ತಾನೆ. ನಿಮ್ಮ ಊಹೆ ಸರಿ. ಈತ ಇನ್ನಾರೂ ಅಲ್ಲ. ಇನ್ನು ಮೂರೇ ದಿನಗಳಲ್ಲಿ ಅಂದರೆ ಮಾರ್ಚ್ 25ರಂದು ನಮ್ಮ ನಿಮ್ಮ ಮನೆಗಳಿಗೆ ಬರಲಿರುವ ಚಾಂದ್ರಮಾನ ಯುಗಾದಿ! ಕಾಲ ಚಕ್ರ ಅದೆಷ್ಟು ವೇಗವಾಗಿ ಉರುಳುತ್ತಿದೆ. ವಿಳಂಬಿಯನ್ನು ಕೆಳಗಿಳಿಸಿ ವಿಕಾರಿ ಆ ಗಾದಿಯನ್ನು ಅಲಂಕರಿಸಿದ್ದು, ವಿಜಯದ ಸಂಕೇತವಾಗಿ ಇಂಗ್ಲಿಷ್ ಅಕ್ಷರ ವಿ ಆಕಾರದಲ್ಲಿ ಕೈಗಳ ಎರಡು ಬೆರಳುಗಳನ್ನು ತೋರಿಸಿದ್ದು ಮನದ ಪರದೆಯಿಂದ ಇನ್ನೂ ಅಳಿಸಿ ಹೋಗಿಲ್ಲ. ಆಗಲೇ ಇನ್ನೊಂದು ಯುಗಾದಿ ಬರುತ್ತಿದೆ.

ಯುಗಾದಿ ಅಂದಾಕ್ಷಣ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬ ನೆನಪಾಗುತ್ತದೆ. ಅಂದು ಮಕ್ಕಳನ್ನೆಲ್ಲ ಅಮ್ಮ ಬೇರೆ ದಿನಗಳಿಗಿಂತ ಬೇಗನೆ ಎಬ್ಬಿಸುತ್ತಿದ್ದಳು. ಬೇಗ ಮುಖ ತೊಳೆದು ಹಲ್ಲುಜ್ಜಿ ದೇವರ ಕೋಣೆಗೆ ಬನ್ನಿ ಎಂದು ಕರೆಯುತ್ತಿದ್ದಳು. ಆಗಲೂ ಏಳದಿದ್ದರೆ ‘‘ಏ ಮಾಣಿ ಅಮ್ಮ ಕರಿತ್ತು ಕೇಂತಿಲ್ಯಾ?’’ ಎಂದು ಅಪ್ಪಯ್ಯ ದನಿ ಏರಿಸಿ ಕೇಳುತ್ತಿದ್ದರು. ಅಪ್ಪಯ್ಯ ಕರೆದ ಮೇಲೆ ಏಳಲೇಬೇಕು. ದೇವರ ಕೋಣೆಗೆ ಹೋದರೆ ಅಲ್ಲಿ ದೇವರ ಪೀಠದ ಮುಂದೆ ಎಣ್ಣೆಯ ದೀಪದ ಬೆಳಕಲ್ಲಿ ಚಿನ್ನಾಭರಣಗಳನ್ನು ತೊಟ್ಟು ಫಳ ಫಳ ಹೊಳೆಯುವ ಯುಗಾದಿ ಕಾಯಿ ಕಾಣಿಸುತ್ತಿತ್ತು. ಬೇರೆ ಹಬ್ಬಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಅಲಂಕರಿಸುವ ಕೆಲಸ ಗಂಡಸರದ್ದಾದರೆ ಯುಗಾದಿಯಲ್ಲಿ ಆ ಜವಾಬ್ದಾರಿ ಹೆಂಗಸರಿಗೆ. ಅದಕ್ಕಾಗಿ ಅಮ್ಮ ಬೇಗನೆ ಎದ್ದು ಸ್ನಾನ ಮಾಡಿ ಮಡಿಯಲ್ಲಿ ಯುಗಾದಿ ಕಾಯಿಯನ್ನು ಸಿದ್ಧಪಡಿಸುತ್ತಿದ್ದಳು. ಅದೇನೂ ಅಷ್ಟು ಕ್ಲಿಷ್ಟವಾದ ಕೆಲಸವಲ್ಲ. ಮೊದಲು ಒಂದು ದೊಡ್ಡ ಹರಿವಾಣದಲ್ಲಿ ಭತ್ತವನ್ನು ಹಾಕಿ ಅದರ ಮೇಲೆ ಸಿಪ್ಪೆ ಸುಲಿಯದ ದೊಡ್ಡ ತೆಂಗಿನ ಕಾಯಿಯನ್ನು ಇಡುವುದು. ನಂತರ ಅದಕ್ಕೆ ಅರಶಿನ ಕುಂಕುಮ ಹಚ್ಚಿ ಮನೆಯಲ್ಲಿರುವ ಚಿನ್ನದ ಸರ ಮತ್ತು ಸುರಗಿ ಹೂವಿನ ಮಾಲೆ ಹಾಕಿ ಅಲಂಕರಿಸುವುದು. ಸುರಗಿ ಹೂವಿನ ವೈಶಿಷ್ಟ್ಯವೆಂದರೆ ಅದು ಒಣಗಿದ ನಂತರವೂ ಸುವಾಸನೆ ಬೀರುತ್ತದೆ. ಹರಿವಾಣವನ್ನು ರಂಗೋಲಿ ಬರೆದ ಮಣೆಯ ಮೇಲಿರಿಸಿ ದೇವರ ಮುಂದೆ ಇಟ್ಟರೆ ಯುಗಾದಿ ಕಾಯಿ ರೆಡಿ.

ಮುಂದಿನ ಕಾರ್ಯಕ್ರಮ ಮನೆಯವರೆಲ್ಲರೂ ಯುಗಾದಿ ಕಾಯಿಗೆ ನಮಸ್ಕಾರ ಮಾಡಿ ಅದರ ಪಕ್ಕದಲ್ಲಿ ಇಟ್ಟ ಬೇವಿನ ಎಸಳನ್ನು ತುಪ್ಪದಲ್ಲಿ ಅದ್ದಿ ತಿನ್ನುವುದು. ಬೇರೆ ಊರುಗಳಲ್ಲಿ ಯುಗಾದಿ ಎಂದರೆ ಬೇವು ಬೆಲ್ಲ. ನಮ್ಮಲ್ಲಿ ಬೇವು ತುಪ್ಪ. ನಮ್ಮ ಊರಿನಲ್ಲಿ ಬೆಲ್ಲ ಇಲ್ಲ ಎಂದು ತಿಳಿಯಬೇಡಿ. ರೈತರು ಕಬ್ಬು ಬೆಳೆದು ಅದರಿಂದ ಬೆಲ್ಲ ತಯಾರಿಸುತ್ತಿದ್ದ ಊರು ನಮ್ಮದು. ಕುಂದಾಪುರ ಸಂತೆಯಲ್ಲಿ ನಮ್ಮ ಹಟ್ಟಿಕುದ್ರಿನ ಬೆಲ್ಲಕ್ಕೆ ಒಳ್ಳೆಯ ಬೇಡಿಕೆ ಇತ್ತು. ಆದರೆ ಯುಗಾದಿಯಂದು ನಾವು ಬೇವಿನ ಜತೆಗೆ ತಿನ್ನುತ್ತಿದ್ದದ್ದು ಬೆಲ್ಲವಲ್ಲ ತುಪ್ಪ! ಒಂದು ಎಸಳು ಕಹಿಬೇವು ತಿನ್ನಲಿಕ್ಕೂ ನಾವು ಹಿಂದೇಟು ಹಾಕುತ್ತಿದ್ದದ್ದನ್ನು ನೆನೆಸಿಕೊಂಡರೆ ಈಗ ನಗು ಬರುತ್ತದೆ. ಬೇವಿನ ಎಲೆಯ ಔಷಧೀಯ ಗುಣಗಳನ್ನು ಸರಿಯಾಗಿ ವಿವರಿಸಿ ಹೇಳಿದ್ದರೆ ಬಹುಶಃ ನಾವು ಅದನ್ನು ತಿನ್ನಲು ಅಷ್ಟು ತಕರಾರು ಮಾಡುತ್ತಿರಲಿಲ್ಲವೋ ಏನೋ. ಬೇವಿನ ಎಲೆಯಷ್ಟೇ ಅಲ್ಲ, ಅದರ ಹೂವು, ಬೀಜ, ತೊಗಟೆ, ಬೇರು ಎಲ್ಲದರಲ್ಲೂ ಔಷಧೀಯ ಗುಣಗಳಿವೆ ಎಂದು ಆಯುರ್ವೆದದಲ್ಲಿ ಉಲ್ಲೇಖಿಸಲಾಗಿದೆ. ಬೇವಿಗೆ ಕೀಟನಾಶಕ ಮತ್ತು ರೋಗ ನಿರೋಧಕ ಗುಣವೂ ಉಂಟು. ಆದರೆ ಯುಗಾದಿಯ ಬೇವು ಬೆಲ್ಲದಲ್ಲಿ ಬೇವನ್ನು ನೋವಿಗೆ, ಕಷ್ಟಕ್ಕೆ ಮತ್ತು ಬೆಲ್ಲವನ್ನು ಸುಖ ಸಂತೋಷಕ್ಕೆ ಸಂಕೇತವೆಂದು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿರುವುದರಿಂದ ಬೇವಿಗೆ ಅನ್ಯಾಯವಾಗಿದೆ.

‘ಬೇವು ಬೆಲ್ಲದೊಳಿಡಲೇನು ಫಲ? ಹಾವಿಗೆ ಹಾಲೆರೆದೇನು ಫಲ?’ ಎಂದು ಪುರಂದರದಾಸರು ಬೇವನ್ನು ವಿಷಸರ್ಪದ ಜತೆ ಸಮೀಕರಿಸಿದ್ದಾರೆ. ಆರೋಗ್ಯಕ್ಕೆ ಬೆಲ್ಲಕ್ಕಿಂತ ಬೇವೇ ಒಳ್ಳೆಯದಾದರೂ ಜನರ ದೃಷ್ಟಿಯಲ್ಲಿ ಬೆಲ್ಲ ಹೀರೋ, ಬೇವು ವಿಲನ್. ಇನ್ನಾದರೂ ನಾವು ಬೆಲ್ಲವನ್ನು ಓಲೈಸುವುದನ್ನು ನಿಲ್ಲಿಸಬೇಕು. ಯಾವಾಗಲೂ ಬೆಲ್ಲವೇ ಬೇಕೆಂದು ಹಠ ಮಾಡಕೂಡದು. ಯಾಕೆ ಅನ್ನುವಿರಾದರೆ ಈ ಹನಿಗವನ ಓದಿ:

ಬೇವು ತಿನ್ನಿರಿ ನೀವು

ನನಗೆ ಬೇಕು

ಬೆಲ್ಲದ ಸಿಹಿ ಮಾತ್ರ

ಅನ್ನುತ್ತಿದ್ದ ಮಿತ್ರನಿಗೆ

ಈಗ ಸಿಹಿಮೂತ್ರ!

ಯುಗಾದಿಯಂದು ಮನೆಯವರೆಲ್ಲರೂ ಹೊಸ ಬಟ್ಟೆ ಧರಿಸಿ ಹೋಳಿಗೆ ಊಟ ಮಾಡುವ ಸಂಪ್ರದಾಯ ನಮ್ಮ ರಾಜ್ಯದ ಅನೇಕ ಕಡೆಗಳಲ್ಲಿ ಇದೆ. ಆದರೆ ನನ್ನ ಬಾಲ್ಯದಲ್ಲಿ ಯುಗಾದಿಯಂದು ಹೊಸ ಬಟ್ಟೆ ಧರಿಸಿದ್ದಾಗಲೀ ಹೋಳಿಗೆ ತಿಂದದ್ದಾಗಲೀ ನನಗೆ ನೆನಪಾಗುತ್ತಿಲ್ಲ. ಬಹಳ ಸರಳವಾಗಿ ಕಡಲೆ ಬೇಳೆ ಪಾಯಸದಲ್ಲೆ ಯುಗಾದಿ ಹಬ್ಬ ಮುಗಿಯುತ್ತಿತ್ತು. ಇದಕ್ಕೆ ಬಡತನ, ಉಳಿತಾಯ ಯೋಜನೆ ಅಥವಾ ಎರಡೂ ಕಾರಣವಾಗಿರಬಹುದು. ಯುಗಾದಿಯಂದು ರಾತ್ರಿ ನಮ್ಮೂರಿನ ಗಣಪತಿ ದೇವಸ್ಥಾನದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯುತ್ತಿತ್ತು. ಊರಿನ ಪುರೋಹಿತರಾಗಿದ್ದ ನಮ್ಮ ಅಪ್ಪಯ್ಯ ಹೊಸ ವರ್ಷದ ಪಂಚಾಂಗವನ್ನು ಓದಿ ಅದರಲ್ಲಿ ಸಂಸ್ಕೃತದಲ್ಲಿ ಹೇಳಿರುವ ಭವಿಷ್ಯವಾಣಿಯನ್ನು ಕನ್ನಡದಲ್ಲಿ ವಿವರಿಸುತ್ತಿದ್ದರು. ‘ಸೇನಾನಾಮಧಿಪೋ ಚಂದ್ರೋ ಸಸ್ಯಾನಾಮಧಿಪಃ ಗುರುಃ’ ಮುಂತಾದ ಶ್ಲೋಕಗಳನ್ನು ರಾಗವಾಗಿ ಓದಿ ನಂತರ ಸೇನಾಧಿಪತಿ ಚಂದ್ರನಾಗಿರುವುದರಿಂದ ಮತ್ತು ಸಸ್ಯಗಳಿಗೆ ಗುರು ಅಧಿಪತಿಯಾಗಿರುವುದರಿಂದ ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪ್ರಭಾವ ಉಂಟಾಗುತ್ತದೆ ಎಂಬುದನ್ನು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಿಸುತ್ತಿದ್ದರು. ಅದನ್ನು ಊರಿನ ಜನರು ಭಯಭಕ್ತಿಯಿಂದ ಕೇಳುತ್ತಿದ್ದರು. ಅಪ್ಪಯ್ಯ ‘ಈ ವರ್ಷ ಎಂಟು ಕೈಗಳು, ನಾಲ್ಕು ತಲೆಗಳು, ಉದ್ದವಾದ ಮೂಗುಳ್ಳ ಸಂಕ್ರಾಂತಿ ಪುರುಷ ಕುದುರೆಯ ಮೇಲೆ ಕುಳಿತು ಕಹಳೆಯನ್ನು ಊದುತ್ತಾ ಪಶ್ಚಿಮ ದಿಕ್ಕಿನತ್ತ ಪಯಣಿಸುತ್ತಾನೆ’ ಎಂದು ಕಾಲ ಪುರುಷನ ಲಕ್ಷಣಗಳನ್ನು ವರ್ಣಿಸುವಾಗ ಮಕ್ಕಳಾದ ನಮಗೆ ಹೆದರಿಕೆಯಾಗುತ್ತಿತ್ತು. ಆತ ನಮ್ಮ ಮನೆ ಕಡೆಗೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು.

ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಅಪ್ಪಯ್ಯನಿಗೆ ವಯಸ್ಸಾದ ಕಾರಣ ಪಂಚಾಂಗದ ಚಿಕ್ಕ ಅಕ್ಷರಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಯುಗಾದಿಯ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಅಪ್ಪಯ್ಯ ನನ್ನ ಹತ್ತಿರ ಪಂಚಾಂಗವನ್ನು ಓದಲು ಹೇಳಿ ಅರ್ಥವನ್ನು ಅವರು ವಿವರಿಸುತ್ತಿದ್ದರು. ಸಂಸ್ಕೃತ ಜ್ಞಾನವಿಲ್ಲದ ನಾನು ಉಚ್ಛಾರ ತಪ್ಪಾಗಬಹುದೆಂದು ಅಳುಕುತ್ತಲೇ ಓದುತ್ತಿದ್ದೆ. ನನ್ನ ಪಂಚಾಂಗ ವಾಚನ ಕೇಳಿದವರು ‘‘ಮಾಣಿ ಅಡ್ಡಿಲ್ಯೆ. ಅಪ್ಪಯ್ಯನ ಕಣೆಗೆ ಲಾಯ್್ಕ ಓದ್ತ’’ ಅಂದಾಗ ನನಗೆ ಸಂತೋಷವಾಗುತ್ತಿತ್ತು.

ಹಳೆಯ ಕತೆಯನ್ನು ಇಲ್ಲಿಗೇ ನಿಲ್ಲಿಸಿ ಬರಲಿರುವ ಯುಗಾದಿಯ ಬಗ್ಗೆ ಯೋಚಿಸೋಣ. ನಾವು ಕರೊನಾ ಭಯದಲ್ಲಿ ಕರೆಯದಿದ್ದರೂ ಯುಗಾದಿ ಬಂದೇ ಬರುತ್ತದೆ. ಬೋಳಾಗಿದ್ದ ಮರಗಳು ಚಿಗುರಿ ಎಲೆ ಚಾಮರ ಬೀಸುತ್ತಾ ಯುಗಾದಿಯನ್ನು ಸ್ವಾಗತಿಸುತ್ತಿವೆ. ಹೊಂಗೆ ಮರಗಳು ರಸ್ತೆಯ ಮೇಲೆ ಹೂವಿನ ಹಾಸಿಗೆಯನ್ನು ಹಾಸಿವೆ. ಹೀಗಿರುವಾಗ ಮನುಷ್ಯರಾದ ನಾವು ಸ್ವಾಗತ ಕೋರದಿದ್ದರೆ ಹೇಗೆ? ಯುಗಾದಿಗೆ ಜ್ವರ, ಕೆಮ್ಮು, ನೆಗಡಿ ಇಲ್ಲವಾದರೂ ಮುಂಜಾಗ್ರತೆ ಕ್ರಮವೆಂದು ಮಾಸ್ಕ್ ಹಾಕಿಕೊಂಡೇ ವೆಲ್ ಕಮ್ ಅನ್ನೋಣ. ಕೈ ಕುಲುಕುವುದು ಬೇಡ. ದೂರದಿಂದಲೇ ನಮಸ್ತೆ ಅನ್ನುವ.

ಯುಗಾದಿ ಎಂದರೆ ಎಲ್ಲ ಹಬ್ಬಗಳಂತಲ್ಲ. ಅದು ಹೊಸ ವರ್ಷದ ಆರಂಭವನ್ನು ಸಾರುವ ದಿನ. ಜನವರಿ ಒಂದರಂದು ನಾವು ಆಚರಿಸಿದ್ದು ಇಂಗ್ಲಿಷ್ ಕ್ಯಾಲೆಂಡರಿನ ಹೊಸ ವರ್ಷ. ಯುಗಾದಿ ನಮಗೆ ಭಾವನಾತ್ಮಕವಾಗಿ ನೂತನ ವರ್ಷ. ಅದು ಜನ-ವರಿಯಾದರೆ ಬರಲಿರುವ ನೂತನ ವರ್ಷ ಶಾರ್ವರಿ. ಅಯ್ಯೋ ದೇವರೇ ಇದೂ ಸಹಾ ವರಿ(ಚಿಂತೆ)ಯೇ ಎಂದು ಚಿಂತಿಸಬೇಡಿ. ಶಾರ್ವರಿ ಶಬ್ದದ ಅರ್ಥ ಇರುಳು. ನಮಗೆ ಹಗಲಿನ ಜತೆಗೆ ಇರುಳೂ ಬೇಕು. ಹಗಲೆಲ್ಲ ದುಡಿಯುತ್ತಲೇ ಇರುವ ನಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಲು ಸೂಕ್ತವಾದ ಸಮಯ ಇರುಳು. ಆದರೆ ಇಂದಿನವರದ್ದು ನಮಗೆ ವಿಶ್ರಾಂತಿಯೇ ಬೇಡ. ಯಂತ್ರದ ಹಾಗೆ ಹಗಲಿರುಳೂ ದುಡಿಯುತ್ತೇವೆ ಅನ್ನುವ ಮನೋಭಾವ. ಅದು ಒಳ್ಳೆಯದಲ್ಲ.

ನಿರಂತರ ದುಡಿಮೆ

ಆರೋಗ್ಯಕ್ಕೆ ಮಾರಕ

ಬೇಕು ಒಂದಿಷ್ಟು ರೆಷ್ಟು

ನಡುನಡುವೆ ಕುಳಿತು

ವಿಶ್ರಾಂತಿ ಪಡೆದರೆ

ಏರಬಹುದು ಎವರೆಷ್ಟು!

ಆಧುನಿಕ ಜೀವನ ಶೈಲಿ ಇರುಳನ್ನು ಹಗಲು ಮಾಡಲು ಹೊರಟಿದೆ. ಈಗ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನೂ ಕೂಡಾ ರಾತ್ರಿ ನಡೆಸುತ್ತಿದ್ದಾರೆ. ಇರುಳಿನ ಹೆಸರನ್ನು ಹೊಂದಿರುವ ಶಾರ್ವರಿ ಸಂವತ್ಸರದಲ್ಲಿ ನಾವು ರಾತ್ರಿ ಚೆನ್ನಾಗಿ ನಿದ್ರಿಸಿ ನಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವ ಸಂಕಲ್ಪ ಮಾಡೋಣವೆ? ಏನಂದಿರಿ? ಕರೊನಾದಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಹಗಲೂ ತುಸು ನಿದ್ರೆ ಮಾಡಬಹುದು ಅಂತೀರಾ? ಪರವಾಗಿಲ್ಲ ಬಿಡಿ. ಆದದ್ದೆಲ್ಲ ಒಳಿತೇ ಆಯಿತು. ಇಡೀ ವಿಶ್ವವೇ ಕರೊನಾ ವೈರಸ್ ಚಿಂತೆಯಲ್ಲಿ ಮುಳುಗಿರುವಾಗ ಬರುತ್ತಿರುವ ನೂತನ ಸಂವತ್ಸರ ಶಾರ್ವರಿ ನಮ್ಮ ವರಿಯನ್ನು ಕಡಿಮೆ ಮಾಡಲಿ ಎಂದು ಹಾರೈಸೋಣ.

ಮುಗಿಸುವ ಮುನ್ನ:

ಶಿಶಿರದಲ್ಲಿ ಎಲೆಗಳು

ಉದುರುವಾಗ ಒಟ್ಟಿಗೆ

ಚೈತ್ರದಲ್ಲಿ ಪುನಃ

ಚಿಗುರುವಾಗಲೂ ಒಟ್ಟಿಗೆ

ಮರಗಳು ಉತ್ತಮ ಉದಾಹರಣೆ

ಒಗ್ಗಟ್ಟಿಗೆ!