| ಶ್ರೀಕಾಂತ ಶೇಷಾದ್ರಿ ಬೆಂಗಳೂರು
ಡಿಜಿಟಲ್ ರೂಪದ ದಾಖಲೆಗಳನ್ನು ಇಟ್ಟುಕೊಳ್ಳುವ ಡಿಜಿಲಾಕರ್ ಮುಂದಿನ ಕೆಲವೇ ದಿನಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿದ್ದು, ಹೊಸ ರೂಪ ಪಡೆದುಕೊಳ್ಳುತ್ತಿದೆ. ಸರ್ಕಾರಿ ಸ್ವಾಮ್ಯದ ಡಿಜಿಟಲ್ ಇಂಡಿಯಾ ಕಾರ್ಪೆರೇಷನ್ (ಡಿಐಸಿ) ರೂಪಿಸಿದ ಡಿಜಿಲಾಕರ್ ದಾಖಲೆಗಳು ಮತ್ತು ಪ್ರಮಾಣಪತ್ರಗಳ ಸಂಗ್ರಹಣೆ, ಹಂಚಿಕೆ ಮತ್ತು ಪರಿಶೀಲನೆಗಾಗಿ ಸುರಕ್ಷಿತ ಕ್ಲೌಡ್ ಆಧಾರಿತ ವೇದಿಕೆಯಾಗಿದೆ. ಪ್ರಸ್ತುತ ದಾಖಲೆಗಳ ಸಂಗ್ರಹಕ್ಕೆ ಸೀಮಿತವಾಗಿದೆ. ಕೇಂದ್ರದ ಉದ್ದೇಶಕ್ಕೆ ಪೂರಕವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರ ಡಿಜಿಲಾಕರ್ ಬಳಕೆಯನ್ನು ಹೆಚ್ಚಿಸಲು ಸ್ಪರ್ಧೆಯಲ್ಲಿದ್ದು, ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿವೆ. ಸರ್ಕಾರದ ವಿವಿಧ ಇಲಾಖೆಗಳನ್ನು ಡಿಜಿಲಾಕರ್ ವ್ಯಾಪ್ತಿಗೆ ತರುವಲ್ಲಿ ಕರ್ನಾಟಕದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ ಗೌರ್ನೆನ್ಸ್) ಪ್ರಯತ್ನ ತುಸು ಹೆಚ್ಚೇ ಇದೆ. ಮಹತ್ವದ ಸಂಗತಿ ಎಂದರೆ, ರಾಜ್ಯದ ಕಡೆಯಿಂದ ಡಿಜಿಲಾಕರ್ಗೆ ಜೋಡಣೆಯಾಗುವ ಪ್ರಮಾಣ ಪತ್ರ ದಾಖಲೆಗಳು ಹ್ಯಾಕ್ ಆಗಬಾರದು, ತಿರುಚಬಾರದು, ಅನವಶ್ಯಕ ಬಹಿರಂಗ ಆಗಬಾರದೆಂದು ತಂತ್ರಜ್ಞಾನ ಆಧಾರಿತ ವಿಶೇಷ ರಕ್ಷಾ ಕವಚವನ್ನೂ ಅಳವಡಿಸಲಾಗಿದೆ.ಇಂದು ಏನೇ ಭದ್ರತಾ ವ್ಯವಸ್ಥೆ ಮಾಡಿದರೂ ದಾಖಲೆಗಳ ಹ್ಯಾಕಿಂಗ್ ನಡೆದೇ ಇದೆ. ಆದರೆ, ನಮ್ಮಲ್ಲಿ ಈವರೆಗೆ ಹ್ಯಾಕಿಂಗ್ ಮಾಡಲಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮುಂದೆಯೂ ಅವಕಾಶ ಕೊಡದಂತೆ ಪ್ರಯತ್ನ ಮಾಡಿದ್ದೇವೆ ಎಂದು ಇಗೌರ್ನೆನ್ಸ್ ಹಿರಿಯ ಅಧಿಕಾರಿ ‘ವಿಜಯವಾಣಿ’ಗೆ ವಿವರಿಸಿದರು. ಮುಂದಿನ ಹಂತದಲ್ಲಿ ಇತರ ರಾಜ್ಯಗಳಿಗಿಂತ ಮೊದಲಾಗಿ ಡಿಜಿಲಾಕರ್ ಮೂಲಕ ಆನ್ಲೈನ್ನಲ್ಲೇ ಪ್ರಮಾಣ ಪತ್ರ ಪರಿಶೀಲಿಸುವ ಅಧಿಕಾರ ನೀಡುವ ವ್ಯವಸ್ಥೆ ಜಾರಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಅಂತಿಮ ಹಂತದ ತಯಾರಿ ನಡೆದಿದೆ. ಉದಾಹರಣೆಗೆ, ಉದ್ಯೋಗದಾತರು, ಸಂದರ್ಶಕರು ಅಥವಾ ಸರ್ಕಾರದ ಇಲಾಖೆಗಳು ಉದ್ಯೋಗ ನೀಡುವ ಸಂದರ್ಭದಲ್ಲಿ ಅಭ್ಯರ್ಥಿ ಕೊಟ್ಟ ಪ್ರಮಾಣದ ನೈಜತೆ ಪರೀಕ್ಷಿಸಲು ಪ್ರಸ್ತುತ ವ್ಯವಸ್ಥೆಯಲ್ಲಿ ಪ್ರಮಾಣ ಪತ್ರ ವಿತರಿಸಿದ ಸಂಸ್ಥೆಗೆ ಕಳುಹಿಸಿ ದೃಢೀಕರಣ ಪಡೆದುಕೊಳ್ಳಲಾಗುತ್ತದೆ. ಆದರೆ, ಡಿಜಿಲಾಕರ್ ಮೂಲಕ ಆನ್ಲೈನ್ನಲ್ಲೇ ಪರಿಶೀಲಿಸುವ, ದೃಡೀಕರಿಸಿಕೊಳ್ಳುವ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ. ಡಿಜಿಲಾಕರ್ ಮೂಲಕ ದಾಖಲೆ ಪಡೆದುಕೊಳ್ಳಲು ಜನರಿಗೆ ಅವಕಾಶ ಕೊಡು ವುದರಿಂದ ದಾಖಲಾತಿ ಸೋರಿಕೆಯಾಗದಂತೆ, ಸಂಸ್ಥೆಗಳಿಗೆ ನಂಬಿಕೆ ಬರುವಂತೆ ರಕ್ಷಣಾ ಪದರ ರಚಿಸಲಾಗಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.
ಪಟಾಪಟ್ ಪರಿಶೀಲನೆ: ಯಾವುದೇ ಪ್ರಮಾಣ ಪತ್ರ, ಅಂಕಪಟ್ಟಿಯನ್ನು ಅಭ್ಯರ್ಥಿ ಪರಿಶೀಲನೆಗೊಳಪಡಿಸಲು ನೀಡಿದಾಗ ಅಧಿಕೃತವಾಗಿ ವೆರಿಫಿಕೇಶನ್ ಅರ್ಹತೆ ಪಡೆದುಕೊಂಡ ವರು ಪರಿಶೀಲಿಸುವ ಅವಕಾಶವಿರಲಿದೆ. ಕ್ಯೂಆರ್ ಕೋಡ್ ಇರುವ ಪ್ರಮಾಣ ಪತ್ರ ಆದರೆ ಪರಿಶೀಲನೆ ಸಲೀಸು. ಒಂದು ವೇಳೆ ಕ್ಯೂಆರ್ ಕೋಡ್ ಇಲ್ಲದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೂ ಮಾಡಿಕೊಳ್ಳ ಬಹುದು. ಇಲ್ಲವಾದರೆ ನೇರವಾಗಿ ಪ್ರಮಾಣ ಪತ್ರ ವಿತರಣೆ ಮಾಡಿದ ಮೂಲ ಸಂಸ್ಥೆ ಅಥವಾ ಇಲಾಖೆಗೆ ಡಿಜಿಟಲ್ ಮಾಧ್ಯಮದಲ್ಲೇ ಕಳಿಸಿಕೊಡ ಬಹುದು. ಅಲ್ಲಿರುವ ಸಂಬಂಧಪಟ್ಟ ಅಧಿಕಾರಿ ದೃಢೀಕರಿಸಿ ತಕ್ಷಣವೇ ಕಳಿಸುವರು. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅಂಚೆ ಮೂಲಕ ದಾಖಲೆ ಕಳಿಸುವ, ಶುಲ್ಕ ಪಾವತಿಸುವ, ಖಚಿತಪಡಿಸಿ ಕೊಳ್ಳುವ ವ್ಯವಸ್ಥೆಯೇ ರದ್ದಾಗಲಿದೆ. ಇನ್ನೊಂದು ಮುಖ್ಯ ಸಂಗತಿ ಎಂದರೆ, ಡಿಜಿಟಲ್ ರೂಪದ ದಾಖಲಾತಿ ತಿರುಚುವ ಬೆಳವಣಿಗೆಗೆ ಈ ವಿಧಾನದಿಂದ ಬ್ರೇಕ್ ಬೀಳುವ ಸಾಧ್ಯತೆ ಇದೆ.
ಗೌಪ್ಯತೆ ಬಹಿರಂಗವಿಲ್ಲ: ಒಬ್ಬ ವ್ಯಕ್ತಿ ತನ್ನ ಯಾವ ದಾಖಲೆಗಳು ಮಾತ್ರ ಪರಿಶೀಲನೆಗೊಳಪಡಬಹುದು ಎಂದು ಬಯಸಿ ಅನುಮತಿಸಿದರೆ (ಟಿಕ್ ಮಾಡಿದರೆ) ಆ ದಾಖಲೆಯನ್ನು ಮಾತ್ರ ಪರಿಶೀಲಿಸಲು ಡಿಜಿಟಲ್ ಪ್ರಮಾಣ ಪತ್ರ ಸ್ವೀಕರಿಸಿದವರಿಗೆ ಅವಕಾಶ ದೊರೆಯಲಿದೆ. ಹೀಗಾಗಿ ಡಿಜಿಲಾಕರ್ ವ್ಯಾಪ್ತಿ ವಿಸ್ತರಣೆಯಿಂದ ಗೌಪ್ಯತೆ ಬಹಿರಂಗವಾಗುವ ಆತಂಕವಿಲ್ಲ ಎಂಬುದು ಅಧಿಕಾರಿಗಳ ವಿವರಣೆ.
ಬರಲಿದೆ ಸಿಂಗಲ್ಸೈನ್ ಇನ್: ಕೆಲವು ವೆಬ್ಸೈಟ್ಗಳ ಒಳ ಪ್ರವೇಶಿಸಲು ಲಾಗಿನ್ ಆಗುವ ವ್ಯವಸ್ಥೆ ಇರುತ್ತದೆ. ಸರ್ಕಾರದ ವೆಬ್ಗಳಲ್ಲೂ ಈ ರೀತಿ ಇರುವುದುಂಟು. ಲಾಗಿನ್ ಮಾಡಿಕೊಳ್ಳಲು ವೈಯಕ್ತಿಕ ಮಾಹಿತಿ ಕೊಡಬೇಕಾ ಗುತ್ತದೆ. ಆದರೆ, ಡಿಜಿಲಾಕರ್ ಆಧಾರದಲ್ಲಿ ಇಂತಹ ಸರ್ಕಾರಿ ವೆಬ್ಗಳಲ್ಲಿ ಪ್ರವೇಶ ಪಡೆದುಕೊಳ್ಳಲು ತಂತ್ರಜ್ಞಾನ ಸಿದ್ಧವಾಗುತ್ತಿದೆ.
ಬದಲಾಗುವ ವ್ಯವಸ್ಥೆ ಏನು?: ಸಂಸ್ಥೆಯೊಂದು ತನಗೆ ಡಿಜಿಲಾಕರ್ ಮೂಲಕ ಪ್ರಮಾಣ ಪತ್ರಗಳ ಪರಿಶೀಲನೆ- ದೃಢೀಕರಣ ಮಾಡಿಸಲು ಇಚ್ಛೆಪಟ್ಟಲ್ಲಿ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುವ ವೆರಿಫಿಕೇಶನ್ ಪ್ರಕ್ರಿಯೆ ರೀತಿಯೇ ಡಿಜಿಲಾಕರ್ನಲ್ಲಿ ದಾಖಲೆ ಪರಿಶೀಲನೆಗೆ ಅರ್ಹತೆ ಕೊಡಲಾಗುತ್ತದೆ. ಶೀಘ್ರ ಈ ಸಂಬಂಧ ಮಾರ್ಗಸೂಚಿ ಪ್ರಕಟವಾಗಲಿದೆ. ಇಲಾಖೆ, ಕಂಪನಿ ಅಥವಾ ಸಂಸ್ಥೆಯ ಮುಖ್ಯಸ್ಥರ ಹೆಸರಿನಲ್ಲಿ ಕೋರಿಕೆ ಸಲ್ಲಿಸಿ ಅವಕಾಶ ಪಡೆದುಕೊಳ್ಳುವ ಸುಲಭ ವಿಧಾನ ಇರಲಿದೆ.
ಆದಾಯ ನಷ್ಟ ನೀಗಿಸಲು ಸಮಿತಿ: ಡಿಜಿಟಲ್ ದಾಖಲಾತಿ ಪರಿಶೀಲನೆಯಿಂದ ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಆದಾಯ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಉದಾಹರಣೆಗೆ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ಪ್ರಸ್ತುತ ದಾಖಲಾತಿ ಪರಿಶೀಲನೆಯಿಂದಲೇ ವಾರ್ಷಿಕ ಅಂದಾಜು ಒಂದು ಕೋಟಿ ರೂ. ಆದಾಯ ಬರುತ್ತಿದೆ. ಡಿಜಿಟಲ್ ದಾಖಲೆ ಪರಿಶೀಲನೆ ವ್ಯವಸ್ಥೆ ಜಾರಿಗೆ ಬಂದರೆ ಮಂಡಳಿಗೆ ದೊಡ್ಡ ನಷ್ಟವಾಗುತ್ತದೆ. ಇದೇ ರೀತಿ ಸರ್ಕಾರದಿಂದ ನೆರವು ಪಡೆಯದೇ ಹಲವು ಸಂಸ್ಥೆಗಳು ಸ್ವಯಂ ಆದಾಯ ಸೃಷ್ಟಿಸಿಕೊಳ್ಳುತ್ತಿವೆ. ಅಂತಹ ಆದಾಯ ಕೊರತೆಯಾಗಬಹುದೆಂದು ಕಳವಳ ವ್ಯಕ್ತಪಡಿಸಿವೆ. ಈ ಕಾರಣಕ್ಕೆ ಉನ್ನತ ಮಟ್ಟದ ತಜ್ಞರನ್ನೊಳಗೊಂಡ ಸಮಿತಿ ರಚಿಸಿದ್ದು ದಾಖಲಾತಿ ಪರಿಶೀಲನಾ ಶುಲ್ಕ ಸ್ವೀಕರಿಸುವುದಾದರೆ ಯಾವ ಹಂತದಲ್ಲಿ ಸ್ವೀಕರಿಸಬೇಕೆಂಬ ಬಗ್ಗೆ ಸಲಹೆ ನೀಡುವ ನಿಟ್ಟಿನಲ್ಲಿ ಸಮಿತಿ ವರದಿ ನೀಡಲಿದೆ.