ಅಂಕಣ

ಎನ್​ಸಿಸಿ ವಿಸ್ತರಣೆ ಶ್ಲಾಘನೀಯ ನಿರ್ಧಾರ

lakshmihegde

ಎನ್​ಸಿಸಿಯನ್ನು ಇನ್ನೂ 173 ಗಡಿ ಮತ್ತು ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಣಯ ಸ್ವಾಗತಾರ್ಹ. ಒಂದು ಲಕ್ಷ ವಿದ್ಯಾರ್ಥಿಗಳು ಈ ವಿಸ್ತರಣೆಯ ಲಾಭ ಪಡೆಯಲಿದ್ದಾರೆೆ. ಚೀನಾ ಮತ್ತು ಪಾಕಿಸ್ತಾನಗಳು ಗಡಿಯಲ್ಲಿ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲು ನಮ್ಮ ಸೇನಾಪಡೆ ಶಕ್ತವಾಗಿದೆಯಾದರೂ ಆಂತರಿಕ ಏಕತೆ, ನಾಗರಿಕರ ರಾಷ್ಟ್ರನಿಷ್ಠೆ ಒಂದು ದೇಶದ ಏಳಿಗೆಗೆ ನಿರ್ಣಾಯಕವಾಗಿರುತ್ತದೆ. ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವಜನರಲ್ಲಿ ರಾಷ್ಟ್ರಭಕ್ತಿ, ನಾಯಕತ್ವಗುಣ, ಸಾಹಸ, ಶಿಸ್ತು ಮೂಡಿಸಿ ರಾಷ್ಟ್ರೀಯ ಏಕತೆಗೆ ಪೂರಕವಾದ ವಿಶಾಲ ದೃಷ್ಟಿಕೋನ ಎರಕ ಹೊಯ್ಯುವ ಎನ್​ಸಿಸಿ ಕಾರ್ಯ ಶ್ಲಾಘನೀಯ.

ಇತ್ತೀಚಿನ ದಶಕಗಳಲ್ಲಿ ದೇಶಪ್ರೇಮದ ಒಲವು ಮೂಡಿಸುವ ಅಂಶಗಳು ನಮ್ಮ ಶಿಕ್ಷಣ ವ್ಯವಸ್ಥೆಯಿಂದ ಸದ್ದಿಲ್ಲದೆ ಮರೆಯಾಗುತ್ತಿವೆ. ಕೆಲ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ದೇಶವಿರೋಧಿ ಚಟುವಟಿಕೆಗಳ ತಾಣವಾಗುತ್ತಿರುವುದು ಖೇದಕರ. ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ಮೆರೆಯುವ ಕೆಲ ಬೋಧಕರು, ನಕಲಿ ಬುದ್ಧಿಜೀವಿಗಳು ಯುವಮನಸ್ಸುಗಳಲ್ಲಿ ವಿಷಬೀಜ ಬಿತ್ತುತ್ತಿರುವುದು ದೇಶಕ್ಕೆ ಮಾರಕವಾಗುತ್ತಿದೆ. ಇದನ್ನೂ ಓದಿ: ಗೊತ್ತಾಗದೆ ಗಡಿ ದಾಟಿದ ಇವರು ಮರಳಿ ದೇಶಕ್ಕೆ ಕಾಲಿಡಲು 5 ವರ್ಷಗಳೇ ಬೇಕಾದವು…

ಎನ್​ಸಿಸಿಯ ಸೈನ್ಯ ತರಬೇತಿ ಶಿಬಿರಗಳಲ್ಲಿ ಭಾಗಿಯಾದ ವಿದ್ಯಾರ್ಥಿಗಳು ರಾಷ್ಟ್ರದ ಸತ್ಪ್ರಜೆಗಳಾಗುವುದರಲ್ಲಿ ಸಂದೇಹವಿಲ್ಲ. ದೇಶದ ವಿವಿಧತೆಯನ್ನು ಪರಿಚಯಿಸುವ, ವ್ಯಕ್ತಿತ್ವ ವಿಕಸನಕ್ಕೆ ಪೂರಕ ಮೌಲ್ಯಗಳನ್ನು ಮೂಡಿಸುವ ಎನ್​ಸಿಸಿ ಕ್ಯಾಂಪ್​ಗಳಲ್ಲಿ ಭಾಗವಹಿಸಲು ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಲಿ. ಲಂಚಗುಳಿತನ, ಅಶಿಸ್ತುಗಳಿಂದ ಜಡ್ಡುಗಟ್ಟಿದ ಶಾಸನವನ್ನು ಚುರುಕುಗೊಳಿಸಲು ನಾಗರಿಕ ನೇಮಕಾತಿಗಳಲ್ಲಿ ಎನ್​ಸಿಸಿ ಕೆಡೆಟ್​ಗಳಿಗೆ ಆದ್ಯತೆ ಸಿಗುವಂತಾಗಲಿ ಹಾಗೂ ಕಾರ್ಪೆರೇಟ್ ಜಗತ್ತು ಕೂಡ ಎನ್​ಸಿಸಿ ಕೆಡೆಟ್​ಗಳನ್ನು ಆಯ್ಕೆ ಮಾಡುವ ಮೂಲಕ ಎನ್​ಸಿಸಿಯನ್ನು ಬೆಂಬಲಿಸಲಿ.

| ಚಂದ್ರಶೇಖರ ನಾವಡ, ಮಾಜಿ ಸೈನಿಕರು, ಬೈಂದೂರು