ಪ್ರಪಂಚದಲ್ಲಿ ಪ್ರಚಲಿತ ನಮ್ಮ ಜೀವನಶೈಲಿ ಪರಿಸರಸ್ನೇಹಿಯಾಗಿಲ್ಲ. ಪ್ರಕೃತಿಯ ಮೇಲೆ ವಿಜಯ ಸಾಧಿಸಿ ನಾವು ಜೀವಿಸಬೇಕು, ಸಂಪೂರ್ಣ ಪ್ರಕೃತಿ ಇರುವುದು ನಮಗಾಗಿಯೇ, ಅದನ್ನುಳಿಸುವ ಜವಾಬ್ದಾರಿ ನಮಗಾರಿಗೂ ಇಲ್ಲ, ಈ ಪ್ರಕೃತಿಯ ಮೇಲೆ ಸಂಪೂರ್ಣ ಅಧಿಕಾರವಿದೆ ಎಂದುಕೊಂಡು ಎಲ್ಲ ಮನುಷ್ಯರು ಭೋಗದ ಜೀವನ ನಡೆಸುತ್ತಿದ್ದಾರೆ. ಹೀಗೆ ಕಳೆದ 200-250 ವರ್ಷಗಳಿಂದ ಪ್ರಕೃತಿ ಶೋಷಣೆ ನಡೆಯುತ್ತಲೇ ಇದೆ. ಅಂತಹ ಹತೋಟಿರಹಿತ ಜೀವನದ ದುಷ್ಪರಿಣಾಮಗಳು ಇಂದು ಬೆಳಕಿಗೆ ಬರುತ್ತಿವೆ. ದಿನಗಳು ಉರುಳಿದಂತೆ ಅದರ ಭಯಾನಕತೆಯ ಅನುಭವ ಆಗತೊಡಗಿದೆ. ಆದರೆ ಪ್ರಕೃತಿಯೊಂದಿಗಿನ ಭಾರತದ ಜೀವನಶೈಲಿ ವಿಭಿನ್ನವಾದುದು.
ನಮ್ಮ ಪೂರ್ವಜರು ನಮ್ಮ ಅಸ್ತಿತ್ವದ ಸತ್ಯವನ್ನು ಪರಿಪೂರ್ಣವಾಗಿ ಅರಿತುಕೊಂಡಿದ್ದರು. ಅಂದೇ ಅವರು ನಾವೆಲ್ಲರೂ ಈ ಪರಿಸರದ ಭಾಗವೆಂದು ತಿಳಿದುಕೊಂಡಿದ್ದರು. ಈ ಜಗತ್ತನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಬದುಕಲು ಸೃಷ್ಟಿಯಿಂದ ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಆದರೆ ಪ್ರಕೃತಿಯ ಶೋಷಣೆ ಮಾಡಬಾರದು. ಪ್ರಕೃತಿಯಿಂದ ಬೇಕಾಗಿದ್ದೆಲ್ಲವನ್ನೂ ಪಡೆದುಕೊಂಡಿದ್ದೇವೆ. ಪ್ರಕೃತಿಯೊಡನೆ ನಮ್ಮದು ಒಂದು ದಿನದ ಸಂಬಂಧವಲ್ಲ, ಸಂಪೂರ್ಣ ಪ್ರಕೃತಿಯೇ ತಮ್ಮ ಜೀವನ ಎಂಬುದನ್ನು ಪೂರ್ವಜರು ಚೆನ್ನಾಗಿ ಅರಿತುಕೊಂಡಿದ್ದರು. ನಾವು ಹೇಗೆ ಜೀವಿಸಬೇಕು, ಏನು ಮಾಡಬೇಕು, ಯಾವುದು ಸರಿಯಾದ ದಾರಿ ಎಂಬುದನ್ನೆಲ್ಲ ನಮ್ಮ ಹಿರಿಯರು ಆಚರಣೆ ಮಾಡಿ ತೋರಿಸಿಕೊಟ್ಟಿದ್ದಾರೆ. ಪ್ರಕೃತಿಯ ಸಕಲ ಜೀವಗಳನ್ನು ಸಂರಕ್ಷಿಸಿ ಪೋಷಿಸುವುದು ಎಲ್ಲ ಮನುಷ್ಯರ ಕರ್ತವ್ಯವಾಗಿತ್ತು. ಏಕೆಂದರೆ ಇವೆಲ್ಲವೂ ಸೇರಿ ಮನುಷ್ಯನನ್ನು ಪೋಷಿಸುತ್ತವೆ. ಈ ವಿಚಾರವನ್ನು ಅರಿತುಕೊಂಡು ಅಂದು ನಾವೆಲ್ಲರೂ ಜೀವಿಸುತ್ತಿದ್ದೆವು. ಹೀಗಾಗಿಯೇ ಭಕ್ತಿಯಿಂದ ನದಿಗಳನ್ನು, ಗಿಡಮರಗಳನ್ನು ಪೂಜಿಸುತ್ತೇವೆ, ತುಳಸಿಪೂಜೆ ಮಾಡುತ್ತೇವೆ, ಪುಣ್ಯ ಪರ್ವತಗಳ ಪೂಜೆ, ಪ್ರದಕ್ಷಿಣೆಗಳನ್ನು ಮಾಡುತ್ತೇವೆ. ಇದನ್ನೂ ಓದಿ: ಮನೋಲ್ಲಾಸ: ಮೊದಲು ನಾವು ಬದಲಾಗೋಣ
ಸಂಪೂರ್ಣ ವಿಶ್ವ ಒಂದು ವಿಶೇಷವಾದ ಚರಾಚರ ಚೈತನ್ಯವನ್ನು ಹೊಂದಿದೆ. ಸೃಷ್ಟಿಯ ಪ್ರತಿಯೊಂದು ರಚನೆಯಲ್ಲಿ ಆ ಚೈತನ್ಯವನ್ನು ನಾವು ನೋಡಬೇಕು, ಅದರ ಕುರಿತು ಶ್ರದ್ಧೆ ವಹಿಸಬೇಕು, ಆತ್ಮೀಯತೆಯಿಂದ ಅವುಗಳನ್ನು ನೋಡಿಕೊಳ್ಳಬೇಕು, ಅವುಗಳೊಂದಿಗೆ ಗೆಳೆತನ ಬೆಳೆಸಿಕೊಳ್ಳ ಬೇಕು ಮತ್ತು ಪರಸ್ಪರ ಸಹಕಾರದೊಂದಿಗೆ ಎಲ್ಲರೊಂದಿಗೆ ಜೀವನಶೈಲಿ ನಡಸಬೇಕೆಂಬುದು ಪ್ರಕೃತಿ ನಿಯಮವಾಗಿದೆ. ಹೊಸಪೀಳಿಗೆ ಈ ರೀತಿಯ ಆಚರಣೆಗಳ ಅರ್ಥಗಳನ್ನು ಅರಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.
| ಡಾ.ಮೋಹನ ಭಾಗವತ್, ಆರೆಸ್ಸೆಸ್ ಸರಸಂಘಚಾಲಕರು
(ವಿಡಿಯೋ ಸಂದೇಶದಲ್ಲಿ ಹೇಳಿದ್ದು)