ಅಂಕಣ

ಅಯೋಧ್ಯೆಯಂತೆ ನಳಂದಾವೂ ಭವ್ಯ ಭಾರತದ ಸಂಕೇತ

ಎರಡು ಐತಿಹಾಸಿಕ ಘಟನೆಗಳು; ಅಯೋಧ್ಯೆ, ನಳಂದಾ.

ಭಾರತದ ಮಹೋನ್ನತ ಇತಿಹಾಸದ ಮರುಸೃಷ್ಟಿಯ ದೃಷ್ಟಿಯಿಂದ ಈ ವರ್ಷ ಎರಡು ಮಹತ್ವದ ಘಟನೆಗಳು ಜರುಗಿದವು. ಒಂದು 2024ರ ಜನವರಿಯಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮ ಸ್ಥಾನದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ. ಜನ್ಮಸ್ಥಾನದ ರಾಮಮಂದಿರವನ್ನು ಆಕ್ರಮಣಕಾರಿ ದೊರೆ ಬಾಬರ್ ತನ್ನ ಸೇನಾಧಿಪತಿ ಮೀರ್ ಬಾಕಿಯ ಮೂಲಕ ಉಧ್ವಸ್ಥಗೊಳಿಸಿದ ಐನೂರು ವರ್ಷಗಳ ತರುವಾಯ ಮತ್ತದೆ ಜನ್ಮಸ್ಥಾನದಲ್ಲಿ ರಾಮಲಲ್ಲಾ ವಿರಾಜಮಾನನಾದ. ಅದೇನೂ ತನ್ನಿಂತಾನೇ ಅತಿ ಸುಲಭದಲ್ಲಿ ಆದದ್ದಲ್ಲ. ಅಸಂಖ್ಯ ರಾಮಭಕ್ತರ ಪ್ರಾಣಾರ್ಪಣೆ, ಸುದೀರ್ಘ ಹೋರಾಟದಿಂದ ಇದು ಸಾಕಾರವಾಯಿತು.

ರಾಮಮಂದಿರ ನಿರ್ವಣದ ವಿಚಾರದಲ್ಲೂ ಟೀಕೆ-ಟಿಪ್ಪಣಿ, ಪ್ರತಿರೋಧ ಇತ್ತು. ಅದರಲ್ಲೂ ಈ ಚಳವಳಿಯನ್ನು ಇಂಟೆಲೆಕ್ಟ್ ಕ್ಲಾಸಿನವರೇ ಹಲವರು ವಿರೋಧಿಸಿದ್ದರು. ಅದಕ್ಕೆ ಕಾರಣ ರಾಮಮಂದಿರ ನಿರ್ವಣದಿಂದ ಮುಸ್ಲಿಮರು ಬೇಸರಗೊಳ್ಳುತ್ತಾರೆ ಎಂಬುದು. ಆದರೆ ರಾಮಮಂದಿರ ಚಳವಳಿ ಮುಸ್ಲಿಮರ ವಿರುದ್ಧದ ಹೋರಾಟ ಆಗಿರಲಿಲ್ಲ, ಪೂಜೆ ಪುನಸ್ಕಾರದಲ್ಲೇ ನಂಬಿಕೆಯಿಟ್ಟ ಕರ್ಮಠರ ಪರವಾದ ವಾದ ಆಗಿರಲಿಲ್ಲ. ರಾಮಮಂದಿರ ಹೋರಾಟ ಭಾರತದ ಘನ ಇತಿಹಾಸದ ಮರುಸೃಷ್ಟಿಯ ಪ್ರಯತ್ನವಾಗಿತ್ತು. ಇದು ವಿವೇಚನೆಯುಳ್ಳ ಮುಸ್ಲಿಮರಿಗೂ, ರಾಜಕೀಯ ನೇತಾರರಿಗೂ, ನಿಜವಾದ ಬುದ್ಧಿಜೀವಿಗಳಿಗೂ ಸರಿಯಾಗಿ ತಿಳಿದಿತ್ತು. ರಾಮನ ಅಸ್ತಿತ್ವದ ಹುಡುಕಾಟಕ್ಕಿಂತಲೂ ರಾಮತತ್ವ ಭಾರತದ ಭವಿಷ್ಯಕ್ಕೆ ಅತೀ ಅವಶ್ಯ ಎಂಬುದು ಅವರೆಲ್ಲರ ನಿಶ್ಚಿತ ನಿಲುವಾಗಿತ್ತು. ಅದರ ಫಲವಾಗಿ ಬಾಲ ಶ್ರೀರಾಮ ಭವ್ಯ ಮಂದಿರದಲ್ಲಿ ಐನೂರು ವರ್ಷಗಳ ಬಳಿಕ ನೆಲೆನಿಂತ.

ಮತ್ತೊಂದು ಐತಿಹಾಸಿಕ ಘಟನೆ ಬಿಹಾರದ ರಾಜಗೀರ್ ಬಳಿ ಇರುವ ವಿಶ್ವ ಪಾರಂಪರಿಕ ತಾಣವಾಗಿರುವ ಐತಿಹಾಸಿಕ ನಳಂದಾ ವಿಶ್ವವಿದ್ಯಾಲಯದ ಪುನರುಜ್ಜೀವನ ಕಾರ್ಯ. ಕ್ರಿ.ಶ. ಐದನೇ ಶತಮಾನ ನಳಂದಾ ವಿವಿಯ ಆರಂಭದ ಕಾಲಮಾನ. ಗುಪ್ತರ ದೊರೆ ಒಂದನೇ ಕುಮಾರಗುಪ್ತನಿಂದ ನಳಂದಾ ವಿವಿ ಸ್ಥಾಪನೆ ಆಯಿತೆಂದು ಇತಿಹಾಸ ಹೇಳುತ್ತದೆ. ಅದು 12ನೇ ಶತಮಾನದವರೆಗೂ ಉಚ್ಛಾ›ಯ ಸ್ಥಿತಿಯಲ್ಲಿತ್ತು. ಜಗತ್ತಿನಲ್ಲಿ ಶ್ರೇಷ್ಠರೆನಿಸಿದ 2000 ಶಿಕ್ಷಕರು, ಜಗತ್ತಿನ ನಾನಾ ದೇಶಗಳಿಂದ ಜ್ಞಾನಾರ್ಜನೆಗೆಂದು ಬರುವ 10 ಸಾವಿರ ವಿದ್ಯಾರ್ಥಿಗಳಿಗೆ ಪಾಠಪ್ರವಚನ ಮಾಡುತ್ತಿದ್ದರು. ಇಲ್ಲಿ ಭೂಗೋಳದಿಂದ ಖಗೋಳದವರೆಗೆ ಎಲ್ಲ ಭಾರತೀಯ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದರು. ವೇದ, ಗಣಿತ, ವೈದ್ಯಕೀಯಶಾಸ್ತ್ರ, ವಿಜ್ಞಾನ ಅಧ್ಯಯನ ಮಾಡಿದವರು ಜಗತ್ತಿನ ನಾನಾ ದೇಶಗಳಿಗೆ ತಾವು ಕಲಿತ ವಿದ್ಯೆಯನ್ನು ಪಸರಿಸುತ್ತಿದ್ದರು. ಗಣಿತಶಾಸ್ತ್ರದ ಪಿತಾಮಹನೆಂದು ಖ್ಯಾತಿಗಳಿಸಿದ್ದ, ಗಣಿತಶಾಸ್ತ್ರಕ್ಕೆ ಸೊನ್ನೆಯೆಂಬ ಮಹಾನ್ ಕೊಡುಗೆ ನೀಡಿದ್ದ ಆರ್ಯಭಟ ಕ್ರಿ.ಶ. 6ನೇ ಶತಮಾನದಲ್ಲಿ ನಳಂದಾ ವಿವಿಯ ಮುಖ್ಯಸ್ಥನಾಗಿದ್ದ.

ನಳಂದಾ ಬೌದ್ಧಧರ್ಮದ ವಿಕಾಸಕ್ಕೂ ಅದ್ಭುತ ಕೊಡುಗೆ ನೀಡಿದೆ. ಇಲ್ಲಿ ರಚನೆಯಾದ ಧರ್ಮಕೀರ್ತಿಯ ಕೃತಿಗಳು, ಮಹಾವೈರೋಚನ ತಂತ್ರ, ಶಾಂತಿದೇವನ ಬೋಧಿ ಸತ್ವಚಾರ್ಯದಂತಹ ಕೃತಿಗಳು ಬೌದ್ಧರ ಮಹಾಯಾನ ಮತ್ತು ವಜ್ರಯಾನ ಪಂಥಗಳ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿವೆ. ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ತತ್ವಗಳ ಪ್ರಚಾರಕ್ಕೆಂದು ಚೀನಾ, ಕೊರಿಯಾ, ಜಪಾನ, ಇಂಡೋನೇಷ್ಯಾ, ಶ್ರೀಲಂಕಾ ಮುಂತಾದ ದೇಶಗಳಿಗೆ ನಳಂದಾದಿಂದ ವಿದ್ವಾಂಸರನ್ನು ಕಳಿಸಿಕೊಡಲಾಗುತ್ತಿತ್ತು. ಈ ಸಾಂಸ್ಕೃತಿಕ ವಿನಿಮಯ ಕಾರ್ಯದಿಂದ ಏಷ್ಯಾದಲ್ಲಿ ಬೌದ್ಧಧರ್ಮ ಪ್ರಸಾರವಾಗಲು ಕಾರಣವಾಯಿತು.

ಅದೇ ನಳಂದಾ ವಿವಿಯ ಇತಿಹಾಸದಲ್ಲಿ ಕ್ರಿ.ಶ. 12ನೇ ಶತಮಾನದಲ್ಲಿ ಕರಾಳ ಅಧ್ಯಾಯವೊಂದು ಘಟಿಸಿಹೋಯಿತು. ಭಕ್ತಿಯಾರ್ ಖಿಲ್ಜಿ ಎಂಬ ಆಕ್ರಮಣಕಾರನ ವಕ್ರದೃಷ್ಟಿಗೆ ನಳಂದಾ ಬಲಿ ಆಯಿತು. ಭಾರತದ ಮೇಲೆ ದ್ವೇಷ ಕಾರಿದ ಇತರ ಮತಾಂಧ ಮುಸ್ಲಿಂ ಆಕ್ರಮಣಕಾರರಂತೆ ಭಕ್ತಿಯಾರ್ ಖಿಲ್ಜಿ ಭಾರತದ ಜ್ಞಾನದ ಗಣಿ ಆಗಿದ್ದ ನಳಂದಾ ಮೇಲೆ ದ್ವೇಷ ಸಾಧಿಸಿದ. ಆತ ತನ್ನ ಸೈನಿಕರಿಗೆ ಪ್ರಚೋದನೆ ನೀಡಿ ನಳಂದಾ ವಿವಿಯನ್ನು ಧ್ವಂಸ ಮಾಡಿಸಿದ. ನಳಂದಾ ವಿವಿಗೆ ಬೆಂಕಿ ಹಚ್ಚಿದರು. ಅಲ್ಲಿದ್ದ ವಿದ್ಯಾರ್ಥಿಗಳನ್ನು, ವಿದ್ವಾಂಸರನ್ನು ಶಿರಚ್ಛೇದ ಮಾಡಿ ಕ್ರೂರವಾಗಿ ಕೊಂದುಹಾಕಲಾಯಿತು. ನಳಂದಾ ವಿವಿಯಲ್ಲಿ ಕುರಾನ್ ಇರಲಿಲ್ಲ ಎಂಬುದು ಒಂದು ಕಾರಣವಾದರೆ, ತನ್ನ ಆಸ್ಥಾನದಲ್ಲಿ ಅಥವಾ ಬೇರೆಲ್ಲೂ ಇರದೇ ಇದ್ದ ವೈದ್ಯ ವಿಜ್ಞಾನದ ಜ್ಞಾನವೊಂದು ಅಲ್ಲಿ ಇತ್ತು ಎಂಬುದು ಖಿಲ್ಜಿಯು ನಳಂದಾದ ಮೇಲೆ ಕೋಪತಾಪ ತೋರಿಸಿಕೊಳ್ಳಲು ಕಾರಣ ಎಂಬ ಮಾತುಗಳಿವೆ. ಅದೇನೇ ಇರಲಿ, ಮತಾಂಧತೆಯ ಬರ್ಬರತೆಗೆ ತುತ್ತಾದ ನಳಂದಾದ ಜನಪರಂಪರೆಯ ಶ್ರೇಷ್ಠತೆ ಬಗ್ಗೆ ಅಲ್ಲಿನ ಭಗ್ನಾವಶೇಷಗಳು ಹತ್ತುಹಲವು ಸಾಕ್ಷಿ, ಪುರಾವೆಗಳನ್ನು ನೀಡುತ್ತಲೇ ಇದ್ದವು. ಖುಷಿ ಮತ್ತು ಹೆಮ್ಮೆಯ ವಿಚಾರವೆಂದರೆ ನಳಂದಾ ಧ್ವಂಸವಾದ 9 ಶತಮಾನಗಳ ಬಳಿಕ ಮತ್ತದೆ ನಳಂದಾದ ಪುನರುತ್ಥಾನದ ಅಮೃತ ಘಳಿಗೆ ಕೂಡಿಬಂದಿದೆ ಎಂಬುದು.

ಈ ನಳಂದಾ ವಿವಿಯ ಪುನರುತ್ಥಾನದ ಕನಸು ಚಿಗುರೊಡೆದದ್ದು ಮಾಜಿ ರಾಷ್ಟಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಂದ. 2006ರಲ್ಲಿ ಬಿಹಾರ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಕಲಾಂ ಅಂದಿನ ಕೇಂದ್ರದ ಯುಪಿಎ ಸರ್ಕಾರಕ್ಕೆ ನಳಂದಾ ಪುನರುತ್ಥಾನದ ಬಗ್ಗೆ ಕಿವಿಮಾತು ಹೇಳಿದ್ದರು. ಆದರೆ ಅದೇ ಕೆಲಸವನ್ನು ಬಿಹಾರ ಸರ್ಕಾರ ಕೈಗೆತ್ತಿಕೊಂಡಿತು. ನಳಂದಾ ವಿವಿಯ ನವಕ್ಯಾಂಪಸ್​ಗಾಗಿ 455 ಎಕರೆ ಜಮೀನನ್ನು ಮಂಜೂರು ಮಾಡಿತು. 2010ರಲ್ಲಿ ನಳಂದಾ ವಿವಿ ಕಾಯಿದೆ ಜಾರಿಗೆ ಬಂತು. 2017ರಲ್ಲಿ ವಿವಿ ನವಕ್ಯಾಂಪಸ್ ನಿರ್ಮಾಣ ಕಾರ್ಯ ಆರಂಭವಾಗಿ 1749 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡು, 2024ರ ಜೂನ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಭಾಗ್ಯ ಕಂಡಿತು. ಉದ್ಘಾಟನೆ ಭಾಷಣದ ವೇಳೆ ಪ್ರಧಾನಿ ಮೋದಿ ಆಡಿದ ಒಂದು ಮಾತನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ‘ಪುಸ್ತಕಗಳನ್ನು ಸುಡಬಹುದು, ಆದರೆ ಜ್ಞಾನವನ್ನಲ್ಲ’. ಈ ಮಾತಿಗೆ ಪುಟವಿಟ್ಟಂತೆ ಜಗತ್ತಿನ 17 ದೇಶಗಳು ನಳಂದಾ ವಿವಿ ಪುನರುತ್ಥಾನಕ್ಕೆ ಬೆಂಬಲ ನೀಡಿವೆ. ನಳಂದಾದಲ್ಲಿ ಇತಿಹಾಸ ಮರುಕಳಿಸಿದೆ. ಜಗತ್ತಿನ ನಾನಾ ದೇಶಗಳ ಸಾವಿರಾರು ವಿದ್ಯಾರ್ಥಿಗಳು ನಳಂದಾದಲ್ಲಿ ಬೌದ್ಧಧರ್ಮ ಅಧ್ಯಯನ, ತತ್ವಶಾಸ್ತ್ರ, ಧರ್ಮ, ಇತಿಹಾಸ ಇತ್ಯಾದಿಗಳ ಅಧ್ಯಯನಕ್ಕೆ ಬರುತ್ತಿದ್ದಾರೆ. ಇದೇ ಅಲ್ಲವೇ ಇತಿಹಾಸ ಮರುಕಳಿಸುವುದು ಎಂದರೆ ಅಥವಾ ಇತಿಹಾಸದ ಮರುಸೃಷ್ಟಿ ಎಂದರೆ. ಇದನ್ನು ಬಿಟ್ಟು ಭಾರತವನ್ನು ಮತ್ತೆ ವಿಶ್ವಗುರುವಾಗಿಸುವ ಅನ್ಯಮಾರ್ಗ ಇದ್ದೀತೆ?! ಅಯೋಧ್ಯೆಯ ಜನ್ಮಭೂಮಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆ, ನಳಂದಾ ವಿವಿ ಪುನರುತ್ಥಾನ ಇವು ಈ ಒಂದು ವರ್ಷದಲ್ಲಿ ಘಟಿಸಿದ ಎರಡು ಮಹಾನ್ ಐತಿಹಾಸಿಕ ಘಟನೆಗಳು.