ಅಂಕಣ

ನಹಿ ಜ್ಞಾನೇನ ಸದೃಶಂ: ಮನೋಲ್ಲಾಸ

Webdesk - Ravikanth
| ಕೆ. ಸುಮಂಗಲಾ ಅಡೂರು 
ಒಬ್ಬ ಬೆಪ್ಪುತಕ್ಕಡಿ ರಾಜ ತಾನು ಬಹಳ ಜಾಣನೆಂದು ಅಂದುಕೊಂಡಿದ್ದ. ಅವನಿಗೆ ಒಮ್ಮೆ ಒಂದು ಜಿಜ್ಞಾಸೆ ಕಾಡಿತು. ಅದೇನೆಂದರೆ ‘ದೇವರೆಂಬುವನು ಎಲ್ಲಿ ಇರುತ್ತಾನೆ ? ಯಾವ ಕಡೆ ಮುಖ ಮಾಡಿದ್ದಾನೆ ಹಾಗೂ ದೇವರ ಕೆಲಸವೇನು? ಎಂಬುದು. ಈ ಮೂರು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವನಿಗೆ ಅರ್ಧ ರಾಜ್ಯವನ್ನು ಕೊಡುತ್ತೇನೆ. ಉತ್ತರವು ನನಗೆ ತೃಪ್ತಿಯಾಗದಿದ್ದಲ್ಲಿ ಅವನ ತಲೆ ತುಂಡರಿಸುತ್ತೇನೆ ಎಂದು ಡಂಗುರ ಸಾರಿಸಿದ. ರಾಜನ ಮೂರ್ಖತನ ಅರಿತಿದ್ದ ಜನ ಯಾರೂ ಉತ್ತರಿಸುವ ಧೈರ್ಯ ಮಾಡಲಿಲ್ಲ.

ಆ ರಾಜ್ಯದಲ್ಲಿ ಬಹಳ ಬಡವನಾದ ವ್ಯಕ್ತಿಯೊಬ್ಬನಿದ್ದ. ಅವನಿಗೆ ಮನೆ ತುಂಬ ಮಕ್ಕಳಿದ್ದರು. ಅವನ ಜೀವನ ಬಹು ಕಷ್ಟದಿಂದ ಸಾಗುತ್ತಿತ್ತು. ಆದರೆ, ಆತ ಬಹಳ ಬುದ್ಧಿವಂತನಾಗಿದ್ದ. ಹಾಗಾಗಿ ಧೈರ್ಯ ಮಾಡಿ ರಾಜನ ಆಸ್ಥಾನಕ್ಕೆ ಹೋಗುವ ನಿರ್ಧಾರ ಮಾಡಿದ. ರಾಜನ ಎದುರಿಗೆ ಬಂದು ವಿನಯದಿಂದ ವಂದಿಸಿ ತಾನು ಆತನ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ ಎಂದ. ರಾಜ ಒಪ್ಪಿಕೊಂಡ.ಬಡವ ಹೇಳಿದ, ‘ಮಹಾಪ್ರಭೂ, ತಮ್ಮ ಪ್ರಶ್ನೆಗಳಿಗೆ ನಾನು ಉತ್ತರ ಹೇಳುವವ. ಆದ್ದರಿಂದ ಸ್ವಲ್ಪ ಎತ್ತರದ ಪೀಠವೊಂದನ್ನು ಕೊಡುವಿರಾ’ ಎಂದು. ಅದಕ್ಕೆ ರಾಜ, ‘ಓಹೋ ಅದಕ್ಕೇನಂತೆ, ಸದ್ಯ ಈ ಸಿಂಹಾಸನದಲ್ಲಿಯೇ ಕೂರು’ ಎಂದು ತಾನು ಕೆಳಗೆ ಕುಳಿತ. ‘ಈಗ ತಮ್ಮ ಮೊದಲ ಪ್ರಶ್ನೆ ದೇವರೆಲ್ಲಿದ್ದಾನೆ ಎಂಬುದು. ನಾವು ತುಪ್ಪ ಮಾಡುವುದಕ್ಕೆ ಹಾಲು ಮೂಲವಲ್ಲವೇ? ಆದರೆ, ಆ ಹಾಲಿನಲ್ಲಿ ನಾವು ತುಪ್ಪವನ್ನು ಎಲ್ಲಿ ಹುಡುಕಲಿ? ಹಾಲಿನ ಪ್ರತಿ ಕಣದಲ್ಲೂ ಅದರ ಅಂಶವಿದೆ. ಹಾಗೆಯೇ ಈ ಪ್ರಕೃತಿಯ ಅಣು ಅಣುವಿನಲ್ಲೂ ದೇವರಿದ್ದಾನೆ’ ಎಂದ.

ಇನ್ನು ಎರಡನೇ ಪ್ರಶ್ನೆಗೆ ಉತ್ತರಿಸುವ ಮೊದಲು ‘ಒಂದು ದೀಪವನ್ನು ತರಿಸಿ ಪ್ರಭೂ’ ಎಂದ. ರಾಜ ತರಿಸಿದ ದೀಪವನ್ನು ಬಡವ ಬೆಳಗಿಸಿದ. ಆಸ್ಥಾನದಲ್ಲೆಲ್ಲಾ ಬೆಳಕು ತುಂಬಿತು. ‘ಪ್ರಭೂ ಈ ದೀಪದ ಬೆಳಕು ಯಾವ ಕಡೆ ಮುಖ ಮಾಡಿದೆ? ಎಂದು ಬಡವ ರಾಜನನ್ನು ಕೇಳಿದ. ರಾಜ ಪೆಚ್ಚಾಗಿ, ‘ಹೇಳಲಾಗುವುದಿಲ್ಲ. ಎಲ್ಲಾ ಕಡೆ ಬೆಳಕು ತುಂಬಿದೆ’ ಎಂದ. ಹೀಗೆಯೇ ದೇವರು ಎಲ್ಲೆಡೆ ಇದ್ದಾನೆ ಸ್ವಾಮೀ. ಈಗ ನಿಮ್ಮ ಮೂರನೇ ಪ್ರಶ್ನೆ ದೇವರು ಏನು ಮಾಡುತ್ತಾನೆ? ಈಗ ನನ್ನನ್ನು ಸಿಂಹಾಸನದಲ್ಲಿ ಕೂರಿಸಿ ರಾಜನಾದ ತಮ್ಮನ್ನು ಕೆಳಗೆ ಕುಳ್ಳಿರಿಸಿದ್ದಾನೆ. ಹೀಗೇ ದೇವರು ತನ್ನಿಷ್ಟದಂತೆ ಲೀಲೆಗಳನ್ನು ತೋರುತ್ತಿರುತ್ತಾನೆ. ಜೀವಿಗಳ ಉನ್ನತಿ ಮತ್ತು ಅವನತಿಗಳಿಗೆ ಆತನೇ ಕಾರಣ’ ಎಂದ. ರಾಜನಿಗೆ ಜ್ಞಾನೋದಯವಾಯಿತು. ಬಡವನಿಗೆ ಅರ್ಧ ರಾಜ್ಯವನ್ನು ಕೊಟ್ಟು ಕಳುಹಿಸಿದ. ಬಡವನ ಜ್ಞಾನವು ಆತನನ್ನು ಶ್ರೀಮಂತನನ್ನಾಗಿಸಿತು ಹಾಗೂ ರಾಜನ ಮೂರ್ಖತನವು ಅವನಿಗೆ ರಾಜ್ಯ ನಷ್ಟ ಮಾಡಿಸಿತು. ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಪವಿತ್ರವಾದುದು ಯಾವುದೂ ಇಲ್ಲ. ಅದನ್ನು ಪಡೆಯಲು ಸದಾ ಪ್ರಯತ್ನಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)