ಅಂಕಣ

ಮೋದಿ ಪ್ರಮಾಣ ವಚನ ಸ್ವೀಕಾರಕ್ಕೆ ಮೂರು ಹಂತದ ಭದ್ರತೆ

Webdesk - Narayanaswamy

ನವದೆಹಲಿ: ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮ ಇದೇ ಜೂನ್ 9ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಇದಕ್ಕೆ ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಅಧಿಕಾರಿಗಳು ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲು ಸಜ್ಜಾಗುತ್ತಿದ್ದಾರೆ, ಆದರೆ ಬಹು ಹಂತದ ಭದ್ರತೆಗಾಗಿ ಅರೆಸೇನಾ ಪಡೆಗಳ 5 ಕಂಪನಿಗಳು, ಎನ್ಎಸ್ಜಿ ಕಮಾಂಡೋಗಳು, ಡ್ರೋನ್​ಗಳು ಮತ್ತು ಸ್ನೈಪರ್‌ಗಳನ್ನು ನಿಯೋಜಿಸಲಾಗುವುದು ಎಂದು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್, ಭೂತಾನ್, ನೇಪಾಳ, ಮಾರಿಷಸ್ ಮತ್ತಿತರ ದೇಶಗಳ ಉನ್ನತ ನಾಯಕರು ಭಾಗವಹಿಸುವ ಸಾಧ್ಯತೆಯಿದೆ. ಅವರು ತಂಗಿರುವ ಪ್ರಸಿದ್ಧ ಹೋಟೆಲ್‌ಗಳಾದ ಐಟಿಸಿ ಮೌರ್ಯಲೀಲಾ ಮತ್ತು ಒಬೆರಾಯ್‌ಗಳನ್ನು ಈಗಾಗಲೇ ಭದ್ರತೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಅತಿಥಿಗಳು ಹೋಟೆಲ್‌ಗಳಿಂದ ಸ್ಥಳವನ್ನು ತಲುಪಲು ಮತ್ತು ಹಿಂತಿರುಗಲು ನಿಗದಿತ ಮಾರ್ಗಗಳನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ನ್ಯಾಕ್ ಮತ್ತು ದೆಹಲಿ ಪೊಲೀಸರ ಕಮಾಂಡೋಗಳನ್ನು ರಾಷ್ಟ್ರಪತಿ ಭವನ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ.

ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಆವರಣದ ಒಳಗೆ ಮತ್ತು ಹೊರಗೆ ಮೂರು ಹಂತದ ಭದ್ರತೆ ಇರಲಿದೆ. ದೆಹಲಿ ಪೊಲೀಸರು, ಅರೆಸೇನಾ ಪಡೆ ಸಿಬ್ಬಂದಿ, ರಾಷ್ಟ್ರಪತಿ ಭವನದ ಆಂತರಿಕ ಭದ್ರತಾ ಸಿಬ್ಬಂದಿ ಈ ಕರ್ತವ್ಯ ನಿರ್ವಹಿಸಲಿದ್ದಾರೆ. 2500 ಪೊಲೀಸರು, ಐದು ಕಂಪನಿ ಅರೆಸೇನಾ ಪಡೆಗಳು ಮತ್ತು ದೆಹಲಿ ಸಶಸ್ತ್ರ ಪೊಲೀಸ್ (ಡಿಎಪಿ) ಜವಾನರು ಕರ್ತವ್ಯದಲ್ಲಿರುತ್ತಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಲೆಬ್ರಿಟಿಗಳು ಸಂಚರಿಸುವ ಮಾರ್ಗಗಳಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ, ಸ್ನೈಪರ್‌ಗಳು ಮತ್ತು ಡ್ರೋನ್‌ಗಳು ನಿಗಾ ಇರಿಸಲಿವೆ ಎಂದು ಅವರು ಹೇಳಿದರು.

ಇನ್ನು ಕೇಂದ್ರ ದೆಹಲಿಗೆ ಹೋಗುವ ರಸ್ತೆಗಳನ್ನು ಭಾನುವಾರ ಮುಚ್ಚುವ ಸಾಧ್ಯತೆಯಿದೆ. ಇದರಿಂದಾಗಿ ಸಂಚಾರ ವ್ಯತ್ಯಯ ಉಂಟಾಗಬಹುದು. ಶನಿವಾರದಿಂದ ದೆಹಲಿಯ ಗಡಿಗಳಲ್ಲಿ ನಿಯಮಿತ ತಪಾಸಣೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.