| ಕೋಟಮಾರನಹಳ್ಳಿ ತಿಮ್ಮೇಗೌಡ ಬೆಂಗಳೂರು
ಕರೋನಾ ಸಂಕಷ್ಟದಿಂದಾಗಿ ಪದೇಪದೆ ರಜೆಯ ಕಾರಣ ಸಿಬಿಎಸ್ಇ ಮತ್ತು ಸಿಐಎಸ್ಸಿಇ ಪಠ್ಯಕ್ರಮ ಅನುಸರಿಸುವ ಹನ್ನೊಂದು ಮತ್ತು ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕೆ ನಷ್ಟವಾಗಿರುವುದು ವಾಸ್ತವ. ಈ ನಷ್ಟ ಭರ್ತಿಗೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರೀಸರ್ಚ್ ಆಂಡ್ ಟ್ರೇನಿಂಗ್ (ಎನ್ಸಿಇಆರ್ಟಿ) ಸ್ವಯಂ ಪೋರ್ಟಲ್ ಮೂಲಕ ಹೊಸ ಉಪಕ್ರಮವನ್ನು ಜಾರಿಗೊಳಿಸಿದೆ. ಮ್ಯಾಸಿವ್ ಓಪನ್ ಆನ್ಲೈನ್ ಕೋರ್ಸಸ್ (MOOCs) ಅನ್ನು ಅದು ಈ ವಿದ್ಯಾರ್ಥಿಗಳಿಗಾಗಿ ಪರಿಚಯಿಸಿದೆ. ‘MOOCs’ನಲ್ಲಿ ಸದ್ಯ 28 ಕೋರ್ಸ್ ಗಳಿದ್ದು, ವಿದ್ಯಾರ್ಥಿಗಳ ಪಾಲಿಗೆ ಡಿಜಿಟಲ್ ಸಂಪನ್ಮೂಲವಾಗಿರಲಿದೆ. ವೃತ್ತಿಪರ ಕೋರ್ಸ್ ಗಳಿಗೆ ತಯಾರಿ ನಡೆಸಲು ಮತ್ತು ವಿದ್ಯಾರ್ಥಿ ಗಳಿಗೆ ಅವರ ಟರ್ವಿುನಲ್ ಮತ್ತು ಇಂಟರ್ನಲ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಇದು ನೆರವಾಗಲಿದೆ. ಆನ್ಲೈನ್ ಕೋರ್ಸ್ಗಳು ಸರಳ ಭಾಷೆಯಲ್ಲಿ ಇದ್ದು, ಎನ್ಸಿಇಆರ್ಟಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಇದೆ ಎಂದು ಎನ್ಸಿಆರ್ಟಿ ಮೂಲಗಳು ತಿಳಿಸಿವೆ.
‘MOOCs’ನಲ್ಲಿರುವ ಕೋರ್ಸ್ಗಳು ಪಠ್ಯದ ಮಾದರಿಯಲ್ಲಿ, ವಿಡಿಯೋ ಮಾದರಿಯಲ್ಲಿ ಮತ್ತು ಮೌಲ್ಯಮಾಪನ ಪ್ರಶ್ನೆಗಳ ಮಾದರಿಯಲ್ಲಿ ಇವೆ. ಶಾಲೆ, ಕಾಲೇಜು ಮತ್ತು ಯೂನಿವರ್ಸಿಟಿ ಬೋಧಕರು, ಶಿಕ್ಷಕರು ಈ ಪಠ್ಯಗಳನ್ನು ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಂದೇಹ, ಪ್ರಶ್ನೆಗಳನ್ನು ಪೋಸ್ಟ್ ಮಾಡಿ ಉತ್ತರ ಪಡೆಯಲೂ ಅವಕಾಶವಿದೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ಸಂದೇಹಗಳನ್ನು ನಿವಾರಿಸಬಹುದು. ಚರ್ಚಾವೇದಿಕೆಯಲ್ಲಿ ಸಹಪಾಠಿಗಳೊಂದಿಗೆ ಪಠ್ಯ ಸಂಬಂಧಿಸಿ ಸಂವಹನ ನಡೆಸಲೂ ಅವಕಾಶವಿದೆ ಎಂದು ಎನ್ಸಿಇಆರ್ಟಿ ಹೇಳಿದೆ.
ಉಚಿತ ಕೋರ್ಸ್ ವಿಷಯಗಳಿವು..: ‘MOOCs’ನಲ್ಲಿರುವ ಕೋರ್ಸ್ಗಳು ಉಚಿತವಾಗಿದ್ದು, ಅಕೌಂಟೆನ್ಸಿ, ಬಿಜಿನೆಸ್ ಸ್ಟಡೀಸ್, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳ ಶಾಸ್ತ್ರ, ಗಣಿತ, ಭೌತಶಾಸ್ತ್ರ, ಮನಃಶಾಸ್ತ್ರ, ಇಂಗ್ಲಿಷ್, ಸಮಾಜಶಾಸ್ತ್ರ ಮುಂತಾದ ವಿಷಯಗಳಿವೆ. ಸದ್ಯದಲ್ಲೇ ಹ್ಯುಮಾನಿಟೀಸ್, ಹೋಮ್ ಸೈನ್ಸ್, ದೈಹಿಕ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದ ವಿಷಯಗಳನ್ನೂ ಪರಿಚಯಿಸಲು ಎನ್ಸಿಇಆರ್ಟಿ ಮುಂದಾಗಿದೆ.
ನೋಂದಣಿಗೆ ಮಾ.31 ಕೊನೇ ದಿನ: ‘MOOCs’ ಕುರಿತು ಸಿಐಎಸ್ಸಿಇ ನೋಟಿಸ್ ಪ್ರಕಟಿಸಿದ್ದು, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಈ ಕೋರ್ಸ್ಗಳಿಗೆ ಹೆಸರು ನೋಂದಾಯಿಸಲು ಮಾ.31 ಕೊನೇ ದಿನ ಎಂದು ಹೇಳಿದೆ. ಸ್ವಯಂ ಪೋರ್ಟಲ್ (swayam.gov.in) ಮೂಲಕ ಇದಕ್ಕೆ ಹೆಸರು ನೋಂದಾಯಿಸಬಹುದಾಗಿದೆ.
ಪ್ರಮಾಣಪತ್ರ ಬೇಕೆಂದರೆ..: ಈ ಕೋರ್ಸ್ ಸಂಬಂಧಿತ ಪ್ರಮಾಣಪತ್ರ ಬೇಕಾದಲ್ಲಿ ಪ್ರತಿ ಕೋರ್ಸ್ನ ಮೌಲ್ಯಮಾಪನ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದು ವಿದ್ಯಾರ್ಥಿಗಳ ಅರ್ಥೈಸುವಿಕೆ ಮತ್ತು ಕಲಿಕೆಯ ಗುಣಮಟ್ಟವನ್ನು ನಿರ್ಧ ರಿಸುತ್ತದೆ. ಇದರ ಅಧಾರದ ಮೇಲೆ ಅವರಿಗೆ ಪ್ರಮಾಣಪತ್ರ ಸಿಗುತ್ತದೆ.