ಸರಸ್ವತಿ ನದಿ ತೀರ ವೇದಗಳ ಜನ್ಮಭೂಮಿ ಎಂದರೂ ಸರಿಯೇ. ‘ಅಂಬಿ ತಮೇ ನದಿ ತಮೇ ದೇವಿ ತಮೇ ಸರಸ್ವತಿ’ (‘ತಾಯಿಯರಲ್ಲಿ ಮಹಾ ತಾಯಿಯೂ, ನದಿಗಳಲ್ಲಿ ಮಹಾ ನದಿಯೂ, ದೇವಿಯರಲ್ಲಿ ಮಹಾದೇವಿಯೂ ನೀನು’) ಎಂದು ವೇದ ಮುಕ್ತಕಂಠದಿಂದ ಸರಸ್ವತಿಯನ್ನು ಸ್ತುತಿಸುತ್ತಿದೆ. ಕಾರಣಾಂತರಗಳಿಂದ ಸರಸ್ವತಿ ಕಣ್ಮರೆಯಾದ ಮೇಲೆ ‘ಭಾರತೀಯ ವಿದ್ಯಾವೈಭವ’ ಪೂರ್ವಕ್ಕೆ ತಿರುಗಿತು. ಆ ಸಮಯದಲ್ಲೇ ‘ಗಂಗಾತೀರ’ ಪ್ರಾಮುಖ್ಯ ಪಡೆಯಿತು, ಕಾಶಿಯಲ್ಲಿ ಮಹಾದೇವನ ಆವಿರ್ಭಾವ ಎಂದು ಆಯಿತು ಎಂದು ಗೊತ್ತಿಲ್ಲದಿದ್ದರೂ ಮಹಾಭಾರತದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಅಷ್ಟೇ ಪ್ರಮುಖ ಉಲ್ಲೇಖ ಪಡೆದಿರುವ ಮತ್ತೊಂದು ಕ್ಷೇತ್ರ ‘ಪ್ರಭಾಸತೀರ್ಥ’ ಅರ್ಥಾತ್ ಇಂದಿನ ‘ಸೋಮನಾಥ’.
ದೇವಗಂಗೆ ಹಿಮಾಲಯಗಳಲ್ಲಿ ಸಿಂಹಘರ್ಜನೆ ಮಾಡಿಕೊಂಡು ಎಣೆಯಿಲ್ಲದ ಪರಾಕ್ರಮವನ್ನು ಮೆರೆದರೂ ಕಾಶಿಯಲ್ಲಿ ಬಹಳ ಶಾಂತಳಾಗುತ್ತಾಳೆ, ಒಬ್ಬ ಕವಿ ಇದನ್ನು ‘ಪತಿಯ ಸಾನ್ನಿಧ್ಯದಲ್ಲಿ ಸಾಧಿ್ವೂಬ್ಬಳ ಗಂಭೀರ ನಡೆಯಂತೆ’ ಎಂದು ಹೇಳಿರುವುದು ಮನನೀಯ. ಗಂಗೆಯ ಪಾವಿತ್ರ್ಯ, ಗಂಗಾಸ್ನಾನವನ್ನು ಜೀವಮಾನದ ಸಾಧನೆಯಾಗಿಸಿದೆ ಶ್ರದ್ಧಾವಂತ ಹಿಂದೂಗಳಿಗೆ. ಆಧುನಿಕ ಯುಗದ ಮಹಾನ್ ಆಚಾರ್ಯರಾದ ಭಗವಾನ್ ಬುದ್ಧ, ಶ್ರೀಮಚ್ಛಂಕರಾಚಾರ್ಯರು, ಪೂಜ್ಯಪಾದ ಸ್ವಾಮಿ ವಿವೇಕಾನಂದರು ತಮ್ಮ ಲೋಕೋಪದೇಶ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇ ವಾರಾಣಸಿಯಿಂದ. ಬುದ್ಧ ತನ್ನ ಬೋಧನೆಯ ಸಾರವಾದ ನಾಲ್ಕು ಆರ್ಯಸತ್ಯಗಳನ್ನೂ ಇಲ್ಲಿಯೇ ಅರುಹಿದರೆ ಆಚಾರ್ಯ ಶಂಕರರು ಲೋಕಪ್ರಸಿದ್ಧ ‘ಭಜಗೋವಿಂದಂ’ ಸ್ತೋತ್ರವನ್ನು ರಚಿಸಿದ್ದು ಇಲ್ಲಿಯೇ, ಅಷ್ಟೇ ಅಲ್ಲ ಅವರು ಕಾಶಿಯ ಅನ್ನಪೂರ್ಣೆಯ ಮುಂದೆ ನಿಂತು ಅವಳ ಕೃಪೆಯನ್ನು ಬೇಡುತ್ತಾ ಅಮ್ಮ ‘ಈ ಪ್ರಪಂಚದಲ್ಲಿ ಕೆಟ್ಟಮಗ ಇರಬಹುದು ಆದರೆ ಕೆಟ್ಟ ತಾಯಿ ಎಂದೂ ಇರುವುದಿಲ್ಲ’ (ಕುಪುತ್ರೋ ಜಾಯೇತ ಕ್ವಚಿದಪಿ ಕು ಮಾತಾ ನ ಭವತಿ) ಎನ್ನುವ ಮಾತು ಅವರ ಮಾತೃಭಕ್ತಿ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ತಾಯಿಯ ಸ್ಥಾನಕ್ಕೆ ಹಿಡಿದ ಕನ್ನಡಿಯಾದರೆ; ‘ಮೋಕ್ಷದ್ವಾರದ ಕೀಲಿಕೈ ನಿನ್ನ ಕೈಯ್ಯಲ್ಲಿಯೇ ಇದೆ ತಾಯೆ’ ಎನ್ನುವುದರ ಮೂಲಕ ಗಹನ ಸತ್ಯವೊಂದನ್ನು ಅರುಹುತ್ತಾರೆ.
ಶ್ರೀರಾಮಕೃಷ್ಣರ ಜೀವನದಲ್ಲಿ ಬರುವ ಘಟನೆ ಇದನ್ನು ಸಾಬೀತುಪಡಿಸುತ್ತದೆ. ತಮ್ಮ ಅಭೂತಪೂರ್ವ ಸಾಧನೆಗಳು ಮುಕ್ತಾಯದ ಹಂತವನ್ನು ತಲುಪಿದ ಮೇಲೆ ಶ್ರೀರಾಮಕೃಷ್ಣರು ಒಂದು ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಆ ಸಮಯದಲ್ಲಿ ಗಂಗೆಯ ಉದ್ದಕ್ಕೂ ಇರುವ ಸ್ನಾನಘಟ್ಟಗಳನ್ನು ವೀಕ್ಷಿಸುವುದೂ ಒಂದು. ಮಣಿಕರ್ಣಿಕಾ ಘಟ್ಟದ ಬಳಿ ದೋಣಿ ಬಂದಾಗ ಒಮ್ಮೆಲೆ ಆಶ್ಚರ್ಯಚಕಿತರಾಗಿ ಎದ್ದು ನಿಂತು ಸಮಾಧಿಸ್ಥರಾಗುತ್ತಾರೆ. ಮೈತಿಳಿದಮೇಲೆ ಅವರು ಏನನ್ನು ಕಂಡರು ಎನ್ನುವುದನ್ನು ಅವರ ಮಾತುಗಳಲ್ಲೇ ಕೇಳೋಣ, ‘ಮಣಿಕರ್ಣಿಕೆಯ ಸ್ಮಶಾನದಲ್ಲಿ ಒಬ್ಬ ದಿವ್ಯಪುರುಷ; ಕಂದುಬಣ್ಣದ ಜಟೆ; ದೀರ್ಘಕಾಯದ ಶ್ವೇತಶರೀರ; ಆತ ತನ್ನ ಗಂಭೀರ ನಡೆಯಿಂದ ಪ್ರತಿಯೊಂದು ಚಿತೆಯ ಬಳಿ ಬಂದು ಅಲ್ಲಿ ಮಲಗಿದ್ದ ಮೃತನನ್ನು ಪ್ರಯತ್ನಪೂರ್ವಕವಾಗಿ ಎಬ್ಬಿಸಿ ಕಿವಿಯಲ್ಲಿ ಪವಿತ್ರವಾದ ಬ್ರಹ್ಮಮಂತ್ರವನ್ನು ಉಚ್ಚರಿಸುತ್ತಿದ್ದ. ಆತನ ಜೊತೆಗೆ ಸರ್ವಶಕ್ತಿ ಸಮನ್ವಿತೆಯಾದ ಜಗದಂಬೆ! ಅವಳು ಮಹಾಕಾಳಿಯ ರೂಪದಿಂದ ಜೀವಾತ್ಮನ ಮತ್ತೊಂದು ಪಕ್ಕದಲ್ಲಿ ಚಿತೆಯಮೇಲೆ ಕುಳಿತುಕೊಂಡು ಆತನ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳಲ್ಲಿ ಅಂತರ್ಗತವಾದ ಜನ್ಮಾಂತರಗಳ ಸಂಸ್ಕಾರಗಳ ಬಂಧನಗಳಿಂದ ಆತನನ್ನು ಮುಕ್ತನನ್ನಾಗಿಸುತ್ತಿದ್ದಳು ಮತ್ತು ಮೋಕ್ಷದ್ವಾರವನ್ನು ಸ್ವಹಸ್ತದಿಂದಲೇ ತೆರೆದು ಅಖಂಡ ಸಚ್ಚಿದಾನಂದದಲ್ಲಿ ಸೇರಿಕೊಳ್ಳುವಂತೆ ಆತನನ್ನು ಪ್ರೇರೇಪಿಸುತಿದ್ದಳು. ಈ ರೀತಿಯಾಗಿ ಹಲವು ಯುಗಗಳ ಯೋಗದಿಂದ, ತಪಸ್ಸಿನಿಂದ ಮಾತ್ರವೇ ಸಿದ್ಧಿಸಬಹುದಾದ ಅದ್ವೈತಾನುಭವದ ಅಮಿತಾನಂದವನ್ನು ಕಾಶಿ ವಿಶ್ವನಾಥನು ಆ ಜೀವಿಗೆ ಕೃಪಾಮಾತ್ರದಿಂದ ಅನುಗ್ರಹಿಸಿ ಆತನನ್ನು ಕೃತಾರ್ಥನನ್ನಾಗಿ ಮಾಡುತ್ತಿದ್ದ, ಇದನ್ನು ನಾನು ಸಾಕ್ಷಾತ್ತಾಗಿ ಕಂಡೆ’.
ಇದನ್ನು ಕೇಳಿದ ಶಾಸ್ತ್ರಜ್ಞರಾದ ಪಂಡಿತರು ಆನಂದಾಶ್ಚರ್ಯಗಳಿಂದ ಉದ್ಗರಿಸಿದರು- ‘ನಿಜಕ್ಕೂ ನಿಮಗಾದ ಅನುಭವ ಪರಮಾದ್ಭುತ! ಜೀವಾತ್ಮನು ಈ ಕಾಶಿ ಕ್ಷೇತ್ರದಲ್ಲಿ ಸತ್ತರೆ ಶ್ರೀ ವಿಶ್ವನಾಥಸ್ವಾಮಿ ಆತನಿಗೆ ಮೋಕ್ಷವನ್ನು ಕರುಣಿಸುತ್ತಾನೆಂದು ಕಾಶಿಕಾಂಡದಲ್ಲಿ ಹೇಳಲಾಗಿದೆ. ಆದರೆ ವಿಶ್ವನಾಥನು ಅದನ್ನು ಹೇಗೆ ಕೊಡುತ್ತಾನೆ ಎಂಬುದರ ವಿವರ ಅದರಲ್ಲಿಲ್ಲ. ಇದೀಗ ನಿಮಗಾದ ದಿವ್ಯದರ್ಶನದಿಂದ ಸ್ಪಷ್ಟವಾಯಿತು. ಸತ್ಯವಾಗಿಯೂ ನಿಮಗಾದ ದರ್ಶನವು ಶಾಸ್ತ್ರದಲ್ಲಿ ಬರೆದಿಟ್ಟ ವಿಷಯಕ್ಕಿಂತಲೂ ಅತಿಶಯವಾಗಿದೆ’ ಎಂದು. ಆದ್ದರಿಂದಲೇ ರಾಮಕೃಷ್ಣ ಮಿಷನ್ನಿನ (ದೀಕ್ಷಾಗುರುಗಳಾದ) ಹಿರಿಯ ಸಾಧುಗಳು ಜಗತ್ತಿನ ಬೇರೆಲ್ಲಿಯಾದರೂ ಮಂತ್ರದೀಕ್ಷಾ ಕಾರ್ಯಕ್ರಮವನ್ನು ನಡೆಸಿಕೊಡುವರು. ಆದರೆ ಕಾಶಿಯಲ್ಲಿ ಮಾತ್ರ ಅಲ್ಲ. ಏಕೆಂದರೆ ಇಲ್ಲಿ ಸ್ವಯಂ ಭಗವಾನ್ ಶಿವನೇ ಆ ಕಾರ್ಯವನ್ನು ಅದ್ಭುತವಾಗಿ ನಡೆಸುತ್ತಿದ್ದಾನಲ್ಲ!
ಇನ್ನು ಶ್ರೀವಿವೇಕಾನಂದರ ವಿಷಯಕ್ಕೆ ಬಂದರೆ ಅವರ ಧೀರತೆಯ ದುಂದುಭಿ ‘ಹೆದರಬೇಡ ಎದುರಿಸು’ ಎನ್ನುವುದು ಮೊಳಗಿದ್ದು ಇಲ್ಲಿಯೇ. ಇದಕ್ಕೂ ಅದ್ಭುತವಾದ ಹಿನ್ನೆಲೆಯೊಂದಿದೆ.
ಒಂದು ದಿನ ಬೆಳಗ್ಗೆ ಸ್ವಾಮೀಜಿ ಶ್ರೀದುರ್ಗೆಯ ದರ್ಶನ ಮಾಡಿಕೊಂಡು ಬರುತ್ತಿದ್ದಾರೆ, ದಾರಿಯ ಒಂದು ಪಕ್ಕದಲ್ಲಿ ಎತ್ತರದ ಗೋಡೆ, ಇನ್ನೊಂದು ಪಕ್ಕಕ್ಕೆ ವಿಶಾಲವಾದ ಸರೋವರ. ಆಗ ಕೋತಿಗಳ ಹಿಂಡೊಂದು ಎದುರಾಗಿ ಅವರನ್ನು ಮುತ್ತಿಕೊಂಡಿತು. ಅವು ಅವರನ್ನು ಆ ದಾರಿಯಾಗಿ ಮುಂದುವರಿಯಲು ಬಿಡುವಂತೆ ಕಾಣಲಿಲ್ಲ. ಸ್ವಾಮೀಜಿ ಅಲ್ಲಿಂದ ಹಿಂದಿರುಗಲು ನೋಡಿದರು, ಆದರೆ ಆ ಕೋತಿಗಳು ಬನಾರಸಿನ ಮೂರೂವರೆ ನಾಲ್ಕು ಅಡಿ ಎತ್ತರದ ರಾಕ್ಷಸ ಕೋತಿಗಳು¬- ಗಟ್ಟಿಯಾಗಿ ವಿಚಿತ್ರವಾಗಿ ಹಲ್ಲುಕಿರಿಯುತ್ತ ಅಟ್ಟಿಸಿಕೊಂಡು ಬಂದವು, ಅವರ ಕಾಲು ಹಿಡಿದು ಎಳೆಯಲು ಪ್ರಯತ್ನಿಸಿದವು, ಆಗ ಸ್ವಾಮೀಜಿ ಓಡಲಾರಂಭಿಸಿದರು. ಅವರು ಓಡಿದಂತೆಲ್ಲ ಕೋತಿಗಳು ಇನ್ನೂ ವೇಗವಾಗಿ ಅಟ್ಟಿಸಿಕೊಂಡು ಬಂದು ಕಚ್ಚಲು ಪ್ರಯತ್ನಿಸಿದವು! ಸ್ವಾಮೀಜಿ ಇನ್ನು ಓಡದಾದರು; ಅವುಗಳ ಕೈಗೆ ಸಿಕ್ಕಿಬೀಳುವುದೇ ಖಂಡಿತ ಎನ್ನಿಸಿತು. ನಿಸ್ಸಹಾಯಕರಾದರು; ಆ ಸಮಯಕ್ಕೆ ಸರಿಯಾಗಿ ಎದುರುಗಡೆಯಿಂದ ಬಂದ ವೃದ್ಧ ಸಾಧುವೊಬ್ಬರು ಕೂಗಿದ್ದು ಅವರ ಕಿವಿಗೆ ಬಿತ್ತು; ‘ಆ ಪ್ರಾಣಿಗಳನ್ನು ಎದುರಿಸು! ಊಚ್ಚಛಿ ಠಿಜಛಿ ಚ್ಟಿ್ಠಛಿ!!’ ಈ ಮಾತು ಮಿಂಚಿನಂತೆ ಕೆಲಸ ಮಾಡಿತು. ಸ್ವಾಮೀಜಿಗೆ ಏನು ಮಾಡಬೇಕು ಎಂದು ಹೊಳೆಯಿತು, ಕೋತಿಗಳಿಗೆ ಬೆನ್ನುಮಾಡಿ ಓಡುತ್ತಿದ್ದವರು ಇದ್ದಕ್ಕಿದ್ದಂತೆ ಆತ್ಮರಕ್ಷಣೆಗೆ ಸಿದ್ಧರಾಗಿ ನಿಂತು ಅವುಗಳನ್ನು ದುರುಗುಟ್ಟಿ ನೋಡಿದರು. ಏನಾಶ್ಚರ್ಯ! ತಕ್ಷಣ ಆ ಗಡವ ಕೋತಿಗಳು ಓಟಕಿತ್ತವು! ಅಬ್ಬ ಎಂತಹ ಬಿಡುಗಡೆ, ವಿಸ್ಮಯ ಆಶ್ಚರ್ಯಗಳಿಂದ ಸ್ವಾಮೀಜಿ ಆ ವೃದ್ಧ ಸಾಧುವಿಗೆ ಕೃತಜ್ಞತೆಯಿಂದ ನಮಿಸಿದರು. ಆ ಸಾಧುವೂ ಮುಗುಳ್ನಗುತ್ತ ಪ್ರತಿ ನಮಸ್ಕಾರ ಮಾಡಿ ಹೊರಟು ಹೋದರು.
ಈ ಘಟನೆಯಿಂದ ಸ್ವಾಮೀಜಿ ಒಂದು ಅದ್ಭುತವಾದ ಪಾಠವನ್ನು ಕಲಿತರು. ಮುಂದೆ ಅವರು ನ್ಯೂರ್ಯಾನಲ್ಲಿ ಭಾಷಣ ಮಾಡುವಾಗ ಈ ಘಟನೆಯನ್ನು ಉದಾಹರಿಸುತ್ತ ಹೇಳುತ್ತಾರೆ- ‘ನಮ್ಮ ಇಡೀ ಜೀವನಕ್ಕೆ ಅನ್ವಯಿಸುವ ದೊಡ್ಡ ಪಾಠ ಇದು- ಕಷ್ಟಗಳನ್ನು ಎದುರಿಸಿ; ಧೈರ್ಯವಾಗಿ ಎದುರಿಸಿ! ಭಯಂಕರ ಕಷ್ಟಕಾರ್ಪಣ್ಯಗಳನ್ನು ಕಂಡು ಹೆದರಿ ಹೋಗುವ ಬದಲು ಎದುರಿಸಿನಿಂತಿದ್ದೇ ಆದರೆ ಅವೂ ಕೋತಿಗಳಂತೆಯೇ ಪಲಾಯನ ಮಾಡುತ್ತವೆ. ನಾವು ಬಂಧಮುಕ್ತರಾಗಬೇಕು, ಚಿರಸ್ವಾತಂತ್ರ್ಯ ಗಳಿಸಬೇಕು. ಇದು ಪ್ರಕೃತಿಯನ್ನು ವಶಮಾಡಿಕೊಳ್ಳುವುದರ ಮೂಲಕವೇ ಹೊರತು ಪ್ರಕೃತಿಗೆ ಶರಣಾಗುವುದರಿಂದಲ್ಲ, ಓಡಿ ಹೋಗುವುದರಿಂದಲ್ಲ. ಹೇಡಿಗಳು ಎಂದೆಂದಿಗೂ ಜಯಶಾಲಿಗಳಾಗಲಾರರು. ನಮ್ಮಲ್ಲಿರುವ ಭಯ, ಅಜ್ಞಾನಗಳು, ಕಷ್ಟಕಾರ್ಪಣ್ಯಗಳು ತೊಲಗಬೇಕಾದರೆ ಅವುಗಳನ್ನು ಎದುರಿಸಿ ಹೋರಾಡಬೇಕು’.
ವಾರಾಣಸಿ ಜ್ಞಾನವೈಭವ ಮತ್ತು ಅದ್ಭುತ ವಿದ್ಯಾಕೇಂದ್ರವೆಂಬುದರ ಜತೆಗೆ ಬಹುಶಃ ಅಂದಿನ ನಾಗರಿಕ ಪ್ರಪಂಚದ ಮುಂಚೂಣಿಯಲ್ಲಿದ್ದ ಉನ್ನತ ಶಿಕ್ಷಣದ ಕ್ಷೇತ್ರ. ಅತ್ಯಂತ ಪ್ರಾಚೀನವಾದದ್ದೂ ಹೌದು. ತಕ್ಷಶಿಲೆಗೂ ಮುಂಚೆ ಇದು ಖ್ಯಾತಿ ಪಡೆದಿರಬೇಕು. ಇದನ್ನು ಸಮರ್ಥಿಸಲು ಪ್ರಖ್ಯಾತ ಯುರೋಪಿಯನ್ ಚಿಂತಕರು ನಮ್ಮ ನೆರವಿಗಿದ್ದಾರೆ, ಅವರ ಮಾತುಗಳನ್ನೇ ಅಕ್ಷರಶಃ ಪ್ರಸ್ತುತಪಡಿಸುತ್ತೇನೆ. ಇಡೀ ಯುರೋಪಿನ ವಿದ್ವನ್ವಲಯದಲ್ಲಿ ಜ್ಞಾನಸೂರ್ಯನೆಂದು ಖ್ಯಾತಿವೆತ್ತ ್ಖ್ಝಚಜ್ಟಿ ಹೀಗೆ ಹೇಳುತ್ತಾರೆ- ‘ಖಗೋಳಶಾಸ್ತ್ರ, ಜ್ಯೋತಿಷ್ಯ, ಆಧ್ಯಾತ್ಮಿಕತೆ ಇತ್ಯಾದಿಗಳೆಲ್ಲ ಗಂಗಾತೀರದಿಂದಲೇ ನಮ್ಮೆಡೆಗೆ ಹರಿದಿದೆ ಎನ್ನುವುದು ನನಗೆ ಖಾತ್ರಿಯಾಗಿದೆ. ಸುಮಾರು 2500 ವರ್ಷಗಳ ಹಿಂದೆ ಪೈಥಾಗರಸ್ ಎಛಿಟಞಛಿಠ್ಟಿಢ ಕಲಿಯಲು ಗ್ರೀಸಿನ ಸ್ಯಾಮೋಸ್ ನಗರದಿಂದ ಗಂಗಾ ತೀರ(ವಾರಾಣಸಿ)ಕ್ಕೆ ಹೋಗಿದ್ದರು ಎಂಬುದು ಗಮನೀಯ, ಅಲ್ಲಿಯ ಬ್ರಾಹ್ಮಣರ ವಿಜ್ಞಾನಗಳ ಖ್ಯಾತಿ ಈಗಾಗಲೇ ಯುರೋಪಿನಲ್ಲಿ ಪರಿಚಿತವಾಗಿರದಿದ್ದಲ್ಲಿ ಇಂತಹ ವಿಚಿತ್ರ ಪ್ರಯಾಣವನ್ನು ಅವರು ಎಂದಿಗೂ ಕೈಗೊಳ್ಳುತ್ತಿರಲಿಲ್ಲ’.
‘ಈಗಾಗಲೇ ಭಾರತೀಯ ವಿಜ್ಞಾನಗಳು ಯುರೋಪಿನಲ್ಲಿ ಬಹಳ ಪ್ರಸಿದ್ಧವಾಗಿರಬೇಕು’ ಎನ್ನುವ ್ಖ್ಝಚಜ್ಟಿನ ಮಾತಿನಲ್ಲಿ ಉತ್ಪ್ರೇಕ್ಷೆಯೂ ಇಲ್ಲ, ಕಲ್ಪನೆಯೂ ಇಲ್ಲ. ಏಕೆಂದರೆ ಕ್ರಿಪೂ 1400ರಷ್ಟು ಹಿಂದೆಯೇ ಇದ್ದ ವಿಶ್ವವಿಖ್ಯಾತ ವ್ಯಾಕರಣತಜ್ಞ ಪಾಣಿನಿ ತನ್ನ ‘ಅಷ್ಟಾಧ್ಯಾಯಿ’ಯಲ್ಲಿ ಗ್ರೀಸ್ ಭಾಷೆ ಕುರಿತು ‘ಯವನಾನಿ ಲಿಪಿ’ ಅಂತ ಪ್ರಸ್ತಾಪ ಮಾಡಿಯೇ ಇದ್ದಾನೆ. ಕ್ರಿಪೂ 9 ಅಥವಾ 7ನೇ ಶತಮಾನದಷ್ಟು ಹಿಂದೆಯೇ ಜೀವಿಸಿದ್ದ ಹೋಮರ್ ‘ಇಲಿಯಡ್’ ಮತ್ತು ‘ಒಡಿಸ್ಸಿ’ಗಳಲ್ಲಿ ಚಿತ್ರಿಸಿರುವ ಬಹಳಷ್ಟು ಸಂದರ್ಭಗಳು ಭಾರತೀಯ ಮೇರುಕೃತಿಗಳಾದ ರಾಮಾಯಣ ಮತ್ತು ಮಹಾಭಾರತಗಳ ಘಟನಾವಳಿಗಳ ಪ್ರತಿಧ್ವನಿಯಂತಿದೆ. ಉದಾಹರಣೆಗೆ ಮಹಾಭಾರತ ಮತ್ತು ಇಲಿಯಡ್ಗಳಲ್ಲಿ ಯುದ್ಧಕ್ಕೆ ಮೊದಲು ಅದ್ಭುತವಾದ ತತ್ವೋಪದೇಶವೊಂದು ಅನಾವರಣಗೊಳ್ಳುತ್ತದೆ. ಮಹಾಭಾರತ, ರಾಮಾಯಣ ಮತ್ತು ಣಛಢಠಠಢಗಳಲ್ಲಿ ಕಥಾನಾಯಕ ಕಳೆದುಕೊಂಡ ತನ್ನ ಪತ್ನಿ ಮತ್ತು ರಾಜ್ಯವನ್ನು ಮರಳಿ ಪಡೆಯುವುದಕ್ಕಾಗಿಯೇ ಹೋರಾಡುತ್ತಾರೆ.
ರಾಮ ಮತ್ತು ಯೂಲಿಸಿಸ್ ಸಾಕಷ್ಟು ದೇಶ ಪರ್ಯಟನೆ ಮಾಡುವುದನ್ನು ಹಾಗೆಯೇ ಕಥಾನಾಯಕಿಯರಾದ ಸೀತೆ ಮತ್ತು ನಿಷ್ಠೆ ಮತ್ತು ಸದ್ಗುಣಗಳ ಮೂರ್ತಿಯಂತೆ ಚಿತ್ರಿಸಲ್ಪಟ್ಟಿರುವುದನ್ನು ಕಾಣುತ್ತೇವೆ. ಪ್ರಖ್ಯಾತ ಗ್ರೀಕ್ ಚಿಂತಕ ಯಾಂಬ್ಲಿಕಸ್ ಕೂಡ ಹೇಳುತ್ತಾನೆ- ಇದೇ ಸಾಲಿನಲ್ಲಿ ಪ್ರಖ್ಯಾತ ಫ್ರೆಂಚ್ ವಿದ್ವಾಂಸ ಮತ್ತು ನಿಸರ್ಗಶಾಸ್ತ್ರಜ್ಞ (1748 - 1814) ಮುಂದುವರಿದು ‘ಪ್ರಾಚೀನ ಭಾರತವು ತನ್ನ ಧರ್ಮಗಳು ಮತ್ತು ತತ್ವಗಳನ್ನು ಜಗತ್ತಿಗೆ ನೀಡಿದೆ. ಈಜಿಪ್ಟ್ ಮತ್ತು ಗ್ರೀಸ್ ತಾವು ಗಳಿಸಿದ ಜ್ಞಾನಕ್ಕಾಗಿ ಭಾರತಕ್ಕೆ ಋಣಿಯಾಗಿವೆ ಮತ್ತು ಪೈಥಾಗರಸ್ ಮಾನವ ಜನಾಂಗದ ಹೆಸರಾಂತ ವಿದ್ವಾಂಸರಾದ ಬ್ರಾಹ್ಮಣ ಪಂಡಿತರ ಅಡಿಯಲ್ಲಿ ಅಧ್ಯಯನ ಮಾಡಲು ಭಾರತಕ್ಕೆ ಹೋದರು ಎಂಬುದು ತಿಳಿದಿರುವ ವಿಷಯವೇ’.
ಇವೆಲ್ಲಕ್ಕೂ ಕಳಸವಿಟ್ಟಂತೆ ಭಾರತ ಮತ್ತು ಗ್ರೀಸ್ ಚರಿತ್ರೆಗಳ ತಲರ್ಸ³ ಜ್ಞಾನವನ್ನು ಪಡೆದಿದ್ದ ಸುಪ್ರಸಿದ್ಧ ಜರ್ಮನ್ ಚಿಂತಕ Leopard Von Schroeder ‘ಪೈಥಾಗರಸ್ನ ಹೆಸರಿನಲ್ಲಿರುವ ಬಹುತೇಕ ಎಲ್ಲಾ ತತ್ವಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಿಸಿದ ಸಿದ್ಧಾಂತಗಳು ಭಾರತದಿಂದಲೇ ಬಂದಿವೆ’ ಎಂದು ಹೇಳುವುದರ ಮೂಲಕ ಪೂರ್ಣ ಸಮರ್ಥನೆ ಒದಗಿಸುತ್ತಾನೆ. ಇಡೀ ಯುರೋಪಿಯನ್ ಚಿಂತನೆ ಇಂದು ನಿಂತಿರುವುದು ಪೈಥಾಗರಸ್ನ ತತ್ವಗಳ ಮೇಲೆ ಅರ್ಥಾತ್ ವಾರಾಣಸಿಯಿಂದ ಹೊರಟ ಸಂದೇಶಗಳೇ ಇಂದು ಜಗತ್ತನ್ನು ಬೆಳಗುತ್ತಿವೆ. ಇದು ಭಾರತ ಎಂದೋ ವಿಶ್ವಗುರುವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ. ಇಂತಹ ಜ್ಞಾನಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಹೊಣೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)