ಅಂಕಣ

ಎಲ್ಲಿಂದ ಬೇಕಾದರೂ ಕೆಲಸ ಮಾಡಿ!; ನಂಬಿಕೆಯೇ ಕೆಲಸ ಮಾಡುವ ಸಂಸ್ಕೃತಿಗೆ ಬುನಾದಿ

Webdesk - Ravikanth

ಜಗತ್ತನ್ನು ತಲ್ಲಣಗೊಳಿಸಿದ ಕರೊನಾ ಸಂಕಷ್ಟ ಕೆಲಸದ ಸಂಸ್ಕೃತಿಯನ್ನೇ ಬದಲಾಯಿಸಿದೆ. ಕಚೇರಿಗೆ ಹೋಗಿಯೇ ಮಾಡಬೇಕು ಎಂದಿದ್ದ ಅನೇಕ ಕೆಲಸಗಳನ್ನು ಮನೆಯಲ್ಲಿ ಇದ್ದುಕೊಂಡೇ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಬದಲಾದ ಸನ್ನಿವೇಶದಲ್ಲಿ ಕಚೇರಿಗೆ ಹೋಗಿ ಕೆಲಸ ಮಾಡುವುದು, ವರ್ಕ್ ಫ್ರಂ ಹೋಮ್ ಹಾಗೂ ಇವೆರಡನ್ನೂ ಒಳಗೊಂಡ ಹೈಬ್ರಿಡ್ ಟ್ರೆಂಡ್ ಹೆಚ್ಚಾಗಿದೆ. ಹೈಬ್ರಿಡ್ ಮತ್ತು ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಸಂಸ್ಕೃತಿಯನ್ನು ಉತ್ತೇಜಿಸಲು ಕಂಪನಿಗಳು ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸುತ್ತಿವೆ. ಇದರಲ್ಲಿ ಮುಖ್ಯವಾಗಿ ಉದ್ಯೋಗಿಗಳ ಮೇಲಿನ ನಂಬಿಕೆಯೇ ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಸಂಸ್ಕೃತಿಗೆ ಬುನಾದಿ. ಕಚೇರಿಯಲ್ಲಿ ಇದ್ದರಷ್ಟೇ ಅವರು ಹೆಚ್ಚು ಕೆಲಸ ಮಾಡುತ್ತಾರೆ ಎಂಬುದನ್ನು ಕೈಬಿಟ್ಟು, ಎಲ್ಲಿದ್ದರೂ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಹೊಣೆಗಾರಿಕೆಯನ್ನು ವರ್ಗಾಯಿಸುತ್ತದೆ. ಇದರೊಂದಿಗೆ ಉತ್ಪಾದಕತೆ ಮತ್ತು ಸೃಜನಶೀಲತೆಗೂ ಅವಕಾಶ ಸಿಗುತ್ತದೆ. ಕಚೇರಿಯಲ್ಲಿ ಇರುವಂತೆ ಇದರಲ್ಲಿ ಎಲ್ಲರೂ ಒಟ್ಟಾಗಿ ಒಂದೆ ಕೆಲಸ ಮಾಡುವುದಿಲ್ಲ. ಬದಲಾಗಿ ಅವರವರ ಅನುಕೂಲಕ್ಕೆ ತಕ್ಕಂತಹ ಸ್ಥಳದಿಂದಲೇ ಕೆಲಸ ಮಾಡುತ್ತಾರೆ. ಎಲ್ಲಿಂದ ಬೇಕಾದರೂ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡುವ ಕೆಲಸವನ್ನು ಕಂಪನಿಗಳು ಮಾಡುತ್ತವೆ. ಇದಕ್ಕೆ ಅಗತ್ಯ ಉಪಕರಣಗಳು ಮತ್ತು ಪೂರಕ ವ್ಯವಸ್ಥೆಯನ್ನೂ ಕಂಪನಿಯೇ ಮಾಡಿಕೊಡುವುದು ವಿಶೇಷ.

ವರ್ಕ್ ರೀಇಮ್ಯಾಜಿನ್ಡ್ ಸಮೀಕ್ಷೆಯ ಪ್ರಕಾರ, ಆಧುನಿಕ ಕೆಲಸದ ಕೌಶಲ ಇರುವಂಥವರಿಗೆ ಈಗ ಹೆಚ್ಚಿನ ಬೇಡಿಕೆ. ಅವರು ತಾವಿದ್ದಲ್ಲಿಂದಲೇ ಕೆಲಸ ಮಾಡುವುದಕ್ಕೆ ಹೆಚ್ಚಿನ ಅವಕಾಶವಿದೆ. ಸಮೀಕ್ಷೆಗೊಳಪಟ್ಟ 10 ಕಂಪನಿಗಳ ಪೈಕಿ 8 ಕಂಪನಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ವೃತ್ತಿಪರರಿಗೆ ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಅವಕಾಶ ಮತ್ತು ಸೌಲಭ್ಯ ನೀಡುತ್ತಿವೆ. ಹಲವಾರು ಕಂಪನಿಗಳು ತಮ್ಮ ಕೆಲಸದ ಸಂಸ್ಕೃತಿಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಗಮನಕೇಂದ್ರೀಕರಿಸಿವೆ ಎಂಬ ಅಂಶ ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಮಹಿಳೆಯರೇ ಪ್ರಧಾನ: ವರ್ಕ್ ಫ್ರಂ ಹೋಂ ವಿಷಯದಲ್ಲಿ ಮಹಿಳಾ ಉದ್ಯೋಗಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಈ ವಿಷಯದಲ್ಲಿ ಎರಡು ವಾದವಿದೆ. ಕಚೇರಿಗೆ ಬಾರದೇ ಇರುವುದರಿಂದ ಆಕೆಗೆ ಹೆಚ್ಚು ಫ್ಲೆಕ್ಸಿಬಿಲಿಟಿ ಸಿಗಲಿದೆ, ಕೆಲಸ ಮಾಡಿಕೊಳ್ಳಲು ಅನುಕೂಲ ಎಂಬ ಒಂದು ವಾದವಿದ್ದರೆ, ಕಚೇರಿಗೆ ಬಂದರೆ ಬೇರೆ ರೀತಿ ಸೌಲಭ್ಯ ಇರುತ್ತದೆ, ಮನೆಯಿಂದ ಕೆಲಸ ಮಾಡಿದಾಗ ಒತ್ತಡ ಹೆಚ್ಚು ಎಂಬ ವಾದವೂ ಇದೆ. ಆದರೆ, ವರ್ಕ್ ಫ್ರಂ ಹೋಂಗೆ ಹೆಚ್ಚು ಅಪೇಕ್ಷೆ ಪಡುತ್ತಿರುವವರಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚೆಂಬ ಮಾಹಿತಿ ಇದೆ.

ಕೆಲಸ ಬಿಟ್ಟೇವು, ಕಚೇರಿಗೆ ಬರಲ್ಲ: ಸದ್ಯದ ಟ್ರೆಂಡ್ ಹೇಗಿದೆ ಎಂದರೆ, ಪ್ರತಿದಿನ ಕಚೇರಿಗೆ ಬರಲೇ ಬೇಕು ಎಂದು ಹೇಳಿದರೆ ಕೇಳುವ ಪರಿಸ್ಥಿತಿಯಲ್ಲಿ ಉದ್ಯೋಗಿಗಳು ಇಲ್ಲ. ಐಟಿ ಕ್ಷೇತ್ರದಲ್ಲಂತೂ ಕಂಪನಿಗಳು ಹಠ ಹಿಡಿದರೆ ಉದ್ಯೋಗಿಗಳು ಬರುವುದಿಲ್ಲ ಎಂದು ರಚ್ಚೆ ಹಿಡಿಯುವ ಸ್ಥಿತಿ ತಲುಪಿದೆ. ಕಡ್ಡಾಯ ಮಾಡಿದರೆ ಕೆಲಸ ಬಿಡುತ್ತೇವೆ, ಕಚೇರಿಗಂತೂ ಬರಲಾರೆವು ಎಂದು ಸ್ಪಷ್ಟವಾಗಿ ಹೇಳುವ ಉದಾಹರಣೆ ನೂರಾರು ಇವೆ. ಬಹುರಾಷ್ಟ್ರೀಯ ಕಂಪನಿಯ ಪ್ರಮುಖ ಹುದ್ದೆಯಲ್ಲಿರುವ ವಿನೀತಾ ಹೇಳುವ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ಪಿಂಕ್ ಸ್ಲಿಪ್ ಭಯವಿತ್ತು. ಈಗ ಕಂಪನಿಗಳೇ ತಗ್ಗಿಬಗ್ಗಿ ನಡೆಯುವ ಸ್ಥಿತಿ ಬಂದಿದೆ. ಇದೇ ಕಾರಣಕ್ಕೆ ಹೈಬ್ರಿಡ್ ಕೆಟಗರಿಗೆ ಒತ್ತು ನೀಡಿ, ಮನವೊಲಿಸಿ ಕಚೇರಿಗೆ ಕರೆಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ.

ನೇಮಕದಲ್ಲೇ ಎನಿವೇರ್ ಆಪ್ಶನ್: ಕಂಪನಿಗಳು ಹೊಸದಾಗಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಹೊಸ ಉದ್ಯೋಗಿಗಳಿಗೆ ನಿರ್ದಿಷ್ಟ ಸ್ಥಳವನ್ನು ನೀಡದ ಬೆಳವಣಿಗೆ ಕಾಣಿಸಿದೆ. ಸದ್ಯಕ್ಕಂತೂ ಎಲ್ಲಿಂದಲಾದರೂ ಕೆಲಸ ಮಾಡಿದರೆ ಸಾಕು, ಮುಂದೆ ನೋಡೋಣ ಎಂದು ನೇಮಕ ಸಂದರ್ಭದಲ್ಲಿ ಹೇಳಿ ಕಳುಹಿಸುತ್ತಿವೆ. ಇದಕ್ಕೆ ಕೋವಿಡ್ ಮತ್ತೊಂದು ಅಲೆಯ ಆತಂಕ ಕಾರಣ ಎಂದು ಹೇಳಲಾಗುತ್ತಿದೆ. ಚೀನಾದಲ್ಲಿ ಪುನಃ ಲಾಕ್​ಡೌನ್ ಘೋಷಣೆಯಾದ್ದರಿಂದ ಕಂಪನಿಗಳು ತಮ್ಮ ಕಚೇರಿಗಳನ್ನು ವಿಸ್ತರಿಸುವ ಗೋಜಿಗೆ ಹೋಗುತ್ತಿಲ್ಲ. ಹೊಸ ಕಟ್ಟಡ, ನಿರ್ವಹಣೆ ವೆಚ್ಚದ ಬದಲು ಸದ್ಯಕ್ಕೆ ವರ್ಕ್ ಫ್ರಂ ಎನಿವೇರ್ ಕೆಲಸ ಕೊಟ್ಟು ಮಾನಿಟರ್ ಮಾಡುವ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತಿದೆ.

ಹಾಟ್ ಡೆಸ್ಕ್: ಪ್ರಮುಖ ನಗರಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿದ ಕಂಪನಿಗಳು ತಮ್ಮ ಹಾಲಿ ಇರುವ ಕಚೇರಿಯಲ್ಲಿ ಹಾಟ್ ಡೆಸ್ಕ್ ಸ್ಥಾಪಿಸುತ್ತಿದೆ. ಅಂದರೆ, ಒಂದಷ್ಟು ವರ್ಕ್ ಸ್ಪೇಸ್ ಅನ್ನು ಹಾಟ್ ಡೆಸ್ಕ್ ಎಂದು ಗುರುತಿಸಿಡಲಾಗುತ್ತದೆ, ಅದು ನಿರ್ದಿಷ್ಟವಾದ ವ್ಯಕ್ತಿಗೆ ಮೀಸಲಾದ ಸ್ಥಳ ಆಗಿರುವುದಿಲ್ಲ. ಉದ್ಯೋಗಿಗಳು ಕಚೇರಿಗೆ ಬಂದು ಹೋಗುವ ಸಂದರ್ಭ ಬಂದರೆ ಆ ಸ್ಥಳ ಬಳಕೆ ಮಾಡಬಹುದು. ಬಹುರಾಷ್ಟ್ರೀಯ ಕಂಪನಿಗಳು ವಿವಿಧ ಮಹಾ ನಗರಗಳಲ್ಲಿ ಇಂತಹ ಹಾಟ್ ಡೆಸ್ಕ್ ಸ್ಥಾಪಿಸುತ್ತಿವೆ.

ಸಾಧ್ಯವಾಗುವಾಗ ಏಕೆ ಬರಲಿ?: ವರ್ಕ್ ಫ್ರಂ ಹೋಂ ಟ್ರೆಂಡ್ ಕುರಿತು ಐಟಿ ಉದ್ಯೋಗಿಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ‘ಎಲ್ಲಿಂದಲೂ ಕೆಲಸ ಮಾಡಬಹುದು ಎಂದು ನಿರೂಪಿಸಿಯಾಗಿದೆ, ಕಂಪನಿಗಳು ಒಳ್ಳೆಯ ಉದ್ಯೋಗಿಗಳನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಹೇಗೋ ಇನ್ನೊಂದಷ್ಟು ದಿನ ಸದ್ಯದ ವಾತಾವರಣದಲ್ಲಿ ಮುಂದುವರಿಯುವ ಆಲೋಚನೆ ಮಾಡುತ್ತಿವೆ.’

ಮಂಡಿಯೂರಿ ನಿಂತು ಕೇಳುವೆ, ಕಚೇರಿಗೆ ಬನ್ನಿ!: ಜಾಗತಿಕವಾಗಿ ಹೆಮ್ಮರವಾಗಿ ಬೆಳೆಯುತ್ತಿರುವ ಸ್ಟಾರ್​ಬಕ್ಸ್ ಗೊತ್ತಿರಬೇಕಲ್ಲ, ಅದರ ಸಿಇಒ ಹೊವಾರ್ಡ್ ಶುಲ್ಟ್ ್ಜ ಎರಡು ದಿನಗಳ ಹಿಂದಷ್ಟೇ ನೀಡಿದ ಹೇಳಿಕೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಸುವಂತಿದೆ.‘ನಾನು ಮಂಡಿಯೂರಿ ನಿಂತು ಕೋರುತ್ತೇನೆ, ನಿಮಗೇನು ಬೇಕೋ ಕೇಳಿ, ಕಚೇರಿಗೆ ಮರಳಿ’ ಎಂದು ಮನವಿ ಮಾಡಿರುವುದು ಜಾಗತಿಕವಾಗಿ ಸಂಚಲನ ಮೂಡಿಸಿದೆ. ಇಲ್ಲ, ಅವರು ನಾನು ಬಯಸಿದ ಮಟ್ಟದಲ್ಲಿ ಕಚೇರಿಗೆ ಹಿಂತಿರುಗುವುದಿಲ್ಲ. ನಾನೊಂದು ರೀತಿ ಶಾಲೆಯ ಹಳೇ ವ್ಯಕ್ತಿ ಎಂದು ಅರ್ಥಮಾಡಿಕೊಂಡಿದ್ದೇನೆ. ಜತೆಗೆ ಇದೊಂದು ರೀತಿ ವಿಭಿನ್ನ ಪೀಳಿಗೆಯಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಜಾಬ್ ಮಾರ್ಕೆಟ್​ನಲ್ಲಿ ಚಲನಶೀಲತೆ: ಜಾಬ್ ಮಾರ್ಕೆಟ್​ನಲ್ಲಿ ಏರಿಳಿತ ಇದ್ದೇ ಇರುತ್ತದೆ. ಕೆಲವೊಮ್ಮೆ ಕೌಶಲಭರಿತ ಉದ್ಯೋಗಿಗಳಿಗೆ ಉದ್ಯೋಗದಾತರು ಹುಡುಕಾಡುವುದು, ತಡಕಾಡುವುದು ಇದೆ. ಇನ್ನು ಕೆಲವೊಮ್ಮೆ ತನ್ನ ಉದ್ಯೋಗಿಗಳನ್ನು ಕೈಬಿಡುವ ಸಂದರ್ಭವೂ ಎದುರಾಗುತ್ತದೆ. ಸದ್ಯಕ್ಕೆ ಕೌಶಲಪೂರಿತ ಉದ್ಯೋಗಿಗಳಿಗೆ ಹುಡುಕಾಟ ಹೆಚ್ಚಿದೆ. ಇನ್ನೊಂದು ಮಗ್ಗುಲಲ್ಲಿ ಕಂಪನಿ ಬದಲಿಸುವ ಟ್ರೆಂಡ್ ಕೂಡ ಹೆಚ್ಚಾಗಿ ಕಾಣಿಸಿದೆ. ಇದು ಕೂಡ ವರ್ಕ್ ಫ್ರಮ್ ಎನಿವೇರ್ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲಿ ವರ್ಕ್ ಫ್ರಮ್ ಎನಿವೇರ್ ಅವಕಾಶ ಸಿಗುತ್ತದೋ ಅಲ್ಲಿಗೆ ಜಿಗಿಯುವವರೂ ಹೆಚ್ಚಿದ್ದಾರೆ.