ಅಂಕಣ

ಬದುಕಿಗೆ ವಿವೇಕ ಬೇಕು: ಮನೋಲ್ಲಾಸ

Webdesk - Ravikanth
| ಡಾ. ಗಣಪತಿ ಆರ್ ಭಟ್

ಸಕಲ ದೇವತೆಗಳಿಗೆ ರಾಜನೆನಿಸಿದ ದೇವೇಂದ್ರನು ಅದೊಂದು ದಿನ ನಿತ್ಯಪೂಜೆಯನ್ನು ಮುಗಿಸಿ ಆಕಾಶ ಮಾರ್ಗವಾಗಿ ಸ್ವನಗರಿಯತ್ತ ಹೊರಟಿದ್ದನು. ತ್ರಿಭುವನನಾಯಕನಾದ ದೇವೇಂದ್ರನು ಪ್ರಯಾಣ ಬೆಳೆಸಿದ್ದಾನೆಂದರೆ ಕೇಳಬೇಕೆ? ಚಾರಣರು ವಂದಿಗಳಂತೆ ಸ್ತುತಿಗೈಯ್ಯುತ್ತಿದ್ದರು. ಕಿನ್ನರರು ವಾದ್ಯ ನುಡಿಸುತ್ತಿದ್ದರು. ಅಪ್ಸರೆಯರು ನರ್ತಿಸುತ್ತಿದ್ದರು. ಐರಾವತವನ್ನೇರಿ ಹೆಮ್ಮೆಯಿಂದ ಮುಂದೆ ಸಾಗುತ್ತಿದ್ದ ಇಂದ್ರನ ಎದುರಿಗೆ ಅಚಾನಕ್ಕಾಗಿ ದೂರ್ವಾಸ ಮುನಿಗಳು ಬಂದುಬಿಟ್ಟರು. ಬ್ರಹ್ಮಜ್ಞಾನಿಗಳು, ತೇಜಸ್ವಿಗಳೂ ಆದ ಅವರಿಗೆ ಕೋಪಬಂದರೆ ಎದುರಿಸುವುದು ಎಷ್ಟು ಕಷ್ಟವೆಂದು ಗೊತ್ತಿದ್ದರೂ ಮದಾಂಧನಾದ ಇಂದ್ರನು ಆ ಮುನಿಗಳಿಗೆ ಅಗೌರವ ತೋರಿದ. ಶಿಷ್ಟಾಚಾರಕ್ಕೂ ಮಾತನಾಡಿಸಲಿಲ್ಲ, ತಲೆಬಾಗಿ ನಮಸ್ಕರಿಸಲಿಲ್ಲ. ದೂರ್ವಾಸರು ಅತ್ಯಂತ ಪ್ರೀತಿಯಿಂದ ಆಶೀರ್ವಾದದ ರೂಪದಲ್ಲಿ ನೀಡಿದ ಹೂಮಾಲೆಯನ್ನು ಕಣ್ಣಿಗೂ ಒತ್ತಿಕೊಳ್ಳದೆ, ಅಸಡ್ಡೆಯಿಂದ ತನ್ನ ಆನೆಯತ್ತ ಎಸೆದುಬಿಟ್ಟ. ಕೂಡಲೇ ಆ ಆನೆ ತನ್ನ ತಲೆಯ ಮೇಲೆ ಬಿದ್ದ ಮಾಲೆಯನ್ನು ಸೊಂಡಿಲಿನಿಂದ ನಿವಾರಿಸಿಕೊಳ್ಳುತ್ತಾ ಕೆಳಗೆ ಬೀಳಿಸಿ ಕಾಲಿನಿಂದ ತುಳಿದುಬಿಟ್ಟಿತು. ಇದನ್ನು ಕಂಡ ದೂರ್ವಾಸರು ಕೋಪವಶರಾದರು. ‘ನೀನು ಯಾವ ಅಧಿಕಾರ ಮತ್ತು ಸಂಪತ್ತಿನ ಕಾರಣದಿಂದ ಮದಗೊಂಡಿರುವೆಯೋ ಆ ನಿನ್ನ ತ್ರಿಭುವನ ಸಂಪತ್ತು ನಿನ್ನ ಕೈ ತಪ್ಪಿ ಶತ್ರುಗಳ ವಶವಾಗಲಿ’ ಎಂದು ಶಪಿಸಿದರು. ಕೆಟ್ಟ ಮೇಲೆ ಬುದ್ಧಿಬಂತು ಎನ್ನುವಂತೆ ಶಪ್ತನಾದ ದೇವೇಂದ್ರನು ದೂರ್ವಾಸರಲ್ಲಿ ಕ್ಷಮೆ ಕೇಳಿದ. ದೂರ್ವಾಸರು ಕೊಟ್ಟ ಶಾಪವನ್ನು ಹಿಂತೆಗೆದುಕೊಳ್ಳದೆ ಹೊರಟರು. ಶಾಪದ ಪರಿಣಾಮವಾಗಿ ರಾಕ್ಷಸರಾಜನಾದ ಬಲಿ ತನ್ನ ಸೇನೆಯೊಂದಿಗೆ ಅಮರಾವತಿಯನ್ನು ಮುತ್ತಿಗೆ ಹಾಕಿ ಗೆದ್ದುಕೊಂಡ. ಓಡಿ ಹೋದ ಇಂದ್ರನು ಹೇಡಿಯಂತೆ ಅಡಗಿಕೊಂಡು ದಿನಗಳೆಯಬೇಕಾಯಿತು. ಅಧಿಕಾರ, ಐಶ್ವರ್ಯ, ಯೌವನದ ಬಲ ಹೀಗೆ ಯಾವೆಲ್ಲ ಬಲದ ಕಾರಣಕ್ಕಾಗಿ ಇಂದ್ರನು ಮದಾಂಧನಾಗಿದ್ದನೋ ಅವೆಲ್ಲ ಕೇಡುಗಾಲದಲ್ಲಿ ಆತನ ಉಪಯೋಗಕ್ಕೆ ಬರಲೇ ಇಲ್ಲ.

ಸಂಪತ್ತು, ಅಧಿಕಾರ ಇತ್ಯಾದಿ ಅನುಕೂಲವಿದ್ದಾಗ ವಿವೇಕವೂ ಇರಬೇಕಷ್ಟೆ. ಶಾಶ್ವತವಾದ ಸ್ವತ್ತನ್ನು ಸಂಪಾದಿಸಿದ್ದೇವೆಂಬ ಭ್ರಮೆಯಲ್ಲಿ ಬದುಕುವವನಿಗೆ ವಿಪತ್ತು ನಿಶ್ಚಿತ. ಹಾಗಾಗಿ ಹಿರಿಯರು ಎಚ್ಚರಿಕೆಯನ್ನು ನುಡಿದಿದ್ದಾರೆ;

ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕಿತಾ|

ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಮ್|

‘ಯೌವನ, ಧನಸಂಪತ್ತು, ಪ್ರಭುತ್ವ ಮತ್ತು ಅವಿವೇಕತನ ಈ ನಾಲ್ಕರ ಪೈಕಿ ಮನುಷ್ಯನು ಹಾಳಾಗಲು ಯಾವುದಾದರೂ ಒಂದಿದ್ದರೂ ಸಾಕು. ಇನ್ನು ಈ ನಾಲ್ಕೂ ಒಬ್ಬನಲ್ಲಿಯೇ ಇದ್ದರೆ ಏನಾಗಬೇಡ?’

ಸೃಜನಶೀಲತೆಗೆ ನೆಲೆಯಾಗಬೇಕಾದ ಯೌವನದದಲ್ಲಿ ವಿವೇಕ ಕಳೆದುಕೊಂಡು ಬದುಕನ್ನೇ ನಿರರ್ಥಕಗೊಳಿಸಿಕೊಳ್ಳುವವರು ಅನೇಕರಿರುತ್ತಾರೆ. ಇನ್ನು ಯೌವನದ ಜೊತೆಗೆ ಹಣ, ಅಧಿಕಾರಗಳೆರಡೂ ಸಿಕ್ಕರಂತೂ ಕೇಳಬೇಕೆ? ಗಳಿಸಿದ್ದೆಲ್ಲ ಶಾಶ್ವತ ಎನ್ನುವ ಭ್ರಮೆಯಲ್ಲಿ ಧಾಷ್ಟರ್್ಯ ತೋರುವವರು ತಮಗೆ ಆಪತ್ತನ್ನು ತಂದುಕೊಳ್ಳುವುದಲ್ಲದೆ, ಇತರರಿಗೂ ಅಪಾಯಕಾರಿಯಾಗಿ ಪರಿಣಮಿಸುತ್ತಾರೆ. ವಿವೇಕ ಮಾತ್ರವೇ ಮನುಷ್ಯನ ವ್ಯಕ್ತಿತ್ವವನ್ನು ಬೆಳಗಬಲ್ಲ ದೊಡ್ಡ ಗುಣ.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)