ಒಮ್ಮೆ ಬುದ್ಧ ಕಾಡಿನಲ್ಲಿ ಶಿಷ್ಯರೊಂದಿಗೆ ಕುಳಿತು ಚರ್ಚೆ ನಡೆಸುತ್ತಿದ್ದ. ಚರ್ಚೆಯಲ್ಲಿ ಅನೇಕ ವಿಷಯಗಳು ಬರುತ್ತಿದ್ದವು. ಆಗ ಶಿಷ್ಯನೊಬ್ಬ ‘ಈ ಬೆಟ್ಟಕ್ಕಿಂತ ಶಕ್ತಿಶಾಲಿಯಾದುದು ಯಾವುದಾದರೂ ಇದೆಯೇ’ ಎಂದು ಬುದ್ಧನನ್ನು ಪ್ರಶ್ನಿಸುತ್ತಾನೆ. ಆಗ ಬುದ್ಧನು ‘ಹೌದು ಬೆಟ್ಟಕ್ಕಿಂತ ಶಕ್ತಿಶಾಲಿಯಾದುದು ಕಬ್ಬಿಣ. ಅದಕ್ಕೆ ಬೆಟ್ಟವನ್ನು ತುಂಡು ತುಂಡಾಗಿ ಮಾಡುವ ಶಕ್ತಿಯಿದೆ’ ಎನ್ನುತ್ತಾನೆ. ‘ಹಾಗಾದರೆ ಕಬ್ಬಿಣಕ್ಕಿಂತ ಶಕ್ತಿಶಾಲಿಯಾದುದು ಯಾವುದಿದೆ’ ಎಂದು ಪ್ರಶ್ನಿಸಿದಾಗ ಬುದ್ಧನು ‘ಅಗ್ನಿಯು ಕಬ್ಬಿಣಕ್ಕಿಂತಲೂ ಶಕ್ತಿಶಾಲಿಯಾದುದು. ಅದು ಕಬ್ಬಿಣವನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ’ ಎನ್ನುತ್ತಾನೆ. ಆಗ ಶಿಷ್ಯ ‘ಅಗ್ನಿಯನ್ನು ಅಡಗಿಸುವಂಥ ಶಕ್ತಿ ಯಾವುದಕ್ಕಿದೆ’ ಎಂದು ಪ್ರಶ್ನಿಸುತ್ತಾನೆ. ‘ಅಗ್ನಿಗಿಂತ ಶಕ್ತಿಶಾಲಿಯಾದುದು ನೀರು. ಅದು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವ ಸಾಮರ್ಥ್ಯವನ್ನು ಹೊಂದಿದೆ’ ಎನ್ನುತ್ತಾನೆ. ಬುದ್ಧ. ಶಿಷ್ಯನ ಜ್ಞಾನದಾಹ ಅಲ್ಲಿಗೆ ನಿಲ್ಲುವುದಿಲ್ಲ. ನೀರಿಗಿಂತಲೂ ಶಕ್ತಿಶಾಲಿಯಾದುದು ಮತ್ತಾವುದಾದರೂ ಇದೆಯಾ ಎಂದು ಪ್ರಶ್ನಿಸುತ್ತಾನೆ. ಆಗ ಬುದ್ಧನು ‘ನೀರಿಗಿಂತ ಬಲಿಷ್ಠವಾದ ಶಕ್ತಿಯೂ ಇದೆ. ಅದೇ ಗಾಳಿ. ಗಾಳಿ ತನ್ನ ಪ್ರಬಲವಾದ ಶಕ್ತಿಯಿಂದ ನೀರು ಹರಿಯುವ ದಿಕ್ಕನ್ನೇ ಬದಲಿಸಬಲ್ಲುದು’ ಎಂದ. ಶಿಷ್ಯನ ಕುತೂಹಲ ಮತ್ತೂ ಹೆಚ್ಚಿತು. ‘ಗಾಳಿಯ ಮೇಲೂ ವಿಜಯ ಸಾಧಿಸುವ ಶಕ್ತಿ ಯಾವುದಕ್ಕಿದೆ ಎಂದು ತಿಳಿಸುವಿರಾ’ ಎನ್ನುತ್ತಾನೆ. ‘ಎಲ್ಲದಕ್ಕಿಂತ ಮಿಗಿಲಾದುದು ಮಾನವನ ಮನೋಬಲ ಮತ್ತು ಸಂಕಲ್ಪ. ಸಂಕಲ್ಪಶಕ್ತಿಯಿಂದಲೇ ಮಾನವ ಎಲ್ಲದರ ಮೇಲೂ ಅಧಿಕಾರ ಚಲಾಯಿಸಬಲ್ಲನು. ಮಾನವ ತನ್ನ ಸಂಕಲ್ಪ ಶಕ್ತಿಯಿಂದ ನೀರಿನಲ್ಲಿ ನಡೆಯಬಲ್ಲ. ಆಕಾಶದಲ್ಲಿ ಹಾರಾಡಬಲ್ಲ. ಅಷ್ಟೇ ಅಲ್ಲ ಮನೋಬಲದಿಂದ ಎಂತಹ ಕಠಿಣ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಲ್ಲ’ ಎಂದು ಬುದ್ಧ ಹೇಳುತ್ತಾನೆ. ಈ ಉತ್ತರದಿಂದ ಶಿಷ್ಯನಿಗೆ ತೃಪ್ತಿಯಾಗುತ್ತದೆ. ಆತನ ಪ್ರಶ್ನೆ ಮುಗಿಯುತ್ತದೆ.
ಮಾನವನಿಗೆ ಮಾತ್ರ ಇರುವ ಅದ್ಭುತ ಶಕ್ತಿಯೇ ಮನೋಬಲ. ಅದನ್ನು ಸರಿಯಾಗಿ ಉಪಯೋಗಿಸಿದರೆ ಎಂತಹ ಸವಾಲುಗಳನ್ನಾದರೂ ಸುಲಭವಾಗಿ ಎದುರಿಸಬಹುದು. ಜಗತ್ತಿನಲ್ಲಿ ಅಂಗವೈಕಲ್ಯ ಹೊಂದಿರುವ ಬಹಳಷ್ಟು ವ್ಯಕ್ತಿಗಳು ಮನೋಬಲದಿಂದಲೇ ಅದ್ಭುತ ಸಾಧನೆಗಳನ್ನು ಮಾಡಿ ಯಶಸ್ಸನ್ನು ಪಡೆದಿದ್ದಾರೆ. ಕಣ್ಣಿಲ್ಲದ, ಕಾಲಿಲ್ಲದ, ಮಾತಿಲ್ಲದ ದೈಹಿಕ ನ್ಯೂನತೆಗಳನ್ನು ಹೊಂದಿರುವ ನೂರಾರು ವ್ಯಕ್ತಿಗಳು ಮಾಡಿರುವ ಸಾಧನೆಗಳ ಹಿಂದೆ ಇರುವುದು ಅವರ ಮನೋಬಲವೇ. ಕೇವಲ ದೈಹಿಕವಾಗಿ ಸದೃಢವಾಗಿದ್ದರೆ ಎಲ್ಲವನ್ನೂ ಎದುರಿಸಲು ಸಾಧ್ಯವಿಲ್ಲ. ಮನೋಬಲದ ಮೂಲಕ ದೃಢಸಂಕಲ್ಪವನ್ನು ಇಟ್ಟುಕೊಂಡರೆ ಬದುಕಿನ ಎಲ್ಲಾ ಸಾಧ್ಯತೆಗಳು ಈಡೇರುತ್ತವೆ. ಆದ್ದರಿಂದ ಮನೋಬಲದ ಸಾಮರ್ಥ್ಯವನ್ನು ಅರಿತಾಗ ನಮ್ಮೊಳಗಿನ ನ್ಯೂನತೆಗಳನ್ನು ಮೆಟ್ಟಿ ಜೀವನದಲ್ಲಿ ಗಟ್ಟಿ ವ್ಯಕ್ತಿತ್ವ ಪಡೆಯಲು ಸಾಧ್ಯ. ಬೇರೆ ಏನಿದ್ದರೂ ಮನೋಬಲದ ಕೊರತೆ ಇದ್ದರೆ ಜೀವನದಲ್ಲಿ ಸಾರ್ಥಕತೆ ಕಾಣುವುದು ಕಷ್ಟ.
(ಲೇಖಕರು ಕನ್ನಡ ಅಧ್ಯಾಪಕರು)