ಅಂಕಣ

ದಾರಿ ಬದಲಿಸುವ ಮುನ್ನ...: ಮನೋಲ್ಲಾಸ

Webdesk - Ravikanth
| ರೇಖಾ ಗಜಾನನ ಭಟ್ಟ

ಒಂದೂರಿನ ಬುಡದಲ್ಲಿ ದಾನಧರ್ಮಗಳಿಗೆ ಹೆಸರಾದ ಮನೆಯೊಂದಿತ್ತು. ಊರಿಗೆ ಪ್ರವೇಶ ಮಾಡಿದ ಕೂಡಲೇ ಸಿಗುವ ಮನೆಯಾದ್ದರಿಂದ ದಾರಿಹೋಕರಿಗೆ ಅದೊಂದು ಲಘು ವಿಶ್ರಾಂತಿ ತಾಣವೂ ಆಗಿತ್ತು. ಆ ಮನೆಯ ದಂಪತಿ ಸಂತೋಷದಿಂದ ಊಟೋಪಚಾರಗಳನ್ನು ಮಾಡುತ್ತಿದ್ದರು. ಒಂದು ದಿನ ಭಿಕ್ಷೆಗಾಗಿ ಬಂದ ಸಾಧುವೊಬ್ಬರು ಇವರ ಉಪಚಾರಕ್ಕೆ ಮೆಚ್ಚಿ, ತಾವು ಕಾಪಾಡಿಕೊಂಡು ಬಂದಿದ್ದ ಮೇಣದ ಪ್ರತಿಮೆಯನ್ನು ದಂಪತಿಗೆ ನೀಡಿ, ‘ಇದೊಂದು ಅಪರೂಪದ ವೈಶಿಷ್ಟ್ಯ ಹೊಂದಿದ ಪ್ರತಿಮೆ. ಬೇರೆ ಬೇರೆ ದಿಕ್ಕಿನಿಂದ ಬೆಳಕನ್ನು ಬೀರಿದರೆ ಈ ಪ್ರತಿಮೆಯು ಬೇರೆ ಬೇರೆ ಬಣ್ಣದಿಂದ ಹೊಳೆಯುತ್ತದೆ. ಜನರ ಮನ ಸೆಳೆಯುವ ಈ ಕಲಾಕೃತಿಯನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಈ ವಿಸ್ಮಯವನ್ನು ನೋಡಲು ಬರುವ ಜನರು ನೀಡುವ ಕಾಣಿಕೆಗಳಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ನಿಮ್ಮಿಂದ ಆಗಲಿ’ ಎಂದು ಹರಸಿ ಹೋದರು. ಸಾಧುವಿನ ಮಾತಿನಂತೆ ಆ ದಂಪತಿ ನಡೆದುಕೊಂಡರು. ವಿಶಿಷ್ಟ ಪ್ರತಿಮೆಯ ಬಗ್ಗೆ ಕೇಳಿ ತಿಳಿದ ಜನರು ವೀಕ್ಷಣೆಗಾಗಿ ಬರುತ್ತಿದ್ದರು. ಅವರು ನೀಡುತ್ತಿದ್ದ ಕಾಣಿಕೆಗಳಿಂದ ಇವರ ಸಂಸಾರ ಜೊತೆಗೆ ದಾನಧರ್ಮಗಳು ಸುಭಿಕ್ಷವಾಗಿ ನಡೆಯುತ್ತಿದ್ದವು. ವರ್ಷಗಳುರುಳಿದಂತೆ ವಯೋಸಹಜ ಕಾರಣಗಳಿಂದ ದಂಪತಿ ಅಸುನೀಗಿದರು. ಮಗ-ಸೊಸೆ ಸಂಸಾರದ ಜವಾಬ್ದಾರಿ ವಹಿಸಿಕೊಂಡರು. ಪ್ರತಿಮೆಯ ದರ್ಶನಕ್ಕೆ ಬಂದ ಜನರು ನೀಡುವ ಅಲ್ಪ ಹಣದಿಂದ ತೃಪ್ತನಾಗದ ಮಗ ಇನ್ನಷ್ಟು ಹಣಗಳಿಸುವ ದುರಾಸೆಗೆ ಬಿದ್ದನು. ಬೇರೆ ಬೇರೆ ಪಟ್ಟಣಗಳಲ್ಲಿ ಈ ಪ್ರತಿಮೆಯ ಪ್ರದರ್ಶನ ಆಯೋಜಿಸಿದರೆ ತುಂಬಾ ಹಣ ಗಳಿಸಬಹುದು ಎಂದು ಯೋಚಿಸಿ ಪ್ರತಿಮೆಯನ್ನು ಮನೆಯಿಂದ ಹೊರಗೆ ತಂದನು. ಆದರೆ ಊರಿಂದ ಊರಿಗೆ ತಿರುಗುವಾಗ ಬಿಸಿಲಿನ ಝುಳಕ್ಕೆ ಮೇಣದ ಪ್ರತಿಮೆ ಕರಗಿ ತನ್ನ ಆಕಾರ ಕಳೆದುಕೊಂಡಿತು. ಜೊತೆಗೆ ಸತ್ವವನ್ನು ಕಳೆದುಕೊಂಡು ಮೇಣದ ಮುದ್ದೆಯಾಯಿತು. ಅನಾಯಾಸವಾಗಿ ಬಂದಿದ್ದನ್ನು ಅತಿಯಾಸೆಗೆ ಬಿದ್ದು ಕಳೆದುಕೊಂಡೆನಲ್ಲ ಎಂದು ಮಗ ಮರುಗಬೇಕಾಯಿತು.

ಹೊಸತನ ತಪ್ಪಲ್ಲ. ಆದರೆ ಒಂದು ವಿಷಯದ ಹಿನ್ನೆಲೆಯನ್ನು ಅಲ್ಪಮಾತ್ರವೂ ತಿಳಿಯದೇ, ಗಮನಿಸದೇ ಲೋಭಕ್ಕೆ ಒಳಗಾದರೆ ನಿರಾಸೆ ತಪ್ಪಿದ್ದಲ್ಲ. ಹಿರಿಯರು ಸೋತು ಸೋತು ಕೊನೆಯಲ್ಲಿ ಹೊಸದಾರಿಯನ್ನು ಹುಡುಕಿ ಅದಕ್ಕೊಂದು ಸರಳ ನಿಯಮದ ಚೌಕಟ್ಟನ್ನು ಇರಿಸಿ ನಮಗೆ ಬಿಟ್ಟುಹೋಗಿದ್ದಾರೆ. ಪ್ರಕೃತಿ ಇರುವುದು ಮಾನವನ ಆಸೆ ತಣಿಸಲಷ್ಟೇ ಹೊರತು ಅತಿಯಾಸೆಗಲ್ಲ ಎಂಬುದು ಅನುಭವಿಕರ ಮಾತು. ನಮ್ಮ ಪ್ರಗತಿಪರ, ನವೀಕರಣದ ಮನೋಭಾವನೆಗಳು ಮೂಲತತ್ವದ ಬೇರುಗಳನ್ನೇ ಕೀಳುವಂತಿರಬಾರದು. ನಿಸರ್ಗದ ಚರಾಚರಗಳಿಗೂ ಇದೇ ತತ್ವ ಅನ್ವಯಿಸಿ ಹಿರಿಯರು ಬದುಕಿದ್ದರು. ಅಜ್ಜ ನೆಟ್ಟ ಆಲದ ಮರವೆಂದು ಜೋತು ಬೀಳಬಾರದೆಂಬ ಪರಿಜ್ಞಾನದ ಜೊತೆಗೆ ಆ ಮರವನ್ನು ಕಡಿಯದೇ ಮರದ ನೆರಳಿನಲ್ಲಿ ಬದುಕ ಅರಳಿಸುವ ಸೂಕ್ಷ್ಮವನ್ನು ನಾವು ಬೆಳೆಸಿಕೊಳ್ಳಬೇಕಲ್ಲವೇ..?

ಆಸೆಯಿಂದ ಹಸನಾಗುವುದು ಜಗವು

ಅತಿಯಾಸೆಗೆ ಅವಸಾನವೇ ಅಂತಿಮವು

ತಡೆಗಳ ಸರಿಸಿ ನಡೆಯಬೇಕು ಹಾದಿಯಲಿ

ದಾರಿ ಬದಲಿಸುವಾಗ ಎಚ್ಚರಿಕೆ ಇರಲಿ

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)