ಮನುಷ್ಯನಿಗಿರುವ ಅತ್ಯಂತ ದೊಡ್ಡ ಸೌಭಾಗ್ಯವೇ ಚಿಂತನಶೀಲತೆ ಅಥವಾ ಚಿಂತನಶಕ್ತಿ. ಚ್ಯೆತನ್ಯದ ಮೊದಲ ಮತ್ತು ಪ್ರಮುಖ ಅಭಿವ್ಯಕ್ತಿಯೇ ಈ ಚಿಂತನ ಸಾಮರ್ಥ್ಯ. ಈ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಅವನಿಗೆ ಹೆಚ್ಚು ಹೆಚ್ಚು ವಿಸõತವಾದ ಪ್ರಜ್ಞಾವಲಯಗಳು ಗೋಚರಿಸಲಾರಂಭಿಸುತ್ತವೆ ಅಥವಾ ಅವನ ಪ್ರಜ್ಞೆಯ ವ್ಯಾಪ್ತಿ ವಿಶಾಲಗೊಳ್ಳಲಾರಂಭಿಸುತ್ತದೆ. ಇದೇ ಮನುಷ್ಯ ಜೀವನದ ಗುರಿ. ಅದೇ ಸಾರ್ಥಕತೆ. ಅದನ್ನೇ ’ವಿಕಾಸ’ ಎಂದು ಈ ಕಡೆ ವೇದಕಾಲದ ಋಷಿಗಳೂ ಆ ಕಡೆ ಡಾರ್ವಿನ್ ಕರೆದಿದ್ದು. ಮನುಷ್ಯನ ಒಂದೂ ವಿನಾಯಿತಿಯಿಲ್ಲದೆ ಎಲ್ಲಾ ಕಷ್ಟಗಳಿಗೂ ಕಾರಣ ಅವನ ಪ್ರಜ್ಞಾಸ್ತರ ಅತ್ಯಂತ ಕಿರಿದಾಗಿರುವುದು. ಸಹಜವಾಗಿಯೇ ಆ ಕಷ್ಟಗಳಿಗೆ ಪರಿಹಾರವಿರುವುದೇ ಈ ಸ್ತರವನ್ನು ವಿಶಾಲಗೊಳಿಸಿಕೊಳ್ಳುವುದು. ಇದಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾದದ್ದು ಜಿಜ್ಞಾಸುತನ. ಇಂತಹ ಜಿಜ್ಞಾಸುವನ್ನೇ ಭಾರತೀಯ ಸಂಸ್ಕೃತಿ ಮುಮುಕ್ಷು ಎಂಬ ಪರಿಭಾಷೆಯಲ್ಲಿ ಸೂಚಿಸುತ್ತದೆ. ಶ್ರೀ ಶಂಕರಾಚಾರ್ಯರ ಪ್ರಕಾರ ಈ ಮುಮುಕ್ಷುತ್ವ ದೈವಾನುಗ್ರಹದಿಂದ ಮಾತ್ರವೇ ಲಭಿಸಬಹುದಾದ, ದುರ್ಲಭವಾದ ಮೂರು ಸೌಲಭ್ಯಗಳಲ್ಲಿ ಒಂದು. ಇನ್ನೆರಡು ಮನುಷ್ಯತ್ವ ಮತ್ತು ಈ ಮುಮುಕ್ಷುತ್ವವನ್ನು ತಮ್ಮ ಜೀವನ ಹಾಗೂ ಸಂದೇಶಗಳಿಂದ ಜಾಗೃತಗೊಳಿಸಬಲ್ಲ ಮಹಾಪುರುಷನ ಸಂಪರ್ಕ ಮತ್ತು ಆಶ್ರಯ. ಭಾರತ ಇತಿಹಾಸಪೂರ್ವದ ದಿನಗಳಿಂದಲೂ ಪ್ರಪಂಚಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಒಂದು ಬೃಹತ್ ಹೊತ್ತಿಗೆಯಲ್ಲಿ ಬರೆದಿಡಬಹುದಾದರೂ ಅದರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ಜಿಜ್ಞಾಸುತನ, ಅನ್ವೇಷಣಾತ್ಮಕ ಬುದ್ಧಿ(questing mind), ವಿಶ್ಲೇಷಣಾ ಸಾಮರ್ಥ್ಯ(analytical faculty) ಇವುಗಳನ್ನು ಇನ್ನಿಲ್ಲದ ರೀತಿಯಲ್ಲಿ ವ್ಯಕ್ತಿವ್ಯಕ್ತಿಯಲ್ಲೂ ಉದ್ದೀಪನಗೊಳಿಸುವ ಸಾಮರ್ಥ್ಯವಿರುವ ಸ್ಪೂರ್ತಿಯ ಸೆಲೆಗಳನ್ನು ಸಂಖ್ಯೆಯಿಲ್ಲದ ಪರಿಮಾಣದಲ್ಲಿ ನಿರ್ವಿುಸಿ ಜಗತ್ತಿಗೆ ಕೊಡುಗೆಯಾಗಿ ನೀಡಿದ್ದು. ವೇದಕಾಲದ ಋಷಿಗಳಿಂದ ಪ್ರಾರಂಭವಾದ ಈ ಪರಂಪರೆ ಇಂದಿಗೂ ಅವ್ಯಾಹತವಾಗಿ ಮುಂದುವರಿಯುತ್ತಿದೆಯಾದರೂ ಈ ಸಾಲಿನಲ್ಲಿ ಧ್ರುವ ನಕ್ಷತ್ರದಂತೆ ಹೊಳೆಯುವ ಅವಳಿ ಉದಾಹರಣೆಗಳೇ ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರು. ಇಂತಹ ಸ್ಪೂರ್ತಿಯುತವಾದ ಜೀವನ ತತ್ವವನ್ನು ಅಳವಡಿಸಿಕೊಂಡಲ್ಲಿ ಯಾವುದೇ ವ್ಯಕ್ತಿಯ ಭುವಿಯ ಮೇಲಿನ ಪಯಣ ಸ್ಪಷ್ಟವಾಗಿ ’ಮನುಷ್ಯ ನಿರ್ವಣ’ವನ್ನು ಕುರಿತ ವಿಜ್ಞಾನವೇ ಆಗಿಬಿಡುತ್ತದೆ. ಇಂತಹ ನಿರ್ವಣದ ಪ್ರಕ್ರಿಯೆಯು ವಿನಾಯಿತಿಯಿಲ್ಲದೆ ಕೆಲವು ಹಂತಗಳನ್ನು ಒಳಗೊಂಡಿರುತ್ತದೆ. ಅವು ಯಾವುವು ಎಂದರೆ 1. ಜನನ 2. ಉತ್ಥಾನ 3. ಅನುಭವದ ಕುಲುಮೆಯಲ್ಲಿ ಸಮಷ್ಟಿ ಜನ್ಯ ಪರೀಕ್ಷಣಾ ಮೌಲ್ಯಮಾಪನದಲ್ಲಿ ಹಾದುಹೋದ ಪರಿಪಕ್ವ ವಿವೇಕ ಸಂಗ್ರಹಣ, ಇವು ಮೊದಲ ಹಂತ. ಇದೊಂದು ತಪಸ್ಸೇ ಸರಿ, ಮುಂದಿನ ಹಂತವೇ ಪರಂಪರೆಯ ನಿರ್ವಣ. ಅರ್ಥಾತ್ ತಾನು ಆರ್ಜಿಸಿದ ವಿಶೇಷ ಶಕ್ತಿ, ಭವ್ಯತೆಗಳಿಗೆ ಬುನಾದಿಯಾದ ಈ ಜ್ಞಾನ ದೀವಿಗೆಯನ್ನು ನೂರಾರು ಆಸಕ್ತ ಆತ್ಮಗಳಿಗೆ ಹೊತ್ತಿಸುವ ಪ್ರಕ್ರಿಯೆ ಅರ್ಥಾತ್ ಪ್ರಸರಣ ಮತ್ತು ಆ ಕಾರ್ಯದಲ್ಲಿ ಆಂಶಿಕವಾಗಿ ಅನುಸರಿಸುವ ಮತ್ತು ಪೂರ್ಣಪ್ರಮಾಣದಲ್ಲಿ ಅನುಸರಿಸುವ ದ್ವಿವಿಧ ವರ್ಗಗಳ ನಿರ್ವಣ. ಮೊದಲನೇ ವರ್ಗವನ್ನು ಪ್ರವೃತ್ತಿ ಎಂಬ ಪದದಿಂದಲು ಮತ್ತು ಎರಡನೇ ವರ್ಗವನ್ನು ನಿವೃತ್ತಿ ಎಂಬ ಪದದಿಂದಲು ಶಾಸ್ತ್ರೀಯವಾಗಿ ಸೂಚಿಸುತ್ತದೆ ಭಾರತೀಯ ಜೀವನ ಸಂಹಿತೆ. ಇದೇ ವೇದಗಳ ಹಿಂದಿನ ಚಿಂತನಭೂಮಿಕೆ. ಎಲ್ಲ ವೇದ ಋಷಿಗಳೂ ಹೀಗೆಯೇ ಬದುಕಿದ್ದು. ಅಷ್ಟೇಕೇ! ಜಗ ಬೆಳಗುವ ವ್ಯಕ್ತಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದನ್ನೇ ಮಾಡುವನು. ಈ ಆಂಶಿಕ ಮತ್ತು ಪೂರ್ಣಪ್ರಮಾಣದ ಅನುಸರಣೆಗೆ ದೀಕ್ಷಿತನಾದ ಮತ್ತು ಬದ್ಧನಾದ ಜನರನ್ನು ನಿರ್ವಿುಸಿಕೊಂಡೇ ಅನಾದಿಕಾಲದಿಂದ ಭಾರತ ಬರುತ್ತಿದೆ. ಜಗತ್ತಿಗೆ ಇವರಿಬ್ಬರು ಮಹಾ ಶಕ್ತಿಗಳು. ಇವರನ್ನು ಬೇರೆ ಬೇರೆ ದೇಶಗಳು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತವೆ ಅಷ್ಟೇ. ಪಾರಂಪರಿಕ ಭಾಷೆಯಲ್ಲಿ ಈ ವರ್ಗಗಳನ್ನು ಬ್ರಾಹ್ಮಣ, ಕ್ಷತ್ರಿಯ ಎಂತಲೂ ಸಂನ್ಯಾಸಿ, ಗೃಹಸ್ಥ ಎಂತಲೂ ಅವರ ಸಾಮರ್ಥ್ಯಗಳನ್ನು ಬ್ರಹ್ಮತೇಜ, ಕ್ಷಾತ್ರವೀರ್ಯ ಎಂತಲೂ ಕರೆಯುತ್ತೇವೆ. ಆಧುನಿಕ ಜಗತ್ತಿನ ವಿಶಾಲ ಅರ್ಥದಲ್ಲಿ, ಆಧ್ಯಾತ್ಮಿಕ ಮತ್ತು ಲೌಕಿಕ ಎಂದು ಕರೆಯುವುದುಂಟು. ಈ ಜೀವನ ತತ್ವವನ್ನೇ ವೇದ ಎತ್ತಿ ಹಿಡಿದಿದ್ದು. ಶ್ರೀ ಶಂಕರಾಚಾರ್ಯರು ತಮ್ಮ ಭಗವದ್ಗೀತೆಯ ಭಾಷ್ಯದ ಮುನ್ನುಡಿಯಲ್ಲಿ ಇದನ್ನು ಪ್ರಸ್ತಾಪಿಸುತ್ತಾ ಪ್ರವೃತ್ತಿ ಮತ್ತು ನಿವೃತ್ತಿಗಳ ಶುದ್ಧರೂಪ ಮತ್ತು ಪೂರ್ಣರೂಪಗಳ ಸಮನ್ವಯ ಮತ್ತು ಸಮ್ಮಿಲನಗಳೇ ಜಗತ್ತಿನ ಉದ್ಧಾರಕ್ಕೆ ಕಾರಣ. ಅರ್ಥಾತ್ ರಚನಾತ್ಮಕ ಕರ್ಮಪಟುತ್ವ ಮತ್ತು ಆಳವಾದ ಮನನಶೀಲತೆಯನ್ನು ಒಳಗೊಂಡ ಸಂಶೋಧನಾ ಸಾಮರ್ಥ್ಯ ಈ ಮಹಾನ್ ಶಕ್ತಿಗಳನ್ನು ಬೆಳೆಸಿ ಪೋಷಿಸುವುದೇ ಸಮಾಜದ ಪ್ರಧಾನ ಕಾರ್ಯಕ್ರಮವಾಗಬೇಕು ಅದೇ ಧರ್ಮ. ಪ್ರವೃತ್ತಿ ಮತ್ತು ನಿವೃತ್ತಿಗಳ ಅರ್ಥವೇ ಇದು. ಅವರ ಮಾತುಗಳು ಮನನ ಯೋಗ್ಯ. ದ್ವಿವಿಧೋಹಿ ವೇದೊಕ್ತೋ ಧರ್ಮಃ| ಪ್ರವೃತ್ತಿ ಲಕ್ಷಣೋ ನಿವೃತ್ತಿ ಲಕ್ಷಣಶ್ಚ| ಜಗತಃ ಸ್ಥಿತಿ ಕಾರಣಂ| ಪ್ರಾಣಿನಾಂ ಸಾಕ್ಷಾತ್ ಅಭ್ಯುದಯ ನಿಶ್ರೇಯಸ ಹೇತುಃ ಯಸ್ಯ ಧರ್ಮಃ ಎನ್ನುವ ತಮ್ಮ ರತ್ನದಂತಹ ನುಡಿಗಳ ಮೂಲಕ ಇಡೀ ವೇದದ, ಇಡೀ ಭಗವದ್ಗೀತೆಯ, ಇಡೀ ಜೀವನ ಧರ್ಮದ ಸಾರ ಸರ್ವಸ್ವವನ್ನೇ ಹಿಡಿದಿಟ್ಟಿದ್ದಾರೆ. ಶ್ರೀರಾಮಕೃಷ್ಣರ ಜೀವನ, ಸ್ವಾಮಿ ವಿವೇಕಾನಂದರ ಜೀವನ ಈ ಮಹಾನ್, ಪರಿಪೂರ್ಣ, ಸಮಗ್ರ, ಜೀವನ ಧರ್ಮಕ್ಕೆ ಅತ್ಯಂತ ಸೂಕ್ತ ಉದಾಹರಣೆಯಾಗಿದೆ, ಕೈಗನ್ನಡಿಯಾಗಿದೆ. ರಾಮಕೃಷ್ಣರಾಗಲಿ, ವಿವೇಕಾನಂದರಾಗಲಿ ನಮ್ಮಂತೆಯೇ ಮಾನುಷ ಶರೀರ, ಮನಸ್ಸು, ಬುದ್ಧಿಗಳನ್ನೇ ಹೊತ್ತು ತಂದರಾದರೂ ಅವುಗಳ ಪೂರ್ಣ ಪ್ರಮಾಣದ ಸಾರ್ಥಕತೆಯನ್ನು ಸಾಧಿಸಿದರು. ಇದೇ ಮನುಷ್ಯ ಲೋಕದ ಮುಂದಿರುವ ಬೃಹತ್ ಸವಾಲು. ಸುಪ್ರಸಿದ್ಧ ದಲಿತ ಕವಿಯೊಬ್ಬರು ಹೇಳಿದಂತೆ ಮನುಷ್ಯ ಶರೀರವನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳಬಹುದು? ಮಾನುಷ ಶರೀರದ ಸುಪ್ತ ಮತ್ತು ವ್ಯಕ್ತ ಭವ್ಯತೆಗಳೇನು ಎಂಬುದನ್ನು ಶ್ರೀರಾಮಕೃಷ್ಣರು ತೋರಿಸಿದಂತೆ, ಸ್ಪಷ್ಟ ಪಡಿಸಿದಂತೆ ಮನುಕುಲದ ಮತ್ತಾವ ವ್ಯಕ್ತಿಯೂ ಮಾಡಿಲ್ಲ. ತಪಸ್ಸು ಎಂದರೇನೇ ಇದು. ಇದೇ ಶರೀರ ಇದೇ ಮನಸ್ಸು ಎಷ್ಟೆಷ್ಟು ವಿಸ್ಮಯಗಳನ್ನು ಸೃಷ್ಟಿಸಬಲ್ಲದು. ವಿಸ್ಮಯಗಳ ಸಾಗರ ಈ ಮನುಷ್ಯನ psycho physiological setup. ಅವರಿಬ್ಬರ ಹುಟ್ಟಿಗೂ ಒಂದು ಹಿನ್ನೆಲೆ ಇದೆ. ಅವರ ಹಿರಿಯರು ಅವರಿಗೆ ಮೌಲ್ಯ ಕಟ್ಟಲಾಗದ ರೀತಿಯಲ್ಲಿ ವಿಶೇಷ ವಂಶವಾಹಿನಿಗಳನ್ನು (genes) ನಿರ್ಮಾಣ ಮಾಡಿ ಕೊಟ್ಟರು. ಹಾಗೆಯೇ ಅವರ ವಿದ್ಯಾಭ್ಯಾಸವೂ ಇತ್ತು. ಉಪನಿಷತ್ ಪರಂಪರೆಯ ಶಿಕ್ಷಣ ಅದು. ಅದರ ಧ್ಯೇಯ ವಾಕ್ಯವೇ ಯಾವ ಒಂದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುತ್ತದೆ ಎನ್ನುವುದು. ಇದರ ಮುಂದಿನ ಸಹಜ ಅರ್ಥವೇ (natural corollary) ಯಾವ ಒಂದನ್ನು ಪಡೆದರೆ ಎಲ್ಲವನ್ನೂ ಪಡೆದಂತೆ ಆಗುತ್ತದೆ ಎನ್ನುವುದು. ಹಾಗೆಯೇ ಯಾವ ಒಂದು ನಾವು ಆದರೆ ಎಲ್ಲವನ್ನೂ ಆದಂತೆ ಆಗುತ್ತದೆ ಎಂದೂ ಸಹ. ಅರ್ಥಾತ್ ಶಿಕ್ಷಣ, ಧ್ಯೇಯವಸ್ತು ಮತ್ತು ವ್ಯಕ್ತಿತ್ವ ಆಂಶಿಕವಾಗಿ ಇರಬಾರದು, ಸೀಮಿತವಾಗಿರಬಾರದು, ಅಪೂರ್ಣವಾಗಿರಬಾರದು ಎನ್ನುವ ಉಪನಿಷತ್ತಿನ ಎಚ್ಚರಿಕೆಯನ್ನು ಪೂರ್ತಿಯಾಗಿ ಒಪ್ಪಿ ಅದರಂತೆ ನಡೆದವರು ಅವರು. ಆದರೆ ಪ್ರಸ್ತುತ ಒಂದು ಪ್ರಶ್ನೆ ನಮಗೆ ಬರುವುದು ಸಹಜ ಅದು ಆಮೇಲಿನ ಮಾತು. ಇಂತಹದ್ದೊಂದು ಸಾಧ್ಯವೇ ಎಂದರೆ ಉತ್ತರ ಸಾಧ್ಯವಷ್ಟೇ ಅಲ್ಲ ಸಾರ್ಥಕ ಬದುಕಿಗೆ ಇರುವ ದಾರಿಯಾದರೂ ಅದೆ. ಇಲ್ಲದಿದ್ದಲ್ಲಿ ಅಮೂಲ್ಯವಾದ ಮನುಷ್ಯನ ಶಕ್ತಿ ಮತ್ತು ವೇಳೆ ವ್ಯರ್ಥ. ಆಧುನಿಕ ಪ್ರಪಂಚದ ದುರವಸ್ಥೆಯೇ ಇದು! ಇಂದು ಯೋಜನಾ ಬದ್ಧ ಜೀವನ ಪದ್ಧತಿಯೇ ಇಲ್ಲ. ಇದೆಲ್ಲಾ ಬುದ್ಧಿಹೀನರಂತೆ, ವಿವೇಕಹೀನರಂತೆ ಪಾಶ್ಚಾತ್ಯರನ್ನು ಅನುಸರಿಸುತ್ತಿರುವ ಪರಿಣಾಮ. ಇದನ್ನು ಮೊಟ್ಟಮೊದಲು ಕಂಡು ಹಿಡಿದು ಭಾರತವನ್ನು ಎಚ್ಚರಿಸಿದವರೇ ಶ್ರೀರಾಮಕೃಷ್ಣರು ಮತ್ತು ವಿವೇಕಾನಂದರು. ವಿವೇಕಾನಂದರು ಸ್ಪಷ್ಟವಾಗಿ ಹೇಳಿದರು the civilizational ideas of the west must be first uprooted ಅರ್ಥಾತ್ ನಾಗರಿಕತೆಯ ಬಗ್ಗೆ ಪಾಶ್ಚಿಮಾತ್ಯರು ಇಟ್ಟುಕೊಂಡಿರುವ ದೃಷ್ಟಿ ಕೋನಗಳನ್ನು ಮೊದಲು ತಲೆ ಕೆಳಗು ಮಾಡಬೇಕು. ಇಲ್ಲಿ ಸ್ವಾಮೀಜಿಯ ಭಾಷೆಯನ್ನು ಗಮನಿಸಿ! ಪಾಶ್ಚಿಮಾತ್ಯರ ವ್ಯಾಖ್ಯೆಯ ವಿರುದ್ಧವಾಗಿ ಹೋಗಬೇಕು ಎಂದು ಹೇಳುತ್ತಾರೆ ಅವರು! ಹೌದು! ಮನುಷ್ಯನ ಆಂತರಿಕ ದಿವ್ಯತೆಯ ಅಭಿವ್ಯಕ್ತಿಯೇ ನಾಗರಿಕತೆ ಎಂದ ವ್ಯಕ್ತಿಗೆ ಹೀಗೆ ಅನಿಸುವುದು ಸಹಜವೆ. ಭಾರತೀಯ ಜೀವನ ಪದ್ಧತಿಯಲ್ಲಿ ಸತ್ಯವೂ ಪೂರ್ಣ ಅದರ ವ್ಯಕ್ತ ರೂಪವಾದ ಜಗತ್ತೂ ಪೂರ್ಣ ಅಲ್ಲಿ ಅಪೂರ್ಣವನ್ನು ಕಾಣುವ, ಪಡೆಯಲಿಚ್ಚಿಸುವ ಪ್ರಾಪಂಚಿಕತೆಗೆ ಅರ್ಥಾತ್ ದ್ರವ್ಯರಾಶಿಗೆ ಕಟ್ಟಿಹಾಕುವ ಪಾಶ್ಚಿಮಾತ್ಯ ದೃಷ್ಟಿ ವೇದಾಂತಿಗೆ ಒಪ್ಪಿಗೆ ಆಗುವುದಿಲ್ಲ. ಕಾಣುವ ಅಪೂರ್ಣ ಜಗತ್ತಿನಲ್ಲಿ ಪೂರ್ಣ ಸತ್ಯವನ್ನು ಹುಡುಕುವುದೇ ನಿಜವಾದ ವಿಜ್ಞಾನ. ಈ ಭಾವನೆಯೇ ಸಾಂಪ್ರದಾಯಿಕ ಅರ್ಥದಲ್ಲಿ ಮೊದಲ ಉಪನಿಷತ್ತು ಎಂದು ಕರೆಯಲ್ಪಟ್ಟ ಈಶಾವಾಸ್ಯ ಉಪನಿಷತ್ತಿನ ಮೊದಲ ಶ್ಲೋಕದಲ್ಲಿ ಸ್ಪಷ್ಟಗೊಂಡಿರುವುದು ಪೂರ್ಣಮದಃ ಪೂರ್ಣಮಿದಂ| ಭೂಮವನ್ನು ತಿಳಿ! ಭೂಮವನ್ನು ಪಡೆ! ಭೂಮದಲ್ಲಿ ನೆಲೆಸುವ ವ್ಯಕ್ತಿಯಾಗು! ಅಲ್ಪಕ್ಕೆ ಆಕರ್ಷಿತನಾಗಬೇಡ ಎಂದು ಹೇಳುತ್ತದೆ ಅದು! ಈ ಜೀವನ ಪದ್ಧತಿಯಲ್ಲಿ ಗುರಿ ಮುಟ್ಟದಿದ್ದರೂ ಚಿಂತೆಯಿಲ್ಲ ಸ್ವಲ್ಪ ಸಾಧನೆಯೇ ಮಹತ್ತಾದ ಪ್ರಯೋಜನವನ್ನು ಕೊಡುತ್ತದೆ ಎಂದು ಕೃಷ್ಣ ತನ್ನ ಗೀತೆಯಲ್ಲಿ ಪೋ›ತ್ಸಾಹಿಸುತ್ತಾನೆ. ಹೀಗೆ ಪೂರ್ಣ, ಭೂಮ, ಅನಂತವನ್ನು ಗುರಿಯಾಗಿಸಿಕೊಂಡಾಗ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ದುರ್ವಿಧಿ (aberrations) ಗಳಿಂದ ಪಾರಾಗಿ ವಿಶ್ವವನ್ನೇ ತಬ್ಬುವ ಹೃದಯ ನಮ್ಮದಾಗುತ್ತದೆ. ಇವನೇ ವಿಶ್ವ ಮಾನವ. ವಿಶ್ವ ಮಾನವನಲ್ಲದೆ ಯಾರೂ, ಯಾವ ವ್ಯಕ್ತಿಯೂ ವಿಶ್ವ ವಿಜೇತನಾಗಲಾರ. ಅವನೇ ಯೋಗಿ, ಅವನೇ ಪಥದರ್ಶಿ. ಅವನೇ ಸಮಾಜಕ್ಕೆ ಸಾರ್ವಕಾಲಿಕ ಆದರ್ಶ. ವೇದಗಳ, ಉಪನಿಷತ್ತುಗಳ ಮೂಲಕ ನಿರಂತರ ಭಾರತೀಯರನ್ನು ಶಿಕ್ಷಣಕ್ಕೊಳಪಡಿಸುತ್ತಿರುವ, ಮಾರ್ಗದರ್ಶನ ಮಾಡುತ್ತಿರುವ ತತ್ವವೇ ಇದು. ಇದರ ಪೂರ್ಣ ಮತ್ತು ಸಾಧ್ಯವಿದ್ದಲ್ಲಿ ಆಶಿಂಕ ಅನುಸರಣೆಯೇ ಜೀವನ. ವಿಶ್ಲೇಷಿಸಿ ನೋಡಿದರೆ ಶ್ರೀ ರಾಮಕೃಷ್ಣರು, ವಿವೇಕಾನಂದರು ಅಕ್ಷರಶಃ ಈ ’ಪೂರ್ಣ’ದ ನೆಲೆಯಲ್ಲಿ ಬದುಕಿದವರು.
ತಾತ್ಪರ್ಯವಿಷ್ಟೇ! ಭಾರತೀಯ ಪಾರಂಪರಿಕ ಜೀವನ ಪದ್ಧತಿಯಲ್ಲಿ ದೌರ್ಬಲ್ಯ ಹಾಗೂ ಸಂಕುಚಿತತೆ ಇವುಗಳಿಗೆ ಸ್ಥಾನವಿಲ್ಲ. ಚಿಂತನಸ್ತ್ರೆೊತ್ರದ ಉದ್ದಕ್ಕೂ ನಾವು ಕಾಣುವುದು ಇದನ್ನೇ. ಇದನ್ನು ಪಾಶ್ಚಾತ್ಯರು ಗಮನಿಸಿದ್ದಾರೆ. ನಾವೇ ಸೋತಿದ್ದೇವೆ. ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿರುವುದು ಪಾಶ್ಚಾತ್ಯರೇ, ಅಲ್ಲಿ ವಿಫಲವಾಗಿರುವುದು ನಾವೇ! ನಾವು ಮಾತ್ರ!! ಇದೊಂದು ದುರಂತ. ಹಲವಾರು ವಿಜ್ಞಾನಗಳನ್ನು ಮಕ್ಕಳಿಗೆ ಬೋಧಿಸುತ್ತಿರುವ ನಾವು ಜೀವನ ವಿಜ್ಞಾನ (life science)ವನ್ನು ಏಕೆ ಬೋಧಿಸುತ್ತಿಲ್ಲ. ಆದ್ದರಿಂದಲೇ ಸ್ಪೂರ್ತಿಯುತ ಜೀವನ ನಡೆಸುವಲ್ಲಿ ಸೋಲುತ್ತಿದ್ದೇವೆ. ಬೃಹತ್ ಸಾಧನೆಗಳಲ್ಲಿ ಆಸಕ್ತಿಯಿಲ್ಲದಂತಾಗಿದ್ದೇವೆ. ಜಾಗತಿಕ ಸಮೀಕ್ಷೆಯಲ್ಲಿ ಅದು, ವಿಜ್ಞಾನದ ಕ್ಷೇತ್ರವಾಗಿರಲಿ, ಆರೋಗ್ಯ, ಆಡಳಿತವೈಖರಿಯಾಗಿರಲಿ ಚರಿತ್ರಾರ್ಹತೆಯನ್ನು (historicity) ಮೆರೆಯಲು ಹೆಣಗುತ್ತಿದ್ದೇವೆ. ಗುರಿ ಮತ್ತು ದಾರಿಗಳನ್ನು ಸುಧಾರಿಸಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ! ಇದು ಶಿಕ್ಷಣ ಪದ್ಧತಿ ಮತ್ತು ಗೃಹಸಂಸ್ಕೃತಿಗಳಲ್ಲಿ ವಿಶೇಷವಾಗಿ ಪ್ರತಿಫಲಿತವಾಗಬೇಕಿದೆ ಮತ್ತೊಮ್ಮೆ ನರೇಂದ್ರನ ಜೀವನ ಇಲ್ಲಿ ಪ್ರಸ್ತುತವಾಗುತ್ತದೆ. ಅವನಿಗೆ ಅದ್ಭುತವಾದ ಸೌಭಾಗ್ಯ ಈ ಎರಡೂ ವಿಷಯಗಳಲ್ಲಿ ದೊರಕಿತ್ತು. ಅದು ಸಹಸ್ರಾರು ವರ್ಷಗಳಿಂದ ಈ ನಾಡಿನಲ್ಲಿ ಹರಿದು ಬರುತ್ತಿರುವ ಜೀವನ ವಾಹಿನಿಯೇ! ನಮಗೆ ಚಿರಪರಿಚಿತವಾದದ್ದೇ! ಆದರೆ ನಮ್ಮ ವಿಸ್ಮೃ, ಎಚ್ಚರಗೇಡಿತನ, ಸೂಕ್ಷ್ಮ ಬುದ್ಧಿಯ ಕೊರತೆ ನಮಗೆ ಅದು ಕಾಣದಂತೆ ಮಾಡುತ್ತಿದೆ. ಇಲ್ಲಿಯೇ ಇದೆ ಶಿಕ್ಷಣ ಪದ್ಧತಿಯನ್ನು ಸುಧಾರಿಸಬೇಕಾದ ಅನಿವಾರ್ಯತೆ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)