ಅಂಕಣ

ನಿಮಗೆ ತಿಳಿದಿರಲಿ... ಮೋದಿ ಸರ್ಕಾರ ಕೈಗೊಂಡದ್ದು ಬರೀ ಲಾಕ್​ಡೌನ್ ಕ್ರಮವಷ್ಟೇ ಅಲ್ಲ...

kumarvrl

ರೊನಾ ಸೋಂಕಿನ ವಿರುದ್ಧ ಭಾರತ ರಾಜಿರಹಿತ ಹೋರಾಟ ನಡೆಸುತ್ತಿದ್ದು, ಎಲ್ಲ ಜನವಿಭಾಗಗಳಿಂದ ಅಭೂತಪೂರ್ವ ಸ್ಪಂದನೆ ದೊರಕುತ್ತಿದೆ. ಜನರು ಮನೆಗಳಿಂದ ಹೊರಹೋಗದ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಹಿಂದೆ ಘೊಷಿಸಿದ್ದ ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ನಾಗರಿಕ ಮತ್ತು ತುರ್ತು ಸೇವಾ ಸಿಬ್ಬಂದಿ, ಪೊಲೀಸರು, ನಾಗರಿಕ ಸಮಾಜ ಮತ್ತಿತರರು ನಮ್ಮ ಕಾಲದ ಈ ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸಲು ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ.

ಮಾರಕ ವ್ಯಾಧಿಯ ವಿರುದ್ಧ ನಡೆಸುತ್ತಿರುವ ಸಾಮೂಹಿಕ ಸಮರ, ಈ ಸಂಕಟದಿಂದ ಆದಷ್ಟು ಬೇಗ ಹೊರಬರುವ ಆಶಾವಾದ ಸೃಷ್ಟಿಸಿದೆ. ಈ ಹೋರಾಟದಲ್ಲಿ ಮೋದಿ ಮುಂಚೂಣಿಯಲ್ಲಿ ನಿಂತು ಮಾಡಿದ ಕೆಲಸ ಅನನ್ಯವಾದುದು. ಬಿಕ್ಕಟ್ಟಿನ ಈ ಸಮಯದಲ್ಲಿ ಔಷಧಗಳು ಮತ್ತು ಇತರ ವೈದ್ಯಕೀಯ ಉಪಕರಣಗಳಿಗಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿದ್ದು, ಮೋದಿ ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಅಮೆರಿಕ, ಬ್ರಿಟನ್, ಇಟಲಿ, ಸ್ಪೇನ್, ಜರ್ಮನಿ, ಫ್ರಾನ್ಸ್ ಮುಂತಾದ ಮುಂದುವರಿದ ದೇಶಗಳು ಅಸಹಾಯಕವಾಗುವಂತೆ ಮಾಡಿದೆ.

ಅಸಾಧಾರಣ ಕೌಶಲ: ಬಿಕ್ಕಟ್ಟು ಎದುರಿಸುವಲ್ಲಿ ಮೋದಿ ಅಸಾಧಾರಣ ಕೌಶಲ ಮೆರೆದಿದ್ದಾರೆ. 21ನೇ ಶತಮಾನದ ಬಿಕ್ಕಟ್ಟನ್ನು ನಿಭಾಯಿಸಲು ಅವರು ವಿಜ್ಞಾನ ಮತ್ತು ಆಧುನಿಕ ಮಾಧ್ಯಮಗಳನ್ನೆಲ್ಲ ಬಳಸಿಕೊಂಡಿದ್ದಾರೆ. ಜನರ ಆರೋಗ್ಯ ರಕ್ಷಣೆಗೆ ಯೋಗ, ಧ್ಯಾನದಂಥ ಪ್ರಾಚೀನ ಕಲೆಗಳನ್ನು ಪಾಲಿಸುವಂತೆ ಮಾಡುವ ಮೂಲಕ ಈ ವಿಚಾರದಲ್ಲೂ ಅವರು ಜನಸಮೂಹದೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದು ವಿಶೇಷವಾಗಿದೆ. ದೇಶದೊಳಗೆ ಸಂಬಂಧಿತ ಎಲ್ಲರೊಂದಿಗೆ ಮಾತ್ರವಲ್ಲದೆ ಜಾಗತಿಕ ನಾಯಕರೊಂದಿಗೆ ಕೂಡ ಸತತ ಸಂಪರ್ಕವಿರಿಸಿಕೊಂಡು ಹಗಲಿರುಳೂ ಶ್ರಮಿಸುತ್ತಿದ್ದಾರೆ.

ಪರಿಹಾರ ಪ್ಯಾಕೇಜ್: ಕರೊನಾ ಬಿಕ್ಕಟ್ಟಿನಿಂದ ಹೆಚ್ಚು ಸಂತ್ರಸ್ತವಾಗುವ ಜನವಿಭಾಗಗಳಿಗೆ ಪರಿಹಾರ ಒದಗಿಸಲೆಂದು ಲಾಕ್​ಡೌನ್ ಘೊಷಣೆಯ ಕೇವಲ 48 ಗಂಟೆಗಳಲ್ಲಿ 1.7 ಲಕ್ಷ ರೂಪಾಯಿ ಪ್ಯಾಕೇಜನ್ನು ಮೋದಿ ಸರ್ಕಾರ ಪ್ರಕಟಿಸಿತು. ಪ್ಯಾಕೇಜ್ ಮುಖ್ಯವಾಗಿ ವಲಸೆ ಕಾರ್ವಿುಕರು, ದಿನಗೂಲಿಗಳು, ನಗರ ಹಾಗೂ ಗ್ರಾಮೀಣ ಬಡವರನ್ನು ಕೇಂದ್ರೀಕರಿಸಿತ್ತು. ಈ ಪ್ಯಾಕೇಜ್ ಆಹಾರ ಭದ್ರತೆ ಹಾಗೂ ನೇರ ನಗದು ಪರಿಹಾರದಂಥ ಕ್ರಮದ ಮಿಶ್ರಣವಾಗಿದೆ.

ವೈದ್ಯಕೀಯ ತುರ್ತು ಸ್ಥಿತಿ ನಿಭಾಯಿಸಲು ಅಗತ್ಯವಾದ ಉಪಕರಣಗಳನ್ನು ಸಜ್ಜುಗೊಳಿಸಲು ಕೂಡ ಗಮನ ಕೇಂದ್ರೀಕರಿಸಲಾಯಿತು. ಕರೊನಾ ವೈರಸ್ ರೋಗಿಗಳನ್ನು ನಿಭಾಯಿಸಲು ಜಗತ್ತಿನ ಅತ್ಯಂತ ದೊಡ್ಡ ವೈದ್ಯಕೀಯ ಸೌಲಭ್ಯಗಳಲ್ಲಿ ಒಂದನ್ನು ಭಾರತದಾದ್ಯಂತ ವ್ಯವಸ್ಥೆಗೊಳಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ವೈದ್ಯಕೀಯ ತಜ್ಞರು ಬಹಳ ವೇಗದಿಂದ ಕೆಲಸ ಮಾಡಿದರು. ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆಸ್ಪತ್ರೆಗಳ ಇತರ ಸಿಬ್ಬಂದಿಗೆ ಒಂದು ಸಮಗ್ರ ವಿಮಾ ಯೋಜನೆಯನ್ನೂ ಸರ್ಕಾರ ಪ್ರಕಟಿಸಿತು.

ಕರೊನಾ ಸವಾಲು ಎದುರಿಸಲು ವೈದ್ಯಕೀಯ ಹಾಗೂ ಆಡಳಿತಾತ್ಮಕ ವ್ಯವಸ್ಥೆ ಸಜ್ಜುಗೊಂಡ ನಂತರ ಮೋದಿ ಜನಸಮೂಹದೊಂದಿಗೆ ಸಂಪರ್ಕ ಸಾಧಿಸಲು ಮುಂದಾದರು. ಮೊದಲು ‘ಜನತಾ ಕರ್ಫ್ಯೂ’ ಹಾಗೂ ನಂತರ ರಾಷ್ಟ್ರೀಯ ಲಾಕ್​ಡೌನ್ ಘೊಷಿಸಿದರು. ಈ ಕುರಿತ ಅವರ ಮನವಿಗಳು ಜನರನ್ನು ತಲುಪಿ ಹೃತ್ಪೂರ್ವಕ ಬೆಂಬಲ ಲಭ್ಯವಾಯಿತು. ದಿಗ್ಬಂಧನದಿಂದಾಗಿ ಮನೆಯಲ್ಲೇ ಇರಬೇಕಾದ 130 ಕೋಟಿ ಜನರ ನೈತಿಕತೆ ಹಾಗೂ ವಿಶ್ವಾಸ ಬಲಪಡಿಸಲು ನಂತರದ ಹಂತದಲ್ಲಿ ಅವರು ಮುಂದಾದರು.

ದಿಗ್ಬಂಧನ ಅವಧಿಯಲ್ಲಿ, ನಮ್ಮ ಪೂರ್ವಜರ ಕೊಡುಗೆಯಾದ ಯೋಗ ಮತ್ತು ಧ್ಯಾನಗಳನ್ನು ಕಲಿಯಲು ಮೋದಿ ಪ್ರೇರಣೆ ನೀಡುತ್ತಿದ್ದಾರೆ. ಸ್ವತಃ ತಾವೇ ಪಾಲಿಸುವ ಮೂಲಕ ಮಾದರಿಯಾಗಿ ಸ್ಪೂರ್ತಿ ತುಂಬುತ್ತಿದ್ದಾರೆ.

ಜನರೊಂದಿಗೆ ಸಂವಹನ ನಡೆಸಲು ಮೋದಿ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಬಿಕ್ಕಟ್ಟು ಎದುರಿಸಲು ಸರ್ಕಾರ ಹಗಲಿರುಳೂ ಶ್ರಮಿಸುತ್ತಿದೆಯೆಂದು ಜನರಿಗೆ ಹೇಳುವುದಲ್ಲದೆ ಧನಾತ್ಮಕವಾಗಿರಿ ಎಂಬ ಸಂದೇಶವನ್ನೂ ನೀಡಿದ್ದಾರೆ. ತಮ್ಮ ದೇಶಕ್ಕಾಗಿ ಅವಿಶ್ರಾಂತವಾಗಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಹಾಯಕ ಸಿಬ್ಬಂದಿ, ವೈದ್ಯರು, ದಾದಿಯರು, ಸ್ಥಳೀಯ ಸಂಸ್ಥೆ ಸಿಬ್ಬಂದಿ ಮತ್ತು ಇತರ ಜನಸಾಮಾನ್ಯರ ಸಹಿತ ಕರೊನಾ ವಾರಿಯರ್​ಗಳೊಂದಿಗೆ ಅವರು ನಿಯಮಿತವಾಗಿ ಸಂವಾದ ನಡೆಸುತ್ತಿದ್ದಾರೆ.

ಸ್ವಯಂ-ವೈಭವೀಕರಣವಿಲ್ಲ: ಪ್ರಧಾನಿ ಮೋದಿ ಸ್ವಯಂ-ವೈಭವೀಕರಣದ ಹುಚ್ಚಿಗೆ ಒಳಗಾಗಿದ್ದಾರೆ ಎಂಬ ಟೀಕೆಗೆ ಸರಿಯಾದ ಉತ್ತರ ನೀಡುವ ಘಟನೆಯೊಂದು ಈ ನಡುವೆ ನಡೆದಿದೆ. ‘ಏಪ್ರಿಲ್ 12ರಂದು ಸಂಜೆ 5 ಗಂಟೆಗೆ ಜನರು ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಬೇಕು’ ಎಂಬ ಟ್ವೀಟ್ ಕರೆಗಳು ಸಾಲು ಸಾಲಾಗಿ ಹರಿದಾಡಿದ್ದವು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಮೋದಿ, ತಮ್ಮ ಬಗೆಗಿನ ನಿಜವಾದ ಗೌರವ ಹಾಗೂ ಪ್ರೀತಿಯಿಂದ ಅದನ್ನು ಮಾಡುವುದಾದರೆ ಸಾಂಕ್ರಾಮಿಕ ರೋಗದ ಸಮಸ್ಯೆ ಮುಗಿಯುವವರೆಗೂ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ತಮ್ಮ ಕಾಲಕ್ಕಿಂತಲೂ ಮುಂದಿರುವ ಒಬ್ಬ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಡಿಜಿಟಲ್ ಪಾವತಿ, ಸೌಲಭ್ಯದ ನೇರ ವರ್ಗಾವಣೆ, ಅತಿ ಸಣ್ಣ ಸಾಲಗಳು, ಬಡವರಿಗೆ ಗ್ಯಾಸ್ ಸಿಲಿಂಡರ್​ಗಳು- ಇವೇ ಮುಂತಾದ ಕ್ರಮಗಳ ಮೂಲಕ ನಮ್ಮ ವ್ಯವಸ್ಥೆಯಲ್ಲಿ ಮೋದಿ ಮಾಡುತ್ತಿರುವ ಮೂಲಭೂತ ಬದಲಾವಣೆಗಳು ಬಿಕ್ಕಟ್ಟಿನ ಈ ಸಮಯದಲ್ಲಿ ಒಂದು ದೊಡ್ಡ ವರವಾಗಿ ಪರಿಣಮಿಸಿದೆ.

‘ಅವಹೇಳನ, ವಿರೋಧ ಹಾಗೂ ನಂತರ ಅಂಗೀಕಾರ- ಹೀಗೆ ಯಾವುದೇ ಒಂದು ಕೆಲಸ ಮೂರು ಹಂತಗಳನ್ನು ದಾಟಬೇಕಾಗುತ್ತದೆ. ತಮ್ಮ ಕಾಲಕ್ಕಿಂತಲೂ ಮುಂದಾಲೋಚನೆ ಮಾಡುವವರನ್ನು ಜನರು ಖಂಡಿತವಾಗಿಯೂ ತಪ್ಪಾಗಿ ತಿಳಿಯುತ್ತಾರೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.

ಬಡವರಿಗೆ ನೆರವು: ಬಡವರು ಮತ್ತು ಅಗತ್ಯವಿರುವ ಜನರಿಗೆ ನೆರವಾಗಿ ಎಂದು ಮೋದಿ ಮಾಡಿದ ಭಾವಪೂರ್ಣ ಮನವಿಯ ಪರಿಣಾಮವಾಗಿ ದೊಡ್ಡ ಸಂಖ್ಯೆಯ ಜನರು ಬಡವರ ಯೋಗಕ್ಷೇಮ ನೋಡಿಕೊಳ್ಳಲು, ಅವರ ಊಟ ಮತ್ತಿತರ ಅಗತ್ಯಗಳನ್ನು ಪೂರೈಸಲು ಮುಂದಾಗಿದ್ದಾರೆ. ಕೆಲವು ಪ್ರತಿಪಕ್ಷಗಳು ಹಾಗೂ ಟೀಕಾಕಾರರ ಅನಗತ್ಯ ಟೀಕೆಗಳ ನಡುವೆಯೂ ಪಿಎಂ ಕೇರ್ಸ್ ನಿಧಿಗೆ ಉದಾರವಾಗಿ ದೇಣಿಗೆ ನೀಡಿದ್ದಾರೆ.

ಭಾರತಕ್ಕೆ ಹೋಲಿಸಿದರೆ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಭಾರಿ ಜನಸಂಖ್ಯೆ ಇಲ್ಲ. ಅಂಥ ಒತ್ತಡ ಎದುರಿಸಬೇಕಾದ್ದಿಲ್ಲ. ಆದಾಗ್ಯೂ ನಮ್ಮಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಚೀನಾ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶ ಎನ್ನುವುದನ್ನು ಒಪ್ಪಿದರೂ ಅದೊಂದು ಮಿಲಿಟರಿ ಆಳ್ವಿಕೆಯ ದೇಶ ಎನ್ನುವುದು ಗಮನಾರ್ಹ. ನಮ್ಮ ಸ್ಪಂದನಶೀಲ ಪ್ರಜಾಪ್ರಭುತ್ವವು ರಾಷ್ಟ್ರೀಯ ಲಾಕ್​ಡೌನ್​ಗೆ ಒಪ್ಪಿತೆಂದರೆ ಅದು ಪ್ರಜೆಗಳು ತಮ್ಮ ನಾಯಕನಲ್ಲಿ ಇಟ್ಟ ವಿಶ್ವಾಸದ ಪ್ರತೀಕವಾಗಿದೆ.

ಎಲ್ಲ ಭಾರತೀಯರು ಒಟ್ಟಾಗಿ ಚಪ್ಪಾಳೆ ತಟ್ಟುವುದು, ಗಂಟೆ ಬಾರಿಸುವುದು ಮತ್ತು ದೀಪ ಬೆಳಗುವುದು ಜನಸಮೂಹದ ನಡುವೆ ಬಾಂಧವ್ಯ ಬೆಳೆಸಲು ಅಗತ್ಯ ಎಂಬ ಅಂಶವನ್ನು ಮೋದಿ ವಿರೋಧಿಗಳು ಎಂದಿಗೂ ಅರ್ಥ ಮಾಡಿಕೊಳ್ಳುವುದಿಲ್ಲ. ಈ ಎಲ್ಲ ಸಾಂಕೇತಿಕ ಕ್ರಮಗಳು ಋಗ್ವೇದದ ‘ಸಂಗಚ್ಛತ್ವಂ’ (ಎಲ್ಲರೂ ಒಂದಾಗಿ ಸಾಗೋಣ) ಎಂಬ ನುಡಿಯಂತೆ ಸಾಂಕ್ರಾಮಿಕ ರೋಗ ಎದುರಿಸಲು ಸಾರ್ವಜನಿಕರ ಮನಸ್ಸುಗಳನ್ನು ಒಂದಾಗಿ ಬೆಸೆಯಲು ನೆರವಾಗುತ್ತವೆ. ನಾವು ಗೆದ್ದೇ ಗೆಲ್ಲುತ್ತೇವೆ. ಈಗಿನ ಘಟ್ಟವೂ ಅಂತ್ಯವಾಗುತ್ತದೆ. ತಾತ್ಕಾಲಿಕವಾಗಿ ಮನೆಯೊಳಗೆ ಇರಿ, ಸುರಕ್ಷಿತವಾಗಿರಿ. ಒಂದು ಮಹಾನ್ ಭವಿಷ್ಯ ನಮ್ಮ ಮುಂದಿದೆ.