| ಜಯಶ್ರೀ ಜೆ. ಅಬ್ಬಿಗೇರಿ
ಒಂದು ಮನೆಯಲ್ಲಿ ಅಣ್ಣ ತಮ್ಮಇದ್ದರು. ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ತಮ್ಮನು ವಿದ್ಯೆಯಲ್ಲಿ ಮುಂದಿದ್ದರೆ, ಅಣ್ಣ ಸ್ವಲ್ಪ ಹಿಂದಿದ್ದ. ಓದಿನಲ್ಲಿ ಹಿಂದಿದ್ದರೂ ತಮ್ಮನನ್ನು ಬಹಳ ಪ್ರೀತಿಸುತ್ತಿದ್ದ. ಆದರೆ ತಮ್ಮ ಮಾತ್ರ ಅಣ್ಣನನ್ನು ದಡ್ಡನೆಂದು ತಿರಸ್ಕರಿಸುತ್ತಿದ್ದ. ಅವನೊಂದಿಗೆ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದ. ಪುಸ್ತಕದ ಹೊರೆಯನ್ನು ಮಾತ್ರ ಅಣ್ಣನಿಗೆ ಹೊರಿಸುತ್ತಿದ್ದ. ಅವರ ತಂದೆ ತಾಯಿ ಸಹ ಜನರ ಮುಂದೆ ಸಣ್ಣ ಮಗನನ್ನು ಪರಿಚಯಿಸಿ ಹೊಗಳುತ್ತಿದ್ದರು. ಹಿರಿಯನನ್ನು ದಡ್ಡನೆಂದು ಬೈಯ್ಯುತ್ತಿದ್ದರು. ಪರೀಕ್ಷೆಯ ಫಲಿತಾಂಶ ತಿಳಿಯುವ ದಿನ ಬಂತು. ಅಂದು ತಂದೆ ಮಕ್ಕಳಿಗೆ ಫಲಿತಾಂಶ ತಿಳಿದುಕೊಂಡು ಸಿಹಿ ತರಲು ಹಣ ಕೊಟ್ಟು ಕಳುಹಿಸಿದರು. ಫಲಿತಾಂಶ ಫಲಕ ನೋಡಿದಾಗ ತಮ್ಮ ಮಾತ್ರ ಉತ್ತೀರ್ಣನಾಗಿದ್ದ. ತಕ್ಷಣ ಆತ ಮನೆಗೆ ಓಡಿದ. ಅಣ್ಣ ನಪಾಸಾಗಿದ್ದು ತಾನು ಮಾತ್ರ ಪಾಸಾಗಿದ್ದೇನೆ ಎಂದು ಹೇಳಿ ಕುಣಿದಾಡಿದ. ಅಣ್ಣ ತಾನು ನಪಾಸಾಗಿದ್ದರೂ ತಮ್ಮ ಪಾಸಾಗಿದ್ದಕ್ಕೆ ಸಿಹಿ ಹಂಚುತ್ತ ಬರುತ್ತಿದ್ದ. ‘ಸಿಹಿ ಹಂಚುತ್ತಿರುವೆಯಲ್ಲ ನೀನು ಪಾಸಾಗಿರುವಿಯೇನು?’ ಎಂದು ಆಸುಪಾಸಿನವರು ಕೇಳಿದರು. ಅಣ್ಣ ಹೇಳಿದ ‘ಇಲ, ನನ್ನ ತಮ್ಮ ಪಾಸಾಗಿದ್ದಾನೆ.’ ಈ ಉತ್ತರ ಕೇಳಿ ಜನರೆಲ್ಲ ಅಪಹಾಸ್ಯ ಮಾಡಿದರು. ಆತ ಮಾತ್ರ ಸಿಹಿ ಹಂಚುತ್ತಲೇ ಇದ್ದ.
ಜೀವನದಲ್ಲಿ ನಾವು ಯಶಸ್ವಿಯಾದಾಗ ಸಿಹಿ ಹಂಚಿ ಸಂತಸ ಪಡುವುದು ಸಹಜ. ಆದರೆ ಬೇರೆಯವರು ಯಶಸ್ವಿಯಾದಾಗ ಸಿಹಿ ಹಂಚಿ ಖುಷಿಪಡುವುದು ಬಹಳ ವಿರಳ. ಹೀಗೆ ಬೇರೆಯವರ ಗೆಲುವಿಗೆ ನಗೆ ಬೀರುವುದು, ಬೆಳೆಯುವ ಪ್ರತಿಭೆಗಳನ್ನು ಪೋ›ತ್ಸಾಹಿಸುವುದು, ಸೋತ ಮನಸ್ಸುಗಳಿಗೆ ಸಾಂತ್ವನ ಹೇಳುವುದು ಮಧುರ ಹೃದಯದ ಸಂಕೇತ. ಅದನ್ನೇ ಹೃದಯವಂತಿಕೆ ಎನ್ನುವರು. ಹೃದಯವಂತಿಕೆ ನೈಜವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಹೃದಯವಂತರ ವರ್ತನೆ, ಕೆಲಸಗಳು ಸಮಾಜದ ದಿಕ್ಕನ್ನು ಬದಲಿಸುವ ತಾಕತ್ತನ್ನು ಹೊಂದಿವೆ. ತುಳಿದು ಬದುಕುವವರ ಗುಂಪಿನಲ್ಲಿ ತಿಳಿದು ಬದುಕುವುದು ಎಲ್ಲವನ್ನೂ ಗೆದ್ದುಬಿಡುತ್ತದೆ. ಒಳ್ಳೆಯ ಮನಸ್ಸಿನಿಂದ ಮಾಡಿದ್ದು ಎಂದೂ ವ್ಯರ್ಥವಾಗುವುದಿಲ್ಲ. ಎಷ್ಟೋ ಸಲ ಕಾಯಿಲೆಗಳು ಔಷಧದಿಂದ ಕಡಿಮೆಯಾಗುವುದಿಲ್ಲ ಬದಲಾಗಿ ಪ್ರೀತಿ, ಕಾಳಜಿ ತುಂಬಿದ ಮಾತುಗಳಿಂದ ಕಡಿಮೆಯಾಗುತ್ತವೆ ಎಂಬುದು ವಿಚಿತ್ರವೆನಿಸಿದರೂ ಸತ್ಯ.
ವಸ್ತುವಾಗಲಿ, ವ್ಯಕ್ತಿಯಾಗಲಿ ನಮ್ಮೊಂದಿಗೆ ಕೊನೆಯವರೆಗೂ ಇರುವುದಿಲ್ಲ. ಆದರೆ ತೋರಿದ ಪ್ರೀತಿ ಸದಾ ಹಚ್ಚಹಸಿರಾಗಿರುತ್ತದೆ. ಇನ್ನೊಬ್ಬರು ಗೆದ್ದಾಗ ಕಂಡು ಕರುಬುವ, ಬಿದ್ದಾಗ ಖುಷಿಪಡುವ ಮನಸ್ಸು ಕಂಡಾಗ ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ’ ಎಂಬ ಕವಿತೆಯ ಸಾಲುಗಳು ನೆನಪಿಗೆ ಬಾರದೇ ಇರವು. ಅಂತೆಯೇ ನಿಜವಾದ ಹೃದಯವಂತಿಕೆಯನ್ನು ಕಂಡಾಗ ಆನಂದತುಂದಿಲರಾಗಿ ಬಾಯಿಂದ ಮಾತುಗಳೇ ಹೊರಡಲಾರವು ಎಂಬುದು ಸಹ ಅಷ್ಟೇ ಸತ್ಯ ಅಲ್ಲವೇ?
(ಲೇಖಕರು ಉಪನ್ಯಾಸಕರು)