ಅದೊಂದು ಮಾವಿನ ತೋಪು. ಪ್ರತಿವರ್ಷವೂ ಕಾಲಕಾಲಕ್ಕೆ ಮಾವಿನ ಗಿಡಗಳು ಚಿಗುರಿ, ಹೂ ಬಿಟ್ಟು ಫಲ ನೀಡುತ್ತಿದ್ದವು. ಆದರೆ, ತೋಪಿನ ನಡುಭಾಗದಲ್ಲಿದ್ದ ಕೆಲವು ಮರಗಳಿಗಿಂತ ಬಿಸಿಲಿಗೆ ಮೈಯೊಡ್ಡಿ, ಧೂಳು ಆವರಿಸಿಕೊಂಡು ತೋಪಿನ ಬೇಲಿಯ ಬಳಿಯ ಮರಗಳಲ್ಲಿ ಹೆಚ್ಚು ಹೂ ಬಿಟ್ಟು ಫಲ ಬೆಳೆಯುತ್ತಿತ್ತು. ಇದರಿಂದಾಗಿ ತೋಟದ ಮಾಲೀಕನಿಗೂ ಆ ಮರಗಳ ಮೇಲೆ ವಿಶೇಷ ಕಾಳಜಿ ಇತ್ತು. ಹೀಗಾಗಿ, ಒಂದೇ ತೋಪಿನಲ್ಲಿದ್ದರೂ ತಮಗೆ ಆ ಮರಗಳಷ್ಟು ಸಮೃದ್ಧವಾಗಿ ಫಲ ಬಿಡಲು ಆಗುತ್ತಿಲ್ಲವಲ್ಲ ಎಂದು ತೋಪಿನ ನಡುವೆ ಇರುವ ಮರಗಳಿಗೆ ಮತ್ಸರವೂ ಉಂಟಾಗುತ್ತಿತ್ತು.
ಒಂದು ದಿನ ತೋಪಿನ ನಡುಭಾಗದ ಮರಗಳು ಬೇಲಿಯ ಬದಿಯ ಮರಗಳ ಬಳಿ ಅಸಮಾಧಾನ ಹೊರಹಾಕಿದವು. ‘ನಾವು ಮಾಲೀಕ ನೀಡಿದ ಗೊಬ್ಬರ, ನೀರು ಎಲ್ಲವನ್ನೂ ಸರಿಯಾಗಿ ಬಳಸಿಕೊಂಡು, ಬಲಿಷ್ಠವಾಗಿ ಬೆಳೆದಿದ್ದರೂ ನಿಮ್ಮಷ್ಟು ಫಲ ಬೆಳೆಯಲು ಸಾಧ್ಯವಿಲ್ಲ. ಅದಲ್ಲದೆ, ನೀವು ಮಾಲೀಕನ ಮೆಚ್ಚುಗೆಗೆ ಪಾತ್ರರಾದಂತೆ ನಮಗೆ ಮೆಚ್ಚುಗೆ ಸಿಗುತ್ತಿಲ್ಲ’ ಎಂದು ಒಕ್ಕೊರಲಿನಿಂದ ಹೇಳಿದವು. ಆಗ ಬೇಲಿ ಬಳಿಯ ಹಳೆಯ ಮರವೊಂದು ಸಮಾಧಾನದಿಂದ ತಿಳಿಸಿ ಹೇಳಿತು :‘ನಾವು ಬಿಸಿಲು, ಚಳಿ, ಗಾಳಿ ಧೂಳು, ವಾಹನಗಳ ಕರ್ಕಶ ಸದ್ದು, ಕಳ್ಳಕಾರರ ಉಪಟಳ, ಪ್ರಾಣಿಗಳ ಕಾಟ ಎಲ್ಲವನ್ನೂ ಸಹಿಸಿಕೊಂಡು ಆಂತರಿಕವಾಗಿ ಬಲಿಷ್ಠವಾಗಿದ್ದೇವೆ. ಜೊತೆಗೆ ಆ ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಂಡಿದ್ದೇವೆ. ಆದ್ದರಿಂದ ಸಮೃದ್ಧ ಫಲ ನೀಡುತ್ತಿದ್ದೇವೆ. ನೀವು ಮಾಲೀಕನ ಆರೈಕೆಯ ಮಡಿಲಲ್ಲೇ ಇದ್ದು, ಯಾವುದೇ ಕಷ್ಟಗಳನ್ನು ತಡೆಯುವ ಶಕ್ತಿ ಹೊಂದಿಲ್ಲ. ಹಾಗಾಗಿ ವಾತಾವರಣದ ಸಣ್ಣಪುಟ್ಟ ಅಡೆತಡೆಗಳಿಗೂ ಬೆದರಿ ಕಡಿಮೆ ಫಲ ನೀಡುತ್ತೀರಿ’ ಎಂದಿತು. ಮಾವಿನ ತೋಪಿನ ಮರಗಳಂತೆ ನಮ್ಮ ಜೀವನದ ಪಯಣ ಸಹ ಸಾಗುತ್ತಿರುತ್ತದೆ. ಅತಿಯಾದ ಕಾಳಜಿಯಿಂದ ಬದುಕುತ್ತಾ, ಸಮಾಜದ ಆಗುಹೋಗುಗಳನ್ನು ತಮ್ಮದಲ್ಲವೆಂದೇ ತಿಳಿದು ಸಂಕುಚಿತ ಮನೋಭಾವದಿಂದ ಬದುತ್ತಿರುವವರಿಗೆ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಕೂಡ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹವರು ಬದುಕಿನಲ್ಲಿ ಜಂಜಾಟಗಳು ಎದುರಾದಾಗ ಆತ್ಮವಿಶ್ವಾಸದಿಂದ ಎದುರಿಸುವಲ್ಲಿ ವಿಫಲರಾಗುತ್ತಾರೆ. ಕುಟುಂಬದ ಸಮಸ್ಯೆಗಳ ನಡುವೆ ಬೆಳೆದು, ಸಮಾಜದ ನೋವು ನಲಿವುಗಳ ಜೊತೆಗೆ ಬೆರೆತು, ಸಮಚಿತ್ತದಿಂದ ಸಾಗುವವರು ಎಂತಹ ಕಠಿಣ ಸಮಸ್ಯೆ ಬಂದರೂ ವಿಚಲಿತರಾಗುವುದಿಲ್ಲ.
ಯಶಸ್ವಿ ವ್ಯಕ್ತಿಗಳ ಬದುಕನ್ನು ನೋಡಿ ಪರಿತಪಿಸುವ, ಮಾತ್ಸರ್ಯಪಡುವ ಬದಲಾಗಿ ನಾವೂ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಪ್ರಯತ್ನ, ಬದ್ಧತೆ, ಶ್ರದ್ಧೆ, ಆತ್ಮವಿಶ್ವಾಸ, ಛಲ ಇವುಗಳೇ ಯಶಸ್ಸಿನ ಮೆಟ್ಟಿಲಾಗಬೇಕೇ ಹೊರತು ಮತ್ಸರ, ನಕಾರಾತ್ಮಕ ಚಿಂತನೆಯಂತಹ ತಡೆಗೋಡೆಗಳನ್ನು ನಾವೇ ನಿರ್ವಿುಸಿಕೊಳ್ಳಬಾರದು. ‘ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ’ ಎಂಬ ಎ.ಪಿ.ಜೆ.ಅಬ್ದುಲ್ ಕಲಾಂರ ನುಡಿಮುತ್ತಿನಂತೆ, ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಾದರೆ, ಅಡೆತಡೆಗಳು, ನೋವು-ನಲಿವುಗಳನ್ನು ಎದುರಿಸಲೇಬೇಕು. ಆಂತರಿಕವಾಗಿ ಬಲಿಷ್ಠರಾಗಬೇಕು. ದೃಢಚಿತ್ತದಿಂದ ಅಚಲವಾಗಿ ಮುನ್ನಡೆದು ಯಶಸ್ಸೆಂಬ ಸಿಹಿಫಲ ನಮ್ಮದಾಗಿಸಿಕೊಳ್ಳೋಣ.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)