ಅಂಕಣ

ಅಹಂಕಾರ ತೊರೆಯೋಣ: ಮನೋಲ್ಲಾಸ

Ravikanth Kundapura
| ರಶ್ಮಿ ಹೆಗಡೆ, ಮುಂಬೈ

ಬಹಳ ಹಿಂದೆ ಕತ್ತಿವರಸೆಯಲ್ಲಿ ಪ್ರಾವೀಣ್ಯ ಹೊಂದಿದ್ದ ಒಬ್ಬ ಯೋಧನಿದ್ದ. ತನ್ನ ಈ ವಿಶಿಷ್ಟವಾದ ವಿದ್ಯೆಯ ಬಲದಿಂದ ರಾಜ್ಯಕ್ಕೆ ಅನೇಕ ಯುದ್ಧಗಳಲ್ಲಿ ಗೆಲುವು ತಂದುಕೊಟ್ಟಿದ್ದ. ದಿನಗಳುರುಳಿದಂತೆ ಆತನಿಗೆ ವಯಸ್ಸಾಗುತ್ತ ಬಂತು. ಯುದ್ಧ ಮಾಡುವುದನ್ನು ನಿಲ್ಲಿಸಿದ ಆತ ತನ್ನ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಕಲಿಸಲು ನಿರ್ಧರಿಸಿದ. ದೇಹಕ್ಕೆ ವಯಸ್ಸಾಗಿದ್ದರೂ ಆತನ ಮನೋಬಲ, ಆತ್ಮವಿಶ್ವಾಸ ಹಾಗೂ ಜ್ಞಾನ ಮಾತ್ರ ಕಿಂಚಿತ್ತೂ ಕುಂದಿರಲಿಲ್ಲ. ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದ ಆತನ ಗುರುಕುಲಕ್ಕೆ ದೂರದ ಊರುಗಳಿಂದ ಮಕ್ಕಳು ಯುದ್ಧವಿದ್ಯೆ ಕಲಿಯಲು ಬರತೊಡಗಿದರು.

ಅವರಲೊಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಕಲಿತು ಗುರುವಿನ ಪರಮ ಶಿಷ್ಯನೆನಿಸಿಕೊಂಡ. ಗುರು ಹೇಳಿಕೊಟ್ಟ ಪ್ರತಿಯೊಂದು ಯುದ್ಧ ತಂತ್ರವನ್ನೂ ಕೂಲಂಕಷವಾಗಿ ಅಭ್ಯಸಿಸಿ, ಸಂಪೂರ್ಣ ತರಬೇತಿ ಪಡೆದು, ಪಾರಂಗತನಾದ. ಕತ್ತಿವರಸೆಯಲ್ಲಿ ತನ್ನ ಗುರುವನ್ನೂ ಮೀರಿಸುವೆನೆಂಬ ಅಹಂಕಾರ ಆ ಶಿಷ್ಯನಲ್ಲಿ ಬೇರೂರಿತು. ತನ್ನ ಪ್ರಾವೀಣ್ಯವನ್ನು ಜನರೆದುರು ಪ್ರದರ್ಶಿಸಲು ಗುರುವಿನ ವಿರುದ್ಧವೇ ಸ್ಪರ್ಧೆ ಏರ್ಪಡಿಸಿದ. ಶಿಷ್ಯನ ದುರುದ್ದೇಶ ಅರಿತ ಗುರು ಸಂತೋಷದಿಂದ ಸ್ಪರ್ಧೆಗೆ ಒಪ್ಪಿಕೊಂಡು, ಸ್ಪರ್ಧೆಯ ಆ ದಿನಕ್ಕಾಗಿ ಕಾದುಕುಳಿತ.

ವಯಸ್ಸಾದ ಗುರುವಿನಲ್ಲಿ ದೈಹಿಕ ಶಕ್ತಿ ಕುಗ್ಗಿದ ಕಾರಣ ಪಂದ್ಯದಲ್ಲಿ ತಾನೇ ಗೆಲ್ಲುವೆನೆಂದು ಶಿಷ್ಯನು ಎಲ್ಲೆಡೆ ಪ್ರಚಾರ ಮಾಡಿಕೊಂಡ. ಕದ್ದುಮುಚ್ಚಿ ಗುರುವಿನ ಅಭ್ಯಾಸವನ್ನು ಗಮನಿಸಿ, ಆತನ ಮೇಲೆ ಒಂದು ಕಣ್ಣಿಟ್ಟ. ಒಮ್ಮೆ ಗುರುವು ಕಮ್ಮಾರನ ಬಳಿ ಹೋಗುತ್ತಿದ್ದಾಗ ಆ ಶಿಷ್ಯ ಅವನನ್ನು ಹಿಂಬಾಲಿಸಿದ. ಹದಿನೈದು ಅಡಿ ಉದ್ದದ ಖಡ್ಗಕವಚವನ್ನು ತಯಾರಿಸಲು ಗುರುವು ಕಮ್ಮಾರನಿಗೆ ಆದೇಶಿಸಿದ. ಏಟಿಗೆ ಎದುರೇಟು ಕೊಡಲೆಂದು ತಾನು ಸಹ ಇನ್ನೊಬ್ಬ ಕಮ್ಮಾರನಲ್ಲಿ ಅವನಿಗಿಂತ ಒಂದು ಹೆಚ್ಚು, ಹದಿನಾರು ಅಡಿಯ ಖಡ್ಗ ಹಾಗೂ ಕವಚವನ್ನು ತಯಾರಿಸುವಂತೆ ಆದೇಶಿಸಿದ.

ಪಂದ್ಯದ ದಿನ ಬಂದೇ ಬಿಟ್ಟಿತು. ಉದ್ದನೆಯ ಹೊಸ ಕವಚದಿಂದ ತಮ್ಮ ಹಳೆಯ ಸಣ್ಣ ಖಡ್ಗವನ್ನು ಕಣ್ಣು ಮಿಟುಕಿಸುವುದರೊಳಗೆ ಹೊರ ತೆಗೆದು ಶಿಷ್ಯನ ಕುತ್ತಿಗೆಗೆ ಹಿಡಿದರು ಗುರುಗಳು. ಹದಿನಾರಡಿಯ ಭಾರವಾದ ಖಡ್ಗವನ್ನು ಹೊರತೆಗೆಯಲು ಸಮಯ ತೆಗೆದುಕೊಂಡ ಶಿಷ್ಯ ಗುರುವಿಗೆ ಸಲೀಸಾಗಿ ಸೋತಿದ್ದ. ಗುರುಗಳು ಆ ಕವಚದಲ್ಲಿ ಅದರಷ್ಟೇ ಉದ್ದದ ಖಡ್ಗವನ್ನೂ ತರುವರೆಂದು ಭಾವಿಸಿದ್ದ ಶಿಷ್ಯ ತನ್ನ ಅಹಂಕಾರಕ್ಕೆ ತಾನೇ ಬಲಿಯಾಗಿದ್ದ. ಅನುಭವ, ಯುಕ್ತಿ ಹಾಗೂ ಮನೋಬಲದೆದುರು ದೈಹಿಕ ಬಲ, ಅಹಂಕಾರ ಹಾಗೂ ತಾರುಣ್ಯ ಸೋತಿತ್ತು.

ಜೀವನದಲ್ಲಿ ಎದುರಾಗುವ ಯುದ್ಧವೆಂಬ ಸಮಸ್ಯೆಗಳನ್ನು ಕೇವಲ ದೈಹಿಕ ಬಲ, ಹಣಬಲ ಹಾಗೂ ವಯಸ್ಸಿನ ಬಲದಿಂದ ಗೆಲ್ಲಲು ಸಾಧ್ಯವಿಲ್ಲ. ಆತ್ಮವಿಶ್ವಾಸ, ಮನೋಬಲ, ಜ್ಞಾನ ಹಾಗೂ ಜೀವನಾನುಭವಗಳು ಸಮಸ್ಯೆಗೆ ತಕ್ಕ ಪರಿಹಾರ ಒದಗಿಸುತ್ತವೆ. ನಮ್ಮನ್ನು ಮೂರ್ಖರನ್ನಾಗಿಸುವ ಹಾಗೂ ಆತ್ಮಬಲ ಕುಗ್ಗಿಸುವ ಅಹಂಕಾರವನ್ನು ತೊರೆದು ಗುರು-ಹಿರಿಯರೊಂದಿಗೆ ಸದಾ ವಿನಯಪೂರ್ವಕವಾಗಿದ್ದು, ಯಶಸ್ಸಿನತ್ತ ನಡೆಯೋಣ.

(ಲೇಖಕರು ಹವ್ಯಾಸಿ ಬರಹಗಾರರು)