ಅಂಕಣ

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಸೈಬರ್ ಅಪರಾಧ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯ

ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಅಂಕಿ-ಅಂಶದ ಪ್ರಕಾರ ದೇಶದಲ್ಲಿ ಸೈಬರ್ ಅಪರಾಧಗಳು ಶೇಕಡ 24ರಷ್ಟು ಹೆಚ್ಚಾಗಿದ್ದು, ಕಳವಳದ ವಿಚಾರ. ಸೈಬರ್ ಕ್ರೖೆಂನಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ದೇಶದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಪೊಲೀಸರು ಎಷ್ಟೇ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮುಖೇನ ಅರಿವು ಮೂಡಿಸುತ್ತಿದ್ದರೂ ಸೈಬರ್ ಅಪರಾಧ ಜಾಲಕ್ಕೆ ಸಿಕ್ಕಿಬೀಳುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಗಮನಾರ್ಹ. ಅದರಲ್ಲೂ ಸುಶಿಕ್ಷಿತರು, ಶ್ರೀಮಂತ ವ್ಯಕ್ತಿಗಳೇ ವಂಚನೆಗೆ ಒಳಗಾಗುತ್ತಿದ್ದಾರೆ. ದೇಶದಲ್ಲಿ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 65,893 ಕೇಸ್​ಗಳು ವರದಿಯಾಗಿವೆ. ಆದರೆ, ಜೈಲುಶಿಕ್ಷೆಗೆ ಗುರಿಯಾದವರ ಸಂಖ್ಯೆ ನಾಲ್ಕಂಕಿ ದಾಟಿಲ್ಲ.

ರಾಜ್ಯದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದರೂ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿರುವ ಪ್ರಮಾಣ ತುಂಬ ಕಡಿಮೆ. ಇದಕ್ಕೆ ಕಾರಣಗಳನ್ನು ಶೋಧಿಸಬೇಕಿದೆ ಮತ್ತು ನ್ಯೂನತೆಗಳನ್ನು ನಿವಾರಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಬೇಕಿದೆ. ಕೆಲ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ಸಿಕ್ಕಿಲ್ಲ. ಮತ್ತೆ ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕರೂ ಅಪರಾಧ ಸಾಬೀತುಪಡಿಸುವಂಥ ಸಾಕ್ಷ್ಯಾಧಾರವಿಲ್ಲದೆ ಬಿಡುಗಡೆಯಾಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ. ಇದಕ್ಕೆ ಕಾರಣ, ಪೊಲೀಸರಿಗೆ ತಂತ್ರಜ್ಞಾನ ನೈಪುಣ್ಯದ ಕೊರತೆ ಕಾಡುತ್ತಿದೆ. ಇಂಥ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ತಂತ್ರಜ್ಞಾನದ ಸೂಕ್ಷ್ಮಗಳು ಗೊತ್ತಿರಬೇಕು ಮತ್ತು ವಂಚಕರು ಅನುಸರಿಸುವ ತಂತ್ರಗಳ ಬಗ್ಗೆಯೂ ಅರಿವಿರಬೇಕು. ಈ ನಿಟ್ಟಿನಲ್ಲಿ ಪೊಲೀಸರಿಗೆ ಸೂಕ್ತ ತರಬೇತಿ ಮತ್ತು ಸಂಬಂಧಿತ ಠಾಣೆಗಳಿಗೆ ತಂತ್ರಜ್ಞಾನದ ಸವಲತ್ತುಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಸೈಬರ್ ಅಪರಾಧ ಪ್ರಕರಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಸಾಮಾಜಿಕ ಸ್ವಾಸ್ಥ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವ, ಅಮಾಯಕರನ್ನಷ್ಟೆ ಅಲ್ಲದೆ ಉಚ್ಚ ಶಿಕ್ಷಿತರನ್ನೂ ವಂಚಿಸುತ್ತಿರುವ ಸೈಬರ್ ಅಪರಾಧಗಳು ದಿನಗಳೆದಂತೆ ಗಂಭೀರ ಸ್ವರೂಪ ಪಡೆಯುತ್ತಿವೆ. ಅಷ್ಟೇ ಅಲ್ಲ ವ್ಯಾಪ್ತಿಯನ್ನೂ ವಿಸ್ತರಿಸಿಕೊಂಡಿವೆ. ಹೀಗಿರುವಾಗ ತನಿಖೆಯ ಜಾಡು ಕೂಡ ಬದಲಾಗಬೇಕಿದ್ದು, ಪೊಲೀಸ್ ಇಲಾಖೆಗೆ ಆಧುನಿಕತೆಯ ಸ್ಪರ್ಶ ನೀಡಬೇಕಿದೆ. ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಬೇಕಿದೆ. ದೇಶ ಹಾಗೂ ವಿದೇಶದ ಅಜ್ಞಾತ ಸ್ಥಳದಲ್ಲಿ ಕುಳಿತು ಸೈಬರ್ ಅಪರಾಧ ಎಸಗುವ ವಂಚಕರ ಹೆಡೆಮುರಿ ಕಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು, ಇದಕ್ಕಾಗಿ ವಿವಿಧ ರಾಜ್ಯಗಳ ತನಿಖಾ ತಂಡಗಳ ನಡುವೆ ಸಮನ್ವಯ ಸಾಧಿಸುವುದು ಅಗತ್ಯ.