ವಿಚ್ಛೇದಿತ ಪತಿಯ ಆಸ್ತಿಯಲ್ಲಿ ಪತ್ನಿಗೆ, ವಿಚ್ಛೇದಿತ ಪತ್ನಿಯ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕೂ ಬರುವುದಿಲ್ಲ. ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ, ಮೃತ ಹಿಂದೂ ಮಹಿಳೆಯ ಆಸ್ತಿ ಆಕೆಯ ಮೊದಲನೆಯ ದರ್ಜೆಯ ವಾರಸುದಾರರಾಗಿ ಆಕೆಯ ಮಕ್ಕಳಿಗೂ ಮತ್ತು ಪತಿಗೂ ಸಲ್ಲುತ್ತದೆ. ನಿಮ್ಮ ವಿಷಯದಲ್ಲಿ ಆಕೆಗೆ ಮಕ್ಕಳಿಲ್ಲ ಮತ್ತು ಪತಿ ಎನ್ನುವುದರ ವ್ಯಾಪ್ತಿಯಲ್ಲಿ ವಿಚ್ಛೇದಿತ ಪತಿ ಬರುವುದಿಲ್ಲ. ಹೀಗಾಗಿ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ಕಲಂ 15 (ಎ) ರಂತೆ ಪತಿ ಮಕ್ಕಳು ಇಲ್ಲದೇ ಇರುವುದರಿಂದ ಮತ್ತು ಕಲಂ 15(ಬಿ) ರಂತೆ ಪತಿಯ ವಾರಸುದಾರರು ಎನ್ನುವುದರ ಪ್ರಶ್ನೆ ಉದ್ಭವಿಸದೇ ಹೋಗುವುದರಿಂದ. ಕಲಂ 15(ಸಿ) ರಂತೆ, ಆಕೆಯ ತಂದೆ ತಾಯಿ ಇಲ್ಲದೇ ಇರುವುದರಿಂದ, ಕಲಂ 15 (ಡಿ)ರಂತೆ ಆಕೆಯ ತಂದೆಯ ವಾರಸುದಾರರಿಗೆ ಆಕೆಯ ಆಸ್ತಿ ಹೋಗಬೇಕಾಗುತ್ತದೆ. ಹೀಗಾಗಿ ನಿಮ್ಮ ವಿಚ್ಛೇದಿತ ಪತ್ನಿಯ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಗಳೂ ಆಕೆಯ ಸಹೋದರ ಸಹೋದರಿಯರಿಗೆ ಹೋಗುತ್ತದೆಯೇ ವಿನಾ ನಿಮಗೆ ಬರುವುದಿಲ್ಲ.
2) ನಮ್ಮ ತಾಯಿಯ ತಂಗಿ ನನಗೆ ವಿಲ್ ಮೂಲಕ ಎರಡು ಆಸ್ತಿಗಳನ್ನು ಕೊಟ್ಟಿದ್ದರು. ಆ ಮನೆಗಳ ಮತ್ತು ಅಂಗಡಿಗಳ ಬಾಡಿಗೆ ನಾನೇ ಪಡೆಯುತ್ತಿದ್ದೇನೆ. ಬಾಡಿಗೆ ತೆಗೆದುಕೊಳ್ಳಲು ಮತ್ತು ಕಟ್ಟಡ ನೋಡಿಕೊಳ್ಳಲು ನನ್ನ ಮಗ ಸಹಾಯ ಮಾಡುತ್ತಿದ್ದ. ಬಾಡಿಗೆ ಹಣದಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚು ಅವನೇ ಉಪಯೋಗಿಸುತ್ತಿದ್ದ. ಐದು ವರ್ಷಗಳ ಹಿಂದೆ ಅವನಿಗೆ ಮದುವೆ ಆಯಿತು. ಸೊಸೆಯ ಕಿರುಕುಳ ತಾಳಲಾಗದೇ ಇಬ್ಬರನ್ನೂ ಬೇರೆ ಮನೆಗೆ ಕಳಿಸಿದೆವು. ಭೋಗ್ಯಕ್ಕೂ ನಾನೇ ದುಡ್ಡುಕೊಟ್ಟಿದ್ದೇನೆ. ಮನೆ, ಅಂಗಡಿ ಕಟ್ಟಡಗಳ ಬಾಡಿಗೆ ನಾನೇ ವಸೂಲು ಮಾಡುತ್ತಿದ್ದೇನೆ . ಈಗ ನನ್ನ ಮಗ ಮತ್ತು ಸೊಸೆ ಬಂದು ಎಲ್ಲ ಆಸ್ತಿ ಅವರ ಹೆಸರಿಗೇ ಮಾಡಿಕೊಡು ಎಂದು ಗಲಾಟೆ ಮಾಡುತ್ತಿದ್ದಾರೆ. ನನ್ನ ಮತ್ತು ನನ್ನ ಗಂಡನ ಖರ್ಚಿಗೆ ತಿಂಗಳಿಗೆ ಐವತ್ತು ಸಾವಿರ ಕೊಡುತ್ತೇವೆ ಎನ್ನುತ್ತಿದ್ದಾರೆ. ಒಪ್ಪದಿದ್ದರೆ ಭಾಗದ ಕೇಸು ಹಾಕುತ್ತೇವೆ ಎನ್ನುತ್ತಾರೆ. ಅವರಿಗೆ ಕಾನೂನು ಪ್ರಕಾರ ಅರ್ಧ ಭಾಗ ಬರಲೇಬೇಕಂತೆ. ವರದಕ್ಷಿಣೆ ಕೇಸು ಹಾಕುತ್ತೇನೆ ಎನ್ನುತ್ತಾಳೆ. ಏನು ಮಾಡುವುದು?
ಯಾವ ತಪ್ಪನ್ನೂ ಮಾಡದ ನೀವು ಹೆದರಬೇಕಾಗಿಲ್ಲ. ನಿಮ್ಮ ಚಿಕ್ಕಮ್ಮ ವಿಲ್ ಮೂಲಕ ನಿಮಗೆ ಕೊಟ್ಟ ಆಸ್ತಿ ನಿಮ್ಮ ವೈಯಕ್ತಿಕ ಮತ್ತು ಪ್ರತ್ಯೇಕ ಆಸ್ತಿ ಆಗಿರುತ್ತದೆ. ಈ ರೀತಿಯ ಆಸ್ತಿಗೆ, ಸ್ವಯಾರ್ಜಿತ ಆಸ್ತಿಯ ಎಲ್ಲ ಗುಣಗಳೂ ಇರುತ್ತವೆ. ಹೀಗಾಗಿ ನೀವು ಈ ಆಸ್ತಿಯನ್ನು ನಿಮ್ಮ ಇಷ್ಟದಂತೆ ವಿಲೇವಾರಿ ಮಾಡಬಹುದು ಮತ್ತು ನಿಮ್ಮ ಇಷ್ಟದಂತೆ ಅನುಭವಿಸಬಹುದು. ನಿಮ್ಮ ಮಗನಿಗೆ ಈ ಆಸ್ತಿಗಳಲ್ಲಿ ಯಾವುದೇ ಹಕ್ಕೂ ಇರುವುದಿಲ್ಲ. ನಿಮ್ಮ ಮಗ ವಿಭಾಗದ ದಾವೆ ಹಾಕಿದರೆ, ಅದು ಮೊದಲ ಹಂತದಲ್ಲಿಯೇ ವಜಾ ಆಗುತ್ತದೆ . ತಾವು ಹೆದರಬೇಕಾಗಿಲ್ಲ. ಈಗಲೇ ಆಸ್ತಿಯನ್ನು ಅವರ ಕೈಗೆ ಕೊಟ್ಟರೆ ಮುಂದೆ ನೀವು ಸಾಯುವವರೆಗೆ ಅವರ ಮುಂದೆ ಕೈಚಾಚಿ ನಿಲ್ಲಲು ಸಾಧ್ಯವಾಗುವುದಿಲ್ಲ. ಆತುರದಿಂದ ಹೆದರಿಕೆಯಿಂದ ಆಸ್ತಿ ಕೊಡುವ ಅವಶ್ಯಕತೆಯಿಲ್ಲ. ಇನ್ನು ನಿಮ್ಮ ಸೊಸೆ ವರದಕ್ಷಿಣೆ ಕೇಸು ಹಾಕುವ ಬಗ್ಗೆ ನೀವು ವರದಕ್ಷಿಣೆ ಪಡೆಯದಿದ್ದರೆ ಹೆದರಬೇಕಾಗಿಲ್ಲ. ಕೇಸನ್ನು ಯಾರಾದರೂ ಹಾಕಬಹುದು. ಆದರೆ ಅದನ್ನು ನಡೆಸಿ ವರದಕ್ಷಿಣೆ ಕಿರುಕುಳ ನಿಮ್ಮಿಂದ ಆಗಿದೆ ಎನ್ನುವುದನ್ನು ಸಾಬೀತು ಪಡಿಸುವುದು ಸುಲಭವಲ್ಲ. ತಮ್ಮ ದುರಾಸೆ ಪೂರೈಸಿಕೊಳ್ಳಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಹೆದರ ಬೇಡಿ. ಕಿರುಕುಳ ಮುಂದುವರೆದರೆ ನೀವೇ ಪೋಲೀಸು ಕಂಪ್ಲೇಂಟು ಕೊಡಿ.
3) ನಮ್ಮ ತಂದೆ ಮೂರು ವರ್ಷಗಳ ಹಿಂದೆ ಜಮೀನನನ್ನು ಖರೀದಿ ಮಾಡಿದರು. ಕ್ರಯ ಮಾಡುವವರು ಆ ಜಮೀನಿನ ಮೇಲೆ ಅಣ್ಣ ತಮ್ಮಂದಿರ ವಿಭಾಗದ ಕೇಸು ಇರುವುದನ್ನು ನಮಗೆ ಹೇಳಿರಲಿಲ್ಲ. ನಾವು ಪೂರ್ತಿ ಹಣ ಕೊಟ್ಟು ಕೊಂಡಿದ್ದೇವೆ. ಕ್ರಯ ಮಾಡುವಾಗ ಇಂಜಂಕ್ಷನ್ ಆರ್ಡರ ಸಹ ಇರಲಿಲ್ಲ. ನಾವು ಕ್ರಯಕ್ಕೆ ಪಡೆದು ಖಾತೆ ನಮ್ಮ ತಂದೆ ಹೆಸರಿಗೆ ಬದಲಾದ ಮೇಲೆ, ಕ್ರಯಕ್ಕೆ ಮಾರಿದವರ ಅಣ್ಣ ತಮ್ಮಂದಿರು ನಮ್ಮ ತಂದೆಯನ್ನೂ ದಾವೆಯಲ್ಲ ಸೇರಿಸಿದ್ದಾರೆ. ಈಗ ನಮ್ಮ ತಂದೆ ಯಾರಿಗೂ ಮಾರಾಟ ಮಾಡಬಾರದೆಂದು ತಡೆ ಆಜ್ಞೆ ಇದೆ. ಕೇಸು ಬಾಕಿ ಇದ್ದಾಗ ನಾವು ಕೊಂಡಿದ್ದರಿಂದ ನಮಗೆ ಯಾವ ಹಕ್ಕೂ ಬರುವುದಿಲ್ಲವೇ? ಈಗ ನಾವೂ ಯಾರಿಗಾದರೂ ಮಾರಾಟ ಮಾಡಬಹುದೇ? ನಮ್ಮ ದುಡ್ಡೆಲ್ಲಾ ಹೋದಂತೆಯೇ ಆದರೆ ನಾವು ನೆಲ ಕಚ್ಚಬೇಕಾಗುತ್ತದೆ. ನಮಗೆ ಸಹಾಯ ಮಾಡಿ.
ನ್ಯಾಯಾಲಯದಲ್ಲಿ ನಿಮ್ಮ ತಂದೆ ಆಸ್ತಿಯನ್ನು ಮಾರಾಟ ಮಾಡಬಾರದೆನ್ನುವ ತಡೆ ಆಜ್ಞೆ ಇರುವಾಗ , ನಿಮ್ಮ ತಂದೆ ಮಾರಾಟ ಮಾಡುವುದು ತಪ್ಪಾಗುತ್ತದೆ. ಅದಕ್ಕೆ ಕೆಲವೊಮ್ಮೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ಹೀಗಾಗಿ ನಿಮ್ಮ ಈಗ ಆಸ್ತಿಯನ್ನು ಮಾರಾಟ ಮಾಡುವುದರಲ್ಲಿ ಅರ್ಥವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಆಸ್ತಿಗಳನ್ನು ಮಾರುವುದನ್ನು ಮತ್ತು ಕೊಳ್ಳುವುದನ್ನು ತಪ್ಪಿಸಿದರೆ ಒಳ್ಳೆಯದು. ಆದರೆ, ಪ್ರಕರಣ ಬಾಕಿ ಇರುವಾಗ ಆಸ್ತಿ ಮಾರಾಟ ಮಾಡಲೇ ಬಾರದು ಎಂದು ಕಾನೂನಿನಲ್ಲಿ ಇಲ್ಲ. ತಡೆ ಆಜ್ಞೆ ಇಲ್ಲದೇ ಹೋದರೆ ಮಾರಲೂ ಬಹುದು. ಆದರೆ , ಪ್ರಕರಣ ಬಾಕಿ ಇರುವಾಗ ಯಾವುದಾದರೂ ಆಸ್ತಿಯನ್ನು ಕೊಂಡುಕೊಂಡರೆ, ಪ್ರಕರಣದಲ್ಲಿ ಆಗುವ ತೀರ್ಪಿಗೆ ಕ್ರಯದ ಸಿಂಧುತ್ವ ಒಳಪಟ್ಟಿರುತ್ತದೆ. ಟ್ರಾನ್ಸ್ಪರ್ ಆಫ್ ಪ್ರಾಪರ್ಟಿ ಕಾಯ್ದೆಯ ಸೆಕ್ಷನ್ 52 ಈ ಬಗ್ಗೆ ತಿಳಿಸುತ್ತದೆ.
ನಿಮ್ಮ ವಿಷಯದಲ್ಲಿ ನಿಮ್ಮ ತಂದೆಗೆ ದಾವೆ ಬಾಕಿ ಇರುವ ವಿಷಯವೇ ತಿಳಿದಿರಲಿಲ್ಲ ಎನ್ನುವುದು ಒಂದು ಅಂಶ. ನಿಮ್ಮ ಕ್ರಯದಾರರು ಮತ್ತು ಅವರ ಕುಟುಂಬದವರ ಮಧ್ಯೆ ಇರುವ ವಿಭಾಗದ ದಾವೆ ತೀರ್ಮಾನ ಆದಾಗ, ನಿಮಗೆ ಮಾರಿದ ಆಸ್ತಿ ನಿಮಗೆ ಕ್ರಯಮಾಡಿದವರ ಸ್ವಯಾರ್ಜಿತ ಆಸ್ತಿ ಎಂದಾದರೆ ನಿಮ್ಮ ತಂದೆಗೆ ಆಗಿರುವ ಕ್ರಯ ಊರ್ಜಿತ ಆಗುತ್ತದೆ. ಹಾಗಲ್ಲದೆ ಅದೂ ಸಹ ಒಟ್ಟು ಕುಟುಂಬದ ಆಸ್ತಿ ಎಂದಾದರೆ, ಆಗ ದಾವೆ ಡಿಕ್ರೀ ಆದ ಮೇಲೆ ಎಫ್.ಡಿ.ಪಿಯಲ್ಲಿ ನಿಮ್ಮ ತಂದೆ ಅರ್ಜಿ ಸಲ್ಲಿಸ ಬಹುದು. ನೀವು ಕೊಂಡ ಆಸ್ತಿಯನ್ನು ನಿಮ್ಮ ಕ್ರಯದಾರರ ಭಾಗಕ್ಕೆ ತೆಗೆದು, ಅದನ್ನು ತದನಂತರ ನಿಮಗೆ ಸರಿಹೊಂದಿಸುವಂತೆ ಕೇಳಿಕೊಳ್ಳಬಹುದು. ಒಟ್ಟಿನಲ್ಲಿ ನಿಮ್ಮ ತಂದೆಯ ಕ್ರಯಪತ್ರದ ಸಿಂಧುತ್ವ ಹಾಲೀ ಬಾಕೀ ಇರುವ ವಿಭಾಗದ ಕೇಸಿನ ತೀರ್ಪಿನ ಮೇಲೆ ಆಧಾರ ಪಟ್ಟಿರುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟಿನ ಮಧುಕರ್ ನಿವೃತ್ತಿ ಜಗ್ತಾಪ್ ಮತ್ತು ಇತರರು ವಿರುದ್ಧ ಪ್ರಮೀಳಾ ಬಾಯಿ ಚಂದೂಲಾಲ್ ಪರಂದೇಕರ್ ಮತ್ತು ಇತರರು ಎ.ಐ.ಆರ್. 2019 ಎಸ್.ಸಿ. 4252 ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ.