ಅಂಕಣ

ಲಾ & ಆರ್ಡರ್​: ಕರೊನಾ ಕಾಲದಲ್ಲಿ ಸಾಮಾಜಿಕ ಕರಾರಿನ ಮಹತ್ವ

ಕರೊನಾ ವೈರಸ್ ವಿಶ್ವಾದ್ಯಂತ ತನ್ನ ಕಬಂಧಬಾಹುವನ್ನು ಚಾಚಿದೆ ಮತ್ತು ಎಲ್ಲ ರಂಗಗಳ ಮೇಲೆ ದುಷ್ಪರಿಣಾಮ ಬೀರಿದೆ. ಅದೇ ಸಂದರ್ಭದಲ್ಲಿ, ಕರೊನಾ ಸಾಂಕ್ರಾಮಿಕತೆಯು ಸರ್ಕಾರ ರಚನೆ ಹಾಗೂ ಕಾನೂನು ರಚನೆಯ ಅತಿ ಮೂಲಭೂತ ಚಿಂತನೆಗಳ ಬಗ್ಗೆಯೂ ನಾವು ಪ್ರಶ್ನಿಸುವಂತೆ ಹಾಗೂ ಮರುಚಿಂತನೆ ಮಾಡುವಂತೆ ಮಾಡಿದೆ ಎಂದರೆ ಅಚ್ಚರಿಯಾಗುತ್ತದೆಯೆ? ಅದುವೇ ಸಾಮಾಜಿಕ ಕರಾರು ಸಿದ್ಧಾಂತ. ಉಳಿದ ಹಕ್ಕುಗಳ ಅಥವಾ ರಕ್ಷಣೆ ಅಥವಾ ಸಾಮಾಜಿಕ ಸುವ್ಯವಸ್ಥೆಯ ನಿರ್ವಹಣೆಗಾಗಿ, ಮಾನವರು ತಮ್ಮ ಕೆಲವು ಸ್ವಾತಂತ್ರ್ಯಗಳನ್ನು ಪ್ರತ್ಯಕ್ಷವಾಗಿಯೋ-ಪರೋಕ್ಷವಾಗಿಯೋ ಅಧಿಕಾರ ವರ್ಗಕ್ಕೆ (ನಮ್ಮ ದೇಶದ ಸಂದರ್ಭದಲ್ಲಿ ಭಾರತ ಸರ್ಕಾರಕ್ಕೆ) ಶರಣಾಗತಿ ಮಾಡಲು ಒಪು್ಪವುದೇ ಈ ಸಾಮಾಜಿಕ ಕರಾರು ಸಿದ್ಧಾಂತದ ಮೂಲಭೂತ ಪರಿಕಲ್ಪನೆ.

ಒಂದು ಸಮಾಜವಾಗಿ, ನಮ್ಮನ್ನಾಳುವ ಸಂವಿಧಾನವೊಂದನ್ನು ಹೊಂದಲು ಮತ್ತು ಆ ನಿಯಮಗಳನ್ನು ಜಾರಿ ಮಾಡುವ ಸರ್ಕಾರವನ್ನು ಹೊಂದಲು ನಾವು ಸ್ವಯಂಪ್ರೇರಿತರಾಗಿ ಒಪು್ಪತ್ತೇವೆ. ನಮ್ಮ ಆಶಯಗಳನ್ನು ಸಾಧಿಸಿಕೊಳ್ಳುವುದಕ್ಕೆ ಅನುವಾಗಲೆಂಬುದು ಈ ಶರಣಾಗತಿಯ ಹಿಂದಿನ ಉದ್ದೇಶ. ಇಂಥ ವ್ಯವಸ್ಥೆ ಇಲ್ಲದಿದ್ದಲ್ಲಿ ಏನಾಗುತ್ತದೆ? ಒಂದೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ಇರಲು ನಾವು ಅವಕಾಶ ನೀಡುವುದಿಲ್ಲ ಎಂದು ಕಲ್ಪಿಸಿಕೊಳ್ಳೋಣ. ಆಗ ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ. ಹಾಗೂ ನಮ್ಮ ನಿರೀಕ್ಷೆಗಳು ಮತ್ತು ಬಯಕೆಗಳ ಮೇಲೆ ಅದು ಪರಿಣಾಮ ಬೀರುತ್ತದೆ.

ಉದಾಹರಣೆಗೆ, ಕಳ್ಳತನ ನಿಷೇಧಿಸುವ ಕಾನೂನು ಇಲ್ಲದಿದ್ದರೆ ಏನಾಗಬಹುದು? ಪ್ರತಿಯೊಬ್ಬರೂ ಪರಸ್ಪರರ ವಸ್ತುಗಳನ್ನು ಕದಿಯಬಹುದು. ಮಾಲಿಕತ್ವದ ಪರಿಕಲ್ಪನೆಯೇ ಆಗ ಇಲ್ಲವಾಗುತ್ತದೆ. ಹೀಗಾಗಿ, ಪರಸ್ಪರರೊಂದಿಗೆ ಆಳವಾದ ಮತ್ತು ಅಧಿಕ ಪರಿಣಾಮಕಾರಿಯಾದ ಒಪ್ಪಂದ ಹೊಂದುವುದೇ ಮಾನವ ನಾಗರಿಕತೆಯ ಯಶಸ್ಸಿಗೆ ಭಾಗಶಃ ಕಾರಣವಾಗಿದೆ ಎಂದು ಹೇಳಬಹುದು. ಭಾರತದಲ್ಲಿ ನಾವು ಪರಸ್ಪರ ಸಾಮಾಜಿಕ ಕರಾರು ಹೊಂದಿದ್ದು ನಮ್ಮನ್ನು ನಿಯಂತ್ರಿಸುವ ಸರ್ಕಾರದ ಆಯ್ಕೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅಳವಡಿಸಿಕೊಂಡಿದ್ದೇವೆ. ನಿಯಂತ್ರಣದ ವಿಧಾನದಲ್ಲಿ ಅಲ್ಪಸ್ವಲ್ಪ ಏರುಪೇರು ಇರಬಹುದು. ಆದರೆ ಮೂಲ ನೀತಿಗಳನ್ನು ಸಂವಿಧಾನದಲ್ಲಿ ಪ್ರಸ್ತುತಪಡಿಸಲಾಗಿದೆ. ಸರ್ಕಾರದ ಅಸ್ತಿತ್ವಕ್ಕೆ ನಾವು ಒಪ್ಪಿಗೆ ನೀಡುವುದರಿಂದ ನಮ್ಮ ಕಲ್ಯಾಣ ಹಾಗೂ ಸುರಕ್ಷತೆಯನ್ನು ಖಾತರಿಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ.

ಪ್ರಸ್ತುತ ಜಾಗತಿಕ ಕರೊನಾ ಸಾಂಕ್ರಾಮಿಕತೆಯು ಸಾಮಾಜಿಕ ಒಪ್ಪಂದದಡಿ ಸರ್ಕಾರದ ಕರ್ತವ್ಯಗಳೇನು ಎಂಬುದರ ಮೂಲ ಪರಿಕಲ್ಪನೆಯನ್ನು ಮತ್ತೆ ಮನನ ಮಾಡಿಕೊಳ್ಳುವಂತೆ ಮಾಡಿದೆ ಎಂಬುದು ನನ್ನ ಅನಿಸಿಕೆ. ರೋಗ ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ-ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದೇ ಮೊದಲಾದ ವಿಚಾರಗಳಲ್ಲಿ ಸರ್ಕಾರ ಕೈಗೊಂಡ ತೀರ್ವನಗಳು ಈ ಕರಾರಿಗೆ ಅನುಗುಣವಾಗಿಯೇ ಇವೆ.

ಕೋವಿಡ್-19, ಎಲ್ಲ ದೇಶಗಳಲ್ಲಿ ಸರ್ಕಾರಗಳು ಸಿದ್ಧಾಂತಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವ ಬದಲಾಗಿ ಪ್ರಬಲ ಕಾರಣಗಳ ಮೇಲೆ ನಿರ್ಧಾರ ಕೈಗೊಳ್ಳುವುದನ್ನು ನಿರೀಕ್ಷಿಸುವಂತೆ ಮಾಡಿದೆ. ಜನರಲ್ಲಿ ಅತಿ ಬಲಪಂಥೀಯತೆ ಅಥವಾ ಅತಿ ಎಡಪಂಥೀಯ ರಾಜಕೀಯ ಒಲವು ವ್ಯಕ್ತವಾಗುತ್ತಿರುವುದು ಕಳೆದ ಕೆಲ ವರ್ಷಗಳಿಂದ ಕಾಣುತ್ತಿರುವ ವಿದ್ಯಮಾನವಾಗಿರುವ ಹಿನ್ನೆಲೆಯಲ್ಲಿ ಈ ಮಾತು. ಇದನ್ನೂ ಓದಿ: ಮೀನುಗಾರರ ಹತ್ಯೆ ಪ್ರಕರಣ ಕುರಿತು…

ಹಿಂದೆಲ್ಲ ಸರ್ಕಾರಗಳು ವಸ್ತುಸ್ಥಿತಿಗಿಂತ ಸೈದ್ಧಾಂತಿಕ ನೆಲೆ ಮೇಲೆ ಕೈಗೊಂಡ ಕ್ರಮಗಳಿಗೆ ಫಲ ಸಿಗುತ್ತಿತ್ತು. ಅಧಿಕ ಪ್ರಮಾಣದ ಮತದಾರರಿರುವ ಕಡೆ ಅಲ್ಲಿನ ಸರ್ಕಾರಗಳು ಆ ಮತಗಳ ಮೇಲೆ ಕಣ್ಣಿಟ್ಟು ವಲಸೆ, ಅಲ್ಪಸಂಖ್ಯಾತರ ಹಕ್ಕುಗಳು, ಭಾಷೆ ಹೇರಿಕೆ ಮುಂತಾದ ಸಿದ್ಧಾಂತ ಆಧಾರಿತ ವಿಚಾರಗಳ ಮೇಲೆ ನಿರ್ಧಾರ ಕೈಗೊಂಡಲ್ಲಿ, ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಹಿನ್ನಡೆಯಾದರೂ ಜನ ಅದನ್ನು ಕಡೆಗಣಿಸಲು ಸಿದ್ಧರಿರುತ್ತಿದ್ದರು. ಇಂಥ ಸಂದರ್ಭದಲ್ಲಿ, ಪ್ರಜೆಗಳು ಮತ್ತು ಪ್ರಭುತ್ವದ ನಡುವಣ ಸಾಮಾಜಿಕ ಕರಾರು, ನ್ಯಾಯಸಮ್ಮತತೆ ಮತ್ತು ಅರ್ಹತೆಯ ಬದಲು ರಾಜಕೀಯ ವಾದಕ್ಕೆ ಹೆಚ್ಚಾಗಿ ಆದ್ಯತೆ ನೀಡುತ್ತದೆ. ಆದರೆ, ಕೋವಿಡ್-19, ವಿಶ್ವಾಸದ ಮೇಲೆ ಹೆಚ್ಚಿನ ಮಹತ್ವ ನೀಡುವಂತೆ ಮಾಡಿದೆ. ಪರಿಣಾಮಕಾರಿ ಆಡಳಿತಕ್ಕೆ ಹಾಗೂ ಆರೋಗ್ಯ ಮತ್ತು ಸುರಕ್ಷತೆಗೆ ಒತ್ತು ನೀಡಿದೆ.

ತುಷ್ಟೀಕರಣ ರಾಜಕಾರಣಕ್ಕೆ ಎಳ್ಳು-ನೀರು: ಜನರ ರಕ್ಷಣೆಗಾಗಿ ಸರ್ಕಾರ ಕೆಲಸ ಮಾಡಬೇಕೆಂಬುದು ಸಾಮಾಜಿಕ ಕರಾರಿನ ಮೂಲ ಎಂಬುದನ್ನು ಜನರು ಮನವರಿಕೆ ಮಾಡಿಕೊಳ್ಳತೊಡಗಿರುವುದರಿಂದ ತುಷ್ಟೀಕರಣ ರಾಜಕಾರಣದ ಗ್ರಹಿಕೆ ಬದಲಾಗುತ್ತಿದೆ. ಆದ್ದರಿಂದಲೇ, ಪ್ರಸ್ತುತ ಸಾಂಕ್ರಾಮಿಕತೆ ಕಾಲದಲ್ಲಿ ಅಸ್ತಿತ್ವದಲ್ಲಿರುವ ಸಾಮಾಜಿಕ ಕರಾರು, ಇಂಥ ಸನ್ನಿವೇಶಗಳನ್ನು ನಿರ್ವಹಿಸುವಲ್ಲಿ ಸರ್ಕಾರದ ಕರ್ತವ್ಯವೇನು ಎಂಬುದನ್ನು ತೋರಿಸಿಕೊಟ್ಟಿದೆ. ಈ ಬಿಕ್ಕಟ್ಟನ್ನು ನಿರ್ವಹಿಸಲು ಸರ್ಕಾರ ವಿಫಲವಾದರೆ ಸಾಮಾಜಿಕ ಕರಾರನ್ನು ವ್ಯಕ್ತಿಗಳು ಉಲ್ಲಂಘಿಸುವ ಪರಿಸ್ಥಿತಿ ಉಂಟಾಗುತ್ತದೆ.

ಇದಕ್ಕೆ ಇತ್ತೀಚಿನ ದೃಷ್ಟಾಂತವೊಂದನ್ನು ನೀಡಬಹುದು. ಸರ್ಕಾರದ ನಿರಾಸಕ್ತಿಯನ್ನು ವಿರೋಧಿಸಿ ವಿವಿಧ ಕ್ಷೇತ್ರಗಳ ಜನರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ‘ಕಪ್ಪುವರ್ಣೀಯರ ಜೀವಕ್ಕೂ ಬೆಲೆಯಿದೆ’ ಎಂಬ ಆಂದೋಲನ ನಡೆಯುತ್ತಿದೆ. ಆಧುನಿಕ ಕಾಲದ ಜನಾಂಗೀಯ ಭೇದವನ್ನು ಮೂಲೋತ್ಪಾಟನೆ ಮಾಡಲು ಅಮೆರಿಕ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳದ ಕಾರಣ ಈ ರೀತಿಯ ಪ್ರತಿಭಟನೆಗಳು ನಡೆಯಬಹುದೆಂದು ಮೊದಲೇ ಭಾವಿಸಲಾಗಿತ್ತು. ತೀಕ್ಷ್ಣ ಹೋರಾಟದ ಮೂಲಕ ಕೆಲವು ನಾಗರಿಕರು ಸಾಮಾಜಿಕ ಕರಾರನ್ನು ಮುರಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್​ಗೆ ವಿಷ ನೀಡಲಾಗಿತ್ತು! ಅಪ್ರತಿಮ ಗಾಯಕಿ ಜೀವನದ ಘೋರ ಕಹಿಸತ್ಯ…

ಅದೇ ರೀತಿ, ಸಾಂಕ್ರಾಮಿಕತೆಯನ್ನು ಕೆಟ್ಟದಾಗಿ ನಿಭಾಯಿಸಿದರೆ ನಿರಾಸೆಗೊಂಡ ಜನಸಮೂಹ ಸಾಮಾಜಿಕ ಒಪ್ಪಂದವನ್ನು ಮುರಿದು ಅನೂಹ್ಯ ರೀತಿಯಲ್ಲಿ ಪ್ರತಿಕ್ರಿಯಿಸಬಹುದು. ಒಟ್ಟಿನಲ್ಲಿ, ಆಧುನಿಕ ಯುಗದ ಸಮಸ್ಯೆಗಳು ಸಾಮಾಜಿಕ ಕರಾರು ತತ್ತ್ವದ ಮೂಲಭೂತ ಸಿದ್ಧಾಂತಗಳಿಗೆ ಮತ್ತೆ ಆದ್ಯತೆ ನೀಡುವಂತೆ ಮಾಡಿವೆ ಎನ್ನಬಹುದು.

ಇನ್ನೊಂದು ಆಯಾಮ: ಈ ಸಿದ್ಧಾಂತವನ್ನು ಇನ್ನೊಂದು ಆಯಾಮದಿಂದಲೂ ವಿಶ್ಲೇಷಿಸಬಹುದಾಗಿದೆ. ಸರ್ಕಾರದ ಮೇಲೆ ಮಾತ್ರವೇ ಹೊಣೆ ಹೇರಬಾರದು. ಈ ಕರಾರು ಯೋಜನೆಯ ಭಾಗವಾಗಿರುವ ಪ್ರತಿಯೊಬ್ಬ ಪ್ರಜೆ ಕೂಡ ಹೊಣೆಗಾರಿಕೆ ಹೊಂದಿರಬೇಕು. ಕೋವಿಡ್ ಸಾಂಕ್ರಾಮಿಕತೆಯು ವೈಯಕ್ತಿಕ ಮಟ್ಟದಲ್ಲಿ ಆರೋಗ್ಯದ ನಿಗಾ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ತೋರಿಸಿಕೊಟ್ಟಿದೆ. ಆ ಮೂಲಕ ಸಮುದಾಯವನ್ನೂ ರಕ್ಷಿಸಬಹುದು ಎನ್ನುವುದು ಅದರ ಅರ್ಥವಾಗಿದೆ.

ಸರ್ಕಾರ ಹಾಗೂ ಜನರನ್ನು ಶಿಸ್ತಿಗೆ ಒಳಪಡಿಸಲು ಹಾಗೂ ಸಾಮಾಜಿಕ ಒಪ್ಪಂದವನ್ನು ಪ್ರಬಲವಾಗಿ ಅನುಷ್ಠಾನಗೊಳಿಸುವುದನ್ನು ಖಾತರಿಪಡಿಸಲು ಕಾನೂನು ಒಂದು ಮಹತ್ವದ ಮಾರ್ಗವಾಗಿದೆ. ಇಂಥ ಸನ್ನಿವೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳಿಗೆ ಮಾರ್ಗದರ್ಶಿ ಸೂತ್ರ ರೂಪಿಸಲು ಬಲವಾದ ಶಾಸನಾತ್ಮಕ ಚೌಕಟ್ಟು ಇದ್ದರೆ, ಪ್ರಸಕ್ತ ಸಾಮಾಜಿಕ ಕರಾರಿನ ಪರಿಣಾಮಕಾರಿತ್ವದ ಬಗ್ಗೆ ಜನರು ಹೆಚ್ಚು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ.

ಸದ್ಯ ನಮ್ಮಲ್ಲಿ 1897ರ ಸಾಂಕ್ರಾಮಿಕ ರೋಗಗಳ ಕಾನೂನು ಇದ್ದು ಅದು ಸವಕಲಾಗಿದೆ. ಪ್ರಸ್ತುತ ಸಾಂಕ್ರಾಮಿಕತೆಯ ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಅದಕ್ಕಿಲ್ಲ. 1860ರ ಭಾರತೀಯ ದಂಡಸಂಹಿತೆ (ಐಪಿಸಿ) ಮತ್ತು 1974ರ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್​ಗಳು (ಸಿಆರ್​ಪಿಸಿ) ದಂಡ ವಿಧಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತವೆಯೇ ಹೊರತು ದೀರ್ಘಕಾಲೀನ ಪರಿಹಾರ ಒದಗಿಸುವುದಿಲ್ಲ. ಇದನ್ನೂ ಓದಿ: ಸಮಾನಮನಸ್ಕರೆಲ್ಲ ಒಂದಾಗಬೇಕು.. ಹಾಗಂತ ಮೋದಿ ಹೇಳಿದ್ಯಾರಿಗೆ? ಯಾಕೆ?

ಕಾನೂನಿನ ಕೊರತೆ: ಸಮಸ್ಯೆ ಪರಿಹಾರಕ್ಕೆ ಒಂದು ಸಮಗ್ರ ಆರೋಗ್ಯ ರಕ್ಷಣೆ ಕಾನೂನು ಅಗತ್ಯವಾಗಿದೆ. ಅದು ಸಾಮಾಜಿಕ ಕರಾರಿನಲ್ಲಿ ಇರುವ ಅಸ್ಪಷ್ಟತೆಯನ್ನು ನಿವಾರಿಸಿ ಸರ್ಕಾರ ಮತ್ತು ಸಹ-ಪ್ರಜೆಗಳಲ್ಲಿ ವಿಶ್ವಾಸ ಇಡುವುದಕ್ಕೆ ಅವಕಾಶ ಕಲ್ಪಿಸಲಿದೆ.

ಸಾರ್ವಜನಿಕ ಆರೋಗ್ಯ ರಕ್ಷಣೆ ಕುರಿತ ಒಂದು ಕಾನೂನು ಈಗ ಇದ್ದಿದ್ದರೆ ಕರೊನಾ ಸಾಂಕ್ರಾಮಿಕತೆಯಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರಕ್ಕೆ ಅದು ಸರ್ಕಾರಕ್ಕೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡುತ್ತಿತ್ತು. ಅದು ಸಾಮಾಜಿಕ ಕರಾರು ಸಿದ್ಧಾಂತದಲ್ಲಿ ವಿಶ್ವಾಸ ತುಂಬಿಸುತ್ತಿತ್ತು ಹಾಗೂ ಅದರ ಪರಿಕಲ್ಪನೆಯನ್ನು ಬಲಗೊಳಿಸುತ್ತಿತ್ತು. ಅವೆಲ್ಲ ಇಲ್ಲದೆ, ಈಗ ಕೈಗೊಳ್ಳುತ್ತಿರುವ ತಾತ್ಕಾಲಿಕ ಕ್ರಮಗಳು ಬ್ಯಾಂಡ್ ಏಯ್್ಡಂತೆ ತಾತ್ಕಾಲಿಕ ಉಪಶಮನಕಾರಿ ಅಷ್ಟೆ. ಒಂದು ಪರಿಣಾಮಕಾರಿ ಕಾನೂನು ಮುಂದೆಯೂ ಬರಬಹುದಾದ ಸಾಂಕ್ರಾಮಿಕತೆ ಎದುರಿಸಲು ಬಲವಾದ ಅಸ್ತ್ರವಾಗಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆಯಲಿ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)