| ಭಾರತಿ ಎ. ಕೊಪ್ಪ
ಮಗಳು ಹರೆಯಕ್ಕೆ ಬರುವ ಮೊದಲು ಆಕೆಯನ್ನು ಹಸೆಮಣೆ ಏರಿಸಿ ಜವಾಬ್ದಾರಿ ಕಳೆದುಕೊಳ್ಳುವ ಪಾಲಕರ ಧಾವಂತ ಇಂದಿಗೂ ಕಡಿಮೆಯಾಗಿಲ್ಲ. ನಮ್ಮ ದೇಶದಲ್ಲಿ 2020 ಮಾರ್ಚ್ನಿಂದ 2020 ಜೂನ್ವರೆಗಿನ ಅತ್ಯಲ್ಪ ಅವಧಿಯಲ್ಲಿ 5584 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶ ತಿಳಿಸುತ್ತದೆ. ಶೇಕಡಾ 40ರಷ್ಟು ಹೆಣ್ಣು ಮಕ್ಕಳು 15-18 ವರ್ಷದೊಳಗೆ ಶಾಲೆ ಬಿಡುತ್ತಿದ್ದಾರೆ ಎಂಬ ಆಘಾತಕಾರಿ ಅಂಕಿ-ಅಂಶ 2021ರಲ್ಲಿ ಬಿಡುಗಡೆಯಾಗಿದೆ. ಕರೊನಾ ಕರಿನೆರಳಿನಲ್ಲಿ ಬಾಲ್ಯವಿವಾಹದ ಕರಾಳತೆ ಅಧಿಕವಾಗಿದ್ದು, ಹೆಣ್ಣು ಮಕ್ಕಳ ಶೈಕ್ಷಣಿಕ ಸ್ವಾತಂತ್ರ್ಯ ಹತ್ತಿಕ್ಕಲ್ಪಟ್ಟಿದೆ ಎಂದರೆ ತಪ್ಪಾಗಲಾರದು. ಬಾಲ್ಯವಿವಾಹ ತಡೆಗಟ್ಟಿ ಶೈಕ್ಷಣಿಕವಾಗಿ ಹೆಣ್ಣು ಮಕ್ಕಳು ಬಲಗೊಳ್ಳುವಂತಾಗಬೇಕು. ಔದ್ಯೋಗಿಕ ನೆಲೆ ಕಂಡುಕೊಳ್ಳುವಂತಾಗಬೇಕು.
ಪ್ರೇಮ ವಿವಾಹದಲ್ಲೂ ಅಸಮಾಧಾನ: ಹೆಣ್ಣು ಸುಶಿಕ್ಷಿತಳಾಗಿರಲಿ ಅಥವಾ ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದರೂ ಇಂದಿಗೂ ಹಲವೆಡೆ ಅವಳಿಗೆ ವೈವಾಹಿಕ ನಿರ್ಧಾರದ ಸ್ವಾತಂತ್ರ್ಯ ಕಡಿಮೆ ಎಂದೇ ಹೇಳಬೇಕು. ಪ್ರೇಮ ವಿವಾಹದ ಮೂಲಕ ತನ್ನ ಮನಕ್ಕೊಪ್ಪುವ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಳಿಗೆ ಹಲವು ಅಡೆತಡೆಗಳಿವೆ. ಜಾತಿ, ಅಂತಸ್ತು, ರೂಪ ಈ ರೀತಿಯ ಹಲವು ಭೇದ-ಭಾವಗಳನ್ನು ಹೆಣ್ಣುಮಕ್ಕಳ ಮೇಲೆ ಪಾಲಕರು ಹೇರಿ ಸಂಗಾತಿ ಆಯ್ಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸುವ ಅನೇಕ ನಿದರ್ಶನಗಳು ನಮ್ಮ ಸಮಾಜದಲ್ಲಿವೆ. ಅಂತರ್ಜಾತೀಯ ಯುವಕನನ್ನು ಮದುವೆಯಾಗಿದ್ದ ಮಗಳನ್ನು ಹೆತ್ತ ತಾಯಿಯೇ ಕೊಂದ ಘಟನೆಯೊಂದು ರಾಜ್ಯದಲ್ಲಿ ವರದಿಯಾಗಿತ್ತು. ಮಗಳ ಅಂತರ್ಜಾತೀಯ ಪ್ರೇಮ ವಿವಾಹದಿಂದ ಕುಪಿತಗೊಂಡಿದ್ದ ತಂದೆಯೊಬ್ಬ ಕಾಡಿನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಂದ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ವರದಿಯಾಗಿತ್ತು. ಪ್ರೇಮ ವಿವಾಹವನ್ನು ವಿರೋಧಿಸಿ ಅಲ್ಲಲ್ಲಿ ಇಂತಹ ಘಟನೆ ನಡೆಯುತ್ತಿರುತ್ತವೆ. ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಸ್ವತಂತ್ರ ಜೀವನ ನಡೆಸುವಾಗ, ಪಾಲಕರೇ ದುಷ್ಕೃತ್ಯ ನಡೆಸುತ್ತಾರೆಂಬುದು ಅತ್ಯಂತ ಅಮಾನವೀಯವಾದದ್ದು. ವೈವಾಹಿಕ ಜೀವನದಲ್ಲಿ ಹೆಣ್ಣು ಮಕ್ಕಳಿಗೆ ಪಾಲಕರ ಸಹಕಾರವೂ ಸಿಗುವಂತಾದರೆ ನೆಮ್ಮದಿಯ ಬದುಕು ಸಾಧ್ಯ.
ರಾತ್ರಿ ಪಾಳಿ ಕೆಲಸ: ಔದ್ಯೋಗಿಕ ಸಂಸ್ಥೆಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಬಯಸಿದರೆ ಮಾತ್ರ ಅವಕಾಶ ನೀಡಬೇಕೆಂದು ಸರ್ಕಾರ ಆದೇಶ ನೀಡಿದೆ. ಆದಾಗ್ಯೂ ಮಹಿಳೆಯರ ರಾತ್ರಿ ಪಾಳಿ ಕೆಲಸದಲ್ಲಿ ಹಲವು ಸುರಕ್ಷತಾ ನಿಯಮ ಪಾಲಿಸಬೇಕಾಗುತ್ತದೆ. ಸೂಕ್ತ ಭದ್ರತೆ, ಅಗತ್ಯ ಸೌಲಭ್ಯ, ಲೈಂಗಿಕ ಕಿರುಕುಳ ತಡೆಯಲು ಕಟ್ಟುನಿಟ್ಟಿನ ಕ್ರಮ ಬಹಳ ಮುಖ್ಯವಾಗುತ್ತವೆ. ಬೆಂಗಳೂರಿನಲ್ಲಿ 2005ರಲ್ಲಿ ಐಟಿ ಉದ್ಯೋಗಿಯೊಬ್ಬರ ಕೊಲೆ ಪ್ರಕರಣ ಅಂದು ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಎತ್ತಿ ಹಿಡಿದಿತ್ತು. ದಿಲ್ಲಿಯಲ್ಲಿ ನಡೆದ ಅತ್ಯಾಚಾರದ ಘಟನೆಯೊಂದು ದಿಲ್ಲಿಯ ಉದ್ಯೋಗಸ್ಥ ಮಹಿಳೆಯರಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಹಿಂಜರಿಯುವಂತೆ ಮಾಡಿತ್ತು. ಈ ರೀತಿಯ ಘಟನೆಗಳ ನಂತರ ಹಲವು ಸುರಕ್ಷತಾ ಕ್ರಮ ಕೈಗೊಂಡರೂ ರಾತ್ರಿ ಪಾಳಿ ಕೆಲಸ ಎಂದರೆ ಒಂದಿಷ್ಟು ಆತಂಕಗಳ ನಡುವೆಯೇ ಸಾಗುವಂತಾಗಿದೆ. ಪುರುಷರಿಗೆ ಸರಿಸಮನಾದ ಶಿಕ್ಷಣ, ಕೆಲಸ, ಸಂಬಳ ಪಡೆಯುವ ಮಹಿಳೆಯರು ರಾತ್ರಿ ಪಾಳಿಯಲ್ಲೂ ನಿರಾತಂಕವಾಗಿ ಕೆಲಸ ಮಾಡುವಂತಾದರೆ ಮಹಿಳೆಯರ ಭದ್ರತೆಗೊಂದು ನೆಲೆ ಸಿಕ್ಕಂತಾಗುತ್ತದೆ.
ಉನ್ನತ ಶಿಕ್ಷಣಕ್ಕೆ ಹಿಂದೇಟು: ಹತ್ತನೇ ತರಗತಿ, ದ್ವಿತೀಯ ಪಿಯುಸಿಯಂತಹ ಪ್ರಮುಖ ಘಟ್ಟಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಎಂಬ ಅಂಕಿ-ಅಂಶ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಇದರ ನಡುವೆ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಪಾಲಕರ ಮನೋಭಾವ ಇಂದಿಗೂ ಕೆಲವೆಡೆ ಬದಲಾಗಿಲ್ಲ. ಒಂದು ಅಧ್ಯಯನದ ಮಾಹಿತಿ ಪ್ರಕಾರ, ಹೆಣ್ಣು ಹೇಗಿದ್ದರೂ ಮದುವೆ ನಂತರ ನಮ್ಮಿಂದ ದೂರವಾಗುತ್ತಾಳೆ ಎಂಬ ದೃಷ್ಟಿಯಿಂದ ಪಾಲಕರು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಂಡವಾಳ ಹಾಕುವುದು ಗಂಡು ಮಕ್ಕಳಿಗಿಂತ ಅತ್ಯಂತ ಕಡಿಮೆ. ಇತ್ತೀಚಿನ ಒಂದು ಅಂಕಿ-ಅಂಶದ ಪ್ರಕಾರ ಭಾರತದಲ್ಲಿ 18ರಿಂದ 24ರ ವಯೋಮಾನದ ಗುಂಪಿನಲ್ಲಿ ಉನ್ನತ ಶಿಕ್ಷಣಕ್ಕೆ ಶೇ.24ರಿಂದ 50 ಮಹಿಳೆಯರು ಮಾತ್ರ ದಾಖಲಾಗಿದ್ದಾರೆ. ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಲಿಂಗ ತಾರತಮ್ಯ ಎದ್ದು ಕಾಣುತ್ತದೆ. ಉನ್ನತ ಶಿಕ್ಷಣ ಪಡೆದರೂ ಅವರಲ್ಲಿ ಶೇ.27 ಮಹಿಳೆಯರು ಮಾತ್ರ ಉದ್ಯೋಗಕ್ಕೆ ಸೇರುತ್ತಿದ್ದಾರೆ. ಉಳಿದವರು ಕೌಟುಂಬಿಕ ಕಾರಣದಿಂದ ಉದ್ಯೋಗ ತೊರೆಯುತ್ತಿದ್ದಾರೆ. ಹೆಣ್ಣು ಮಕ್ಕಳು ಸ್ವಾವಲಂಬನೆಯ ಬದುಕಿಗಾಗಿ ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆಯುವತ್ತ ಚಿತ್ತ ಬೆಳೆಸಬೇಕಿದೆ.
ಅತ್ಯಾಚಾರ ಎಂಬ ವಿಕೃತಿ: ಆಧುನಿಕ ಮಹಿಳೆ ಸ್ವಾವಲಂಬಿಯಾಗಿ ಬದುಕುತ್ತಿದ್ದರೂ, ಅತ್ಯಾಚಾರ ಎಂಬ ಕರಾಳತೆ ಅವಳನ್ನು ಬೆಂಬಿಡದೆ ಕಾಡುತ್ತಿದೆ. ನ್ಯಾಷನಲ್ ಕ್ರೖೆಮ್ ರೆಕಾರ್ಡ್ ಬ್ಯೂರೋ ಮಾಹಿತಿ ಪ್ರಕಾರ, ಭಾರತದಲ್ಲಿ 2019ರಲ್ಲಿ ಪ್ರತಿನಿತ್ಯ ಸರಿಸುಮಾರು 95 ಅತ್ಯಾಚಾರ ಪ್ರಕರಣ ದಾಖಲಾಗಿವೆ. ಆ ವರ್ಷದಲ್ಲಿ ಒಟ್ಟು 32033 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಅಂಕಿ ಅಂಶ ಅತ್ಯಾಚಾರದ ಕೂಪವನ್ನು ತೋರಿಸುತ್ತದೆ. 2010ರಿಂದ 2019ರ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 313289 ಅತ್ಯಾಚಾರ ಪ್ರಕರಣ ವರದಿಯಾಗಿವೆ ಎಂಬ ವರದಿಯು ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಎತ್ತಿ ಹಿಡಿಯುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳೆ ನಡುರಾತ್ರಿಯಲ್ಲಿ ತನ್ನ ಅಗತ್ಯ ಕೆಲಸಗಳಿಗೆ ನಿರ್ಭೀತಿಯಿಂದ ಓಡಾಡುವ ಸ್ಥಿತಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕೂಡ ರಾತ್ರಿ ಪ್ರಯಾಣದಲ್ಲಿ ಒಂಟಿ ಮಹಿಳೆಯರು ಬಹಳಷ್ಟು ಸವಾಲುಗಳ ನಡುವೆ ಪ್ರಯಾಣಿಸುವ ಸ್ಥಿತಿ ಇದೆ. ಹೆಣ್ಣಿನ ಹತ್ತು ಹಲವು ಭಾವನೆಗಳು, ಔದ್ಯೋಗಿಕ ಆಕಾಂಕ್ಷೆಗಳು ಅವಳ ಸುರಕ್ಷತೆಯ ಕಾರಣದಿಂದ ಕಮರಿ ಹೋಗುತ್ತಿವೆ. ಪುರುಷನಿಗೆ ಸರಿಸಾಟಿಯಾಗಿ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಹಾಕುತ್ತಿರುವ ಮಹಿಳೆಗೆ ಸಾಧನೆ ಮಾಡಲು ಇನ್ನಷ್ಟು ಅವಕಾಶ ದೊರೆತಾಗ ಸ್ತ್ರೀ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ. ಶಿಕ್ಷಣ, ಲಿಂಗ ಸಮಾನತೆ, ಲೈಂಗಿಕ ಸುರಕ್ಷತೆ, ಔದ್ಯೋಗಿಕ ಮನ್ನಣೆ, ಕೌಟುಂಬಿಕ ಗೌರವ ಎಲ್ಲವೂ ಆಕೆಗೆ ಧನಾತ್ಮಕವಾಗಿ ದೊರೆತಾಗ ಸ್ತ್ರೀ ಪುರುಷರಿಗೆ ಸರಿಸಮನಾಗಿ ಎಲ್ಲ ರಂಗಗಳಲ್ಲೂ ಸಾಧನೆಗೈಯುವಂತಾಗುತ್ತದೆ. ಸರ್ಕಾರಗಳು ಮಹಿಳೆಯರ ರಕ್ಷಣೆಗಾಗಿ, ಮಹಿಳೆಯರ ಉನ್ನತಿಗಾಗಿ ಹಲವು ನೀತಿಗಳನ್ನು ಜಾರಿಗೆ ತಂದಿದ್ದರೂ, ಜನಸಾಮಾನ್ಯರು ಹೆಣ್ಣು ಮಕ್ಕಳ ಕುರಿತು ಯೋಚಿಸುವ ಮನಸ್ಥಿತಿ ನೀತಿ ನಿಯಮಗಳಿಗೆ ಅನುಗುಣವಾಗಿರಬೇಕು. ಮಹಿಳಾ ಶೋಷಣೆಗೆ ಮಂಗಳ ಹಾಡುವತ್ತ ಪ್ರತಿಯೊಬ್ಬ ಭಾರತೀಯರು ಕಂಕಣಬದ್ಧರಾಗುವರೆಂಬ ಆಶಯ ಭಾರತೀಯ ನಾರಿಯರದಾಗಿದೆ.
ಕೌಟುಂಬಿಕ ದೌರ್ಜನ್ಯ: ವೈವಾಹಿಕ ಜೀವನದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆ ತನ್ನ ಕುಟುಂಬದ ಸದಸ್ಯರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿರುವುದನ್ನು ಹಲವೆಡೆ ಕಾಣಬಹುದು. ವರದಕ್ಷಿಣೆ ಕಿರುಕುಳ, ಮಾನಸಿಕ ಹಾಗೂ ದೈಹಿಕ ಹಿಂಸೆ ಇವು ಆಕೆ ಅನುಭವಿಸುತ್ತಿರುವ ದೌರ್ಜನ್ಯಗಳು. ಭಾರತದಲ್ಲಿ 2005ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ತರಲಾಗಿದ್ದರೂ, ದೌರ್ಜನ್ಯ ಪ್ರಕರಣ ಇಂದಿಗೂ ನಡೆಯುತ್ತಿವೆ. ರಾಷ್ಟ್ರೀಯ ಮಹಿಳಾ ಆಯೋಗದ ಒಂದು ಲಭ್ಯ ಮಾಹಿತಿಯನ್ವಯ 2020ರಲ್ಲಿ 5297 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿವೆ. 2021 ಜನವರಿಯಿಂದ ಮಾರ್ಚ್ ನಡುವಿನ ಅತ್ಯಲ್ಪ ಅವಧಿಯಲ್ಲಿ ಒಟ್ಟು 1463 ದೌರ್ಜನ್ಯದ ದೂರು ದಾಖಲಾಗಿವೆ. ಲಾಕ್ಡೌನ್ ಅವಧಿಯ ಕರಾಳತೆಯಲ್ಲಿ ಮಹಿಳಾ ದೌರ್ಜನ್ಯ ಅಧಿಕವಾಗಿತ್ತು. ಜಗತ್ತಿನಾದ್ಯಂತ ಮಹಿಳೆಯರು ಎದುರಿಸುತ್ತಿರುವ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ ಇನ್ನಿತರ ಹಿಂಸೆಯನ್ನು ತಡೆಯುವ ಅರಿವು ಮೂಡಿಸಲು ವಿಶ್ವಸಂಸ್ಥೆಯು ನವೆಂಬರ್ 25ನ್ನು ಅಂತಾರಾಷ್ಟ್ರೀಯ ಕೌಟುಂಬಿಕ ದೌರ್ಜನ್ಯ ತಡೆ ದಿನ ಎಂದು ಆಚರಿಸುತ್ತದೆ.