ಅಂಕಣ

ಮಿಜೋರಾಂನಲ್ಲಿ ಜಡ್​ಪಿಎಂಗೆ ಪ್ರಚಂಡ ಗೆಲುವು - ಅಧಿಕಾರ ಕಳೆದುಕೊಂಡ ಸಿಎಂ ಝೋರಂತಂಗ

ನವದೆಹಲಿ: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಒಟ್ಟು 40 ಸ್ಥಾನಗಳ ಪೈಕಿ ಪ್ರಮುಖ ವಿರೋಧ ಪಕ್ಷವಾದ ಲಾಲ್ದುಹೋಮ ಅವರ ಜಡ್​ಪಿಎಂ 12 ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಝೋರಾಂತಂಗ ನೇತೃತ್ವದ ಎಂಎನ್​ಎಫ್​ ಹೀನಾಯ ಸೋಲನ್ನು ಅನುಭವಿಸುತ್ತಿದೆ.

ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರ (ಎಡ) ಎಂಎನ್‌ಎಫ್ ಹಾಲಿ ಆಡಳಿತ ಪಕ್ಷವಾಗಿದ್ದು, ಲಾಲ್ದುಹೋಮಾ ಅವರ (ಬಲ) ಜಡ್​ಪಿಎಂ ವಿರೋಧ ಪಕ್ಷದಲ್ಲಿದೆ.

ಮತ ಎಣಿಕೆಯಲ್ಲಿ ಲಾಲ್ದುಹೋಮಾ ಅವರ ಜಡ್​ಪಿಎಂ (ಝೋರಾಮ್ ಪೀಪಲ್ಸ್ ಮೂವ್ಮೆಂಟ್) ಝೋರಾಂತಂಗ ಅವರ ಎಂಎನ್‌ಎಫ್ (ಮಿಜೋ ನ್ಯಾಷನಲ್ ಫ್ರಂಟ್)ಗೆ ಮಣ್ಣುಮುಕ್ಕಿಸಿದೆ. ಆ ಮೂಲಕ ಲಾಲ್ದುಹೋಮಾ ಮುಂದಿನ ಸರ್ಕಾರವನ್ನು ರಚಿಸಲು ಸಜ್ಜಾಗಿದ್ದಾರೆ.

40 ಸ್ಥಾನಗಳಲ್ಲಿ ಜಡ್​ಪಿಎಂ 12ನ್ನು ಗೆದ್ದಿದೆ ಎಂದು ಚುನಾವಣಾ ಆಯೋಗ ವರದಿ ಮಾಡಿದೆ, ಅದು ಇನ್ನೂ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಎಂಎನ್‌ಎಫ್ ಎರಡು ಸ್ಥಾನ ಗೆದ್ದು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪಾಲಕ್‌ನಲ್ಲಿ ಬಿಜೆಪಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದು, ಇನ್ನೊಂದರಲ್ಲಿ ಮುನ್ನಡೆ ಸಾಧಿಸಿದೆ.

ಎಂಎನ್​ಎಫ್​ ವಿರುದ್ಧ ಜಡ್​ಪಿಎಂ ಅಜೇಯ ಮುನ್ನಡೆ ಸಾಧಿಸಸಿರುವುದು ನನಗೆ ಆಶ್ಚರ್ಯವಿಲ್ಲ, ಇದನ್ನೇ ನಾನು ನಿರೀಕ್ಷಿಸುತ್ತಿದ್ದೆ. ಸಂಪೂರ್ಣ ಫಲಿತಾಂಶದ ಬಳಿಕ ಜಡ್​ಪಿಎಂ ಬಹುಮತದೊಂದಿಗೆ ಏಕೈಕ ದೊಡ್ಡ ಪಕ್ಷವಾಗಲಿದೆ ಎಂದು ಲಾಲ್ದುಹೋಮ ಹೇಳಿದರು,

ನ.7 ರಂದು ಮತದಾನ ನಡೆದಿತ್ತು. ಭಾನುವಾರ ನಾಲ್ಕು ರಾಜ್ಯಗಳೊಂದಿಗೆ ಮಿಜೋರಾಂ ಮತೆಣಿಕೆ ನಡೆಯಬೇಕಿತ್ತಾದರೂ ಬಹುಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಭಾನುವಾರ ವಿಶೇಷ ಪ್ರಾಮುಖ್ಯತೆ ಹೊಂದಿರುವ ಕಾರಣ ಚುನಾವಣಾ ಆಯೋಗವು ಎಣಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು.

ರಾಜ್ಯದ 8.57 ಲಕ್ಷ ಮತದಾರರಲ್ಲಿ 80 ಪ್ರತಿಶತದಷ್ಟು ಜನರು ಮಿಜೋರಾಂನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. 40 ಸದಸ್ಯ ಬಲವಿದ್ದು, 8 ಮಹಿಳೆಯರು ಸೇರಿ 174 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಸರ್ಕಾರ ರಚಿಸಲು ಪಕ್ಷವೊಂದು ಅರ್ಧದಷ್ಟನ್ನು ಅಂದರೆ 21ರ ಗಡಿ ದಾಟಬೇಕಾಗಿದೆ.

ಎಕ್ಸಿಟ್ ಪೋಲ್ ಗಳು ಜಡ್​ಪಿಎಂನಿಂದ ಎಂಎನ್​ಎಫ್​ ವೈಟ್‌ವಾಶ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದವು. ಪ್ರಸ್ತುತ ಟ್ರೆಂಡ್​ ಪ್ರಕಾರ ಎಂಎನ್​ಎಫ್ ಗೆ ಕೇವಲ 3-7 ಸ್ಥಾನ ಲಭಿಸುವ ಸಾಧ್ಯತೆ ಇದೆ. ಜಡ್​ಪಿಎಂ 28-35 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಮಿಜೋರಾಂನಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ (ಎಎಪಿ) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅಲ್ಲದೆ, 17 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದರು.

ಮಿಜೋರಾಂ ವಿಧಾನಸಭಾ ಚುನಾವಣೆ ಫಲಿತಾಂಶ - ಒಟ್ಟು ಸ್ಥಾನ 40

ಪಕ್ಷ                  ಜಡ್​ಪಿಎಂ             ಎಂಎನ್​ಎಫ್​             ಬಿಜೆಪಿ             ಕಾಂಗ್ರೆಸ್​

ಮುನ್ನಡೆ               27                        10                  2                  1