ಅಂಕಣ

ಟೀ ಮಾರೋ ಹುಡ್ಗನ ಕರಾಟೆ ಕಮಾಲ್!

Webdesk - Ravikanth

ಸಾಧನೆ ಯಾರ ಮನೆಯ ಸ್ವತ್ತೂ ಅಲ್ಲ. ಅದಕ್ಕೆ ಬೇಕಾಗಿರುವುದು ಕಠಿಣ ಪರಿಶ್ರಮ ಹಾಗೂ ಛಲ. ಅದೆಷ್ಟೇ ಬಡತನವಿದ್ದರೂ ಸಾಧನೆ ಮಾಡಿ ನಮ್ಮೆದುರಿಗೆ ನಿಂತವರು ಸಾಕಷ್ಟು ಜನರಿದ್ದಾರೆ. ಅಂಥ ವರಲ್ಲಿ ಮಂಡ್ಯದ ಈ ಕರಾಟೆ ಕಲಿಯೂ ಒಬ್ಬ.

| ಕೆ.ಎನ್. ರಾಘವೇಂದ್ರ ಮಂಡ್ಯ

ಕರಾಟೆ ಎಂದರೆ ಈ ಯುವಕನಿಗೆ ಪಂಚಪ್ರಾಣ. ಟೊರ್ನಾಡೋ (ಸುಂಟರಗಾಳಿ) ಕಿಕ್ ವಿಭಾಗದಲ್ಲಿ ಸಾಧನೆ ಮಾಡಿದ ಹಿರಿಮೆಗೆ ಪಾತ್ರವಾಗಿರುವ ಶಶಾಂಕ್ ಮಂಡ್ಯದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸುತ್ತಿದ್ದಾನೆ. ರಾಜಣ್ಣ ಮತ್ತು ವರಲಕ್ಷ್ಮೀ ಅವರ ಮಗ ಶಶಾಂಕ್, ಶಾರದ ಪಬ್ಲಿಕ್ ಸ್ಕೂಲ್​ನಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ ನಂತರ ಡಿಪ್ಲೋಮಾ ಇನ್ ಮಾರ್ಷಲ್ ಆರ್ಟ್್ಸೆ ಸೇರಿಕೊಂಡ. ಓಶೂಕಾಯ್ ಮಾರ್ಷಲ್ ಆರ್ಟ್್ಸ ಅಕಾಡೆಮಿಯ ಡಾ. ಎಸ್. ಕೃಷ್ಣಮೂರ್ತಿ ಈತನಿಗೆ ಹಲವು ತಿಂಗಳು ತರಬೇತಿ ನೀಡಿದರು. ಬಾಲ್ಯದಿಂದಲೂ ಕರಾಟೆ ಬಗ್ಗೆ ಒಲವಿದ್ದ ಕಾರಣಕ್ಕೆ ಶಶಾಂಕ್​ಗೆ ಈ ಮಾರ್ಷಲ್ ಆರ್ಟ್್ಸ ಕಲಿಯುವುದು ಕಷ್ಟವಾಗಲಿಲ್ಲ. ಫಲವಾಗಿ ರಾಜ್ಯಮಟ್ಟದಲ್ಲಿ 3 ಬಾರಿ ಹಾಗೂ ರಾಷ್ಟ್ರ ಮಟ್ಟದಲ್ಲಿ 2 ಬಾರಿ ಸ್ಪರ್ಧಿಸಿ, 2019ರಲ್ಲಿ ಬೆಳ್ಳಿ ಪದಕ ಜಯಿಸಿದ್ದಾನೆ. ಟೊರ್ನಾಡೋ ಕಿಕ್​ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಈತನಲ್ಲಿ ಮೊದಲಿನಿಂದಲೂ ಇತ್ತು. ಅದಕ್ಕಾಗಿ ತರಬೇತಿಯೂ ಆರಂಭಿಸಿದ್ದಾನೆ. ಅದಕ್ಕೆ ಆರ್ಥಿಕ ಸಮಸ್ಯೆ ಎದುರಾದರೂ ಗುರಿ ಮುಟ್ಟುವ ನಿರ್ಧಾರ ಬದಲಾಗಿಲ್ಲ. ಶಶಾಂಕ್ ಮಂಡ್ಯ ಜಿಲ್ಲೆಯಲ್ಲಿ ರಕ್ತದಾನಕ್ಕೆ ಹೆಸರಾಗಿರುವ ಜೀವಧಾರೆ ಟ್ರಸ್ಟ್​ನ ಸದಸ್ಯನೂ ಹೌದು. ಸಾಧನ ಯಲ್ಲಿ ಮುಂದಿದ್ದರೂ, ಆರ್ಥಿಕವಾಗಿ ಹಿಂದುಳಿದಿರುವ ಈತನಿಗೆ ಪ್ರೋತ್ಸಾಹ ಸಿಕ್ಕರೆ ಇನ್ನೂ ಹಲವು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ.

ಪ್ರಶಸ್ತಿ-ಪುರಸ್ಕಾರ: ಉತ್ತರಪ್ರದೇಶದಲ್ಲಿರುವ ನೊಬೆಲ್ ವರ್ಲ್ಡ್​ ರೆಕಾರ್ಡ್ಸ್​ ಪ್ರಶಸ್ತಿ ಸಂಸ್ಥೆ ಶಶಾಂಕ್​ನ ಕಿಕ್​ಗಳ ವಿಡಿಯೋ ಕೇಳಿತ್ತು. ಒಂದೇ ನಿಮಿಷದಲ್ಲಿ 62 ಕಿಕ್ ಹೊಡೆದ ವಿಡಿಯೋ ಕಳಿಸಲಾಯಿತು. ಅವರು ಪರಿಶೀಲಿಸಿ ಪ್ರಶಸ್ತಿ ಪತ್ರ ಹಾಗೂ ಪದಕ ಕಳಿಸಿದ್ದಾರೆ. ಇದೇ ವಿಡಿಯೋವನ್ನು ಗಿನೆಸ್ ರೆಕಾರ್ಡ್​ಗೂ ಕಳಿಸಿದ್ದು ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

ಶ್ರಮಕ್ಕೆ ಸಂದ ಪ್ರತಿಫಲ: ಕರೊನಾ ಮೊದಲನೇ ಅಲೆಯಲ್ಲಿ ತಂದೆಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಮನೆಗೆ ಆರ್ಥಿಕವಾಗಿ ಆಸರೆಯಾಗಲು ಶಶಾಂಕ್ ಟೀ ಮಾರುವ ಕೆಲಸ ಆರಂಭಿಸಿದ. ಪ್ರತಿದಿನ ಬೆಳಗಿನ ಜಾವ 3ರಿಂದ 5ರವರೆಗೆ ಟೀ ಮಾರಿ ನಂತರ ಕರಾಟೆ ಅಭ್ಯಾಸಕ್ಕೆ ಹೋಗುತ್ತಾನೆ. ಸಂಜೆಯೂ 3 ಗಂಟೆ ತರಬೇತಿ ಪಡೆಯುತ್ತಾನೆ. ಟೊರ್ನಾಡೋ ಕಿಕ್ ಸುಲಭವಲ್ಲ. ದೇಹವನ್ನು 540 ಡಿಗ್ರಿ ತಿರುಗಿಸಬೇಕು! ಒಂದು ಕ್ಷಣವೂ ನಿಲ್ಲಿಸದಂತೆ ಕಿಕ್ ಹೊಡೆಯಬೇಕು. ಹಾಗೆ ಮಾಡುವಾಗ ಶಶಾಂಕ್​ಗೆ ವಾಂತಿ, ತಲೆಸುತ್ತು ಪ್ರಾರಂಭವಾಗಿತ್ತು. ಆದರೂ ಕಲಿಯುವುದನ್ನು ನಿಲ್ಲಿಸಲಿಲ್ಲ. ಪ್ರಾರಂಭದಲ್ಲಿ ನಿಮಿಷಕ್ಕೆ 10 ಕಿಕ್​ನಂತೆ ಅಭ್ಯಾಸ ಮಾಡುತ್ತಾ ಈಗ 60 ಕಿಕ್ ಹೊಡೆಯುತ್ತಾನೆ.

ಶಶಾಂಕ್​ಗೆ ಶಿಸ್ತು ಇದೆ. ಏನೇ ಹೇಳಿಕೊಟ್ಟರೂ ಕಲಿಯುವ ಆಸಕ್ತಿ ಇದೆ. ಈತನ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ. ಇಂತಹ ಪ್ರತಿಭೆಗಳಿಗೆ ಪೋ›ತ್ಸಾಹ ಸಿಗಬೇಕು.| ಡಾ. ಎಸ್. ಕೃಷ್ಣಮೂರ್ತಿ ಕರಾಟೆ ತರಬೇತುದಾರ