ಅಂಕಣ

ಕಲಿಯುಗದ ಕಾಮಧೇನು: ಉತ್ತರಾದಿ ಮಠದ ಶ್ರೀ ರಘೋತ್ತಮ ತೀರ್ಥರ ಆರಾಧನೆ

| ಮನೋಹರ ಜೋಶಿ

ಹಂಪೆಯ ಸಮೀಪ ಆನೆಗುಂದಿಯ ನವವೃಂದಾವನ ಗಡ್ಡೆಯಲ್ಲಿ ನೆಲೆಸಿದ್ದ ಶ್ರೀ ರಘುವರ್ಯತೀರ್ಥರು ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಸಂಚಾರ ಮಾಡುತ್ತಿರುವಾಗ ಸುವರ್ಣವಾಟ ಎನ್ನುವ ಗ್ರಾಮದಲ್ಲಿ ತಂಗಿದ್ದರು. ಇದು ಅವರ ಪೂರ್ವಾಶ್ರಮದ ಸಹೋದರಿ ಲಕ್ಷ್ಮೀಬಾಯಿಯ ವಾಸಸ್ಥಳವಾಗಿತ್ತು. ಇದನ್ನು ಅರಿತು ಪತಿ ವಿಠ್ಠಲಾಚಾರ್ಯರೊಂದಿಗೆ ರಘುವರ್ಯರ ದರುಶನಕ್ಕೆ ಬಂದು ತಮಗೆ ಸಂತಾನವಿಲ್ಲದೆ ಇದ್ದುದರಿಂದ ಪುತ್ರ ಸಂತಾನವಾಗುವಂತೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. ಗುರುಗಳು ಮಂತ್ರಾಕ್ಷತೆ ನೀಡಿ ‘ಪುತ್ರಸಂತಾನವಾಗುತ್ತದೆ, ಆದರೆ ಆ ಮಗುವನ್ನು ನಮ್ಮ ಮಠಕ್ಕೆ ಕೊಡಬೇಕು’ ಎಂದು ಹೇಳಿದರು. ಕಾಲ ಕಳೆದಂತೆ ಲಕ್ಷ್ಮೀಬಾಯಿ ಗರ್ಭವತಿಯಾದಳು. ಪ್ರಸವ ವೇದನೆ ಪ್ರಾರಂಭವಾದಾಗ ಗುರುಗಳು ಮಠದಿಂದ ಬಂಗಾರದ ಹರಿವಾಣ ಕಳಿಸಿದರು. ಭೂಸ್ಪರ್ಶವಿಲ್ಲದೆ ಹರಿವಾಣದಲ್ಲಿ ಮಗುವಿನ ಜನನವಾಯಿತು. ಗೋ ಕ್ಷೀರವನ್ನೇ ಕುಡಿಸಿ ರಾಮಚಂದ್ರ ಎಂದು ನಾಮಕರಣ ಮಾಡಲಾಯಿತು. ಸಕಾಲದಲ್ಲಿ ತಂದೆ ತಾಯಿಗಳು ಉಪನಯನ ಮಾಡಿ ಮಠಕ್ಕೆ ಒಪ್ಪಿಸಿದರು. ವಟುವಿನ ಅಗಾಧವಾದ ಪಾಂಡಿತ್ಯ ಮತ್ತು ದೈವ ಸಂಕಲ್ಪದೊಂದಿಗೆ ಶ್ರೀ ರಘುವರ್ಯತೀರ್ಥರು ಸನ್ಯಾಸವನ್ನು ನೀಡಿ ರಘೊತ್ತಮತೀರ್ಥ ಎಂದು ನಾಮಕರಣ ಮಾಡಿ ವೇದಾಂತ ಸಾಮ್ರಾಜ್ಯಕ್ಕೆ ಪಟ್ಟಾಭಿಷೇಕ ಮಾಡಿದರು. ರಘೊತ್ತಮತೀರ್ಥರು ಉತ್ತರಾದಿಮಠದ ಇತಿಹಾಸದಲ್ಲಿ ಅತಿ ಚಿಕ್ಕ ವಯಸಿನಲ್ಲಿ ಬ್ರಹ್ಮಚಾರಿಯಾಗಿ ಆಶ್ರಮ ಸ್ವೀಕರಿಸಿ ದಾಖಲೆಯನ್ನೇ ನಿರ್ವಿುಸಿದರು. ಹಂಪೆಯ ರಘುವರ್ಯತೀರ್ಥರು ಶ್ರೀ ರಘೊತ್ತಮತೀರ್ಥರ ಆಶ್ರಮ ಗುರುಗಳು. ನಿರಂತರ ಪಾಠ ಪ್ರವಚನಗಳ ಜತೆಗೆ ಶ್ರೀ ರಘೊತ್ತಮತೀರ್ಥರು ತಮ್ಮ ಕಾಲದಲ್ಲಿ ಮಠದ ವೈಭವವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋದರು. ಸಂಸ್ಥಾನದೊಂದಿಗೆ ಆನೆ, ಕುದುರೆ, ಒಂಟೆ ಸವಾರಿ ಜತೆಗೆ ನಾನಾ ವಿಧವಾದ ಮಂಗಳವಾದ್ಯಗಳೊಂದಿಗೆ ದಿಗ್ವಿಜಯಕ್ಕೆ ಹೊರಟರೆ ಆ ರಾಜವೈಭವವವನ್ನು ನೋಡುವುದೇ ಒಂದು ಸೊಬಗಾಗಿತ್ತು.

ವೃಂದಾವನ ಪ್ರವೇಶ: ತಮಿಳುನಾಡಿನ ತಿರುಕ್ಕೋಯಿ ಲೂರು ಪುಣ್ಯ ಕ್ಷೇತ್ರ. ಮನಂಪುಂಡಿ ಎನ್ನುವುದು ಈ ಊರಿನ ಮೊದಲ ಹೆಸರು. ತಿರುವಣ್ಣಾಮಲೆಯಿಂದ 40 ಕಿಮೀ ಅಂತರದಲ್ಲಿರುವ ತಿರುಕ್ಕೋಯಿಲೂರು ವಾಮನ ರೂಪಿ ಭಗವಂತನು ತಿವಿಕ್ರಮನಾಗಿ ಬಲಿರಾಜನನ್ನು ಉದ್ಧರಿಸಿದ ಸ್ಥಳ. ಸೋದೆಯ ವಾದಿರಾಜ ಶ್ರೀಗಳು ತಮ್ಮ ತೀರ್ಥ ಪ್ರಬಂಧ ಗ್ರಂಥದಲ್ಲಿ ಈ ಕ್ಷೇತ್ರವನ್ನು ಉಲ್ಲೇಖಿಸಿದ್ದಾರೆ. ಇಂತಹ ಪಾವನ ಕ್ಷೇತ್ರದಲ್ಲಿ ತಮ್ಮ ಎಲ್ಲಾ ಇಹಲೋಕದ ಸಾಧನೆಗಳನ್ನು ಪೂರ್ಣಗೊಳಿಸಿ 1517ರ ಮನ್ಮಥ ನಾಮ ಸಂವತ್ಸರದ ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿಯ ಗುರುವಾರ (1596) ದಕ್ಷಿಣ ಪಿನಾಕಿನಿ ನದಿತೀರ ತಿರುಕ್ಕೋಯಿಲೂರಿನಲ್ಲಿ ವೃಂದಾವನಸ್ಥರಾದರು. ಇಂದಿಗೂ ಇವರ ವೃಂದಾವನ ಪ್ರದಕ್ಷಿಣೆ, ನಮಸ್ಕಾರಗಳಿಂದ ಭಕ್ತರ ಸಕಲ ಅಭೀಷ್ಟಗಳು ನೆರವೇರುತ್ತಿವೆ.

ಮಹಿಮೆಗಳು ಅಪಾರ: ರಘೊತ್ತಮತೀರ್ಥರು ಆನೆಗುಂದಿ ಪ್ರಾಂತದಲ್ಲಿದ್ದಾಗ ಮೂಕ ಅಂಬಿಗನನ್ನು ತಮ್ಮ ಕಮಂಡಲದಲ್ಲಿದ್ದ ಜಲ ಪ್ರೋಕ್ಷಿಸಿ ಮಾತನಾಡುವಂತೆ ಮಾಡಿದರು. ಇವರ ಮಂತ್ರಾಕ್ಷತೆ ಬಲದಿಂದ ಯುದ್ಧದಲ್ಲಿ ಸೋತ ರಾಜ್ಯಭ್ರಷ್ಟನಾದ ಅರಸನು ಪುನಃ ಜಯಶಾಲಿಯಾಗಿ ರಾಜ್ಯಭಾರ ಮಾಡಿದನು. ತಮ್ಮ ತಪೋಬಲದಿಂದ ಪಾರ್ಶ್ವವಾಯು ರೋಗಿಯನ್ನು ಗುಣಪಡಿಸಿದರು.