ಕನ್ನಡ ನಾಡಿನಲ್ಲಿ ಕನ್ನಡದ ಕಂಪು ಪಸರಿಸಲು, ಕನ್ನಡ ಉಳಿಸಿ ಬೆಳೆಸಲು ಸರ್ಕಾರ ಕೈಗೊಂಡಿರುವ ‘ಕನ್ನಡ ಕಾಯಕಪಡೆ’ ಉಪಕ್ರಮ (ವಿಜಯವಾಣಿ ನ.18ರ ವರದಿ) ಸ್ವಾಗತಾರ್ಹ. ಇಂದು ಸ್ವಾರ್ಥ ಹಿತಾಸಕ್ತಿಗಳ ಪೂರೈಕೆಯೇ ಮಖ್ಯವಾಗಿರುವ ಕಾಲದಲ್ಲಿ, ಕರೊನಾ ಸೂಕ್ಷ್ಮಾಣು ನೀಡಿದ ಬಿಡುವಿನಲ್ಲಿ ಜನತೆಯಲ್ಲಿ ಕನ್ನಡಾಭಿಮಾನ ಬೆಳೆಸಲು ಈ ಕಾಯಕಪಡೆ ಪರಿಣಾಮಕಾರಿಯಾಗಬಹುದು.
ಆದರೆ ಸರ್ಕಾರ ಕೇವಲ ನಿರ್ದೇಶನ, ಮಾರ್ಗಸೂಚಿ, ಸಲಹೆ ನೀಡಿದರೆ ಸಾಲದು. ಮೂಲಭೂತವಾಗಿ ಕೆಲ ನಿಯಮಗಳನ್ನು ಜಾರಿಗೆ ತರಬೇಕು. ಅಂದರೆ ಮೊದಲು ಸರ್ಕಾರದ ಪ್ರತಿನಿಧಿಗಳು, ಜನಪ್ರಿಯ ತಾರೆಯರು, ಗಣ್ಯರು ಎನಿಸಿಕೊಂಡವರು ಸಾರ್ವಜನಿಕವಾಗಿ ಮಾತನಾಡುವಾಗ ಕನ್ನಡ ಬಳಸಬೇಕು. ಇದಲ್ಲದೆ, ಜನರ ಮೇಲೆ ಪರಿಣಾಮ ಬೀರುವ ಮಾಧ್ಯಮಗಳಾಗಿರುವ ಸಿನಿಮಾ ಜಾಹೀರಾತುಗಳು ಮತ್ತು ಸಾಮಾಜಿಕ ಜಾಲತಾಣಗಳು ಮುಂತಾದವುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಸೂಚಿಸಬೇಕು. ಈ ಕ್ಷೇತ್ರಗಳಲ್ಲಿ ಅನಗತ್ಯವಾಗಿ ಇಂಗ್ಲಿಷ್ ಪದಗಳನ್ನು ಬಳಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
ಸಿನಿತಾರೆಯರು ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಮತ್ತು ತಮ್ಮ ಅಭಿನಯದ ಚಿತ್ರಗಳಲ್ಲಿ ಇಂಗ್ಲಿಷ್ ಬದಲಾಗಿ ಕನ್ನಡ ಪದಗಳನ್ನು ಬಳಸಬೇಕು, ಬಳಸುವಂತೆ ಮಾಡಬೇಕು. ಕನ್ನಡದ ನಿರ್ದಿಷ್ಟ ಪದವಿದ್ದರೂ ಬೇರೆ ಭಾಷೆಯ ಪದ ಬಳಸಿದರೆ ಅಂಥ ಸಿನಿಮಾದಲ್ಲಿ ಕತ್ತರಿ ಪ್ರಯೋಗಿಸುವ ಅಧಿಕಾರವನ್ನು ಸೆನ್ಸಾರ್ ಮಂಡಳಿಗೆ ನೀಡಬೇಕು. ಸಿನಿಮಾ ನಟನಟಿಯರು ಹೆಚ್ಚೆಚ್ಚು ಕನ್ನಡ ಬಳಸಿದರೆ, ಅವರ ನಡೆನುಡಿ ಅನುಸರಿಸುವ ಅಭಿಮಾನಿಗಳು ಕೂಡ ಕನ್ನಡಾಭಿಮಾನದಿಂದ ಪ್ರೇರೇಪಿತರಾಗುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೆ ಮುಂದಾದಲ್ಲಿ ಕನ್ನಡ ಕಟ್ಟುವ ಕಾರ್ಯಕ್ಕೆ ಅನುಕೂಲವಾಗುತ್ತದೆ.
-ಪ್ರದೀಪ ಜಮಖಂಡಿ