ಅಂಕಣ

ಕರೊನಾ ಮತ್ತು ವಿದ್ಯಾರ್ಥಿಗಳ ಓದಿನ ಭವಿಷ್ಯ

shastrimath
ಕರೊನಾದ ಪರಿಣಾಮ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಹೀಗಿರುವಾಗ ಮಕ್ಕಳ ಭವಿಷ್ಯ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಮನೆಯಲ್ಲೇ ಕುಳಿತು ಆನ್​ಲೈನ್ ಪಾಠ ಕೇಳುವ ಅನಿವಾರ್ಯತೆ. ಸಮಸ್ಯೆ ಇರುವುದು ಇಲ್ಲಿಯೇ. ಮಗು ಪಾಠವನ್ನು ಏಕಾಗ್ರತೆಯಿಂದ ಕೇಳುತ್ತದೆ ಎನ್ನುವುದು ಹುಸಿಮಾತೇ ಸರಿ. ಒಂಬತ್ತನೇ ತರಗತಿಯೊಳಗಿನ ಮಕ್ಕಳಿಗೆ ಇದೊಂದು ಶಿಕ್ಷೆಯಾಗಿ ಪರಿಣಮಿಸಿದೆ. ಶಾಲೆಗಳಿಗೆ ಬಿಂದಾಸಾಗಿ ಹೋಗಿ ಬರುತ್ತಿದ್ದವರಿಗೆ ಒಂದು ಕೋಣೆಯಲ್ಲಿ ಕುಳ್ಳಿರಿಸಿ, ಚಿಕ್ಕದೊಂದು ಮೊಬೈಲ್​ನಲ್ಲಿ ಪಾಠ ಕೇಳಿಸುವುದು ಸುಲಭವಲ್ಲ. ಆನ್​ಲೈನ್ ಪಾಠ ಮಕ್ಕಳಿಗೆ ಬೇಸರ ಬಂದು ಅಳುತ್ತವೆ, ನಿದ್ದೆಗೆ ಹೋಗುತ್ತಿವೆ. ಕುಳಿತಲ್ಲಿ ಕೂರುವುದಿಲ್ಲ. ದೂರದರ್ಶನ ನೋಡುವುದು, ಗೇಮ್ ಆಡುವುದು ಹೆಚ್ಚಾಗಿದೆ.

ಮಕ್ಕಳ ಆರೋಗ್ಯದ ಮೇಲೆ ಪರಿಣಾಮ: ಆಟೋಟವಾಡಿಕೊಂಡು ಇರುತ್ತಿದ್ದ ಮಕ್ಕಳಿಗೆ ಈಗ ಸ್ನೇಹ ಎನ್ನುವ ಕೊಂಡಿಯೇ ಕಳಚಿ ಬಿದ್ದಿದೆ. ಮನೆಯಲ್ಲಿ ಅಪ್ಪ-ಅಮ್ಮನನ್ನು ಆಟವಾಡಲು ಬನ್ನಿ ಎನ್ನುತ್ತಿದ್ದಾರೆ. ದೊಡ್ಡವರಿಗೆ ಅವರದೇ ಕೆಲಸ. ಹಾಗಿರುವಾಗ ಬೇಸರವೋ ಅಥವಾ ಶಾಲೆಯ ವಾತಾವರಣವಿಲ್ಲದ ಕಾರಣಕ್ಕೋ ಪದೇಪದೆ ಜ್ವರ, ತಲೆನೋವು ಕಂಡು ಬರುತ್ತಿದೆ. ಪರಿಚಯಸ್ಥರ ಮಗುವೊಂದು ಈ ಬಾರಿ ಮೂರನೇ ತರಗತಿ. ತಂದೆ ಬ್ಯಾಂಕ್ ಉದ್ಯೋಗಿ, ತಾಯಿ ಶಿಕ್ಷಕಿ. ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಕರೊನಾ ಭಯ. ಹಾಗಾಗಿ ಮನೆಯಲ್ಲಿಯೇ ಇರುವಂತೆ ಮಗುವಿಗೆ ತಿಳಿಸಿ ಹೇಳಲಾಗಿತ್ತು. ಹಗಲು ನಾಲ್ಕೈದು ತಾಸು ಒಂಟಿಯಾಗಿ ಮಗು ಉಳಿಯತೊಡಗಿತು. ಬರುಬರುತ್ತ ಮಗು ಮಂಕಾಗಿಬಿಟ್ಟಿತು. ಶಾಲೆ ವಾರದಲ್ಲಿ ಎರಡು ದಿನದಂತೆ ವ್ಯವಸ್ಥಿತಢವಾಗಿ ಪ್ರಾರಂಭಿಸಿದಾಗ ಆ ಮಗು ಮತ್ತೆ ಲವಲವಿಕೆ ಕಂಡುಕೊಂಡಿತು. ಅಂದರೆ ಒಂಟಿತನ ಮಕ್ಕಳನ್ನು ಅತಿಯಾಗಿ ಕಾಡುತ್ತಿದೆ. ಸ್ನೇಹಿತರ ವಲಯವನ್ನು ಮಗು ತುಂಬ ಮಿಸ್ ಮಾಡಿಕೊಳ್ಳುತ್ತದೆ. ಎಳೆ ಮನಸ್ಸುಗಳ ಮೇಲೆ ಈ ಕರೊನಾ ಬಲವಾಗಿ ಪೆಟ್ಟು ಕೊಡುತ್ತಿದೆ.

ಪಾಲಕರಿಗೂ ಸವಾಲು: ಎಲ್ಲ ಮಕ್ಕಳು ಒಂದೇ ರೀತಿಯ ಕಲಿಕೆಯ ಗುಣಮಟ್ಟ ಹೊಂದಿರುವುದಿಲ್ಲ. ಹಾಗಿದ್ದಾಗ ಮಕ್ಕಳು ಮೊಬೈಲ್​ನಲ್ಲಿ ಬರುವ ಶಿಕ್ಷಕರ ಪಾಠ ಅರ್ಥ ಮಾಡಿಕೊಳ್ಳುವುದು ಕಷ್ಟ. ವಿದ್ಯಾವಂತ ಪಾಲಕರು ತಮ್ಮ ಕೆಲಸವನ್ನು ಮಾಡುತ್ತಲೇ ಕಷ್ಟವಾದರೂ ಪಾಠವನ್ನು ತಾವೇ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಅವಿದ್ಯಾವಂತ ಪಾಲಕರೂ ಇದ್ದಾರೆ. ತಮಗೆ ಅರ್ಥವಾಗದ್ದನ್ನು ಮಕ್ಕಳಿಗೆ ಅವರು ಹೇಗೆ ತಾನೆ ಹೇಳಿಕೊಡುತ್ತಾರೆ? ಬೇರೆಯವರಲ್ಲಿ ಹೇಳಿಸೋಣವೆಂದರೆ ಮನೆಯಿಂದ ಮಗುವನ್ನು ಹೊರಗೆ ಕಳಿಸಲು ಭಯ. ಒಂದೊಂದು ದಿನದ ಪಾಠವನ್ನು ಮಕ್ಕಳ ತಲೆಯಲ್ಲಿ ತುಂಬಲು ಪಾಲಕರು ಕಷ್ಟಪಡುತ್ತಿದ್ದಾರೆ. ಮಕ್ಕಳಿಗೆ ಪಾಠವೋ, ಮಕ್ಕಳ ಅಪ್ಪ-ಅಮ್ಮನಿಗೆ ಪಾಠವೋ ಎನ್ನುವಂತಾಗಿಬಿಟ್ಟಿದೆ.

ಅನಿವಾರ್ಯತೆಯಲ್ಲಿ ಸಿಲುಕಿದ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವ ಜವಾಬ್ದಾರಿ ಸರ್ಕಾರ ಮತ್ತು ಪಾಲಕರ ಮೇಲಿದೆ. ಆದು ಆನ್​ಲೈನ್ ಪಾಠವೋ ಅಥವಾ ಶಾಲೆಯನ್ನು ತೆರೆಯುವುದೋ ಅದು ಈಗ ಮುಖ್ಯವಲ್ಲ. ಪಾಠದ ಕ್ರಮವನ್ನು ಅನುಸರಿಸುತ್ತ ಮುಂದಿನ ಪೀಳಿಗೆಯ ಮಕ್ಕಳ ಆರೋಗ್ಯವನ್ನು ಕಾಪಾಡುವುದು ಅವಶ್ಯವಾಗಿದೆ.

| ಶುಭಾ ಗಿರಣಿಮನೆ