ಇದರ ಬೆನ್ನಲ್ಲೇ ವೀರಶೈವ ಲಿಂಗಾಯತ ನಾಯಕರ ಒತ್ತಡಕ್ಕೆ ಮಣಿದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಯ ಘೊಷಣೆ ಮಾಡಿದ್ದಾರೆ. ಕೆಲವು ನಾಯಕರು ಶೇಕಡ 18 ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಒಕ್ಕಲಿಗ, ಜೈನ ಹಾಗೂ ರೆಡ್ಡಿ ಸಮುದಾಯ ಮುಂತಾದವರು ಕೂಡ ನಿಗಮ ಸ್ಥಾಪನೆ ಬೇಡಿಕೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ತೆಲುಗರು, ತಮಿಳರು, ಕೇರಳಿಗರು, ಬಿಹಾರಿಗಳು, ರಾಜಸ್ತಾನಿ, ಪಂಜಾಬಿ, ಬಂಗಾಳಿಗರು ಕೂಡಾ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗದು. ಹಾಗೇನಾದರೂ ಮಾಡಿದರೆ ಕನ್ನಡನಾಡಿನಲ್ಲಿ ಕನ್ನಡಿಗರೇ ಪರದೇಸಿಗಳಾಗುವ ಪರಿಸ್ಥಿತಿ ನಿರ್ವಣವಾಗುತ್ತದೆ.
ಅಷ್ಟಕ್ಕೂ ಎಲ್ಲಾ ನಿಗಮಗಳಿಗೆ ಬೇಕಾಗುವ ಹಣ ಎಲ್ಲಿಂದ ಹೊಂದಿಸುತ್ತಾರೆ? ತುಮಕೂರಿನ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳ ಸಲಹೆಯಂತೆ ಮಿತಿಯಿಲ್ಲದೆ ಜಾತಿಗೊಂದು ನಿಗಮ ಸ್ಥಾಪಿಸುವ ಬದಲಾಗಿ ಎಲ್ಲಾ ಸಮಾಜ-ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರ ಏಳಿಗೆಗಾಗಿ ಹೆಚ್ಚು ಒತ್ತು ಕೊಡುವುದು ಸೂಕ್ತ. ಎಲ್ಲ ಜಾತಿಗಳಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಎಲ್ಲರ ಅಭಿವೃದ್ಧಿಗಾಗಿ ಸರ್ಕಾರ ಯೋಜನೆ ರೂಪಿಸುವುದೇ ಸರಿ. ಈ ವಿಷಯ ಕುರಿತು ಜನಾಭಿಪ್ರಾಯ ಪಡೆದು ಮುಂದುವರಿಯಬೇಕು.
ಪಂಪಾಪತಿ ಹಿರೇಮಠ, ಧಾರವಾಡ