ಪಾಕಿಸ್ತಾನವನ್ನು ನಿಯಂತ್ರಿಸುವುದು ಮೂರು Aಗಳು, Allah, Army and America ಎನ್ನುವುದು ಕಳೆದ ಮುಕ್ಕಾಲು ಶತಮಾನದಿಂದಲೂ ಚಾಲ್ತಿಯಲ್ಲಿರುವ ಮಾತು. ಧರ್ಮದ ಹೆಸರು ಹೇಳಿಕೊಂಡು ಅಸ್ತಿತ್ವಕ್ಕೆ ಬಂದ ಮತ್ತು ಬದುಕುಳಿಯಲು ಅಮೆರಿಕಾದ ಮೇಲೆ ಅವಲಂಬಿತವಾದ ಪಾಕಿಸ್ತಾನದ ಮೇಲೆ ಧರ್ಮದ ಮತ್ತು ಅಮೆರಿಕಾದ ‘ನಿಯಂತ್ರಣ’ ಸಹಜವೇ. ಪಾಕಿಸ್ತಾನ ಹುಟ್ಟುತ್ತಿದ್ದಂತೇ ಅದಕ್ಕೆ ಮೂಗುದಾರ ಹಾಕಿ ಅದನ್ನು ತನ್ನ ಕೈಯಲ್ಲಿಟ್ಟುಕೊಂಡದ್ದು ಸೇನೆ. ಪಾಕಿಸ್ತಾನದ ಮೊದಲ ರಾಜಧಾನಿ ದಕ್ಷಿಣದ ಕರಾಚಿಯಾದರೂ ವಿದೇಶ ನೀತಿ ಹಾಗೂ ರಕ್ಷಣಾ ನೀತಿಗಳು ರೂಪಿತವಾಗುತ್ತಿದ್ದುದು ರಾವಲ್ಪಿಂಡಿಯಲ್ಲಿ ಮತ್ತು ಜಾರಿಗೊಳ್ಳುತ್ತಿದ್ದುದು ಅಲ್ಲಿನ ಸೇನಾ ಮುಖ್ಯಾಲಯದಿಂದ. ಅಕ್ಟೋಬರ್ 22, 1947ರಂದು ಕಾಶ್ಮೀರದ ಮೇಲೆ ಆರಂಭವಾದ ದಾಳಿಯನ್ನು ಆಯೋಜಿಸಿದ್ದು ಪಾಕ್ ಸೇನೆ. ಈ ವಿಷಯವನ್ನು ದಾಳಿಯ ರೂವಾರಿ ಮೇ.ಜ. ಅಕ್ಬರ್ ಖಾನ್ Raiders in the Valley ಕೃತಿಯಲ್ಲಿ ಬಹಿರಂಗಪಡಿಸಿದ್ದಾನೆ. ಆತನ ಪ್ರಕಾರ ದಾಳಿಯನ್ನು ಅನಿವಾರ್ಯವಾಗಿಸಿದ್ದು ಭಾರತದ ಗಡಿಯನ್ನು ಸೇನಾ ಮುಖ್ಯಾಲಯ ರಾವಲ್ಪಿಂಡಿಯಿಂದ ಎಷ್ಟು ಸಾಧ್ಯವೋ ಅಷ್ಟು ದೂರಕ್ಕೆ ತಳ್ಳುವುದಾಗಿತ್ತು. ಸೇನೆ ಕೈಗೊಂಡ ಕಾರ್ಯಾಚರಣೆಯನ್ನು ಕರಾಚಿಯಲ್ಲಿದ್ದ ರಾಜಕೀಯ ನಾಯಕತ್ವ ತನ್ನ ಪ್ರತಿಷ್ಠೆ ವೃದ್ಧಿಸಿಕೊಳ್ಳಲು ಬಯಸದೇ ಬಂದ ಭಾಗ್ಯ ಎಂದು ತಿಳಿದು ಕಾಶ್ಮೀರವನ್ನು ಪಾಕಿಸ್ತಾನದ ವಿದೇಶ ಹಾಗೂ ರಕ್ಷಣಾ ನೀತಿಯ ಶಾಶ್ವತ ಬುನಾದಿಯನ್ನಾಗಿಸಿತು. ಅದು ಸೇನೆಗೆ ಪ್ರತಿ ವರದಾನ. ಕಾಶ್ಮೀರದ ವಿಷಯವನ್ನೆತ್ತಿಕೊಂಡು ದೇಶದ ಬಜೆಟ್ ಹಾಗೂ ಹೊರಗಿನ ಸಹಾಯಧನದ ಒಂದು ದೊಡ್ಡ ಭಾಗವನ್ನು ನಿರಂತರವಾಗಿ ಬಾಚಿಕೊಳ್ಳುತ್ತಲೇ ಇರಲು ಸೇನೆಗೆ ಅವಕಾಶವಾಯಿತು. ರಾಜಕೀಯ ಮತ್ತು ಸೇನಾ ನಾಯಕತ್ವಗಳ ಮೇಲೆ ತಾಳಮೇಳ ಸುಸೂತ್ರವಾಗಿ ಸಾಗತೊಡಗಿದ್ದು ಹೀಗೆ.
ಮುಂದಿನ ಒಂದು ದಶಕದಲ್ಲಿ ಸೇನಾ ಕ್ರಾಂತಿಯೊಂದಿಗೆ ರಾಜಕೀಯ ಅಧಿಕಾರವೂ ಪೂರ್ಣವಾಗಿ ಸೇನೆಯ ಕೈಗೆ ಬಂದಾಗ ಅದರ ಅಟ್ಟಹಾಸಕ್ಕೆ ಮೇರೆಯೇ ಇಲ್ಲದಂತಾಯಿತು. 1947-48ರ ಪ್ರಥಮ ಕಾಶ್ಮೀರ ಯುದ್ಧ ಮತ್ತು ಪ್ರಧಾನಿ ನೆಹರೂರ ಅಕಾಲಿಕ ಕದನವಿರಾಮ ನಿರ್ಣಯದಿಂದಾಗಿ ಭಾರತದ ಗಡಿಯನ್ನು ಝೀಲಂ ನದಿಯಿಂದ ಪೂರ್ವಕ್ಕೆ ತಳ್ಳಿ ರಾವಲ್ಪಿಂಡಿಯ ಸುರಕ್ಷೆಯನ್ನು ಖಾತ್ರಿ ಮಾಡಿಕೊಂಡಿದ್ದ ಪಾಕ್ ಸೇನೆ ತನ್ನ ಮುಖ್ಯಾಲಯಕ್ಕೆ ಹತ್ತಿರವೇ ಹೊಸ ರಾಜಧಾನಿ ಇಸ್ಲಾಮಾಬಾದ್ ಅನ್ನು ನಿರ್ವಿುಸಿಕೊಂಡಿತು. ಅಲ್ಲಿಗೆ ಪಾಕ್ ರಾಜಕಾರಣದ ಗತಿ ಮತ್ತು ರಾಜಕಾರಣಿಗಳ ಭವಿಷ್ಯ ಸಂಪೂರ್ಣವಾಗಿ ಸೇನೆಯ ಕೈಗೆ ಬಂತು.
ಸೇನೆಯ ಕೃಪಾಕಟಾಕ್ಷವಿಲ್ಲದೆ ಯಾವ ರಾಜಕಾರಣಿಯೂ ಅಧಿಕಾರವಿರಲಿ, ಜೀವದಿಂದಲೇ ಇರಲಾಗದು ಎಂಬ ‘ಅಲಿಖಿತ’ ನಿಯಮಕ್ಕೆ ದೀರ್ಘ ಇತಿಹಾಸವಿದೆ. ಸೆಪ್ಟೆಂಬರ್ 1948ರಲ್ಲಿ ರಾಷ್ಟ್ರನಿರ್ವತೃ ಮಹಮದ್ ಆಲಿ ಜಿನ್ನಾ ಗತಿಸಿದ ನಂತರ ತನ್ನನ್ನು ಹಿಡಿಯುವವರೇ ಇಲ್ಲ ಎನ್ನುವಂತೆ ಆಡತೊಡಗಿದ ಪ್ರಧಾನಿ ಲಿಯಾಖತ್ ಆಲಿ ಖಾನ್ರನ್ನು ತನ್ನ ಹಾದಿಯ ಮುಳ್ಳು ಎಂದೇ ಸೇನೆ ಭಾವಿಸಿತು ಮತ್ತು 1951ರಲ್ಲಿ ಖಾನ್ರನ್ನು ಮರಣದ ಮನೆಗೆ ಅಟ್ಟಿ ರಾಜಕಾರಣಿಗಳಿಗೆ ಎಚ್ಚರಿಕೆ ಸಂದೇಶ ನೀಡಿತು. ಆಮೇಲೆ ಗವರ್ನರ್ ಜನರಲ್ ಆದ ಜ. ಇಸ್ಕಂದರ್ ಮಿರ್ಜಾ ಸೇನೆಯ ಮರ್ಜಿಗನುಗುಣವಾಗಿಯೇ ದೇಶದ ಮೊದಲ ಸಂವಿಧಾನವನ್ನು ರಚಿಸಿ ಜಾರಿಗೆ ತಂದರು. ಆದರೆ, ಜ. ಅಯೂಬ್ ಖಾನರಿಗೆ ಅಷ್ಟು ವಿಧೇಯತೆಯೂ ಸಾಕೆನಿಸಲಿಲ್ಲ. ಸೇನಾ ಕ್ರಾಂತಿಯೆಸಗಿ ಮಿರ್ಜಾರನ್ನು ಕುರ್ಚಿಯಿಂದಿಳಿಸಿ, ‘ಒನ್ ವೇ ಟಿಕೆಟ್’ನೊಂದಿಗೆ ಲಂಡನ್ ವಿಮಾನ ಹತ್ತಿಸಿಬಿಟ್ಟರು! ಅಷ್ಟೇ ಅಲ್ಲ, ದೇಶ ತೊರೆದು ಓಡಿಹೋದ ಮಾಜಿ ಪ್ರಧಾನಿ ಎಚ್.ಎಸ್. ಸುಹ್ರವರ್ದಿ ಹಿಂದೆ ಹಂತಕರನ್ನು ಅಟ್ಟಿದರು. ಅವರ ಕೈಗೆ ಸುಹ್ರವರ್ದಿ 1963ರಲ್ಲಿ ಬೈರೂತ್ನಲ್ಲಿ ಸಿಕ್ಕಿಬಿದ್ದು ಬಲಿಯಾದರು. ಅಯೂಬ್ ಖಾನ್ರ ರಕ್ತದಾಹ ಅಲ್ಲಿಗೆ ನಿಲ್ಲಲಿಲ್ಲ. 1965ರ ಅಧ್ಯಕ್ಷೀಯ ‘ಚುನಾವಣೆ’ಯಲ್ಲಿ ತಮ್ಮ ವಿರುದ್ಧ ಸ್ಪರ್ಧೆಗೆ ನಿಂತ ಜಿನ್ನಾರ ತಂಗಿ, ಮಾದರ್-ಎ-ಮಿಲ್ಲತ್ (ರಾಷ್ಟ್ರಮಾತೆ) ಬಿರುದಾಂಕಿತೆ ಫಾತಿಮಾ ಜಿನ್ನಾರ ಹೆಸರು ಕೆಡಿಸಲು ಅವರು ಹರಡಿದ ಕೀಳು ಸುದ್ದಿ ಫಾತಿಮಾ ತನ್ನ ಸಹೋದರ ಜಿನ್ನಾರೊಂದಿಗೇ ಲೈಂಗಿಕ ಸಂಬಂಧ ಹೊಂದಿದ್ದರು ಎಂದು! ಅಯೂಬ್ ಕೊನೆಗೆ 1967ರಲ್ಲಿ ಒಂದು ‘ಕೊಲೆಯಲ್ಲದ ಕೊಲೆ’ ವಿಧಾನದಲ್ಲಿ ಫಾತಿಮಾರನ್ನು ನಿವಾರಿಸಿಕೊಂಡುಬಿಟ್ಟರು.
ನಂತರದ ಸರದಿ ಝುುಲ್ಪಿಕರ್ ಆಲಿ ಭುಟ್ಟೋರದು. 1977ರಲ್ಲಿ ಭುಟ್ಟೋರನ್ನು ಸತ್ತೆಯಿಂದ ಇಳಿಸಿದ ಜ. ಜಿಯಾ-ಉಲ್-ಹಕ್, ಅವರನ್ನು ಜೈಲಿನಲ್ಲಿರಿಸಿ ಸುಮ್ಮನಾಗಿಬಿಡಬಹುದಿತ್ತು. ಆದರೆ, ಭುಟ್ಟೋ ತಮ್ಮನ್ನೂ ತಮ್ಮ ಹಿಂದಿನ ಸೇನಾಧಿಕಾರಿಗಳನ್ನೂ, ಒಟ್ಟಾರೆ ಸೇನೆಯನ್ನು ಅವಮಾನಿಸಿದ್ದನ್ನು ಕ್ಷಮಿಸಲು ತಯಾರಿರಲಿಲ್ಲ. ಪಾಕ್ ಸೇನೆ ಸೋಲುತ್ತದೆ ಎಂದು ಸ್ಪಷ್ಟವಾಗಿ ತಿಳಿದಿದ್ದರೂ ಅದನ್ನು 1965ರಲ್ಲಿ ಭಾರತದ ವಿರುದ್ಧ ಯುದ್ಧಕ್ಕಟ್ಟಿದ್ದು ಸೇನೆ ಸೋತು ಅವಮಾನಿತಗೊಂಡು ಅಧಿಕಾರ ತ್ಯಜಿಸಲಿ, ತನ್ನ ಕುರ್ಚಿಯಾಸೆ ಸುಗಮವಾಗಿ ನೆರವೇರಲಿ ಎಂಬ ದುರ್ಬುದ್ಧಿಯಿಂದ. ಅಲ್ಲದೆ, ‘ಅವನಿಗೆ ಫ್ರಾಕ್ ತೊಡಿಸಿ ಪಾಕಿಸ್ತಾನಿ ನಗರಗಳ ಬೀದಿಬೀದಿಗಳಲ್ಲಿ ಕುಣಿಸುತ್ತೇನೆ’ ಎಂದು ಹೇಳಿ ಸೇನಾ ದಂಡನಾಯಕ ಮಹಮದ್ ಮೂಸಾರನ್ನು ಅವಮಾನಿಸಿದರು. ಇದೇ ಜಿಯಾರನ್ನು ‘ಜನರನ್ನು ರಂಜಿಸಲು ಕುಣಿಯುವ ಕೋತಿ’ ಎಂದು ಸಾರ್ವಜನಿಕವಾಗಿ ಹೀಯಾಳಿಸಿದರು. ಇಂತಹ ಹರಕುಬಾಯಿಯ ಭುಟ್ಟೋರನ್ನು ಜಿಯಾ ಅಂದರೆ ಸೇನೆ ಸುಮ್ಮನೆ ಬಿಡಲು ಸಾಧ್ಯವೇ?
ಭುಟ್ಟೋರ ಮಗಳದೂ ಅದೇ ಅವಸ್ಥೆ. ಸ್ವಘೊಷಿತ ಪರದೇಶವಾಸದಿಂದ ಹಿಂತಿರುಗಿದ ಬೆನಝಿರ್ ತನ್ನ ಅಧಿಕಾರಕ್ಕೆ ಮುಳುವಾಗುತ್ತಾಳೆ ಎಂದೆನಿಸಿದಾಗ ಮುಷರ›ಫ್ ಆಕೆಯನ್ನು ಅತ್ಯಂತ ಚಾಕಚಕ್ಯತೆಯಿಂದ ಯಮಪುರಿಗಟ್ಟಿಬಿಟ್ಟರು. ಮುಷರ›ಫ್ ಕೈಯಿಂದ ನವಾಜ್ ಶರೀಪ್ ಬದುಕುಳಿದದ್ದು ಸೌದಿ ಅರೇಬಿಯಾ ಮಧ್ಯೆ ಪ್ರವೇಶಿಸಿದ್ದರಿಂದ.
ಈ ಬಗೆಯ ಕೊಲೆಗಡುಕ ಇತಿಹಾಸ ಹೊಂದಿರುವ, ರಕ್ತಸಿಕ್ತ ಕೈಗಳ ಸೇನೆಯನ್ನು ಇಮ್ರಾನ್ ಖಾನ್ ಇಂದು ಹೇಗೆಲ್ಲಾ ಅವಮಾನಿಸುತ್ತಿದ್ದಾರೆ! ಜ. ಬಾಜ್ವಾ ತಮ್ಮ ವಿರುದ್ಧ ವಿರೋಧ ಪಕ್ಷಗಳನ್ನು ಎತ್ತಿಕಟ್ಟುತ್ತಿದ್ದಾರೆಂಬ ವಾಸನೆ ಹತ್ತಿದೊಡನೆ ಕಳೆದ ಫೆಬ್ರವರಿಯಲ್ಲೇ ಇಮ್ರಾನ್ ಖಾನ್ ಎಚ್ಚರಿಸಿದು, ‘ನಾನು ರಸ್ತೆಗಿಳಿದರೆ ಬಹಳ ಅಪಾಯಕಾರಿಯಾಗಿ ಬಿಡುತ್ತೇನೆ’ ಎಂದು. ಅದು ಬರೀ ಬಡಾಯಿಯಾಗಿರಲಿಲ್ಲ. ಅವಿಶ್ವಾಸಮತ ಗೊತ್ತುವಳಿಯ ಬಿಸಿ ಏರತೊಡಗಿದಂತೇ ಸಾರ್ವಜನಿಕ ಸಭೆಗಳನ್ನು (‘ಜಲ್ಸಾ’) ಆಯೋಜಿಸತೊಡಗಿದ ಅವರು, ಜ. ಬಾಜ್ವಾರನ್ನು ‘ಜಾನ್ವರ್’ ಅಂದರು, ಮೀರ್ ಜಾಫರ್, ಮೀರ್ ಸಾದಿಕ್ ಎಂದು ಜರೆದರು. ಐಎಸ್ಐ ಮುಖ್ಯಸ್ಥ ಲೆ.ಜ. ನದೀಂ ಅಂಜುಂರನ್ನು ಉದ್ದೇಶಿಸಿ, ‘ಕಿವಿಗೊಟ್ಟು ಕೇಳು, ನನಗೆ ಬಹಳ ರಹಸ್ಯಗಳು ತಿಳಿದಿವೆ. ಅವನ್ನೆಲ್ಲಾ ಹೊರಹಾಕಿದರೆ ನಿನಗೆ ಮುಖ ಮಚ್ಚಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಕೂಗು ಹಾಕಿದರು!
ಹಿಂದೆಲ್ಲಾ ತಮ್ಮ ವಿರುದ್ಧ ಮಾತಾಡಿದವರನ್ನು, ಅವಮಾನಿಸಿದವರನ್ನು ಮುಗಿಸಿಬಿಡುತ್ತಿದ್ದ ಸೇನಾನಾಯಕರು ಈಗ ಇಮ್ರಾನ್ ವಿರುದ್ಧ ಏನೂ ಮಾಡಲಾಗುತ್ತಿಲ್ಲವೇಕೆ? ಇದಕ್ಕೆ ಉತ್ತರ, ಬದಲಾಗುತ್ತಿರುವ ಪಾಕ್ ಸಮಾಜ ಹಾಗೂ ರಾಜಕಾರಣದಲ್ಲಿ ಕಾಣಸಿಗುತ್ತದೆ. ಹಿಂದೆಲ್ಲಾ ‘ಜನನಾಯಕರು’ ಅದೃಷ್ಟ ಖುಲಾಯಿಸಿದಾಗ ಅಧಿಕಾರಕ್ಕೆ ಬಂದು ಅದು ಕೈಕೊಟ್ಟೊಡನೇ ತರಗೆಲೆಗಳಂತೆ ತೂರಿಹೋಗುತ್ತಿದ್ದರು. ತಮ್ಮದೇ ವರ್ಚಸ್ಸು ಗಳಿಸಿಕೊಂಡು ಜನಮನದಲ್ಲಿ ನೆಲೆನಿಲ್ಲುವಷ್ಟು ಸಮಯಾವಕಾಶ ಸಿಗುತ್ತಲೇ ಇರಲಿಲ್ಲ. ಹೀಗಾಗಿ ರಾಜಕಾರಣಿಗಳನ್ನು ಮಾದರಿಗಳೆಂದು ಪರಿಗಣಿಸುವ, ನಾಯಕರೆಂದು ಸ್ವೀಕರಿಸುವ ಮನೋಭಾವವನ್ನೇ ಪಾಕ್ ಸಮಾಜ ಬೆಳೆಸಿಕೊಳ್ಳಲಾಗಲಿಲ್ಲ. ಹೀಗಾಗಿ, ಅವರ ರಾಜಕಾರಣದ ಅಥವಾ ಬದುಕಿನ ಅಂತ್ಯಕ್ಕೆ ಮರುಗುವುದು, ಅವರಿಗಾಗಿ ಸಾರ್ವಜನಿಕವಾಗಿ ದನಿಯೆತ್ತುವುದು ಪಾಕ್ ಜನತೆಗೆ ಅಭ್ಯಾಸವಾಗಲೇ ಇಲ್ಲ. ಅದರಲ್ಲೂ 1990ರ ದಶಕದಲ್ಲಿ ಬೆನಝೀರ್ ಭುಟ್ಟೋ ಮತ್ತು ನವಾಜ್ ಶರೀಫ್ ಸೇನೆಯ ಜತೆ ಶಾಮೀಲಾಗಿ ಒಬ್ಬರನ್ನೊಬ್ಬರು ಮತ್ತೆಮತ್ತೆ ಉರುಳಿಸಿದ ಮೇಲಂತೂ ರಾಜಕಾರಣಿಗಳೆಂದರೆ ಜನರನ್ನು ರಂಜಿಸುವ ವಿದೂಷಕರು ಎಂದೇ ಜನತೆ ತೀರ್ವನಿಸಿಬಿಟ್ಟಿತು. ಜತೆಗೆ ಅವರಿಬ್ಬರ ಭ್ರಷ್ಟಾಚಾರಗಳಂತೂ ಒಟ್ಟಾರೆ ರಾಜಕಾರಣಿ ಎಂಬ ತಳಿಯೇ ಜನರಿಗೆ ಅಸಹ್ಯಕರವಾಗಿ ಕಂಡಿತು. ತಕ್ಕಮಟ್ಟಿಗೆ ಭದ್ರ ಆಡಳಿತ ನೀಡಿದ, ಅಭಿವೃದ್ಧಿಯತ್ತ ತುಸುವಾದರೂ ಗಮನ ಹರಿಸಿದ ಸೇನಾ ಆಡಳಿತಗಾರರು ಜನರಿಗೆ ಪ್ರಿಯರಾದರು. ವಿರೋಧಿಗಳ ಕೊಳಕು ಅರಿವೆಯನ್ನು ಸಾರ್ವಜನಿಕವಾಗಿ ತೊಳೆಯಲು ರಾಜಕಾರಣಿಗಳಿಗೆ ಯಥೇಚ್ಛ ಅವಕಾಶ ನೀಡಿದ ಸೇನಾಧಿಕಾರಿಗಳು ತಮ್ಮ ಭ್ರಷ್ಟಾಚಾರಗಳನ್ನು ಜತನದಿಂದ ಮುಚ್ಚಿಟ್ಟುಕೊಂಡು ಸಭ್ಯರೆನಿಸಿಕೊಂಡರು. ರಾಜಕಾರಣಿಗಳಂತೆ ಸೇನಾಧಿಕಾರಿಗಳು ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆದ, ಕೆಸರು ಎರಚಿದ ಉದಾಹರಣೆಗಳು ಇಲ್ಲ. ಅಲ್ಲದೆ, ತಮ್ಮ ಹುಳುಕನ್ನು ಹೊರಗೆಡಹಲು ರಾಜಕಾರಣಿಗಳಾಗಲೀ, ಪತ್ರಕರ್ತರಾಗಲೀ ಪ್ರಯತ್ನಿಸಿದರೆ ವ್ಯವಸ್ಥಿತವಾಗಿ ಅವರ ಕೊರಳು ಹಿಚುಕಿಬಿಡುವುದು ಸೇನಾಧಿಕಾರಿಗಳ ಅಭ್ಯಾಸ. ಜತೆಗೇ, ಸೇನೆಯ ‘ಪರಾಕ್ರಮ’ದ ಬಗ್ಗೆ ರೋಚಕ ಕಥೆಗಳನ್ನು ಕಟ್ಟಿ ಜನತೆಯ ತಲೆಗೆ ತುಂಬುವುದು ಸೇನೆಯ ಚಾಳಿ. ಇಂತಹ ‘ಕಥೆ’ಗಳು ಪಥ್ಯಕ್ರಮದಲ್ಲೂ ಸೇರಿಹೋಗಿವೆ. ಶಾಲೆಗಳಲ್ಲಿ ಕಡ್ಡಾಯವಾಗಿ ಬೋಧಿಸಲ್ಪಡುವ ‘ಪಾಕಿಸ್ತಾನ್ ಸ್ಟಡೀಸ್’ ಎಂಬ ಪಠ್ಯವಿಷಯವಂತೂ ಸಾರಾಸಗಟು ಸುಳ್ಳುಗಳ ಕಂತೆ. 1971ರ ಯುದ್ಧವನ್ನು ಪಾಕಿಸ್ತಾನ ಜಯಿಸಿತು ಎಂದು ಬಹುತೇಕ ಸಾಮಾನ್ಯ ಪಾಕಿಸ್ತಾನೀಯರು ಮತ್ತು ಹೈಸ್ಕೂಲ್ ಶಿಕ್ಷಣ ದಾಟಿಲ್ಲದ ವಿದ್ಯಾವಂತರು ನಂಬಿರುವುದು ಪಾಕ್ ಪಠ್ಯಕ್ರಮ ಮತ್ತು ಮಾಧ್ಯಮಗಳಲ್ಲಿ ಅದೆಷ್ಟು ಸುಳ್ಳುಗಳು ಹರಿದಾಡುತ್ತಿವೆ ಎಂದು ತೋರಿಸುತ್ತದೆ. ವಿದ್ವಾಂಸ ಆರ್ಷಾದ್ ಅಯೂಬ್ ಮಿರ್ಜಾ, ಚಿಂತಕಿ ಆರ್ಜೂ ಕಾಜ್ಮಿ, ಸ್ಟಾಕ್ಹೋಮ್ಲ್ಲಿ ನೆಲೆಸಿರುವ ಪಾಕಿಸ್ತಾನೀ ರಾಜ್ಯಶಾಸ್ತ್ರಜ್ಞ ಪೊ›. ಇಷ್ತಿಯಾಕ್ ಅಹ್ಮದ್ ಅವರಂತಹ ಕೆಲವರು ಸತ್ಯ ತಿಳಿಸಲು ಪ್ರಯತ್ನಿಸುತ್ತಿದ್ದರೂ ಅವರ ದನಿಗಳು ಇನ್ನೂ ಹೆಚ್ಚು ಜನರಿಗೆ ತಲುಪಬೇಕಾಗಿದೆ.
ಇಂತಹ ಸ್ಥಿತಿಯಲ್ಲಿ ಪಾಕ್ ರಾಜಕಾರಣಕ್ಕೆ ಇಮ್ರಾನ್ ಖಾನ್ ಪ್ರವೇಶ ಒಂದು ಅಸಾಮಾನ್ಯ ಬೆಳವಣಿಗೆ. ಅಪಾರ ಕ್ರಿಕೆಟ್ ಹುಚ್ಚಿನ ಪಾಕಿಸ್ತಾನೀಯರ ಆರಾಧ್ಯದೈವವೇ ಆಗಿಹೋಗಿದ್ದ ಖಾನ್ ಜನರ ನಾಡಿಮಿಡಿತವನ್ನು ಸದಾ ಗಮನಿಸಿ ಅಗತ್ಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾ ರಾಜಕೀಯದಲ್ಲಿ ಬೆಳೆದವರು. ಹೀಗಾಗಿ ಹಿಂದಿನ ಯಾವುದೇ ರಾಜಕಾರಣಿ ಕನಸಿನಲ್ಲೂ ಕಾಣದಿದ್ದಷ್ಟು ಅಗಾಧ ಜನಬೆಂಬಲ ಅವರಿಗಿದೆ ಮತ್ತು ಆ ಬೆಂಬಲ ನೈಜವಾಗಿದೆ. ಜನತೆಯ ಜತೆ ಸೇನೆಯ ಮಧ್ಯಮ ಹಾಗೂ ಕೆಳಸ್ತರಗಳು ಖಾನ್ರ ಅಭಿಮಾನಿ ವರ್ಗದಲ್ಲಿ ಸೇರಿವೆ. ಪಾಕ್ ಸೇನೆಯ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ರಾಜಕಾರಣಿಯೊಬ್ಬ ಸೈನಿಕರಿಗೆ ಪ್ರಿಯನಾಗಿಬಿಟ್ಟಿದ್ದಾನೆ. ಜ. ಬಾಜ್ವಾ ಮತ್ತು ಲೆ.ಜ. ನದೀಂ ಅಂಜುಂ ಹೆದರುತ್ತಿರುವುದು ಖಾನ್ರ ಈ ಶಕ್ತಿಗೆ. ಅವರಿಬ್ಬರೇನಾದರೂ ಖಾನ್ರಿಗೆ ಅಪಾಯವೊಡ್ಡಿದರೆ ಪಾಕ್ ಜನತೆ ಮತ್ತು ಸೇನೆಯ ಒಂದು ವರ್ಗ ಅವರ ವಿರುದ್ಧ ಬಂಡೇಳುವುದು ಶತಸ್ಸಿದ್ಧ. ಜೀವಂತ ಖಾನ್ಗಿಂತ ಮೃತ ಖಾನ್ ಹೆಚ್ಚು ಅಪಾಯಕಾರಿ ಎಂದು ಸೇನೆಗೆ ಗೊತ್ತು. ಅಂತರ್ಯುದ್ಧದಲ್ಲಿ ಸೇನೆ ಹಿಮ್ಮೆಟ್ಟಿದರೆ ಅಲ್ಲಿಗೆ ಪಾಕಿಸ್ತಾನದ ಅಸ್ತಿತ್ವಕ್ಕೇ ಮರ್ವಘಾತ ಎರಗುತ್ತದೆ ಎಂದು ಪಾಕಿಸ್ತಾನದಲ್ಲಿ ‘ಬುದ್ಧಿವಂತ’ರೆಲ್ಲರಿಗೂ ಗೊತ್ತು. ಹೀಗಾಗಿಯೇ ಸೇನೆ ಇಮ್ರಾನ್ ಜೀವಕ್ಕೆ ಅಪಾಯವೊಡ್ಡದೇ, ಅವರು ‘ಲಾಂಗ್ ಮಾರ್ಚ್’ ಅನ್ನು ರಾಜಧಾನಿಗೆ ದೂರದಲ್ಲೇ ಸ್ಥಗಿತಗೊಳಿಸುವಂತೆ ತಂತ್ರ ಹೂಡಿದೆ. ನವೆಂಬರ್ 3ರಂದು ಖಾನ್ರ ಮೇಲಾದ ‘ದಾಳಿ’ಯ ಮರ್ಮ ಇದು.
ಸೇನೆಯ ಈ ಇಕ್ಕಟ್ಟು ಮತ್ತು ಬಲಹೀನತೆ ಭಾರತೀಯ ನಾಯಕತ್ವಕ್ಕೂ ಗೊತ್ತಾಗಿದೆ. ಅದು ಒಂದೇ ವಾರದಲ್ಲಿ ಮೂರು ಬಾರಿ ವ್ಯಕ್ತವಾಗಿದೆ. ಮೊದಲಿಗೆ ರಕ್ಷಾ ಮಂತ್ರಿ ರಾಜನಾಥ್ ಸಿಂಗ್ ಗಿಲ್ಗಿಟ್-ಬಾಲ್ಟಿಸ್ತಾನ್ಗಳನ್ನು ಮರುಪಡೆಯುವ ಮಾತಾಡಿದ್ದಾರೆ, ಹಿಂದೆಯೆ ಚೀನಾದ ಕೋರ್ ಕಮಾಂಡರ್ ಲೆ.ಜ. ಅಮನ್ದೀಪ್ ಸಿಂಗ್ ಓಜ್ಲಾ ಸೇನೆ ಆಜ್ಞೆಗಾಗಿ ಕಾಯುತ್ತಿದೆ ಎಂದು ಘೊಷಿಸಿದ್ದಾರೆ. ಮೂರನೆಯ ನಡೆಯಾಗಿ ವಿದೇಶಮಂತ್ರಿ ಎಸ್. ಜೈಶಂಕರ್ ಶಾಂಘೖ ಕೋ-ಆಪರೇಷನ್ ಆರ್ಗನೈಜೇಷನ್ ಸಭೆಯಲ್ಲಿ ಚೀನೀ ಪ್ರಧಾನಿ ಲಿ ಕೇಚಿಯಾಂಗ್ ಮತ್ತು ಪಾಕ್ ವಿದೇಶಮಂತ್ರಿ ಬಿಲಾವಲ್ ಭುಟ್ಟೋ ಎದುರಿಗೇ, ಪಿಓಕೆಯಲ್ಲಿ ಚೀನೀ ಆಟಗಳನ್ನು ವಿರೋಧಿಸಿ ಮಾತಾಡಿದ್ದಾರೆ. ಅಂತೂ ಇಮ್ರಾನ್ ಖಾನ್ರ ರಾಜಕೀಯ ಇನ್ಸ್ವಿಂಗರ್ ಗೂಗ್ಲಿ ದಾಳಿಗೆ ಪಾಕ್ ಸೇನೆಯೇ ಒಳಗಾಗಿ ತತ್ತರಿಸುತ್ತಿದೆ. ಇನ್ನು ಉಪಖಂಡದಲ್ಲಿ ಕಾಲ ವೇಗವಾಗಿ ಸರಿಯುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)