ಅಂಕಣ

ಊಳಿಗಮಾನ್ಯ ಮನಸ್ಥಿತಿ ಪಾಕಿಸ್ತಾನವನ್ನು ಇಲ್ಲಿಗೆ ತಂದಿಟ್ಟಿದೆ!

ಚೀನಾ-ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್ ಯೋಜನೆಯ ಪ್ರಕಾರ ಪಾಕಿಸ್ತಾನದಲ್ಲಿ ಚೀನಾ ಸ್ಥಾಪಿಸಲಿರುವ ನೂರಾರು ಕಾರ್ಖಾನೆಗಳಿಗೆಂದು ಲಕ್ಷಾಂತರ ಎಕರೆ ನೆಲವನ್ನು ಪಾಕ್ ಸರ್ಕಾರ ಚೀನಾಗೆ ನೀಡಿದೆ. ಇಡೀ ಪಾಕಿಸ್ತಾನವೇ ತಮಗೆ ಸೇರಿದ್ದು ಎಂಬಂತೆ ಚೀನೀಯರು ವರ್ತಿಸುತ್ತಿದ್ದಾರೆ. ಪಾಕ್ ಸರ್ಕಾರ ಗಾಯದ ಮೇಲೆ ಬರೆ ಎಳೆಯುವಂತೆ ದೇಶದ ಶಾಲೆಗಳಲ್ಲಿ ಚೀನೀ ಭಾಷೆಯ ಕಲಿಕೆಯನ್ನು ಆರಂಭಿಸಿದೆ.

ಭಾಗ-2

ನೂರು ವರ್ಷಗಳ ಹಿಂದೆ ಮುಸ್ಲಿಂ ಲೀಗ್ ಉಪಖಂಡದ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಕೂಗೆತ್ತಿದ್ದು, 1933ರಲ್ಲಿ ಉದ್ದೇಶಿತ ಮುಸ್ಲಿಂ ರಾಷ್ಟ್ರಕ್ಕೆ ‘ಪಾಕಿಸ್ತಾನ’

ಎಂಬ ಹೆಸರನ್ನೂ ಆಯ್ಕೆ ಮಾಡಿಕೊಂಡದ್ದು ಸರಿಯಷ್ಟೇ. ಆದರೆ, ಲೀಗ್ ತಾನು ಯಾರ ಸ್ವಾಭಿಮಾನವನ್ನು ಎತ್ತಿ ಹಿಡಿಯುವುದಕ್ಕಾಗಿ ನವರಾಷ್ಟ್ರವೊಂದನ್ನೇ ನಿರ್ವಿುಸಹೊರಟಿತ್ತೋ ಅವರ ಶಕ್ತಿಸಾಮರ್ಥ್ಯ ಆಧಾರದ ಮೇಲೆ ಗುರಿ ಸಾಧಿಸುವುದನ್ನು ಬಿಟ್ಟು ಬೇರಾರ ಮೇಲೋ ಅವಲಂಬಿತವಾದದ್ದನ್ನು ಇತಿಹಾಸ ದಾಖಲಿಸಿದೆ. ಹಾಗೆಯೇ ಆ ರಾಷ್ಟ್ರ ತಾನು ಅಸ್ತಿತ್ವದಲ್ಲಿ ಉಳಿಯುವುದಕ್ಕೂ ತನ್ನ ಜನರ ಶಕ್ತಿಸಾಮರ್ಥ್ಯನ್ನು ಬಿಟ್ಟು ಹೊರಗಿನವರ ಮೇಲೇ ನಿರಂತರವಾಗಿ ಅವಲಂಬಿತವಾಗಿದೆ. ಹೀಗೆ ಮೊದಲಿಗೆ ಬ್ರಿಟನ್, ನಂತರ ಅಮೆರಿಕ ಮತ್ತು ಅರಬ್ ರಾಷ್ಟ್ರಗಳು, ತದನಂತರ ಚೀನಾ ಜತೆ ಘನಿಷ್ಟವೆನ್ನುವಂತೆ ತೋರುವ ಆದರೆ ವಾಸ್ತವವಾಗಿ ಗುಲಾಮಿತನದ ಸಂಬಂಧಗಳನ್ನು ಪಾಕಿಸ್ತಾನ ಅತ್ಯಂತ ಸಹಜವಾಗಿ ಅನುಸರಿಸತೊಡಗಿದ್ದಕ್ಕೆ ಕಾರಣಗಳು ಪಾಕಿಸ್ತಾನೀ ಮನೋಭಾವದಲ್ಲೇ ದೊರೆಯುತ್ತವೆ.

ಪಾಕಿಸ್ತಾನೀ ಜನತೆಯಲ್ಲಿ ಎರಡು ಸ್ವಭಾವಗಳು ಐತಿಹಾಸಿಕವಾಗಿ ಹಾಗೂ ಪಾರಂಪರಿಕವಾಗಿ ರಕ್ತಗತವಾಗಿ ಬೆಳೆದು ಬಂದಿವೆ. ಅವುಗಳೆಂದರೆ 1. ಸ್ವಸಾಮರ್ಥ್ಯಲ್ಲಿ ವಿಶ್ವಾಸಹೀನತೆ ಹಾಗೂ 2. ಊಳಿಗಮಾನ್ಯ ಮನೋಭಾವ. 1947ರಲ್ಲಿ ಪಾಕಿಸ್ತಾನದ ವಿದೇಶನೀತಿಯನ್ನು ರೂಪಿಸಿದ್ದು ಮತ್ತು ಕಳೆದ 73 ವರ್ಷಗಳಲ್ಲಿ ಅದನ್ನು ಬೆಳೆಸಿಕೊಂಡು ಬಂದಿರುವುದು ಈ ಎರಡು ಅಂಶಗಳೇ.

ಪಾಕಿಸ್ತಾನದ ನಾಯಕರಲ್ಲಿ ಸ್ವಸಾಮರ್ಥ್ಯ ಬಗ್ಗೆ ವಿಶ್ವಾಸವಿಲ್ಲದ್ದರ ಸ್ಪಷ್ಟ ಕುರುಹುಗಳು ಆ ದೇಶದ ನಿರ್ವಣಕ್ಕೆ ಮೊದಲೇ ಕಂಡುಬಂದವು. ಉಪಖಂಡದ ಮುಸ್ಲಿಮರಿಗೆಂದು ಪಾಕಿಸ್ತಾನದ ಸ್ಥಾಪನೆಗೆ ಮುಸ್ಲಿಂ ಲೀಗ್ ನಾಯಕರು ಅವಲಂಬಿಸಿದ್ದು ವಿದೇಶೀ ಶಕ್ತಿಯಾದ ಬ್ರಿಟನ್ ಅನ್ನು. ಇಡೀ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಕಾಂಗ್ರೆಸ್ ಆಂದೋಲನಕ್ಕಿಳಿದರೆ ಮುಸ್ಲಿಂ ಲೀಗ್ ಕೇವಲ ಪಾಕಿಸ್ತಾನದ ಸ್ಥಾಪನೆಗಾಗಿ ಕಾಂಗ್ರೆಸ್ ಹಾಗೂ ಹಿಂದೂಗಳ ವಿರುದ್ಧ ರಕ್ತಪಾತದ ದಾರಿ ಹಿಡಿಯಿತು. ಗಾಂಧಿ, ನೆಹರೂರಂತೆ ಜಿನ್ನಾ ಒಂದು ದಿನವಾದರೂ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿ ಬಂಧನಕ್ಕೊಳಗಾಗಲಿಲ್ಲ. ಲೀಗ್​ನ ಒಬ್ಬನಾದರೂ ಕ್ರಾಂತಿಕಾರಿಗಳಂತೆ ಬ್ರಿಟಿಷರ ವಿರುದ್ಧ ಶಸ್ತ್ರ ಕೈಗೆತ್ತಿಕೊಳ್ಳಲಿಲ್ಲ ಅಥವಾ ನೇತಾಜಿಯವರಂತೆ ಸೇನೆ ಕಟ್ಟಿ ಪಾಕಿಸ್ತಾನದ ಸ್ಥಾಪನೆಗಾಗಿ ಹೋರಾಡಲಿಲ್ಲ. ಬದಲಾಗಿ ಇವರೆಲ್ಲರ ವಿರುದ್ಧವಾಗಿ ಬ್ರಿಟಿಷರಿಗೇ ಸಹಕಾರ ನೀಡುತ್ತಾ, ಅವರ ಮುಂದೆ ಬಾಲವಾಡಿಸುತ್ತಾ ನಿಂತವರು ಮುಸ್ಲಿಂ ಲೀಗ್ ನಾಯಕರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾದಾಗ ಮತ್ತು 1946ರಲ್ಲಿ ಭಾರತೀಯ ನೌಕಾಸೇನೆ ಮುಂಬೈ ಬಂದರಿನಲ್ಲಿ ಬ್ರಿಟಿಷರ ವಿರುದ್ಧ ದಂಗೆಯೆದ್ದಾಗ ಮುಸ್ಲಿಂ ಲೀಗ್ ಬ್ರಿಟಿಷರ ಪರವಾಗಿ ನಿಂತಿತು! ದಂಗೆಯನ್ನು ನಿಲ್ಲಿಸಬೇಕೆಂದು ಜಿನ್ನಾ ನೌಕಾಸೈನಿಕರಿಗೆ ಕರೆಕೊಟ್ಟರು ಕೂಡಾ! ಪಾಕಿಸ್ತಾನದ ಸ್ಥಾಪನೆಗಾಗಿ ಇರುವ ಅತ್ಯುತ್ತಮ ಹಾಗೂ ಸುಲಭ ಮಾರ್ಗವೆಂದರೆ ಬ್ರಿಟನ್ ಮೇಲೆ ಅವಲಂಬಿತವಾಗಿಬಿಡುವುದು ಎಂದು ಜಿನ್ನಾ ನಂಬಿದ್ದರು ಮತ್ತು ಅದಕ್ಕಾಗಿ ಸ್ವಾಭಿಮಾನವನ್ನೂ ಮಾರಿಕೊಳ್ಳಲು ಅವರು ತಯಾರಿದ್ದರು.

ಪಾಕಿಸ್ತಾನ ಅಸ್ತಿತ್ವಕ್ಕೆ ಬಂದ ಮೇಲೂ ದೇಶದ ಉಳಿವಿಗಾಗಿ ಅವರು ಸ್ವಸಾಮರ್ಥ್ಯ ಮೇಲೆ ನಂಬಿಕೆ ಇಲ್ಲದೇ ಅವಲಂಬಿಸಿದ್ದು ವಿದೇಶಗಳನ್ನು. ಭಾರತಕ್ಕೆ ವಿರುದ್ಧವಾಗಿ ಸೇನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಪಾಕಿಸ್ತಾನಕ್ಕೆ ಬಲಿಷ್ಠ ರಾಷ್ಟ್ರವೊಂದರ ಹೆಗಲಿನಾಸರೆಯನ್ನು ಜಿನ್ನಾ ಆ ದೇಶದ ಹುಟ್ಟಿಗೂ ಮೊದಲೇ ಅರಿತಿದ್ದರು. ಮೇ 1, 1947ರಂದು ತಮ್ಮ ಮುಂಬೈ ನಿವಾಸದಲ್ಲಿ ಭೇಟಿಯಾದ ಅಮೆರಿಕದ ವಿದೇಶಾಂಗ ಇಲಾಖೆಯ ದಕ್ಷಿಣ ಏಷಿಯಾ ವ್ಯವಹಾರಗಳ ವಿಭಾಗದ ಮುಖ್ಯಸ್ಥ ರೇಮಾಂಡ್ ಎ. ಹೇರ್ ಮತ್ತು ನವದೆಹಲಿಯಲ್ಲಿದ್ದ ಅಮೆರಿಕ ರಾಯಭಾರ ಕಚೇರಿಯ ಸೆಕೆಂಡ್ ಸೆಕ್ರೆಟರಿ ಥಾಮಸ್ ಇ. ವೇಲ್ ಅವರಿಗೆ ಜಿನ್ನಾ ಹೇಳಿದ ಈ ಮಾತುಗಳನ್ನು ನಾವು ಗಮನಿಸಬೇಕು: ‘(ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿರುವ) ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿರುತ್ತದೆ, ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ರಷಿಯಾದ ಆಕ್ರಮಣನೀತಿಗೆ ವಿರೋಧಿಯಾಗಿ ನಿಲ್ಲುತ್ತವೆ. ಈ ಪ್ರಯತ್ನದಲ್ಲಿ ಅವು ಅಮೆರಿಕಾದ ಸಹಕಾರವನ್ನು ಎದುರುನೋಡುತ್ತವೆ.’ ಆಗಷ್ಟೇ ಆರಂಭವಾಗಿದ್ದ ಸೋವಿಯೆತ್ ಯೂನಿಯನ್ ವಿರುದ್ಧದ ಶೀತಲ ಸಮರದಲ್ಲಿ ನಾವು ನಿಮಗೆ ಸಹಕಾರಿಯಾಗಬಲ್ಲೆವು ಎನ್ನುವುದನ್ನು ಜಿನ್ನಾ ಎಷ್ಟು ಸೊಗಸಾಗಿ ಅಮೆರಿಕನ್ನರಿಗೆ ತಿಳಿಸಹೊರಟಿದ್ದಾರೆ ನೋಡಿ!

ಆದರೆ ಆ ದಿನಗಳಲ್ಲಿ ಪಾಕಿಸ್ತಾನದ ಬಗ್ಗೆ ಅಮೆರಿಕಾಗೆ ಆಸಕ್ತಿಯೇನೂ ಇರಲಿಲ್ಲ. ಅದು ಬಯಸಿದ್ದು ಭಾರತದ ಜತೆಗಿನ ಸಖ್ಯವನ್ನು. ಆದರೆ ಜವಾಹರ್​ಲಾಲ್ ನೆಹರೂ ನೇತೃತ್ವದ ಸ್ವತಂತ್ರ ಭಾರತ ಅಲಿಪ್ತನೀತಿ ಹಮ್ಮಿಕೊಂಡಾಗ ಅಮೆರಿಕ ವಿಧಿಯಿಲ್ಲದೇ ಹೊರಳಿದ್ದು ಪಾಕಿಸ್ತಾನದತ್ತ. ಅಷ್ಟರಲ್ಲಾಗಲೇ ಜಿನ್ನಾ ಕಾಲವಾಗಿದ್ದರು. ಆದಾಗ್ಯೂ, ಅವರು ನಂಬಿಕೊಂಡಿದ್ದಂತೆ ಪಾಕಿಸ್ತಾನದ ಅಸ್ತಿತ್ವಕ್ಕೆ ಬಲಿಷ್ಠ ರಾಷ್ಟ್ರವೊಂದರ ಊರುಗೋಲು ಬೇಕೆಬೇಕೆಂದೂ, ಅದಕ್ಕಾಗಿ ತಾವು ಗುಲಾಮೀ ನೀತಿಯನ್ನು ಅನುಸರಿಸಿದರೂ ಪರವಾಗಿಲ್ಲವೆಂದು ನಂತರದ ಪಾಕಿಸ್ತಾನೀ ನಾಯಕರು ನಂಬಿ ಆಚರಿಸಿಕೊಂಡೇ ಬಂದದ್ದಕ್ಕೆ ಕಾರಣವೇನು? ಈ ಪ್ರಶ್ನೆಗೆ ಉತ್ತರ ದೊರೆಯುವುದು ಪಾಕಿಸ್ತಾನೀ ಜನತೆಯ ಊಳಿಗಮಾನ್ಯ ಮನೋಭಾವದಲ್ಲಿ.

ಪಾಕಿಸ್ತಾನದ ಸ್ಥಾಪನೆಗಾಗಿ ದನಿಯೆತ್ತಿದ ಮುಸ್ಲಿಂ ಲೀಗ್​ನಲ್ಲಿದ್ದದ್ದು ಉತ್ತರ ಪ್ರದೇಶ, ಬಾಂಬೆ, ಹೈದರಾಬಾದ್​ನ ಮುಸ್ಲಿಂ ನಾಯಕರಷ್ಟೇ ಮತ್ತು ಅವರಿಗೆ ಇಂದು ಪಾಕಿಸ್ತಾನವಾಗಿರುವ ಪ್ರದೇಶಗಳಲ್ಲಿ ಯಾವ ವರ್ಚಸ್ಸೂ ಇರಲಿಲ್ಲ. ನಂತರದ ದಿನಗಳಲ್ಲಿ ಮುಸ್ಲಿಂ ಲೀಗ್ ಸಿಂಧ್​ನಲ್ಲಿ ಪ್ರಭಾವವನ್ನು ತುಸು ಮಟ್ಟಿಗೆ ವಿಸ್ತರಿಸಿಕೊಳ್ಳುವುದರಲ್ಲಿ ಯಶಸ್ವಿಯಾದರೂ ಅಂತಹದೇ ಪ್ರಯತ್ನ ಪಂಜಾಬ್, ಗಡಿನಾಡು ಪ್ರಾಂತ್ಯ ಹಾಗೂ ಬಲೂಚಿ ದೇಶೀಯ ಸಂಸ್ಥಾನಗಳಲ್ಲಿ ಯಶಸ್ವಿಯಾಗಲಿಲ್ಲ. ಈ ವಾಸ್ತವ ಪಾಕಿಸ್ತಾನದ ನಿರ್ವಣವಾಗುವುದಕ್ಕೆ ಒಂದು ವರ್ಷದ ಹಿಂದೆಯೇ ಜಗಜ್ಜಾಹೀರಾಗಿತ್ತು. 1946ರ ಪ್ರಾಂತೀಯ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್​ಗೆ ಅಲ್ಪ ಬಹುಮತದಿಂದ ಅಧಿಕಾರ ದಕ್ಕಿದ್ದು ಸಿಂಧ್​ನಲ್ಲಿ ಮಾತ್ರ. ವಿಶಾಲ ಹಾಗೂ ಅಧಿಕ ಜನಬಾಹುಳ್ಯ ಪಂಜಾಬ್ ಮುಸ್ಲಿಂ ಲೀಗ್ ಅನ್ನು ತಿರಸ್ಕರಿಸಿ ಮಣೆ ಹಾಕಿದ್ದು ಸಿಖ್, ಹಿಂದೂ ಮತ್ತು ಮುಸ್ಲಿಂ ಜನಾಂಗದವರೆಲ್ಲೂ ಒಂದಾಗಿದ್ದ ‘ಸೆಂಟ್ರಿಸ್ಟ್ ಪಾರ್ಟಿ’ಗೆ. ಗಡಿನಾಡು ಪ್ರಾಂತ್ಯವಂತೂ ಕಾಂಗ್ರೆಸ್​ನ ಭದ್ರಕೋಟೆಯಾಗಿತ್ತು. ಹೀಗಾಗಿ, ಮುಸ್ಲಿಂ ಲೀಗ್ ಅನ್ನು ಆಗಿನ ಪಶ್ಚಿಮ ಪಾಕಿಸ್ತಾನೀ ನೆಲದಲ್ಲಿ, ಮುಖ್ಯವಾಗಿ ಜನನಿಬಿಡ ಹಾಗೂ ನವರಾಷ್ಟ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದ ಪಂಜಾಬ್​ನಲ್ಲಿ ಬೇರೂರಿಸಲು ಜಿನ್ನಾ ಕೈಗೊಂಡ ಕ್ರಮವೆಂದರೆ ಅಲ್ಲಿನ ಗ್ರಾಮೀಣ ಪ್ರದೇಶಗಳ ವ್ಯವಹಾರಗಳಲ್ಲಿ ಶತಮಾನಗಳಿಂದಲೂ ನಿರ್ಣಾಯಕ ಪಾತ್ರ ವಹಿಸುತ್ರಾ ಬಂದಿದ್ದ ಭೂಮಾಲೀಕ ಮತ್ತು ಜಮೀನುದಾರ ವರ್ಗವನ್ನು ಓಲೈಸತೊಡಗಿದ್ದು. ಆ ವರ್ಗಗಳ ಜನರು ರಾತ್ರಿ ಬೆಳಗಾಗುವುದರೊಳಗೆ ಮುಸ್ಲಿಂ ಲೀಗ್​ನ ಸ್ಥಳೀಯ ನಾಯಕರಾಗಿ ನೇಮಕ ಮಾಡಲ್ಪಟ್ಟರು. ಹೇಳಿಕೇಳಿ ಇವರು ಪಾರಂಪರಿಕವಾಗಿ ಊಳಿಗಮಾನ್ಯ ವ್ಯವಸ್ಥೆಯನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದವರು. ತಮಗಿಂತ ಶಕ್ತಿವಂತರಿಗೆ ನಿಷ್ಠೆ ತೋರುವುದು ಹಾಗೂ ಬಲಹೀನರ ಮೇಲೆ ದಬ್ಬಾಳಿಕೆ ನಡೆಸುವುದು ಊಳಿಗಮಾನ್ಯ ಪದ್ದತಿಯ ಪ್ರಮುಖ ಲಕ್ಷಣಗಳಲ್ಲೊಂದು. ಮುಂದೆ ಇದೇ ಊಳಿಗಮಾನ್ಯ ಮನೋಭಾವದ ಜನ ಪಾಕ್ ರಾಜಕಾರಣದಲ್ಲಿ ಮೇಲೇರುತ್ತ ಹೋಗಿ ಅನತಿಕಾಲದಲ್ಲೇ ದೇಶದ ನಾಯಕತ್ವ ಭಾರತದಿಂದ ವಲಸೆ ಹೋಗಿದ್ದ ಶಿಕ್ಷಿತ ಮುಸ್ಲಿಮರ ಕೈತಪ್ಪಿ ಇವರ ಕೈಗೆ ಬಿತ್ತು. ಪರಿಣಾಮವಾಗಿ ದೇಶದ ಆಂತರಿಕ ರಾಜಕಾರಣದ ಜತೆ ವಿದೇಶನೀತಿಗಳನ್ನು ಸಹ ಊಳಿಗಮಾನ್ಯ ನೀತಿಗಳು ಹಾಗೂ ರೀತಿರಿವಾಜುಗಳು ಆವರಿಸಿಕೊಂಡವು. ಹೀಗಾಗಿ ಪಾಕ್ ನಾಯಕರು ರೂಪಿಸಿದ ವಿದೇಶನೀತಿ ಸಹಜವಾಗಿಯೇ ಶಕ್ತಿವಂತ ದೇಶಗಳಿಗೆ ನಿಷ್ಠೆ ಹಾಗೂ ಶಕ್ತಿಹೀನ ದೇಶಗಳ ಮೇಲೆ ಬಲಪ್ರದರ್ಶನ ತೋರುವಂತಹದಾಯಿತು. ಅದರ ಪ್ರಕಾರ ಅಫ್ಘಾನಿಸ್ತಾನದಂತಹ ಆಶಕ್ತ, ಭಾರತದಂತಹ ಶಾಂತಿಪ್ರಿಯ (ಆ ಕಾರಣದಿಂದಲೇ ಬಲಹೀನ ಎಂದು ತಪ್ಪಾಗಿ ಗುರುತಿಸಲ್ಪಟ್ಟ) ದೇಶಗಳ ವಿರುದ್ಧ ಆಟಾಟೋಪ ತೋರುವುದು; ಬ್ರಿಟನ್, ಅಮೆರಿಕ ಹಾಗೂ ಚೀನಾದಂತಹ ಬಲಾಢ್ಯ ರಾಷ್ಟ್ರಗಳ ಮುಂದೆ ಮಂಡಿಯೂರುವುದು ಪಾಕ್ ವಿದೇಶನೀತಿಯ ಪ್ರಮುಖ ಲಕ್ಷಣವಾಯಿತು. ಹೀಗೆ ಸ್ವಸಾಮರ್ಥ್ಯ ಮೇಲೆ ವಿಶ್ವಾಸಹೀನತೆ ಮತ್ತು ಬಲಿಷ್ಠರೆದುರು ಗುಲಾಮೀತನ ಪಾಕಿಸ್ತಾನವನ್ನು ಮುಂದೆ ಯಾವ ಹಾದಿಯಲ್ಲಿ ನಡೆಸಿತೆಂಬುದರ ಕಿರುಪರಿಚಯ ಮಾಡಿಕೊಳ್ಳೋಣ.

ಅಮೆರಿಕ ಜತೆಗಿನ ಸಾಮರಿಕ ಸಖ್ಯ ಶೀಘ್ರಗತಿಯಲ್ಲಿ ವೃದ್ಧಿಸುತ್ತಾ ಹೋದಂತೆ ಶಸ್ತ್ರಾಸ್ತ್ರ ಪೂರೈಕೆಯಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಪಾಕ್ ನಾಯಕರು ಆ ದೇಶದ ಮುಂದೆ ಸ್ವಾಭಿಮಾನವನ್ನು ಕಳೆದುಕೊಂಡ ಬೆಳವಣಿಗೆ ಘಟಿಸಿತು. 1950ರ ದಶಕದ ಉತ್ತರಾರ್ಧದಲ್ಲಿ ಉತ್ತರದ ಪೆಷಾವರ್ ನಗರದ ಹೊರವಲಯದಲ್ಲಿ ಸೋವಿಯೆತ್ ಯೂನಿಯನ್ ವಿರುದ್ಧ ಅತ್ಯಂತ ರಹಸ್ಯವಾದ ಬೇಹುಗಾರಿಕಾ ಹಾಗೂ ಸೇನಾ ನೆಲೆ ಸ್ಥಾಪಿಸಲು ಅಮೆರಿಕಾಗೆ ಅಯೂಬ್ ಖಾನ್ ಸರ್ಕಾರ ಅನುವು ಮಾಡಿಕೊಟ್ಟಿತು. ಅಲ್ಲಿಗೆ ಪಾಕ್ ನಾಯಕರಿಗೂ ಪ್ರವೇಶವಿರಲಿಲ್ಲ! ಅಂದಿನ ವಿದೇಶಮಂತ್ರಿ ಝುುಲ್ಪಿಕರ್ ಆಲಿ ಭುಟ್ಟೋ ಅಲ್ಲಿಗೆ ಭೇಟಿ ನೀಡಬಯಸಿದಾಗ ಬಂದ ಉತ್ತರ ಹೀಗಿತ್ತು- ‘ಮಾನ್ಯ ವಿದೇಶಮಂತ್ರಿಗಳು ನೆಲೆಯ ಸ್ವಾಗತ ವಿಭಾಗಕ್ಕೆ ಬರಬಹುದು. ಅಲ್ಲಿ ಚಹಾ ಮತ್ತು ಬಿಸ್ಕೆಟ್​ಗಳನ್ನು ಸ್ವೀಕರಿಸಬಹುದು. ಅಲ್ಲಿಂದಾಚೆಗೆ ಅವರಿಗೆ ಪ್ರವೇಶವಿಲ್ಲ.’ ಇಂತಹ ರಹಸ್ಯ ಸೇನಾನೆಲೆ ಸ್ಥಾಪಿಸುವ ಅವಕಾಶ ಅಮೆರಿಕಾಗೆ ತನ್ನ ಘನಿಷ್ಟ ಸಹಯೋಗಿಗಳಾಗಿದ್ದ ಪಶ್ಚಿಮ ಯೂರೋಪಿಯನ್ ದೇಶಗಳಲ್ಲೂ ದೊರೆತಿರಲಿಲ್ಲ.

ಮುಂದಿನ ದಶಕದಲ್ಲಿ ಅಮೆರಿಕಾಗಿಂತಲೂ ಚೀನಾ ಹೆಚ್ಚು ಉಪಯುಕ್ತವಾಗಬಲ್ಲುದು ಎಂದು ಪಾಕ್ ನಾಯಕರು ಅರಿಯುತ್ತಿದ್ದಂತೇ ಅವರ ನೀತಿಗಳು ಬದಲಾದದ್ದನ್ನು ಕಾಣುತ್ತೇವೆ. 1962ರ ಭಾರತ-ಚೀನಾ ಯುದ್ಧದಲ್ಲಿ ಅಮೆರಿಕ ಭಾರತಕ್ಕೆ ನೀಡಿದ ಬೆಂಬಲ ಹಾಗೂ ಸಹಕಾರ ಪಾಕಿಸ್ತಾನೀ ನಾಯಕರಲ್ಲಿ ಅಸಂತೋಷವನ್ನಷ್ಟೇ ಅಲ್ಲ ಅಪನಂಬಿಕೆಯನ್ನೂ ಮೂಡಿಸಿತು. ಯುದ್ಧದಲ್ಲಿ ಭಾರತವನ್ನು ಮಣಿಸುವುದರಲ್ಲಿ ಯಶಸ್ವಿಯಾದ ಚೀನೀಯರು ಸಹಜವಾಗಿಯೇ ಪಾಕಿಸ್ತಾನದ ಆಸಕ್ತಿಯನ್ನು ತಮ್ಮೆಡೆ ಸೆಳೆದುಕೊಂಡರು. ಅಮೆರಿಕಾಗಿಂತಲೂ ಚೀನಾ ಹೆಚ್ಚು ನಂಬಿಕಸ್ಥ ಎಂಬ ‘ನಂಬಿಕೆ’ಯನ್ನು 1960ರ ದಶಕದ ಆರಂಭದಲ್ಲಿ ಪಾಕ್ ಆಡಳಿತವಲಯದಲ್ಲಿ ಬಿತ್ತಿ ಬೆಳೆಸಿದ್ದು ಅಯೂಬ್ ಖಾನ್ ಸರ್ಕಾರದಲ್ಲಿ ವಿದೇಶಮಂತ್ರಿಯಾಗಿದ್ದ ಝುುಲ್ಪಿಕರ್ ಆಲಿ ಭುಟ್ಟೋ. ನಂತರ ಜನವರಿ 1963ರಲ್ಲಿ ಉಭಯ ದೇಶಗಳ ನಡುವೆ ಉಯ್ಭರ್ ಝಿನ್​ಜಿಯಾಂಗ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ ನಡುವಿನ ಗಡಿಯ ಬಗ್ಗೆ ಒಪ್ಪಂದವುಂಟಾಗಿ ಸ್ನೇಹಕ್ಕೆ ಅಧಿಕೃತವಾಗಿ ನಾಂದಿಯಾಯಿತು. ನಂತರ 1965ರ ಸೆಪ್ಟೆಂಬರ್​ನಲ್ಲಿ ಭಾರತ - ಪಾಕಿಸ್ತಾನ ಯುದ್ಧ ಆರಂಭವಾದಾಗ ಭಾರತಕ್ಕೆ ಹಿಂದೆ ನೀಡಿದ್ದ ವಾಗ್ದಾನದಂತೆ ಅಮೆರಿಕ ಎರಡೂ ಯುದ್ಧನಿರತ ದೇಶಗಳಿಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿಬಿಟ್ಟಿತು. ಇದರ ಹಾನಿ ಹೆಚ್ಚಾಗಿ ತಟ್ಟಿದ್ದು ಪಾಕಿಸ್ತಾನಕ್ಕೆ. ಸಣ್ಣ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದ ಭಾರತ ಯುದ್ಧವನ್ನು ಮುಂದುವರಿಸುವ ಸ್ಥಿತಿಯಲ್ಲಿದ್ದರೆ ಅಮೆರಿಕಾದ ಶಸ್ತ್ರಾಸ್ತ್ರ ಪೂರೈಕೆಯ ನಿಲುಗಡೆಯಿಂದ ಕಂಗಾಲಾದ ಪಾಕಿಸ್ತಾನ ಕದನವಿರಾಮಕ್ಕಾಗಿ ದಮ್ಮಯ್ಯಗುಡ್ಡೆ ಹಾಕಬೇಕಾದ ಸ್ಥಿತಿ ತಲುಪಿತು. ಇದು ಅಮೆರಿಕ ಬಗ್ಗೆ ಪಾಕ್ ನಾಯಕವರ್ಗದಲ್ಲಿ ಅಪನಂಬಿಕೆಯನ್ನು ಮತ್ತಷ್ಟು ವೃದ್ಧಿಸಿತು. ಅದಕ್ಕೆ ಪ್ರತಿಯಾಗಿ, ಭಾರತಕ್ಕೆ ಯುದ್ಧದ ಬೆದರಿಕೆಯೊಡ್ಡಿ ಪಾಕಿಸ್ತಾನಕ್ಕೆ ಸಹಕಾರ ನೀಡಿದ್ದ ಚೀನಾ ಪಾಕ್ ರಕ್ಷಕನಾಗಿ ಬಿಂಬಿತಗೊಳ್ಳತೊಡಗಿತು. ಅಲ್ಲಿಂದಾಚೆಗೆ ಪಾಕ್-ಚೀನಾ ಮೈತ್ರಿ ಸಹಜವಾಗಿಯೇ ಘನಿಷ್ಟವಾಗುತ್ತಲೇ ಸಾಗಿ, ಹಿಂದೆ ಅಮೆರಿಕಾಗೆ ನೀಡಿದ್ದಕ್ಕಿಂತಲೂ ಹೆಚ್ಚಿನ ಮಹತ್ವ ಹಾಗೂ ‘ಸ್ವಾತಂತ್ರ್ಯ’ವನ್ನು ಇಂದು ತನ್ನ ನೆಲದಲ್ಲಿ ಪಾಕಿಸ್ತಾನ ಚೀನಾಗೆ ನೀಡಿದೆ.

ಚೀನಾ ಮತ್ತು ಅರಬ್ಬೀ ಸಮುದ್ರವನ್ನು ಸಂರ್ಪಸಲು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ವಿುಸಲಾಗುತ್ತಿರುವ ರೈಲುಹಾದಿಗೆ ಸ್ಥಳೀಯರಿಂದ ಅಡ್ಡಿಯಾಗಬಾರದೆಂದು ಅಲ್ಲಿ ಚೀನೀ ಸೇನೆಯನ್ನಿರಿಸಲು ಪಾಕಿಸ್ತಾನ 2007ರಲ್ಲೇ ಅವಕಾಶ ಮಾಡಿಕೊಟ್ಟಿದೆ. ಗ್ವಾಡಾರ್ ಬಂದರಿನಲ್ಲಿನಲ್ಲಿನ ಚೀನೀಯರ ‘ರಕ್ಷಣೆ’ಗಾಗಿ ನಿರ್ವಿುಸಲಾಗಿರುವ ಕೋಟೆಯಂತಹ ಸ್ಥಳದೊಳಗೆ ಪಾಕಿಸ್ತಾನೀಯರಿಗೆ ಪ್ರವೇಶವಿಲ್ಲ! ಚೈನಾ ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್ (ಸಿ-ಪೆಕ್) ಯೋಜನೆಯ ಪ್ರಕಾರ ಪಾಕಿಸ್ತಾನದಲ್ಲಿ ಚೀನಾ ಸ್ಥಾಪಿಸಲಿರುವ ನೂರಾರು ಕಾರ್ಖಾನೆಗಳಿಗೆಂದು ಲಕ್ಷಾಂತರ ಎಕರೆ ನೆಲವನ್ನು ಪಾಕ್ ಸರ್ಕಾರ ಚೀನಾಗೆ ನೀಡಿದೆ. ಆ ನೆಲವೂ ಸೇರಿದಂತೆ ಇಡೀ ಪಾಕಿಸ್ತಾನವೇ ತಮಗೆ ಸೇರಿದ್ದು ಎಂಬಂತೆ ಚೀನೀಯರು ಎಲ್ಲೆಡೆ ಆಟಾಟೋಪ ತೋರಿ ಸಾಮಾನ್ಯ ಪಾಕಿಸ್ತಾನೀಯರನ್ನು ಕೆರಳಿಸುತ್ತಿದ್ದಾರೆ. ಇತ್ತೀಚೆಗಂತೂ ಅರಬ್ಬೀ ಸಮುದ್ರದಲ್ಲಿನ ಪಾಕಿಸ್ತಾನದ ‘ಅನನ್ಯ ಆರ್ಥಿಕ ವಲಯ’ದಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನು ಹಿಡಿಯಲೂ ಚೀನೀಯರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ಪಾಕ್ ಬೆಸ್ತರು ಕರಾಚಿ ನಗರದಲ್ಲಿ ನಡೆಸಿದ ಪ್ರತಿಭಟನೆಯನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಚೀನೀಯರ ವಿರುದ್ಧ ತನ್ನ ಜನರ ಪ್ರತಿಭಟನೆಗಳನ್ನೆಲ್ಲ ನಿರ್ಲಕ್ಷಿಸಿದ ಪಾಕ್ ಸರ್ಕಾರ ಗಾಯದ ಮೇಲೆ ಬರೆ ಎಳೆಯುವಂತೆ ದೇಶದ ಶಾಲೆಗಳಲ್ಲಿ ಚೀನೀ ಭಾಷೆಯ ಕಲಿಕೆಯನ್ನು ಆರಂಭಿಸಿದೆ. ಹೀಗೆ ಭಾಷೆ, ಚೀನೀ ಲಲಿತಕಲೆಗಳು, ಒಟ್ಟಾರೆ ಚೀನೀ ಸಂಸ್ಕೃತಿಯನ್ನು ಪಾಕಿಸ್ತಾನದಾದ್ಯಂತ ಜನಪ್ರಿಯಗೊಳಿಸಲು ಚೀನೀ ಕಮ್ಯೂನಿಸ್ಟ್ ಪಕ್ಷದ ನಿಯಂತ್ರಣದ ಆದರೆ ಕನ್​ಫ್ಯೂಷಿಯನ್ ಇನ್​ಸ್ಟಿಟ್ಯೂಟ್ ಎಂಬ ಅಮಾಯಕ ಹೆಸರಿನ ‘ಬೇಹುಗಾರಿಕಾ ಸಂಸ್ಥೆ’ಗಳನ್ನು ದೇಶಾದ್ಯಂತ ಶಿಕ್ಷಣಸಂಸ್ಥೆಗಳಲ್ಲಿ ತೆರೆಯಲು ಪಾಕ್ ಸರ್ಕಾರ ವ್ಯವಸ್ಥೆ ಮಾಡಿಕೊಟ್ಟಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)