ಕಲಾಕ್ಷೇತ್ರದಲ್ಲಿ ಗುರುವಿನ ಮಹತ್ವ ಬಹಳವಿದೆ. ಪುರಂದರದಾಸರು ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದಿದ್ದಾರೆ. ತಂದೆಯೇ ಗುರುವಾಗಿ ಲಭಿಸಿದ್ದು ನನ್ನ ಸುಕೃತ ಫಲ. ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಖ್ಯಾತ ಹರಿದಾಸರು, ಅನುವಾದಕರು ಮತ್ತು ಪ್ರವಚನಕಾರರು. ಸಂತ ಭದ್ರಗಿರಿ ಅಚ್ಯುತದಾಸರು ಮತ್ತು ಸಂತ ಭದ್ರಗಿರಿ ಕೇಶವದಾಸರ ಶಿಷ್ಯರಾಗಿದ್ದರು. ನೂರಾರು ಗ್ರಂಥಗಳನ್ನು ಬರೆದು ಅನುವಾದಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅಂತಹ ಪುಣ್ಯಪುರುಷರ ಮಗನಾಗಿ ಜನಿಸಿದ್ದು ನನ್ನ ಭಾಗ್ಯ. ಹರಿಕಥೆ ಕಲೆಯನ್ನು ನನಗೆ ಕಲಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯಲು ಪ್ರೋತ್ಸಾಹಿಸಿದರು. ತಂದೆ- ಮಗನ ಸಂಬಂಧವು ವರ್ಣನಾತೀತವಾಗಿದ್ದು, ಜೀವನದ ಪ್ರತಿಯೊಂದು ಘಟ್ಟದಲ್ಲೂ ಬೆನ್ನಿಗೆ ಆಸರೆಯಾಗಿ ನಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
| ಡಾ. ದತ್ತಾತ್ರೇಯ ಎಲ್. ವೇಲಣಕರ್