ಅಂಕಣ

ಮಾತೃಭಾಷೆ ವ್ಯಕ್ತಿಯ ಗುರುತು; ಇಂದು ಅಂತಾರಾಷ್ಟ್ರೀಯ ಮಾತೃ ಭಾಷಾ ದಿನ

ಮಾತೃಭಾಷೆ ಮನುಷ್ಯನ ಮೊದಲ ಭಾಷೆ. ಎಷ್ಟೇ ಭಾಷೆ ಕಲಿತರೂ ನಡೆಯುವಾಗ ಎಡವಿದಾಗ ಅಥವಾ ಗಾಢನಿದ್ರೆಯ ಮಧ್ಯದಲ್ಲಿ ಕೆಟ್ಟ ಕನಸು ಬಿದ್ದಾಗ ನಮ್ಮ ಬಾಯಲ್ಲಿ ಬರೋದು ಮಾತೃ ಭಾಷೆಯಲ್ಲಿ ಅಮ್ಮ ಎಂಬ ಕೂಗು. ಹೆಚ್ಚಾಗಿ ತಾಯಿ ಯಾವ ಭಾಷೆ ಬಳಸುತ್ತಾಳೋ ಅದು ಮಗುವಿನ ಮಾತೃ ಭಾಷೆಯಾಗುತ್ತದೆ. ಎಳೆ ವಯಸ್ಸಿನಲ್ಲಿ ಮಗು ತನ್ನ ಸುತ್ತಮುತ್ತ ಇರುವ ಜನರು ಮಾತನಾಡುವ ಪದ ಕೇಳಿಸಿಕೊಂಡು, ಅದನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತದೆ. ಒಂದೊಂದೇ ಪದವನ್ನು ತೊದಲಿಸುತ್ತಾ ಭಾಷೆ ಕಲಿಯುತ್ತದೆ. ಕಲಿತ ಭಾಷೆಯಲ್ಲಿ ಕನಸು ಕಾಣಲು ಶುರುಮಾಡುತ್ತದೆ. ಕನಸನ್ನು ರೂಪಿಸುವ ಪವಿತ್ರವಾದ ಮಾತೃ ಭಾಷೆಗೆ ಎಷ್ಟೋ ಕ್ರಾಂತಿಗಳು ನಡೆದಿವೆ. 1952ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾಷಾ ಚಳವಳಿಯ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 21ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

| ಎನ್. ಗುರುನಾಗನಂದನ ಬೆಂಗಳೂರು

ಪ್ರಪಂಚದಲ್ಲಿ 7,100ಕ್ಕಿಂತ ಹೆಚ್ಚು ಭಾಷೆಗಳಿವೆ. ಭಾರತದಲ್ಲಿ 15-20 ಕಿ.ಮೀ.ಗೆ ಭಾಷೆ ಬದಲಾಗುತ್ತದೆ. ನಾವು ಮಾತಾಡುವುದು ಮಾತ್ರ ಭಾಷೆಯಲ್ಲ. ಮಾತೇ ಬಾರದ ಪ್ರಾಣಿ. ಪಕ್ಷಿ, ಗಿಡ, ಮರಗಳಿಗೂ ಒಂದು ಭಾಷೆಯಿದೆ. ಒಬ್ಬ ಮೂಕ ಕೂಡ ದೈಹಿಕ ಭಾಷೆಯ ಮೂಲಕ ವ್ಯವಹರಿಸುತ್ತಾನೆ. ಹಾಗಾದರೆ ದೈಹಿಕ ಭಾಷೆಯನ್ನು ಅವನ ಮಾತೃಭಾಷೆ ಎಂದು ಕರೆಯಬಹುದಾ? ನಾವು ಯಾವ ಭಾಷೆಯಲ್ಲಿ ಮಾತಾಡುತ್ತೇವೆ ಎಂಬುದು ಮುಖ್ಯವಲ್ಲ. ಮನಸ್ಸು ಯಾವ ಭಾಷೆಗಾಗಿ ಮಿಡಿಯುತ್ತದೆ ಎಂಬುದು ಬಹಳ ಮುಖ್ಯ. ಅದು ಯಾವ ಅಂತಾರಾಷ್ಟ್ರೀಯ ಭಾಷೆಯಾಗಿದ್ದರೂ ಮನಸ್ಸಿಗೆ ಅಂಟಿರುವ ಭಾಷೆಯಲ್ಲಿ ವ್ಯವಹರಿಸಿದಾಗ ಆಗುವ ಸಂತೋಷ ಬೇರೆ ಭಾಷೆಯಿಂದ ಸಿಗುವುದಿಲ್ಲ.

ಭಾಷೆ ಮತ್ತು ಮನುಷ್ಯನ ನಡವಳಿಕೆಗೆ ಸಂಬಂಧವಿದೆ. ಪ್ರಪಂಚಕ್ಕೆ ತನ್ನನ್ನು ಗುರುತಿಸಿಕೊಳ್ಳಲು ಭಾಷೆ ಸಹಾಯ ಮಾಡುತ್ತದೆ. ನೀವು ತೆನಾಲಿ ರಾಮನ ಕಥೆಯನ್ನು ಕೇಳಿಯೇ ಇರುತ್ತೀರಿ. ತೆನಾಲಿ ಆ ವ್ಯಕ್ತಿ ಯಾವ ದೇಶಕ್ಕೆ ಸೇರಿದವನೆಂದು ಕಂಡು ಹಿಡಿದದ್ದು ಮಾತೃ ಭಾಷೆಯ ಸಹಾಯದಿಂದ. ಮಾತೃ ಭಾಷೆಯನ್ನು ಸರಿಯಾಗಿ ಕಲಿಯುವುದರಿಂದ ಬೇರೆ ಭಾಷೆಗಳನ್ನು ಕಲಿಯಲು ಸಹಾಯವಾಗುತ್ತದೆ. ಹೆಚ್ಚು ಭಾಷೆಗಳನ್ನು ಕಲಿಯುವುದು ಅಗತ್ಯ ಮತ್ತು ಒಳ್ಳೆಯದು. ಆದರೆ ಮಾತೃ ಭಾಷೆಯನ್ನು ಮರೆಯಬಾರದು. ಅದಕ್ಕೆ ಸಿಗಬೇಕಾದ ಗೌರವವನ್ನು ನೀಡಲೇಬೇಕು. ಮೊದಲು ಮಾತೃಭಾಷೆ ನಂತರ ಉಳಿದ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಇದು ಶಿಕ್ಷಣ ಕ್ಷೇತ್ರಕ್ಕೆ ಕೂಡ ಅನ್ವಯಿಸುತ್ತದೆ. ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ನೀಡಬೇಕು. ನಂತರ ಅನ್ಯ ಭಾಷೆಯನ್ನು ಕಲಿಯಬೇಕು. ಮಾತೃ ಭಾಷೆಯಲ್ಲಿ ಕಲಿಸುವುದರಿಂದ ವಿದ್ಯಾರ್ಥಿಗೆ ವಿಷಯ ಸರಳವಾಗಿ ಆರ್ಥವಾಗುತ್ತದೆ. ಅದರಿಂದ ಕಲಿಕೆಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ಸ್ಥಳೀಯ ಭಾಷೆಗೆ ಒತ್ತು ಕೊಡಬೇಕು ಎಂದು ಹೇಳಿದೆ. ಅದು ಕಾರ್ಯ ರೂಪಕ್ಕೆ ಬರುವುದು ಅಗತ್ಯ. ಇದರಿಂದ ಭಾಷೆ ಉಳಿಯುತ್ತದೆ ಮತ್ತು ಭಾರತದ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಯ ಕಡೆಗೆ ಸಾಗುತ್ತದೆ. ಇತ್ತೀಚೆಗೆ ಬಂದ ಕನ್ನಡದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದಲ್ಲಿ ಮಗು ಯಾವ ಭಾಷೆಯಲ್ಲಿ ಕನಸು ಕಾಣುತ್ತದೋ ಅದೇ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಮಾತು ವ್ಯಕ್ತವಾಗಿದೆ, ಅದು ಸೂಕ್ತವೂ ಆಗಿದೆ. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಗುವಿನ ಭವಿಷ್ಯದ ಬೇರು ಗಟ್ಟಿಯಾಗುತ್ತದೆ.

ನಾನು ಇಂಗ್ಲಿಷ್ ಪೊ›ಫೆಸರ್ ಆಗಿದ್ದರೂ ಮೊದಲು ನನ್ನ ಮಾತೃ ಭಾಷೆಯಲ್ಲಿ ಯೋಚಿಸಿ ನಂತರ ಇಂಗ್ಲೀಷ್​ನಲ್ಲಿ ಮಾತಾಡುತ್ತೇನೆ. ಪ್ರತಿ ಮಗುವಿಗೆ ಮಾತೃ ಭಾಷೆ ಪ್ರಮುಖವಾದುದು. ಮಾತೃ ಭಾಷೆಯನ್ನು ಸರಿಯಾಗಿ ಕಲಿಯುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾತೃ ಭಾಷೆಗೆ ಹೆಚ್ಚಿನ ಒತ್ತು ನೀಡಿದೆ ಅದರಿಂದ ವಿದ್ಯಾರ್ಥಿಯ ವ್ಯಕ್ತಿತ್ವದ ಬೆಳೆವಣಿಗೆಗೆ ಸಹಾಯವಾಗುತ್ತದೆ. ಸ್ಥಳೀಯ ಭಾಷೆಯನ್ನು ಉತ್ತೇಜಿಸುವುದರಿಂದ ಭಾಷೆಯ ಜತೆಗೆ ಅಲ್ಲಿನ ಸಂಸ್ಕೃತಿಯ ಪರಿಚಯವೂ ಆಗುತ್ತದೆ. ನಮ್ಮ ಸಂಸ್ಕೃತಿಗೆ ಹತ್ತಿರವಿರುವ ಭಾಷೆಯಿಂದ ಕಲಿಯಬೇಕು. | ಚಿತ್ರಾ ವಿ. ಶಿಕ್ಷಣ ತಜ್ಞೆ ಮಾತೃಭಾಷೆ ನಿಜವಾದ ಹೃದಯದ ಭಾಷೆ. ಈ ಭಾಷೆಯಲ್ಲಿ ಮಾತನಾಡುವುದು, ಬರೆಯುವುದು, ಅಭಿವ್ಯಕ್ತಿಸುವುದು ನಮಗೆ ಸಿಕ್ಕ ಒಂದು ದೊಡ್ಡ ವರ. ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು (ಅವರವರ ರಾಜ್ಯ ಭಾಷೆ) ಬಿಟ್ಟು ಇಂಗ್ಲಿಷ್​ನಲ್ಲಿ ಶಿಕ್ಷಣ ಕೊಡುವುದು ಕ್ರೂರವಾದ ಕಲಿಕೆ. ಮಾತೃಭಾಷೆಗೆ ಇರುವ ಸೌಂದರ್ಯ, ಸಹಜತೆಯನ್ನು ಎರಡನೇ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ. ಮಾತೃಭಾಷೆ ನಿಜವಾದ ಅಭಿವ್ಯಕ್ತಿಯ ಮಾರ್ಗ. ಎಲ್ಲರಿಗೂ ಅವರವರ ಮಾತೃಭಾಷೆಯಲ್ಲಿ ಅಭಿವ್ಯಕ್ತಿ ಸಾಧ್ಯ. ಅದರಲ್ಲೂ ವಿಶೇಷವಾಗಿ ಸಾಹಿತ್ಯ ರಚನೆಯಲ್ಲಿ. ಆಡಳಿತ ನಡೆಸುವವರಿಗೆ ಈ ವಿಷಯ ಮನವರಿಕೆ ಆಗಬೇಕಿದೆ. ಮಾತೃಭಾಷೆಯಲ್ಲೇ 1ರಿಂದ ಕನಿಷ್ಠ 7ನೇ ತರಗತಿವರೆಗೆ ಶಿಕ್ಷಣ ನೀಡಬೇಕು. ಆದರೆ ಸರ್ಕಾರ ಜನರ, ವಿದ್ಯಾಂಸರ, ಪಂಡಿತರ ಮಾತು ಕೇಳುತ್ತಿಲ್ಲ. ಇದೇ ನಮಗೆ ದೊಡ್ಡ ಸಮಸ್ಯೆ. ಅವರನ್ನು ಮನವೊಲಿಸುವುದು ಹೇಗೆ ಎಂಬುದು ನಮ್ಮನ್ನು ಕಾಡುತ್ತಿದೆ. ಶಿಕ್ಷಣದಲ್ಲಿ ಮುಖ್ಯವಾಗಿ ಗ್ರಾಂಥಿಕ, ಪರಿಸರದ ಭಾಷೆ ಇರಬೇಕು. ಉದ್ಯೋಗ, ಉಪ ಜೀವನಕ್ಕೆ ಬೇಕಾದ ಭಾಷೆಯನ್ನು ನಂತರದಲ್ಲಿ ಕಲಿಯಬಹುದು. ಆದರೆ ಸರ್ಕಾರಗಳು ಇತ್ತ ಗಮನಿಸದಿರುವುದು ನಮ್ಮ ದುರ್ದೈವ. | ಪ್ರೊ. ಮಾಲತಿ ಪಟ್ಟಣಶೆಟ್ಟಿ ಹಿರಿಯ ಸಾಹಿತಿ, ಧಾರವಾಡ

ಮನಸ್ಥಿತಿ ಬದಲಾಗಲಿ: ಈಗ ಭಾಷೆ ಒಂದು ಅಂತಸ್ತಿನ ವಿಷಯವಾಗಿದೆ. ಮಾತೃ ಭಾಷೆಯಲ್ಲಿ ಮಾತಾಡಿದರೆ ಗೌರವ ಕಡಿಮೆಯಾಗುತ್ತದೆ ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಮೊದಲು ಅಂತಹ ಮನಸ್ಥಿತಿ ಬದಲಾಗಬೇಕು. ಮಾತೃಭಾಷೆಗೆ ಸಿಗಬೇಕಾದ ಗೌರವ ಸಿಗಲೇಬೇಕು. ಬೇರೆ ಭಾಷೆ ಮಾತಾಡುವುದು ತಪ್ಪಲ್ಲ. ಮಾತೃ ಭಾಷೆಯನ್ನು ಕಡೆಗಣಿಸುವುದು ತಪ್ಪು. ಭಾರತದಲ್ಲಿ ಸುಮಾರು 250ಕ್ಕೂ ಹೆಚ್ಚು ಭಾಷೆಗಳು ಮರೆಯಾಗಿವೆೆ. ಅದಕ್ಕೆ ಕಾರಣ ಭಾಷೆಯನ್ನು ಬಳಸದೆ ಇರುವುದು. ಈ ಪಟ್ಟಿಗೆ ನಮ್ಮ ಮಾತೃಭಾಷೆ ಸೇರಬಾರದು ಎಂದರೆ ಮೊದಲು ಅದನ್ನು ಸರಿಯಾಗಿ ಕಲಿಯಬೇಕು, ಬಳಸಬೇಕು, ಮುಂದಿನ ಪೀಳಿಗೆಗೆ ಕಲಿಸಬೇಕು. ಇದರಿಂದ ಮಾತ್ರ ಭಾಷೆ ಉಳಿಯಲು ಸಾಧ್ಯ ಮತ್ತು ಅಂತಾರಾಷ್ಟ್ರೀಯ ಮಾತೃ ಭಾಷೆ ದಿನಕ್ಕೆ ಬೆಲೆ ಸಿಗಲು ಸಾಧ್ಯ.