ಅಂಕಣ

ಮನದ ಬೇಗುದಿ ಹೇಳಲೆಂತು...; ಅಫ್ಘನ್ ವಿದ್ಯಾರ್ಥಿಗಳ ಆತಂಕ, ದುಗುಡ, ದುಮ್ಮಾನ...

ಅಫ್ಘನ್ ತಾಲಿಬಾನ್ ವಶವಾಗಿದ್ದು, ಕರ್ನಾಟಕಕ್ಕೆ ಕಲಿಕೆಗೆ ಬಂದಿರುವ ಅಫ್ಘನ್ ವಿದ್ಯಾರ್ಥಿಗಳ ಆತಂಕ, ದುಗುಡ, ದುಮ್ಮಾನಗಳು ಕಣ್ಣೀರಾಗಿವೆ. ಸಹಪಾಠಿಗಳ, ಬೋಧಕರ, ಕನ್ನಡಿಗರ, ಸರ್ಕಾರದ, ವಿಶ್ವವಿದ್ಯಾಲಯಗಳ ನೆರವು, ಸಾಂತ್ವನದ ನುಡಿಗಳು ಸಮಾಧಾನದ ವಿಚಾರ. ಆದರೂ, ನಮ್ಮೊಳಗಿನ, ಮನದೊಳಗಿನ ಬೇಗುದಿ ಹೇಳುವುದು ಹೇಗೆ ಎಂಬ ನಿಟ್ಟುಸಿರಿನ ನುಡಿ ಒಂದೇ ಸಾಕು ಭಾವ ಸೂಕ್ಷ್ಮತೆಯುಳ್ಳವರಿಗೆ. ಅಫ್ಘನ್ ವಿದ್ಯಾರ್ಥಿಗಳ ಇಂತಹ ಚಿತ್ರಣವನ್ನು ವಿಜಯವಾಣಿ ಪ್ರತಿನಿಧಿಗಳಾದ ಮಂಜುನಾಥ ಟಿ.ಭೋವಿ, ಮೈಸೂರು ಮತ್ತು ಮಂಜುನಾಥ ಅಂಗಡಿ ಧಾರವಾಡ ಕಟ್ಟಿಕೊಟ್ಟಿದ್ದಾರೆ.

ಇಲ್ಲಿಗೆ ಬರಬೇಡ ಅಂತಿದ್ದಾರೆ ಅಮ್ಮ...

ಅಪ್ಘಾನಿಸ್ತಾನದ ಪರಿಸ್ಥಿತಿ ಬಹಳ ಭಯಾನಕವಾಗಿದೆ. ಅಲ್ಲಿಯ ದೃಶ್ಯಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತೀವ್ರವಾಗಿ ಘಾಸಿಯಾಗುತ್ತದೆ. ದೈಹಿಕವಾಗಿ ನಾನು ಇಲ್ಲಿದ್ದರೂ ಮಾನಸಿಕವಾಗಿ ಆ ಕಡೆಯ ತೊಳಲಾಟವಿದೆ. ಆತಂಕದಲ್ಲಿರುವ ನಮಗೆ ದೇಶದ ಭವಿಷ್ಯದ್ದೇ ಚಿಂತೆಯಾಗಿದೆ...! ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ರೇಜಾ ಷರೀಫ್ ನೋವಿನ ನುಡಿಗಳು ಇವು. ‘ಅಫ್ಘನ್ ಈಗ ಯುದ್ಧ ಭೂಮಿಯಂತಾಗಿದೆ. ಅಲ್ಲಿಯ ಜನರ ಸುರಕ್ಷತೆಗೆ ಯಾವುದೇ ಖಾತ್ರಿ ಇಲ್ಲವಾಗಿದೆ. ಇದುವೇ ಗಾಬರಿ ಹುಟ್ಟಿಸಿದೆ. ಯಾವ ಹೊತ್ತಿನಲ್ಲಿ ಏನು ಆಗುತ್ತದೆಂಬ ಭಯ ಕಾಡುತ್ತದೆ. ಈ ರೀತಿಯ ಒತ್ತಡದಲ್ಲೇ ನಾವು ದಿನ ಕಳೆಯುತ್ತಿದ್ದೇವೆ. ದೈಹಿಕವಾಗಿ ಅವರಿಗೆ ಯಾವುದೇ ನೋವಾಗಿಲ್ಲವಾದರೂ ಮಾನಸಿಕವಾಗಿ ಜರ್ಜರಿತವಾಗಿ ಹೋಗಿದ್ದಾರೆ. ನಮ್ಮ ಸ್ಥಿತಿ ಕಂಡು ಇಲ್ಲಿಯ ಸಹಪಾಠಿಗಳು ಕೂಡ ಮರುಗುತ್ತಿದ್ದು, ನೈತಿಕ ಬೆಂಬಲ ನೀಡುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಬಹಳ ಸಹಕಾರ ನೀಡುತ್ತಿದೆ. ಇದುವೇ ನಮ್ಮೆಲ್ಲರಿಗೂ ನೆಮ್ಮದಿ ಮತ್ತು ಸಮಾಧಾನ ಮೂಡಿಸಿದೆ ಎಂದು ರೇಜಾ ಷರೀಫ್ ನಿಟ್ಟುಸಿರುಬಿಟ್ಟರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ 92 ಅಫ್ಘನ್ ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ. 32 ವಿದ್ಯಾರ್ಥಿಗಳ ಪರೀಕ್ಷೆ ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಮುಗಿಯಲಿದೆ. ಅವರಿಗೆ ವೀಸಾ ಅವಧಿ ವಿಸ್ತರಣೆ ಮಾಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲಾಗುವುದು. ಆದ್ದರಿಂದ ಭಯ ಬಿಟ್ಟು ನಿರ್ಭೀತಿಯಿಂದ ಓದುವಂತೆ ಆತ್ಮಸ್ಥೈರ್ಯ ತುಂಬಲಾಗಿದೆ.| ಪ್ರೊ.ಜಿ.ಹೇಮಂತ್​ಕುಮಾರ್ ಕುಲಪತಿ ಮೈಸೂರು ವಿವಿ

ಮೈಸೂರು ವಿಶ್ವವಿದ್ಯಾಲಯದ ಪ್ರಮುಖರೊಂದಿಗೆ ಅಪ್ಘಾನಿಸ್ತಾನ್ ವಿದ್ಯಾರ್ಥಿಗಳು.

ಜೀವಕ್ಕೆ ತೊಂದರೆಯಾಗದಿದ್ದರೆ ಸಾಕು

ನಾನು ಮೈಸೂರಿನಲ್ಲಿ ಸುರಕ್ಷಿತವಾಗಿರುವೆ. ಆದರೆ, ನನ್ನ ಮನಸ್ಸು ನನ್ನ ದೇಶದ ಜನರಿಗಾಗಿ ಮಿಡಿಯುತ್ತಿದೆ. ಅವರೆಲ್ಲ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡು ಹೊಯ್ದಾಡುತ್ತಿದ್ದಾರೆ. ನನ್ನ ದೇಶದ ಭವಿಷ್ಯ ಅಸ್ಥಿರತೆಯತ್ತ ವಾಲಿದೆ. ಇಂತಹ ಭಯದ ಕುಲುವೆಯಲ್ಲಿ ಹೆಣ್ಣು ಮಕ್ಕಳ ಓದು, ಉದ್ಯೋಗ ಸದ್ಯ ಕನಸಿನ ಮಾತು. ಅವರ ಜೀವಕ್ಕೆ ಏನೂ ತೊಂದರೆಯಾಗದಿದ್ದರೆ ಸಾಕು ಎಂದು ಭಾವುಕರಾಗಿ ಹೇಳುತ್ತಾರೆ ಅಫ್ಘನ್ ವಿದ್ಯಾರ್ಥಿ ಹಲೀಮಾ ಅಕ್ಬಾರಿ. ಮೈಸೂರಿನ ಮಹಾರಾಜ ಕಾಲೇಜಿನ ಬಿಎ ವಿದ್ಯಾರ್ಥಿನಿಯಾಗಿರುವ ಇವರು 2019ರಿಂದ ಮೈಸೂರಿನಲ್ಲಿದ್ದು, ಇವರ ಕುಟುಂಬವು ಘಸ್ನಿ ಪ್ರಾಂತ್ಯದಲ್ಲಿ ನೆಲೆಸಿದೆ. ತಂದೆ ಸಣ್ಣ ವ್ಯಾಪಾರ ಮಾಡುತ್ತಿದ್ದು, ಸಹೋದರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿ ದ್ದಾರೆ. ಅವರೆಲ್ಲ ಮನೆಯಿಂದ ಹೊರ ಬರುತ್ತಿಲ್ಲ.

ಕ್ಷಣಕ್ಷಣಕ್ಕೂ ಆತಂಕ, ದುಃಖ ದುಮ್ಮಾನ...

ಕ್ಷಣಕ್ಷಣಕ್ಕೂ ದುಗುಡ. ಕುಟುಂಬ ಸದಸ್ಯರು, ಸಂಬಂಧಿಕರು ಹೇಗಿದ್ದಾರೋ ಎನ್ನುವ ಚಿಂತೆ. ದೇಶದ ಭವಿಷ್ಯ ಏನಾಗುವುದೋ, ಓದು ಮುಗಿಸಿ ಪುನಃ ಊರು ಸೇರಿಕೊಳ್ಳಲಾದೀತೇ? ಎನ್ನುವ ಆತಂಕ. ಇದು ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ ಓದಲು ಬಂದ ಅಪ್ಘಾನಿಸ್ತಾನ ಮೂಲದ ವಿದ್ಯಾರ್ಥಿಗಳ ಚಡಪಡಿಕೆ. ಇಂಡೋ- ಅಪ್ಘನ್ ಫೆಲೋಶಿಪ್ ಅಡಿ ಧಾರವಾಡಕ್ಕೆ ಓದಲು ಬಂದಿರುವ ವಿದ್ಯಾರ್ಥಿಗಳಿವರು. ಅಪ್ಘಾನಿಸ್ತಾನದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಉದ್ಯೋಗಿಗಳಾಗಿದ್ದರೂ ಉನ್ನತ ಶಿಕ್ಷಣಕ್ಕೆ ಹಾತೊರೆದು 15 ವಿದ್ಯಾರ್ಥಿಗಳು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನೆಲೆಸಿದ್ದಾರೆ. ಇವರು ಕೃಷಿ ವಿವಿಯಲ್ಲಿ ಪಿಎಚ್.ಡಿ ವ್ಯಾಸಂಗ ಮಾಡುತ್ತಿದ್ದಾರೆ. ಕರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಲಾಕ್​ಡೌನ್ ಘೋಷಣೆಯಾದಾಗ ಐವರು ಅಪ್ಘಾನಿಸ್ತಾನಕ್ಕೆ ಮರಳಿದ್ದಾರೆ. ಸದ್ಯ ಇಲ್ಲಿ 10 ವಿದ್ಯಾರ್ಥಿಗಳಿದ್ದು, ಕೃಷಿ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ವಿದ್ಯಾರ್ಥಿ ನಿಲಯದಲ್ಲಿ ನೆಲೆಸಿದ್ದಾರೆ.

ನಾನು 6 ವರ್ಷಗಳಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಇದು ನನ್ನ ಕಡೆಯ ವರ್ಷವಾಗಿದ್ದು, ಪರೀಕ್ಷೆ ಮುಗಿಸಿ ವಾಪಸ್ ಅಪ್ಘಾನಿಸ್ತಾನಕ್ಕೆ ಹೋಗಬೇಕಿತ್ತು. ಆದರೆ ನನ್ನ ತಾಯಿ ‘ಇಲ್ಲಿಗೆ ಬರಬೇಡ. ಇಲ್ಲಿ ಜೀವಕ್ಕೆ ಯಾವುದೇ ಭದ್ರತೆಯೇ ಇಲ್ಲ. ಅಲ್ಲೇ ಇರು. ಚೆನ್ನಾಗಿ ಓದಿಕೋ’ ಎಂದು ಹೇಳಿ ನನಗೆ ಧೈರ್ಯ ತುಂಬುತ್ತಿದ್ದಾರೆ. ಆದರೂ, ನನ್ನೊಳಗಿನ ತುಮುಲ ಅವರಿಗೂ ಅರ್ಥವಾಗಿದೆ.| ರೇಜಾ ಷರೀಫ್

ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರೊಂದಿಗೆ ಅಪ್ಘಾನಿಸ್ತಾನ್ ಮೂಲದ ವಿದ್ಯಾರ್ಥಿಗಳು.

ಛೇ... ಎಂಥಾ ತಪ್ಪು ಮಾಡಿದೆ...

ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕ ಅಫ್ಘನ್ ವಿದ್ಯಾರ್ಥಿಗಳ ಪೈಕಿ ಇಬ್ಬರು ಕುಟುಂಬ ಸಮೇತ ಇಲ್ಲೇ ನೆಲೆಸಿದ್ದಾರೆ. ಇವರಲ್ಲಿ ಒಬ್ಬ 20 ದಿನಗಳ ಹಿಂದಷ್ಟೇ ಕುಟುಂಬ ಸದಸ್ಯರನ್ನು ಅಪ್ಘಾನಿಸ್ತಾನಕ್ಕೆ ಕಳುಹಿಸಿದ್ದಾನೆ. ಅಲ್ಲಿ ತಾಲಿಬಾನ್ ಆಡಳಿತ ಬರುವುದರ ಮುನ್ಸೂಚನೆ ಇಲ್ಲದೇ ಹೋಯಿತಲ್ಲ. ಛೇ.. ಎಂಥಾ ತಪು್ಪ ಮಾಡಿದೆ.. ಕುಟುಂಬ ಸದಸ್ಯರನ್ನು ಇಲ್ಲೇ ಇಟ್ಟುಕೊಳ್ಳಬಾರದಿತ್ತೇ ಎಂದು ಮರುಗುತ್ತಿದ್ದಾನೆ.

ಪರಿಸ್ಥಿತಿ ಸುಧಾರಿಸಬಹುದೇನೋ...

ಅಪ್ಘಾನಿಸ್ತಾನದ ಪಾಮೀರ್ ಮೊಮಂದ್ 2 ವರ್ಷ ಎಂ.ಎಸ್​ಸಿ ಓದಿದ್ದು ಇದೇ ಧಾರವಾಡದ ಕೃಷಿ ವಿವಿಯಲ್ಲಿ. 2018ರಲ್ಲಿ ಎಂ.ಎಸ್​ಸಿ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿ ಅಲ್ಲಿನ ಲಾಘಮನ್ ವಿವಿಯಲ್ಲಿ ಅಗ್ರಿಕಲ್ಚರ್ ಫ್ಯಾಕಲ್ಟಿ ಆಗಿದ್ದಾರೆ. ಪಿಎಚ್.ಡಿ ಸಂಶೋಧನೆ ಕೈಗೊಳ್ಳಬೇಕೆಂಬ ಹಂಬಲದಿಂದ ಫೆಬ್ರವರಿಯಿಂದ ಇಲ್ಲಿ ಸಂಶೋಧನಾ ಕಾರ್ಯ ಕೈಗೊಂಡಿದ್ದಾರೆ. ಅವರು ಹೇಳಿದ್ದಿಷ್ಟು - ‘ಧಾರವಾಡವೇ ನಮಗೆ ಭಾರತವಿದ್ದಂತೆ. ಅದರಲ್ಲೂ ಕೃಷಿ ವಿವಿಯ ಕುಲಪತಿ, ಆಡಳಿತ ಮಂಡಳಿ, ಬೋಧಕೇತರ ಸಿಬ್ಬಂದಿ, ಹಾಸ್ಟೆಲ್ ಸಿಬ್ಬಂದಿ ಅಪ್ಘನ್ ವಿದ್ಯಾರ್ಥಿಗಳ ಬಗ್ಗೆ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿದ್ದ 15 ವಿದ್ಯಾರ್ಥಿಗಳಲ್ಲಿ ಐವರು ಇತ್ತೀಚೆಗೆ ತವರಿಗೆ ಮರಳಿದ್ದಾರೆ. ಅವರೀಗ ಓದು ಮುಂದುವರಿಸಲು ಧಾರವಾಡಕ್ಕೆ ಬರಲು ಬಯಸುತ್ತಿದ್ದಾರೆ. ಆದರೆ, ಅಲ್ಲಿನ ಪರಿಸ್ಥಿತಿ ಗಮನಿಸಿದರೆ ಮರಳಿ ಬರುವುದು ಕಷ್ಟ. ಸದ್ಯ ಎಲ್ಲರೂ ಸುರಕ್ಷಿತ ವಾಗಿದ್ದಾರೆ. ಒಂದೆರಡು ತಿಂಗಳು ಕಾದು ನೋಡೋಣ’ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.