ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ಆಡುವ ಮಾತುಗಳಿಗೆಲ್ಲ ಆ ದೇಶದ ಸಮ್ಮತಿ ಇದೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಅಮೆರಿಕದಲ್ಲೂ ರಾಹುಲ್ ಗಾಂಧಿ ಮಾತಾಡುವುದು ಚೀನಾವನ್ನು ಹೊಗಳಿಯೇ ಮತ್ತು ಮೋದಿ ಸರ್ಕಾರವನ್ನು ಅಪಾರವಾಗಿ ಮತ್ತು ಆಗೊಮ್ಮೆ ಈಗೊಮ್ಮೆ ಅಮೆರಿಕವನ್ನೂ ತೆಗಳಿಯೇ.
ಹಿಂದಿನ ಭಾಗದಲ್ಲಿ ವಿವರಿಸಿದಂತೆ ಇಂದು ಈ ವಲಯದಲ್ಲಿ ನಡೆಯುತ್ತಿರುವುದು ಹೊಸ ಪಾತ್ರಧಾರಿಗಳಿರುವ ಹೊಸ ಗ್ರೇಟ್ ಗೇಮ್ ಇದರ ವಿಶೇಷವೆಂದರೆ ಒಂದೂವರೆ ಶತಮಾನದ ಹಿಂದಿನ ಗ್ರೇಟ್ ಗೇಮ್ಲ್ಲಿ ಅಫ್ಘಾನಿಸ್ತಾನವನ್ನು ದಾಟಿ ದಕ್ಷಿಣಕ್ಕೆ ಕಾಲು ಹಾಕದಂತೆ ಝಾರಿಸ್ಟ್ ರಷ್ಯಾವನ್ನು ಸಾಮ್ರಾಜ್ಯಶಾಹಿ ಬ್ರಿಟನ್ ತಡೆಯಿತು. ಅದರಾಚೆಗೂ ಕೈಚಾಚಿ ರಷ್ಯಾದ ಭೌಗೋಳಿಕ ಸ್ಥಿತಿಯನ್ನು ಮಾರ್ಪಡಿಸುವ ಯಾವ ಪ್ರಯತ್ನವನ್ನೂ ಬ್ರಿಟನ್ ಮಾಡಲಿಲ್ಲ. ನಾಲ್ಕು ದಶಕಗಳ ಹಿಂದೆ ಅದೇ ಅಫ್ಘಾನಿಸ್ತಾನವನ್ನು ಕಮ್ಯೂನಿಸ್ಟ್ ಸೋವಿಯತ್ ಯೂನಿಯನ್ ದಾಟಿ ದಕ್ಷಿಣಕ್ಕೆ ಬಾರದಂತೆ ಅಮೆರಿಕ ತಡೆಯಿತು. ಅದಾದ ಮೇಲೆ ಸೋವಿಯತ್ ಯೂನಿಯನ್ ಛಿದ್ರಗೊಂಡು ರಷ್ಯಾ ಭೌಗೋಳಿಕವಾಗಿ ಕುಗ್ಗಿದ್ದು ಪ್ರಮುಖವಾಗಿ ತನ್ನದೇ ಆರ್ಥಿಕ ವೈಫಲ್ಯಗಳು ಹಾಗೂ ಭರಿಸಲಾಗದ ಸೇನಾ ಖರ್ಚಿನಿಂದಾಗಿ. ಇದರಲ್ಲಿ ಅಮೆರಿಕದ ನೇರ ಸೇನಾ ಕಾರ್ಯಾಚರಣೆಯೇನೂ ಇರಲಿಲ್ಲ. ಇಂದಿನ ಗ್ರೇಟ್ ಗೇಮ್ಲ್ಲಿ ಎದುರುಬದುರಾಗಿ ನಿಂತದ್ದು ಚೀನಾ ಮತ್ತು ಅಮೆರಿಕ. ಇದರಲ್ಲಿ ಅಮೆರಿಕ ಮಾಡಹೊರಟಿರುವುದು ಹಿಂದೆ ಬ್ರಿಟನ್ ಹಾಗೂ ತಾನೂ ಮಾಡದೇಹೋದದ್ದು. ಆ ಪ್ರಕಾರ ಅಮೆರಿಕ ಇಂದು ಪಾಕಿಸ್ತಾನದಲ್ಲಿ ಚೀನಾದ ಕಾರ್ಯಯೋಜನೆಗಳನ್ನು ಅತಂತ್ರಗೊಳಿಸಿ, ಬೀಜಿಂಗ್ನ ಅಗಾಧ ಪ್ರಮಾಣದ ಹಣಕ್ಕೆ ಪಂಗನಾಮ ಹಾಕಿಸಿದೆ, ಚೀನಾ ಕಕ್ಕಾಬಿಕ್ಕಿಯಾಗಿ ನೋಡುತ್ತ ಕೂತಿದೆ. ಚೀನಾವನ್ನು ಇಷ್ಟಕ್ಕೇ ಬಿಡಲು ಇಂದಿನ ಅಮೆರಿಕ ತಯಾರಿಲ್ಲ. ಬದಲಿಗೆ ಚೀನಾವನ್ನು ತುಂಡರಿಸಿ ಅದರ ಪಶ್ಚಿಮ ಭಾಗಗಳನ್ನು ಬೀಜಿಂಗ್ನ ಹಿಡಿತದಿಂದ ಹೊರತರಲು, ಆ ಮೂಲಕ ಚೀನಾ ತನ್ನ ಕನಸಿನ ಅರಬ್ಬಿ ಸಮುದ್ರದಿಂದ ಬಹುದೂರ ಹೊರಟುಹೋಗುವಂತೆ ಮಾಡಲು ಇಂದು ಅಮೆರಿಕ ಕಾರ್ಯಯೋಜನೆ ರೂಪಿಸಿದೆ! ಹಿಂದೆ ಯಾವ ಹಾನಿಗೂ ಒಳಗಾಗದೆ ಓಡಿಹೋಗಲು ರಷ್ಯಾವನ್ನು ಬ್ರಿಟನ್ ಬಿಟ್ಟಂತೆ, ತಾನೇ ಸೋವಿಯತ್ ಯೂನಿಯನ್ ಅನ್ನು ಅರೆಜೀವ ಮಾಡಿದಂತೆ ಇಂದು ಚೀನಾವನ್ನು ಬಿಟ್ಟುಬಿಡಲು ಅಮೆರಿಕ ತಯಾರಿಲ್ಲ.
ಇಂದು ಚೀನಾವನ್ನು ಮಟ್ಟಹಾಕಲು ಅಮೆರಿಕಕ್ಕೆ ಬೇಕಾಗಿರುವುದು ಆರ್ಥಿಕ, ರಾಜತಾಂತ್ರಿಕ ಹಾಗೂ ಸೇನಾ ಪ್ರಾಬಲ್ಯ. ಈ ಮೂರೂ ದಾರಿಗಳನ್ನು ಸುಗಮಗೊಳಿಸಲು ವಾಷಿಂಗ್ಟನ್ಗೆ ಭಾರತ, ನರೇಂದ್ರ ಮೋದಿ ನೇತೃತ್ವದ ಭಾರತ ಅತ್ಯಗತ್ಯ. ಇಪ್ಪತ್ತನೆಯ ಶತಮಾನದ ಆರಂಭದಿಂದ, ಮುಖ್ಯವಾಗಿ ಎರಡನೆಯ ಮಹಾಯದ್ಧದ ತರುವಾಯ ಅಮೆರಿಕದ ಎಲ್ಲ ಸರ್ಕಾರಗಳ ಹಿಂದೆ ನಿಂತು ತಮ್ಮ ಕೆಲಸ ಸಾಧಿಸಿಕೊಳ್ಳುವ ಔಷಧ ತಯಾರಿಕಾ, ತೈಲ ಉತ್ಪಾದಕ, ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳು ನಾವು ‘ಡೀಪ್ ಸ್ಟೇಟ್’ ಎಂದು ಕರೆಯುವ ದುಷ್ಟಕೂಟದ ಮುಖ್ಯ ಪಾತ್ರಧಾರಿಗಳು. ತಮ್ಮ ಲಾಭಕೋರತನಕ್ಕಾಗಿ ಅವು ಯಾವ ಹಂತಕ್ಕಾದರೂ ಇಳಿದು ಅಮೆರಿಕನ್ ಸರ್ಕಾರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬಲ್ಲವು, ಇತರ ದೇಶಗಳಲ್ಲೂ ತಮ್ಮ ನೀತಿಗಳಿಗೆ ಪೂರಕವಾದ ಸರ್ಕಾರಗಳಿರುವಂತೆ ಮಾಡಬಲ್ಲವು. ಅವುಗಳ ಧನಬಲಾಢ್ಯತೆ ಮತ್ತದನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಅವುಗಳ ಲಾಭಕೋರತನ ಆ ಮಟ್ಟದಲ್ಲಿದೆ.
1978ರ ನಂತರ ಚೀನಾ ಒದಗಿಸಿದ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಬಹುತೇಕ ಉತ್ಪಾದನಾ ಘಟಕಗಳನ್ನು ಅಲ್ಲಿಗೆ ವರ್ಗಾಯಿಸಿ, ಕಡಿಮೆ ಕೂಲಿಯಲ್ಲಿ ಅಗಾಧ ಪ್ರಮಾಣದಲ್ಲಿ ಉತ್ಪಾದನೆ ಮಾಡಿ ನಾಲ್ಕು ದಶಕಗಳ ಕಾಲ ಲಾಭ ದೋಚಿಕೊಂಡ ಇವು ಅಮೆರಿಕದ ಸರ್ಕಾರಗಳೆಲ್ಲವೂ ಚೀನಾದೊಂದಿಗೆ ಘನಿಷ್ಟ ಸಖ್ಯ ಹೊಂದಿರುವಂತೆ ನೋಡಿಕೊಂಡವು. ಇದರ ದುಷ್ಪರಿಣಾಮ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ತಟ್ಟಿದ್ದುಂಟು. ಈ ‘ಡೀಪ್ ಸ್ಟೇಟ್’ಗೆ ಭ್ರಮನಿರಸನ ಉಂಟಾಗತೊಡಗಿದ್ದು ಕೋವಿಡ್ ಸಂಕ್ರಮಣದ ದಿನಗಳಲ್ಲಿ ಚೀನೀ ಕಾರ್ಖಾನೆಗಳು ಮುಚ್ಚಿಹೋದಾಗ. ಚೀನಾದಲ್ಲಿನ ತಮ್ಮ ಕಾರ್ಖಾನೆಗಳನ್ನು ಬೇರೆಡೆ ವರ್ಗಾಯಿಸುವ ಒತ್ತಡಕ್ಕೆ ‘ಡೀಪ್ ಸ್ಟೇಟ್’ ಒಳಗಾಗಿ ಅತ್ತಿತ್ತ ಕಣ್ಣಾಡಿಸತೊಡಗಿದಾಗ ಕಂಡದ್ದು ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಮುಂತಾದ ಕ್ರಾಂತಿಕಾರಕ ಯೋಜನೆಗಳಿಂದಾಗಿ ವೇಗದ ಹಾಗೂ ಆರೋಗ್ಯಕರ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸತೊಡಗಿದ್ದ ಮೋದಿಯವರ ಭಾರತ. ಆದಾಗ್ಯೂ, ಬಹುತೇಕ ಕೈಗಾರಿಕೆಗಳನ್ನು ತನ್ನಲ್ಲಿ ಸೆಳೆದಿಟ್ಟುಕೊಂಡು ಪೂರೈಕೆ ಸರಪಳಿಯಲ್ಲಿ ಚೀನಾ ಸಾಧಿಸಿದ್ದ ಅಸಾಮಾನ್ಯ ಮೇಲುಗೈಯನ್ನು ಸರಿಗಟ್ಟುವುದು ಭಾರತಕ್ಕೆ ಸಾಧ್ಯವಿರಲಿಲ್ಲ ಮತ್ತು ಅದು ಕ್ಷಿಪ್ರಕಾಲದಲ್ಲಿ ಸಾಧಿತವಾಗುವಂತಹದೂ ಅಲ್ಲ. ಹೀಗಾಗಿ ಚೀನಾದಿಂದ ಭಾರತಕ್ಕೆ ಬಹುರಾಷ್ಟ್ರೀಯ ಕೈಗಾರಿಕೆಗಳ ವರ್ಗಾವಣೆ ನಿಧಾನವಾಗಿ ಆಗಬೇಕಾಗಿದೆ. ಅದಾಗುತ್ತಿದೆ. ಅದಕ್ಕಾಗಿ ಮೋದಿ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಇದರರ್ಥ ಚೀನಾದಿಂದ ಭಾರತಕ್ಕೆ ಕಾರ್ಖಾನೆಗಳ ವರ್ಗಾವಣೆಯ ವೇಗ ಖಚಿತ. ಇದೆಲ್ಲವೂ ಹೇಳುವುದು ಏನೆಂದರೆ ಒಂದುಕಾಲದಲ್ಲಿ ಚೀನಾಗೆ ಪ್ರಾಮುಖ್ಯ ನೀಡಿದ್ದ ‘ಡೀಪ್ ಸ್ಟೇಟ್’ ಇಂದು ಭಾರತವನ್ನು ಓಲೈಸತೊಡಗಿದೆ!
ಇಂದು ಅಮೆರಿಕದ ಸರ್ಕಾರ ಅದು ಡೆಮೋಕ್ರಾಟಿಕ್ ಪಕ್ಷದ್ದೇ ಇರಲಿ, ಭಾರತವನ್ನು ಅಪ್ಪಿಕೊಳ್ಳುತ್ತಿದೆ. ಐಎಂಎಫ್, ವಿಶ್ವಬ್ಯಾಂಕ್ ಸೇರಿದಂತೆ ಅಮೆರಿಕಾಸ್ಥಿತ ಜಾಗತಿಕ ಹಣಕಾಸು ಸಂಸ್ಥೆಗಳೆಲ್ಲವೂ ಮುಂದಿನ ವರ್ಷಗಳಲ್ಲಿ ಭಾರತದ ವಾರ್ಷಿಕ ಅಭಿವೃದ್ಧಿ ದರ ಮತ್ತು ಜಿಡಿಪಿ ಬೆಳವಣಿಗೆಯನ್ನು ಚೀನಾದಕ್ಕಿಂತಲೂ ಮೇಲೆ ಇಡುತ್ತಿವೆ. ಜೆಪಿ ಮಾರ್ಗನ್ ಅಂತೂ 2030ಕ್ಕೇ ಭಾರತದ ವಾರ್ಷಿಕ ಜಿಡಿಪಿ ಏಳು ಟ್ರಿಲಿಯನ್ ಡಾಲರ್ ತಲುಪುತ್ತದೆ ಎಂದು ಇದೇ ಸೋಮವಾರ ಸಾರಿಬಿಟ್ಟಿದೆ. ಭಾರತದ ಈ ‘ಫ್ಲಿಪ್’ ಮತ್ತು ಚೀನಾದ ‘ಫ್ಲಾಪ್’ ಏಕಕಾಲದಲ್ಲಿ ಮತ್ತು ವೇಗವಾಗಿ ಘಟಿಸುತ್ತಿರುವುದರಿಂದ ಈಗ ಚೀನಾ ಹೇಳಿಕೊಳ್ಳುವ (ಅದೆಷ್ಟು ನಿಜವೋ!) ಹನ್ನೆರಡು ಟ್ರಿಲಿಯನ್ ಡಾಲರ್ ಜಿಡಿಪಿ ಇಳಿಕೆಯಾಗುತ್ತ ಸಾಗಿ ಇನ್ನು ಐದು ವರ್ಷಗಳಲ್ಲಿ ಏಳು ಟ್ರಿಲಿಯನ್ ಡಾಲರ್ಗಿಂತಲೂ ಕೆಳಗಿಳಿದರೆ (ಅದು ಖಂಡಿತ ಸಾಧ್ಯ) ಭಾರತ ಅಮೆರಿಕ ನಂತರ ಜಗತ್ತಿನ ಎರಡನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗುತ್ತದೆ! ಎಲ್ಲ ಡೀಪ್ ಸ್ಟೇಟ್ ಮಹಿಮೆ!
ತನ್ನೆಲ್ಲ ಕಾರ್ಯಯೋಜನೆಗಳಿಗೆ ನವದೆಹಲಿಯಲ್ಲಿ ಮೋದಿ ಸರ್ಕಾರವೇ ಇರಬೇಕಾದ್ದು ಅತ್ಯಗತ್ಯ ಎಂದೀಗ ಡೀಪ್ ಸ್ಟೇಟ್ ತೀರ್ವನಿಸಿದೆ. ದಶಕದ ಹಿಂದೆ ಪರಿಸ್ಥಿತಿ ಸಂಪೂರ್ಣ ವಿರುದ್ಧವಾಗಿತ್ತು. 2004-14ರ ಅವಧಿಯಲ್ಲಿ ಯುಪಿಎಯಲ್ಲಿದ್ದ ಪ್ರಮುಖ ಪಕ್ಷಗಳೆಲ್ಲವೂ ಚೀನಾದ ಪರವಾಗಿದ್ದುದರಿಂದ ಅವೇನಾದರೂ ಮತ್ತೆ ಅಧಿಕಾರಕ್ಕೆ ಬಂದರೆ ಚೀನಾದಿಂದ ಕಾರ್ಖಾನೆಗಳನ್ನು ಭಾರತಕ್ಕೆ ವರ್ಗಾಯಿಸುವ ತಮ್ಮ ಯೋಜನೆಗೆ ಪೆಟ್ಟುಬೀಳುತ್ತದೆ ಎಂದು ಡೀಪ್ ಸ್ಟೇಟ್ ಸ್ಪಷ್ಟವಾಗಿ ಅರಿತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಡೀಪ್ ಸ್ಟೇಟ್ಗೆ ಕಾಣುವುದು ಅಪಾಯಕಾರಿಯಾಗಿ. ಭಾರತದಲ್ಲಿ ವ್ಯಾಕ್ಸಿನ್ ತಯಾರಿಕಾ ಘಟಕಗಳೂ ಸೇರಿದಂತೆ ಹಲವಾರು ಕೈಗಾರಿಕೆಗಳನ್ನು ಮುಚ್ಚಿ ಹಲವಾರು ಕ್ಷೇತ್ರಗಳಲ್ಲಿ ಭಾರತವನ್ನುಆರ್ಥಿಕವಾಗಿ ಚೀನಾದ ಮೇಲೆ ಅವಲಂಬಿತವಾಗುವಂತೆ ಮಾಡಿದ ಯುಪಿಎ (ಅರ್ಥಾತ್ ಕಾಂಗ್ರೆಸ್ ಕಮ್ಯೂನಿಸ್ಟ್ ಕಾಕಗಳು) ಮೇಲೆ ಇಂದು ಡೀಪ್ ಸ್ಟೇಟ್ ನಂಬಿಕೆಯಿಡುವುದು ಆಗದ ಮಾತು.
ಡೀಪ್ ಸ್ಟೇಟ್ ಹಿಂದೆಯೂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಅನುಮಾನ ದಿಂದಲೇ ನೋಡಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಲು ಸೋನಿಯಾರ ಅಂತರಾತ್ಮವೇನೂ ಕಾರಣವಲ್ಲ. ಅದು ಅಧ್ಯಕ್ಷ ಜಾರ್ಜ್ ಬುಷ್ ಜ್ಯೂ. ಮೂಲಕ ಡೀಪ್ ಸ್ಟೇಟ್ ಉರುಳಿಸಿದ ದಾಳದ ಪರಿಣಾಮ. ಚೀನಾದ ಜತೆ ರಹಸ್ಯ ಒಪ್ಪಂದ ಮಾಡಿಕೊಂಡ ರಾಹುಲ್ ಗಾಂಧಿ ಪ್ರಧಾನಿಯಾಗಲು ಅದೆಷ್ಟೇ ಪ್ರಯತ್ನಿಸಿದರೂ ಡಾ. ಸಿಂಗ್ ಇಡೀ ಅವಧಿಯನ್ನು ಪೂರೈಸಲೂ ಅಧ್ಯಕ್ಷ ಒಬಾಮ ಹಿಂದಿದ್ದ ಡೀಪ್ ಸ್ಟೇಟ್ ಕಾರಣ.
ಆ ದಿನಗಳಲ್ಲಿ ಡೀಪ್ ಸ್ಟೇಟ್ ಬೆಂಬಲಿಸಿದ್ದು ತನ್ನ ಅಂಗವಾದ ಫೋರ್ಡ್ ಫೌಂಡೇಷನ್ ಜತೆ ಸಂಪರ್ಕ ಹೊಂದಿದ್ದ ಅರವಿಂದ್ ಕೇಜ್ರಿವಾಲ್ ಮತ್ತವರ ಆಮ್ ಆದ್ಮಿ ಪಾರ್ಟಿಯನ್ನು. ಮೋದಿಯವರ ಬಗ್ಗೆ ಇಲ್ಲಿಯವರೇ ಸಾರುತ್ತಿದ್ದ ಸುಳ್ಳುಗಳು ಅವರ ಕುರಿತಾಗಿ ಡೀಪ್ ಸ್ಟೇಟ್ ಮತ್ತು ಶ್ವೇತಭವನದ ಅಭಿಪ್ರಾಯಗಳನ್ನು ಕಲುಷಿತಗೊಳಿಸಿದ್ದವು. ಆದರೆ ಅನತಿಕಾಲದಲ್ಲೇ ಕೇಜ್ರಿವಾಲ್ ಬಣ್ಣ ಬಯಲಾಗತೊಡಗಿದಂತೆ ಮತ್ತು ಮೋದಿಯವರ ನಿಜರೂಪ ಅನಾವರಣಗೊಳ್ಳತೊಡಗಿದಾಗ ಎಲ್ಲವೂ ಬದಲಾಗತೊಡಗಿತು. ರಾಹುಲ್ ಗಾಂಧಿ ಅಮೆರಿಕದಲ್ಲಿ ಆಡುವ ಮಾತುಗಳಿಗೆಲ್ಲ ಆ ದೇಶದ ಸಮ್ಮತಿ ಇದೆ ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಅಮೆರಿಕದಲ್ಲೂ ರಾಹುಲ್ ಗಾಂಧಿ ಮಾತಾಡುವುದು ಚೀನಾವನ್ನು ಹೊಗಳಿಯೇ ಮತ್ತು ಮೋದಿ ಸರ್ಕಾರವನ್ನು ಅಪಾರವಾಗಿ ಮತ್ತು ಆಗೊಮ್ಮೆ ಈಗೊಮ್ಮೆ ಅಮೆರಿಕವನ್ನೂ ತೆಗಳಿಯೇ. ಈ ಚೀನೀ ಪ್ರೀತಿಯನ್ನು ಅವರು ಚೀನೀಯರಿಗೆ ಹೇಳುವ ಅಗತ್ಯವಿಲ್ಲ. ಆ ದೇಶದಲ್ಲಿ ಅವರು ಭಾಷಣ ಮಾಡಿದ ಒಂದಾದರೂ ಉದಾಹರಣೆಯನ್ನು ಕಂಡಿದ್ದೀರಾ? ಅದೆಲ್ಲವನ್ನೂ ಅವರು ಮಾಡುವುದು ಪಶ್ಚಿಮ ಯೂರೋಪಿಯನ್ ದೇಶಗಳಲ್ಲಿ ಮತ್ತು ಅಮೆರಿಕದಲ್ಲಿ.
ಈ ಬಾರಿಯ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ಅನುಕೂಲವಾಗುವಂತಹ ಕೆಲವು ನೀತಿಗಳನ್ನು ಅಮೆರಿಕದಿಂದ ಚಾಲಿತಾಗುವ ಯೂಟ್ಯೂಬ್ ಮತ್ತು ಫೇಸ್ಬುಕ್ನಂತಹ ತಾಣಗಳು ಮಾಡಿದ್ದುಂಟು. ಅದಕ್ಕೆ ಅಮೆರಿಕದ ಸರ್ಕಾರ ಹೊಣೆಯಲ್ಲ. ಹಣ ಚೆಲ್ಲಿ ಯಾವುದೇ ತಾಣದ ಕೆಲವರನ್ನು ಖರೀದಿಸಬಹುದಾದದ್ದು ಮತ್ತು ಅದಕ್ಕಾಗಿ ಹಣ ಖರ್ಚುಮಾಡಲು ಅಂತಾರಾಷ್ಟ್ರೀಯ ಎಡಪಂಥೀಯ ಅರಾಜಕತಾವಾದಿ ಜಾರಜ್ ಸೊರೋಸ್ರಂತಹವರು ಇರುವುದು ವಾಸ್ತವ. ಹಾಗೆಯೇ ನ್ಯೂಯಾರ್ಕ್ನ ಸೌತ್ ಡಿಸ್ಟ್ರಿಕ್ಟ್ ಕೋರ್ಟ್ ಖಲಿಸ್ತಾನಿ ಆತಂಕವಾದಿ ಗುರುಪತ್ವಂತ್ ಸಿಂಗ್ ಪನ್ನೂ ನೀಡಿದ ದೂರನ್ನು ಮನ್ನಿಸಿ ನಮ್ಮ ಪ್ರಧಾನಿ, ಅವರ ರಾಷ್ಟ್ರೀಯ ಸುರಕ್ಷಾ ಸಲಹೆಗಾರರಿಗೆ ಸಮನ್ಸ್ ನೀಡಿರುವುದನ್ನೂ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಅದರಲ್ಲೂ ಬೈಡೆನ್ ಸರ್ಕಾರದ ಪಾತ್ರವಿಲ್ಲ. ಮೋದಿಯವರಿಗೆ ಈಗಷ್ಟೇ ಎಂತಹ ಆತ್ಮೀಯ ಸ್ವಾಗತ ಸಿಕ್ಕಿತು ಮತ್ತು ಅವರನ್ನು ಅಧ್ಯಕ್ಷ ಬೈಡೆನ್ ಅದೆಷ್ಟು ಮಹತ್ವದ ಜಾಗತಿಕ ನಾಯಕನನ್ನಾಗಿ ಪರಿಗಣಿಸಿದರು ಎನ್ನುವುದು ಅಮೆರಿಕ ಇಂದು ಮೋದಿ ಮತ್ತವರ ನೇತೃತ್ವದ ಭಾರತವನ್ನು ತೋರಿಸುತ್ತದೆ. ಆದರೆ ಬ್ರೇಕಿಂಗ್ ನ್ಯೂಸ್ ಬುರುಡೆಗಳಿಗೆ ಒಳ್ಳೆಯದು ಸುದ್ದಿಯಾಗುವುದಿಲ್ಲ. ಅವು ಸತ್ಯವನ್ನು ಹೇಳುವುದಿಲ್ಲ, ಹೇಳಿದರೂ ತಡವಾಗಿ ಹಾಗೂ ಸಣ್ಣದನಿಯಲ್ಲಿ ಹೇಳುತ್ತವೆ.
ಇವುಗಳ ಕೂಗಾಟಗಳನ್ನು ನಿರ್ಲಕ್ಷಿಸಿ ನಾವು ಗಮನ ಹರಿಸಬೇಕಾದ್ದು ಈ ಸರಣಿಯ ಮೊದಲ ಭಾಗದಲ್ಲಿ ವಿವರಿಸಲಾದ ಭಾರತ ಅಮೆರಿಕ ಸೇನಾ ಸಹಕಾರದ ಬಗ್ಗೆ, ಅತಿ ಕಡಿಮೆ ದೇಶಗಳೊಂದಿಗೆ ಮಾಡಿಕೊಂಡಿರುವ ಸಾಮರಿಕ ಹಾಗೂ ಸೇನಾ ಸಹಕಾರದ ಒಪ್ಪಂದಗಳನ್ನು ಭಾರತದೊಂದಿಗೆ ಇಂದು ಅಮೆರಿಕ ಮಾಡಿಕೊಂಡಿರುವುದರ ಬಗ್ಗೆ, ಚೀನಾವನ್ನು ಸಮರ್ಥವಾಗಿ ಎದುರಿಸಲು ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳ ನಡುವೆ ಘನಿಷ್ಟ ಸಾಮರಿಕ ಹಾಗೂ ಸೇನಾ ಸಹಕಾರಗಳನ್ನು ಏರ್ಪಡಿಸುವುದರ ಬಗ್ಗೆ ಮೊನ್ನೆ ಕ್ವಾಡ್ ಸಮ್ಮೇಳನದಲ್ಲಿ ವ್ಯಾಪಕ ಚರ್ಚೆ ಮತ್ತು ಸಹಮತ ಆದದ್ದರ ಬಗ್ಗೆ. ನಿಜವಾಗಿ ನಡೆಯುತ್ತಿರುವುದೇನು ಎನ್ನುವುದನ್ನು ನಮಗೆ ಮನಗಾಣಿಸುವುದು ಇವು. ಬ್ರೇಕಿಂಗ್ ನ್ಯೂಸ್ ಬುರುಡೆಗಳಲ್ಲ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)