ಅಂಕಣ

ಅಂತಃಕರಣ ಅನಾವರಣ: ಸಂಕಷ್ಟದಲ್ಲಿ ಸಹಾಯಕ್ಕೆ ನಿಂತವರು...

ಒಂದು ಚಿಕ್ಕ ವೈರಸ್ ಇಡೀ ಜಗತ್ತನ್ನೇ ಕಾಡುತ್ತಿದೆ. ಸೋಂಕಿತರು ತಮ್ಮಮನೆಯಲ್ಲಿ ತಾವೇ ‘ಏಕಾಂಗಿ’ ಆಗುವಂತೆ ಮಾಡುವ ಕರೊನಾ, ‘ಹತ್ತಿರದವರೂ’ ಹತ್ತಿರ ಬರದಂತೆ ಮಾಡಿಬಿಟ್ಟಿದೆ. ಮನುಷ್ಯರಿಂದ ಮನುಷ್ಯರೇ ದೂರ ಇರುವಂತೆ ಆಗಿರುವ ಈ ಸಂದರ್ಭದಲ್ಲಿ ಕೆಲವರು ಮಾನವೀಯತೆ ಮೆರೆದು ಆಪ್ತಭಾವ ಮೂಡಿಸುತ್ತಿದ್ದಾರೆ. ಶೋಆಫ್ ಮಾಡುವ ಇರಾದೆ ಇಲ್ಲದ ಇಂತಹ ಸೇವೆಯಲ್ಲಿ ಸಾವಿರಾರು ಯುವಜನರು ಮತ್ತು ಯುವಮನಸ್ಸಿನ ಜನರು ತೊಡಗಿದ್ದಾರೆ. ಆ ಪೈಕಿ ಸಾಂಕೇತಿಕವಾಗಿ ಕೆಲವರ ಸೇವೆಯ ಕುರಿತ ಕಿರುವಿವರ ಇಲ್ಲಿದೆ.

| ರವಿಕಾಂತ ಕುಂದಾಪುರ

ನಿರಾಳತೆ ಮೂಡಿಸುತ್ತಿರುವ ಉಸಿರು

ಕೋವಿಡ್-19 ಸೋಂಕಿತರನ್ನು ಅತಿಯಾಗಿ ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಉಸಿರಾಟದ್ದು. ಅಂಥವರಿಗೆ ತಾತ್ಕಾಲಿಕ ಉಪಶಮನ ನೀಡಿ ನಿಟ್ಟುಸಿರು ಬಿಡುವಂತೆ ಮಾಡಲು ಒಂದಷ್ಟು ಮಂದಿ ‘ಉಸಿರು’ ಎಂಬ ತಂಡ ಕಟ್ಟಿಕೊಂಡು ಸೇವಾನಿರತರಾಗಿದ್ದಾರೆ. ಅದಕ್ಕೆಂದೇ ಹತ್ತು ಲಕ್ಷ ರೂಪಾಯಿಗೂ ಅಧಿಕ ಖರ್ಚು ಮಾಡಿ ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳನ್ನು ಖರೀದಿಸಿ, ಗಂಭೀರ ಸಮಸ್ಯೆಯಲ್ಲಿರುವ ರೋಗಿಗಳ ಮನೆಗೇ ಅದನ್ನು ತಲುಪಿಸಿ ತುರ್ತು ಆರೈಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಮಂದಿಯೇ ಹೆಚ್ಚಾಗಿರುವ ಈ ತಂಡದಲ್ಲಿ ನಿರ್ವಪಕ ದಿನಕರ್ ತೂಗುದೀಪ, ಚಿತ್ರಸಾಹಿತಿ ಕವಿರಾಜ್, ನಟಿಯರಾದ ನೀತು ಶೆಟ್ಟಿ, ಅಕ್ಷತಾ ಎಂ., ನಟ ಸಂಚಾರಿ ವಿಜಯ್, ಸಂಗೀತ ನಿರ್ದೇಶಕ ಡಾ. ಕಿರಣ್ ತೋಟಂಬೈಲ್, ನಿರ್ದೇಶಕರಾದ ಕವಿತಾ ಲಂಕೇಶ್, ಕೆ.ಎಂ. ಚೈತನ್ಯ, ಸಾಧುಕೋಕಿಲ ಜತೆಗೆ ವಿನಯ್ ಪಾಂಡವಪುರ, ಶಕ್ತಿ ಎಂ., ಪವನ್ ಮುಂತಾದ ಯುವ ಮನಸ್ಸಿನ- ಹುಮ್ಮಸ್ಸಿನ ಹಲವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ‘‘ಸದ್ಯಕ್ಕೆ 9 ಲೀ. ಸಾಮರ್ಥ್ಯದ 16 ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳನ್ನು ಖರೀದಿಸಿದ್ದು, ಅಗತ್ಯವಿದ್ದವರ ಮನೆ ಬಾಗಿಲಿಗೇ ಅದನ್ನು ತಲುಪಿಸಲಾಗುತ್ತಿದೆ. ಇದಕ್ಕೆಂದೇ ಬೆಂಗಳೂರಿನಲ್ಲಿ 3 ಕೇಂದ್ರಗಳನ್ನಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿತ್ರರು, ವೈದ್ಯರು, ನರ್ಸಿಂಗ್ ಸಿಬ್ಬಂದಿ, ಸ್ವಯಂಸೇವಕರು ಸೇರಿ ಸುಮಾರು 50 ಮಂದಿ ಕೈಜೋಡಿಸಿದ್ದಾರೆ. ನಾವು ಸದ್ಯ 80-90 ಆಕ್ಸಿಜನ್ ಸ್ಯಾಚುರೇಷನ್ ಇರುವವರಿಗಷ್ಟೇ ಈ ನೆರವು ನೀಡುತ್ತಿದ್ದೇವೆ. ಅವರಿಗಷ್ಟೇ ಇದು ಹೆಚ್ಚು ಸೂಕ್ತ. ಮುಂದೆ ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳ ಸಂಖ್ಯೆಯನ್ನು ನೂರಕ್ಕೆ ಹೆಚ್ಚಿಸುವ ಗುರಿ ಇದೆ. ಹಾಗೆಯೇ ಒಳ್ಳೆಯ ಸಹಕಾರ ಸಿಕ್ಕರೆ ಈ ಸೇವೆಯನ್ನು ಬೆಂಗಳೂರಿನ ಹೊರಗೂ ವಿಸ್ತರಿಸುವ ಯೋಚನೆ ಇದೆ’’ ಎನ್ನುತ್ತಾರೆ ‘ಉಸಿರು’ ತಂಡದ ಪ್ರಮು ಖರಲ್ಲಿ ಒಬ್ಬರಾಗಿರುವ ಕವಿರಾಜ್. ಸಂಪರ್ಕಕ್ಕೆ: 6366177171.

ಚಿತ್ರರಂಗದ ಸಹಾಯಹಸ್ತ

ಕೋವಿಡ್ ಸಂಕಷ್ಟದಲ್ಲಿ ಇರುವವರಿಗೆ ಚಿತ್ರರಂಗದ ಹಲವರು ನಾನಾ ರೀತಿಯಲ್ಲಿ ನೆರವಾಗುತ್ತಿದ್ದಾರೆ. ಚಿತ್ರನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಅವರು ತಮ್ಮ ಭುವನ್ ಫೌಂಡೇಷನ್ ಮೂಲಕ ಆಕ್ಸಿಜನ್ ಎಕ್ಸ್​ಪ್ರೆಸ್ ಎಂಬ ಬಸ್ ಸೇವೆ ನೀಡಿದ್ದಲ್ಲದೆ, ಸೋಂಕಿತರಿಗೆ ಕಿಟ್-ಔಷಧ ತಲುಪಿಸಲು ಆಟೋ ಸೇವೆ ಕೂಡ ಒದಗಿಸುತ್ತಿದ್ದಾರೆ. ಚಿತ್ರನಟಿ ರಾಗಿಣಿ ಸಂಕಷ್ಟದಲ್ಲಿ ಇರುವವರಿಗೆ ಈ ವರ್ಷವೂ ದಿನಸಿ ಕಿಟ್, ಆಹಾರದ ಪೊಟ್ಟಣಗಳನ್ನು ತಮ್ಮದೇ ಜೆನ್​ನೆಕ್ಸ್ಟ್ ಚಾರಿಟಬಲ್ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಉಪ್ಪಿ ಫೌಂಡೇಷನ್ ಮೂಲಕ ಡಿಫರೆಂಟ್ ರೀತಿಯಲ್ಲಿ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಸಂಕಷ್ಟದಲ್ಲಿರುವ ಸಿನಿಮಾ ಮಂದಿಗೆ ಮಾತ್ರವಲ್ಲದೆ, ರೈತರಿಗೂ ಉಪೇಂದ್ರ ಸಹಾಯ ಮಾಡುತ್ತಿದ್ದಾರೆ. ಇವರಿಗೆ ಬಿ. ಸರೋಜಾದೇವಿ, ಮಾನ್ಯಾ, ಸಾಧುಕೋಕಿಲ, ಶೋಭರಾಜ್ ಮುಂತಾದವರಲ್ಲದೆ, ದೇಶ-ವಿದೇಶಗಳ ದಾನಿಗಳೂ ಸಹಕಾರ ನೀಡುತ್ತಿದ್ದಾರೆ. ನಟ ಶಿವರಾಜ್​ಕುಮಾರ್ ಕೂಡ ಬೆಂಗಳೂರಿನ ನಾಗವಾರದಲ್ಲಿ ಬಡವರಿಗೆ ಊಟಕ್ಕೆ ‘ಆಸರೆ’ಯಾಗಿದ್ದಾರೆ.

ನಿಜಾರ್ಥದ ಸೇವಕ, ದಿನವಿಡೀ ಕಾಯಕ..

ಚಿಕಿತ್ಸಾನಿರತ ಮಂಜುನಾಥ್
ಇವರು ಇಂಥ ಸಂಕಷ್ಟದ ಸಮಯದಲ್ಲೂ ದಿನಾ ಬೆಳಗ್ಗೆ ಹಾಗೂ ಸಂಜೆ ಜನರ ಸೇವೆಗೆಂದೇ ಸಮಯ ಮೀಸಲಿಟ್ಟಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿರುವ ಚಿತ್ರದುರ್ಗದ ಟಿ. ಮಂಜುನಾಥ್, ಕೆಲಸದ ಅವಧಿ ಮುಗಿದ ಬಳಿಕ ಅದನ್ನೇ ಸಮಾಜಸೇವೆಯಾಗಿ ಮಾಡುತ್ತಿದ್ದಾರೆ. ಹೋಮ್ ಐಸೋಲೇಷನ್​ನಲ್ಲಿ ಇರುವ ತುಂಬಾ ಮಂದಿಗೆ ಮನೆಗೇ ಹೋಗಿ ಮಾತ್ರೆಗಳನ್ನು ಕೊಡುತ್ತಾರೆ. ವೈದ್ಯರ ಸಲಹೆ ಮೇರೆಗೆ ಏನೇನು ಅಗತ್ಯ ಇದೆಯೋ ಅದೆಲ್ಲ ತಿಳಿಸಿ ಆರೈಕೆ ಜತೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇನ್ನು ಕೋವಿಡ್ ಸೋಂಕಿತರಲ್ಲದಿದ್ದರೂ ಬೇರೆ ಅನಾರೋಗ್ಯದಿಂದ ಬಳಲುತ್ತಿರುವವರು ಕರೆ ಮಾಡಿದರೆ ಅವರ ಮನೆಗೆ ತೆರಳಿ ಡ್ರೆಸ್ಸಿಂಗ್ ಮತ್ತಿತರ ಕೆಲಸ ಮಾಡುತ್ತಿದ್ದಾರೆ. ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 6ರಿಂದ 11, ಸಂಜೆ 6ರಿಂದ 10ರವರೆಗೆ ಈ ಸೇವೆ ಮಾಡುತ್ತಿದ್ದು, ಚಿತ್ರದುರ್ಗದ ಸುತ್ತಮುತ್ತಲ ಊರಿನವರಿಗೆ ಇವರ ನೆರವು ಲಭಿಸುತ್ತಿದೆ. ಸಂಪರ್ಕಕ್ಕೆ: 9880927486

ಸಂತ್ರಸ್ತ ಚಾಲಕರಿಗೆ ಇವರಿಂದಲೇ ‘ಇಂಧನ’

ಉಡುಪಿ ಜಿಲ್ಲೆ ಸಾಸ್ತಾನ ಟೋಲ್​ಗೇಟ್​ನಲ್ಲಿ ಸೇವಾನಿರತ ತಂಡ

ಇವರ ಸಹಾಯ ಇದೀಗ ರಾಜ್ಯದ ಹೊರಗೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಏಕೆಂದರೆ ಇವರ ಸಹಾಯಕ್ಕೆ ಪಾತ್ರರಾಗುತ್ತಿರುವ ಹಲವರು ಹೊರರಾಜ್ಯದವರೇ. ಕುಂದಾಪುರದ ಸಾಸ್ತಾನ ಟೋಲ್ಗೇಟ್ ಬಳಿ ಇವರದ್ದೊಂದು ತಂಡ ನಿತ್ಯ ನೂರಕ್ಕೂ ಅಧಿಕ ಮಂದಿಗೆ ಮಧ್ಯಾಹ್ನದ ಊಟ ನೀಡುತ್ತಿದೆ. ಜೀವನ್ಮಿತ್ರ ಎಂಬ ವಾಟ್ಸ್​ಆಪ್ ಗ್ರೂಪ್ ಮಾಡಿಕೊಂಡು ತಂಡವಾಗಿ ಕೆಲಸ ಮಾಡುತ್ತಿರುವ ಇವರು ಅಂಗಡಿ-ಹೋಟೆಲ್​ಗಳು ಮುಚ್ಚಿ ಎಲ್ಲೂ ಊಟ ಸಿಗದಂತಾಗಿರುವ ಪರಿಸ್ಥಿತಿಯಲ್ಲಿ ಊಟವನ್ನು ಉಚಿತವಾಗಿ ಹಂಚುತ್ತಿದ್ದಾರೆ. ‘‘ನಮ್ಮ ಊರಿನ ಮೂಲಕ ಹಾದುಹೋಗುವ ಹೊರರಾಜ್ಯಗಳ ವಾಹನ ಚಾಲಕರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಊಟ ಸಿಗುತ್ತಿಲ್ಲ ಎಂಬುದನ್ನು ತಿಳಿದು ಒಂದು ವಾರದಿಂದ ಊಟದ ಪೊಟ್ಟಣ ವಿತರಿಸುತ್ತಿದ್ದೇವೆ’’ ಎನ್ನುತ್ತಾರೆ ನಾಗರಾಜ್ ಪುತ್ರನ್. ‘‘ಇದಕ್ಕಾಗಿ ನಮ್ಮ ಮನೆಯಲ್ಲೇ ಒಬ್ಬ ಅಡುಗೆಯವರನ್ನು ಸಂಬಳ ಕೊಟ್ಟು ಇರಿಸಿಕೊಂಡು ಅಡುಗೆ ಮಾಡಿಸುತ್ತಿದ್ದೇವೆ. ನಮ್ಮ ಮನೆಯವರೆಲ್ಲರೂ ಅದಕ್ಕೆ ಕೈಜೋಡಿಸುತ್ತಿದ್ದಾರೆ. ಆರ್ಥಿಕವಾಗಿ ಪ್ರದೀಪ್ ಪಡುಕೆರೆ ಮುಂತಾದ ಸ್ಥಳೀಯ ಮುಖಂಡರು-ಗೆಳೆಯರು ಕೈಜೋಡಿಸುತ್ತಿದ್ದಾರೆ. ದಿನಕ್ಕೆ ಎಲ್ಲ ಸೇರಿ 5,500 ರೂ. ಖರ್ಚು ಬರುತ್ತಿದೆ. ಕರೊನಾ ಮೊದಲನೆಯ ಅಲೆ ಸಂದರ್ಭದಲ್ಲಿ 35 ದಿನಗಳಲ್ಲಿ 9,500 ಪೊಟ್ಟಣ ಆಹಾರ ವಿತರಿಸಿದ್ದೆವು. ಅದಕ್ಕೆ 3.96 ಲಕ್ಷ ರೂ. ಖರ್ಚಾಗಿದ್ದು, 2.5 ಲಕ್ಷ ರೂ. ಅವರಿವರಿಂದ ದೇಣಿಗೆ ಸಿಕ್ಕಿತ್ತು. ನಾನು ಬುಲೆಟ್ ತೆಗೆದುಕೊಳ್ಳಬೇಕು ಎಂದು 1 ಲಕ್ಷ ರೂ. ಕೂಡಿಟ್ಟಿದ್ದೆ. ತುರ್ತು ಅಂತ ಅದರಲ್ಲಿ ಸ್ವಲ್ಪಸ್ವಲ್ಪವೇ ತೆಗೆದು ಕೊನೆಯಲ್ಲಿ ಉಳಿದಿದ್ದು 25 ಸಾವಿರ ರೂ. ಮಾತ್ರ’’ ಎನ್ನುತ್ತಾರೆ ನಾಗರಾಜ್. ಹೊಟ್ಟೆ ಪಾಡಿಗೆ ಅವರದು ಆಂಬುಲೆನ್ಸ್ ಇದೆ. ಆದರೆ ಈಗ ಅದರಲ್ಲಿ ಬರುತ್ತಿರುವ ಲಾಭಾಂಶವನ್ನು ಉಳಿತಾಯ ಮಾಡುವ ಬದಲು ಇಂಥ ಕೆಲಸಕ್ಕೆ ಬಳಸುತ್ತಿದ್ದಾರೆ. ಸಂಪರ್ಕಕ್ಕೆ: 9686184490

ಸಂಸ್ಕಾರಕ್ಕೆ ಯಾರೂ ಸಿಗದಿದ್ದರೆ ಇವರೇ ‘ಅಂತಿಮ’

ಸಗಾಯ್​ರಾಜ್ ನೇತೃತ್ವದ ಅಂತಿಮಸಂಸ್ಕಾರ ತಂಡ

ಕರೊನಾ ಸೋಂಕಿನಿಂದ ಸಾವಿಗೀಡಾದವರ ಕುಟುಂಬಕ್ಕೆ ಅತಿ ದೊಡ್ಡ ಸವಾಲು ಅಂತಿಮ ಸಂಸ್ಕಾರದ್ದು. ಆಸ್ಪತ್ರೆಗಳಂತೆ ಸ್ಮಶಾನದಲ್ಲೂ ನೂಕುನುಗ್ಗಲು ಉಂಟಾಗಿ ಅಲ್ಲಿಯೂ ಸಮಸ್ಯೆಗಳಾಗುತ್ತಿವೆ. ಹೀಗೆ ಅಂತಿಮಸಂಸ್ಕಾರದ ಸಮಸ್ಯೆ ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಡಿದಾಗ ಅಂತಿಮ ಆಯ್ಕೆಯಾಗಿ ಇವರನ್ನು ಸಂರ್ಪಸ ಬಹುದು. ಬೆಂಗಳೂರು ಆರ್ಕಿಡಯೊಸಿಸ್ ದಕ್ಷಿಣ ವಲಯದ ಸಗಾಯ್ ರಾಜ್ ಅವರ ನೇತೃತ್ವದಲ್ಲಿ ಒಂದು ತಂಡವೇ ಇದಕ್ಕಾಗಿ ಶ್ರಮಿಸುತ್ತಿದೆ. 20 ಯುವಕರ ತಂಡ ಹಗಲಿರುಳೆನ್ನದೆ ಕಾರ್ಯನಿರತವಾಗಿದೆ. ‘‘ಕೆಲವು ಆಸ್ಪತ್ರೆಗಳಿಂದ ನಮಗೆ ಕರೆ ಬರುತ್ತದೆ. ನಾವು ಅಲ್ಲಿಗೆ ಹೋಗಿ ಶವಗಳನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ, ಸ್ಮಶಾನಕ್ಕೆ ತಂದು ಅವರವರ ಧರ್ಮದ ನಿಯಮಗಳಿಗೆ ಅನುಸಾರವಾಗಿ ಅಂತ್ಯಸಂಸ್ಕಾರ ನಡೆಸುತ್ತೇವೆ. ಕೆಲವರು ಬಡವರಿಗೆ ಪ್ಯಾಕಿಂಗ್ ಮೆಟಿರಿಯಲ್ ಕೊಳ್ಳುವಷ್ಟೂ ಹಣ ಇರುವುದಿಲ್ಲ. ನಾವೇ ಗೆಳೆಯರು ದುಡ್ಡು ಹಾಕಿ ಸಂಸ್ಕಾರ ಮಾಡಿದ್ದೂ ಇದೆ. ಒಂದು ತಿಂಗಳಲ್ಲಿ ಇದುವರೆಗೂ ನೂರಾರು ಶವಗಳ ಅಂತ್ಯಸಂಸ್ಕಾರ ಮಾಡಿದ್ದೇವೆ’’ ಎನ್ನುತ್ತಾರೆ ಈ ತಂಡದ ಸದಸ್ಯ ಕೆನಿಸನ್. (9886004067)

ಯಾಕೆ ಚಿಂತೆ? ವೈದ್ಯರ ತಂಡ ಇಲ್ಲಿದೆ

ಈ ಕರೊನಾ ವೈರಸ್ ಒಂದು ಕಾಲದ ಸಹಪಾಠಿಗಳನ್ನೆಲ್ಲ ಒಂದೊಳ್ಳೆಯ ಉದ್ದೇಶಕ್ಕೆ ಕೈಜೋಡಿಸುವಂತೆ ಮಾಡಿದೆ. ತಾವು ವಿದ್ಯಾರ್ಥಿಗಳಾಗಿ ಇದ್ದಾಗಿನ ಅದೇ ಜೋಶ್​ನಿಂದ ಇವರೆಲ್ಲ ಉಚಿತವಾಗಿ ಜನಸೇವೆ ಮಾಡುತ್ತಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜಿನ 1992ರ ಬ್ಯಾಚ್​ನ ಪದವೀಧರರ ಗುಂಪು ಬಿಎಂಸಿ-92 ಎಂಬ ಹೆಲ್ಪ್​ಲೈನ್ ಆರಂಭಿಸಿದೆ. ಕೋವಿಡ್ ಪಾಸಿಟಿವ್ ಆಗಿರುವ ಅಥವಾ ನೆಗೆಟಿವ್ ಇದ್ದೂ ರೋಗಲಕ್ಷಣ ಇರುವ ಯಾರೇ ಆಗಲಿ ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಇವರಿಗೆ ಕರೆ ಮಾಡಬಹುದು. ಸೂಕ್ತ ಸಲಹೆ ನೀಡಿ, ಮಾರ್ಗದರ್ಶನ ಮಾಡುವ ಕೆಲಸವನ್ನು ಈ ತಂಡ ಮಾಡುತ್ತಿದೆ. ‘‘ಈ ಹೆಲ್ಪ್​ಲೈನ್​ನಲ್ಲಿ 1300 ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 85 ಮಂದಿ ವೈದ್ಯರಿದ್ದಾರೆ. 50 ವೈದ್ಯರು ಬಿಎಂಸಿ-92ರ ಬ್ಯಾಚ್​ನ ಸ್ನೇಹಿತರು. ಸೋಂಕು ಇದೆ ಎಂದು ಗೊತ್ತಾದ ಕೂಡಲೇ, ಆರಂಭದಲ್ಲೇ ಸೂಕ್ತ ಸಲಹೆ ನೀಡಿ ಪ್ರಕರಣ ಗಂಭೀರವಾಗುವುದನ್ನು ತಡೆಯುವುದು ಈ ಸಹಾಯವಾಣಿಯ ಉದ್ದೇಶ’’ ಎನ್ನುತ್ತಾರೆ ಡಾ. ಎಚ್.ವಿ. ವಾಸು. ಸಂಪರ್ಕಕ್ಕೆ: 080 47166115.

ನಾನಿದ್ದೇನೆ ಒಟ್ಟಿಗೆ, ತಗೊಳಿ ಕಟ್ಟಿಗೆ!

ಒಂದಷ್ಟು ಮಂದಿ ಊಟ-ತಿಂಡಿ, ದಿನಸಿ ಕಿಟ್, ವೈದ್ಯಕೀಯ ಸಲಹೆ, ಆರೈಕೆ, ಅಂತಿಮ ಸಂಸ್ಕಾರ ಇತ್ಯಾದಿ ಮೂಲಕ ಸೇವೆ ಮಾಡುತ್ತಿದ್ದರೆ ಇಲ್ಲೊಬ್ಬರು ವಿಭಿನ್ನ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಎಂ. ಕೃಷ್ಣಣ್ಣ ಎನ್ನುವವರು ಶವಸಂಸ್ಕಾ ರಕ್ಕಾಗಿ ಉಚಿತವಾಗಿ ಸೌದೆ ನೀಡುತ್ತಿದ್ದಾರೆ! ಅದಕ್ಕೆಂದೇ ತಮ್ಮ ಕಚೇರಿ ಮುಂದೆ ಸೌದೆಯ ದೊಡ್ಡರಾಶಿಯನ್ನೇ ಹಾಕಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಸ್ನೇಹಿತರ ತಾಯಿಯೊಬ್ಬರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಸೌದೆಗೆ ಪಟ್ಟಪಾಡನ್ನು ಕಣ್ಣಾರೆ ಕಂಡು ಮನಸ್ಸು ಕರಗಿ ಈ ವ್ಯವಸ್ಥೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಯಾರೇ ಬೇಕಿದ್ದರೂ ತಮ್ಮಲ್ಲಿಗೆ ಬಂದು ಶವಸಂಸ್ಕಾರಕ್ಕೆ ಅಗತ್ಯ ವಿರುವ ಸೌದೆಯನ್ನು ಉಚಿತವಾಗಿ ತೆಗೆದುಕೊಂಡು ಹೋಗ ಬಹುದು ಎನ್ನುತ್ತಾರೆ ಕೃಷ್ಣಣ್ಣ. (080 23500211)