ಅಂಕಣ

ರೋಗನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿಣ: ಆರೋಗ್ಯ-ಸೌಂದರ್ಯ

ಅರಿಶಿಣ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದಿನನಿತ್ಯ ಉಪಯೋಗಿಸುವ ಸಾಂಬಾರು ಪದಾರ್ಥಗಳಲ್ಲಿ ಒಂದಾಗಿದೆ. ಅರಿಶಿಣವನ್ನು ನಿತ್ಯ ಬಳಕೆ ಮಾಡುವುದರಿಂದ ಜೀವನದಲ್ಲಿ ಸಮೃದ್ಧಿ ಕಾಣಬಹುದು. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಹಾಗಾಗಿ ಪೂಜೆ, ಹೋಮ ಹವನಗಳಲ್ಲಿ ಹೆಚ್ಚಾಗಿ ಅರಿಶಿಣ ಬಳಕೆ ಮಾಡಲಾಗುತ್ತದೆ. ನಾನಾ ಔಷಧೀಯ ಗುಣಗಳನ್ನು ಹೊಂದಿರುವ ಅರಿಶಿಣವನ್ನು ಮನೆಮದ್ದಾಗಿಯೂ ಬಳಸುತ್ತೇವೆ. ಕೆಲವೊಂದು ಮನೆಮದ್ದುಗಳ ಉಪಯೋಗಗಳು ಇಲ್ಲಿವೆ. ಹಾಗೂ ಹೊರಗೆ ಕಲಬೆರಕೆ ಅರಿಶಿಣ ಪುಡಿ ತರುವ ಬದಲು ಮನೆಯಲ್ಲೇ ಮಾಡುವ ವಿಧಾನವನ್ನೂ ತಿಳಿಸಲಾಗಿದೆ.

| ವೇದಾವತಿ.ಹೆಚ್.ಎಸ್ ಬೆಂಗಳೂರು

  • ಬಿಸಿಯಾದ ಒಂದು ಕಪ್ ಹಾಲಿಗೆ ಚಿಟಿಕೆ ಅರಿಶಿಣ ಪುಡಿ ಜತೆಗೆ ಒಂದು ಚಮಚ ಹಸುವಿನ ತುಪ್ಪ, ರುಚಿಗೆ ಕೆಂಪು ಕಲ್ಲು ಸಕ್ಕರೆ ಹಾಕಿ ಕುದಿಸಿ ಕುಡಿದರೆ ಶೀತ, ಕೆಮ್ಮು, ಗಂಟಲು ನೋವು ಗುಣವಾಗುತ್ತದೆ.
  • ಮೂಲವ್ಯಾಧಿ, ರಕ್ತಭೇದಿ, ಅತಿಸಾರವಾಗುತ್ತಿದ್ದರೆ ಒಂದು ಇಂಚು ಉದ್ದದ ಅರಿಶಿಣ ಕೋಡನ್ನು ನೀರಿನಲ್ಲಿ ತೇಯ್ದು ಮಜ್ಜಿಗೆಯಲ್ಲಿ ಹಾಕಿ ಒಂದು ವಾರ ಕುಡಿದರೆ ಗುಣವಾಗುತ್ತದೆ.
  • ಶೀತ ಜಾಸ್ತಿಯಾಗಿದ್ದರೆ ಬಿಸಿ ಬಿಸಿ ಕೆಂಡದ ಮೇಲೆ ಸ್ವಲ್ಪ ಅರಿಶಿಣ ಪುಡಿಯನ್ನು ಉದುರಿಸಿ ಅದರ ಹೊಗೆಯನ್ನು ಆಘ್ರಾಣಿಸಿದರೆ ಶೀತ ಕಡಿಮೆಯಾಗಿ, ಮೂಗು ಕಟ್ಟಿದ್ದರೆ ಸರಿ ಹೋಗುತ್ತದೆ.
  • ಮುಖದಲ್ಲಿ ಮೊಡವೆಗಳಿದ್ದರೆ ಅರಿಶಿಣದ ಕೋಡು ಮತ್ತು ಶ್ರೀಗಂಧ ತೇಯ್ದು ಹಸುವಿನ ಹಾಲಿನ ಕೆನೆಯಲ್ಲಿ ಕಲಸಿ ಹಚ್ಚುವುದರಿಂದ ಉಪಶಮನವಾಗುತ್ತದೆ.
  • ತ್ವಚೆಯಲ್ಲಿ ಸುಕ್ಕುಗಳಾಗಿದ್ದರೆ ಅರಿಶಿಣವನ್ನು ಅಕ್ಕಿ ಹಿಟ್ಟಿನೊಂದಿಗೆ ಬೆರೆಸಿ ಅದರೊಂದಿ ಹಸಿ ಹಾಲು ಅಥವಾ ಟೊಮ್ಯಾಟೊ ಸೇರಿಸಿದ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಮುಖಕ್ಕೆ ಹಚ್ಚಿದರೆ ಕ್ರಮೇಣ ತ್ವಚೆ ಮೃದುತ್ವ ಪಡೆಯುತ್ತದೆ.
  • ಅರಿಶಿಣ ಪುಡಿಯನ್ನು ನೀರಿಗೆ ಸೇರಿಸಿ ಗಾಯಗಳಾದ ಜಾಗದಲ್ಲಿ ಸವರುವುದರಿಂದ ಸೋಂಕು ಮತ್ತು ಉರಿ ಶಮನಗೊಳ್ಳುತ್ತದೆ.

ಪುಡಿ ತಯಾರಿಸುವ ವಿಧಾನ: 1/4 ಕೆಜಿ ಅರಿಶಿಣ ಬೇರನ್ನು ನೀರಿನಲ್ಲಿ ಮಣ್ಣು ಹೋಗುವಂತೆ ಚೆನ್ನಾಗಿ ತೊಳೆಯಿರಿ. ತೊಳೆದ ಅರಿಶಿಣವನ್ನು ಪಾತ್ರೆಗೆ ಹಾಕಿ ಮುಳುಗುವಷ್ಟು ನೀರನ್ನು ಹಾಕಿ ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ ಅರ್ಧ ಗಂಟೆ ಬೇಯಿಸಬೇಕು. ಮೆತ್ತಗೆ ಬೆಂದ ನಂತರ ನೀರನ್ನು ಸೋಸಿಕೊಳ್ಳಿ. ಅರಿಶಿಣವನ್ನು ತೆಳುವಾಗಿ ವೃತ್ತಾಕಾರವಾಗಿ ಕತ್ತರಿಸಿ ತಟ್ಟೆಯಲ್ಲಿ ಹರಡಿ. ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಬಳಿಕ ಜರಡಿ ಹಿಡಿದು ಡಬ್ಬಿಯಲ್ಲಿ ಸಂಗ್ರಹಿಸಿಡಿ.

ಅರಿಶಿಣ ಹಾಲು/ಗೋಲ್ಡನ್ ಮಿಲ್ಕ್: ಕಾಲು ಲೀಟರ್ ಹಾಲನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. 1/2 ಟೀ ಚಮಚ ಅರಿಶಿಣಪುಡಿ, 1/4 ಟೀ ಚಮಚ ಕಾಳುಮೆಣಸಿನಪುಡಿ, 1 ಟೇಬಲ್ ಚಮಚ ಕೆಂಪು ಕಲ್ಲು ಸಕ್ಕರೆ ಅಥವಾ ಬೆಲ್ಲ ಹಾಕಿ ಕುದಿಸಿ. ಚೆನ್ನಾಗಿ ಕುದಿ ಬಂದ ಬಳಿಕ 1/4 ಟೀ ಚಮಚ ತುಪ್ಪ ಅಥವಾ ತೆಂಗಿನ ಎಣ್ಣೆ ಹಾಕಿ ಮಿಶ್ರಣ ಮಾಡಿ ಕುಡಿಯಿರಿ. ಈ ಹಾಲು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮನೆಯಲ್ಲಿ ಎಲ್ಲರೂ ಮಲಗುವ ಮುನ್ನ ಕುಡಿಯಬಹುದು. ನಿದ್ದೆಯೂ ಚೆನ್ನಾಗಿ ಬರುತ್ತದೆ.