ನಗರವೊಂದರಲ್ಲಿದ್ದ ಪ್ರತಿಷ್ಠಿತ ಕಂಪನಿಯ ಬಾಸ್ ಸಿಡುಕು ಸ್ವಭಾವದವನಾಗಿದ್ದ. ಸಣ್ಣಪುಟ್ಟ ತಪ್ಪುಗಳಿಗೂ ಉದ್ಯೋಗಿಗಳ ಮೇಲೆ ಹರಿಹಾಯುತ್ತಿದ್ದ. ಒಂದು ದಿನ ಒಬ್ಬ ನೌಕರ ಸ್ವಲ್ಪ ತಡವಾಗಿ ಕೆಲಸಕ್ಕೆ ಬಂದ. ಇದನ್ನು ಕಂಡ ಬಾಸ್ ಕೋಪಗೊಂಡು ತಡವಾಗಿ ಬರಲು ಕಾರಣವೂ ಕೇಳದೆ ಬಾಯಿಗೆ ಬಂದಂತೆ ಬೈಯ್ದುಬಿಟ್ಟ. ಇತರ ಸಹೋದ್ಯೋಗಿಗಳ ಎದುರು ಅವಮಾನವಾದುದರಿಂದ ಬೇಸರಗೊಂಡ ಆತ ಆಫೀಸ್ನಿಂದ ಹೊರಬಂದು ಗುಮಾಸ್ತ ಹೇಳಿದ ಕಂಪನಿಯ ಒಂದು ಸಣ್ಣ ಕೆಲಸ ಮಾಡಲು ಹೋಗಿ ತಡವಾಯಿತೆಂದು ಭಾವಿಸಿ ಅವನಿಗೆ, ‘ನೀನು ಹೇಳಿದ ಕೆಲಸ ಮಾಡಲು ಹೋಗಿ ನಾನು ಬಾಸ್ನಿಂದ ಬೈಸಿಕೊಂಡೆ’ ಎಂದು ಕೂಗಾಡಿದ.
ಇದರಿಂದ ಬೇಸರಗೊಂಡ ಗುಮಾಸ್ತನು, ‘ಮನೆಯಲ್ಲಿ ತಡವಾಗಿದ್ದರಿಂದ ಫೋನ್ ಮಾಡಿ ಇವನಿಗೆ ಕೆಲಸ ಹೇಳಿದ್ದೆ, ಇದರಿಂದ ನನ್ನ ಮೇಲೆ ರೇಗಿದ್ದಾನೆ, ಇದಕ್ಕೆ ನನ್ನ ಹೆಂಡತಿಯೇ ಕಾರಣ’ ಎಂದು ಆಲೋಚಿಸಿದ. ಸಂಜೆ ಮನೆಗೆ ಹೋಗಿ, ‘ಇವತ್ತು ನೀನು ತಿಂಡಿ ಬೇಗ ಕೊಡದೆ ತಡವಾದುದರಿಂದ ನಾನು ಬೇರೆಯವರಿಂದ ಸುಮ್ಮನೆ ಬೈಸಿಕೊಳ್ಳುವಂತಾಯಿತು’ ಎನ್ನುತ್ತ ಹೆಂಡತಿ ಮೇಲೆ ಕೂಗಾಡಿದ. ಮಗನು ಬೇಗನೆ ಶಾಲೆಗೆ ರೆಡಿಯಾಗದೆ ಇದ್ದುದರಿಂದ ಗಡಿಬಿಡಿಯಲ್ಲಿ ತಿಂಡಿ ಮಾಡೋದು ತಡವಾಯಿತು ಎಂದು ಹೆಂಡತಿಯು ಭಾವಿಸಿ ನಾಯಿ ಜೊತೆಗೆ ಆಟವಾಡುತ್ತಿದ್ದ ಮಗನಿಗೆ ಏಟು ಕೊಟ್ಟು, ‘ನೀನು ನಾಯಿ ಜೊತೆ ಆಟವಾಡುತ್ತ, ಬೇಗನೆ ಶಾಲೆಗೆ ರೆಡಿಯಾಗದೆ ಇದ್ದುದರಿಂದಲೇ ನಿನ್ನ ಅಪ್ಪನಿಂದ ನಾನು ಬೈಸಿಕೊಂಡೆ’ ಎಂದು ರೇಗಿದಳು. ಅಮ್ಮನ ಏಟು ತಿಂದ ಮಗ, ‘ಇಷ್ಟಕ್ಕೆಲ್ಲ ಈ ನಾಯಿಯೇ ಕಾರಣ, ಇದರೊಂದಿಗೆ ಆಟವಾಡುತ್ತ ಕುಳಿತಿದ್ದರಿಂದಲೇ ಅಮ್ಮನಿಂದ ಹೊಡೆಸಿಕೊಂಡೆ’ ಎಂದುಕೊಳ್ಳುತ್ತ ನಾಯಿಗೆ ಒಂದು ಏಟು ಕೊಟ್ಟು, ‘ಹೋಗು ನೀನು, ಮನೆಯಲ್ಲಿ ಇರಬೇಡ, ನೀನಿದ್ದರೆ ಆಟವಾಡಬೇಕು ಎನಿಸುತ್ತದೆ’ ಎನ್ನುತ್ತ ಮನೆಯಿಂದ ಆಚೆಗೆ ಓಡಿಸಿಬಿಟ್ಟ. ‘ಇಷ್ಟು ದಿನವೂ ಮುದ್ದಿನಿಂದ ನೋಡಿಕೊಂಡು ಆಡುತ್ತಿದ್ದ ಪುಟ್ಟ ಏಟು ಕೊಟ್ಟು ಓಡಿಸಿದನಲ್ಲಾ!’ ಎಂದು ದುಃಖಿತವಾದ ನಾಯಿ ರಸ್ತೆಯಲ್ಲಿ ಬೇಸರ, ತಳಮಳದಿಂದ ಹೋಗುತ್ತಿತ್ತು. ಎದುರಿಗೆ ಒಬ್ಬ ವ್ಯಕ್ತಿ ಜಾಗಿಂಗ್ ಮಾಡಿಕೊಂಡು ತನ್ನತ್ತಲೇ ಬರುತ್ತಿದ್ದುದನ್ನು ನೋಡಿದ ಅದು ಅವನನ್ನು ಮನಬಂದಂತೆ ಕಚ್ಚಿಬಿಟ್ಟಿತು. ಸ್ವಾರಸ್ಯವೆಂದರೆ, ನಾಯಿಯಿಂದ ಕಚ್ಚಿಸಿಕೊಂಡವನು ಕಂಪನಿಯ ಬಾಸ್ ಆಗಿದ್ದನು. ಇವನಿಂದ ಆರಂಭಗೊಂಡಿದ್ದ ಕರ್ಮದ ಸರಣಿ ಒಬ್ಬರಿಂದ ಒಬ್ಬರಿಗೆ ಸಾಗಿಕೊಂಡು ಕೊನೆಗೆ ಇವನಿಗೆ ಶಿಕ್ಷೆ ಆಗುವತನಕ ಮುಂದುವರಿದಿತ್ತು. ಹೀಗೆ ನಾವು ಏನೇ ಮಾಡಿದರೂ ಅದರ ಫಲಾಫಲಗಳನ್ನು ನಾವೇ ಅನುಭವಿಸಬೇಕಾಗುತ್ತದೆ. ವಿಪರ್ಯಾಸ ಎಂದರೆ ಈ ಅನುಭವದ ಮಾತನ್ನು ಅರ್ಥ ಮಾಡಿಕೊಳ್ಳಲು ಮನುಕುಲದಿಂದ ಸಂಪೂರ್ಣವಾಗಿ ಆಗಿಲ್ಲದಿರುವುದರಿಂದಲೇ ಈಗಲೂ ಪಾಪಕೃತ್ಯಗಳು ಜರುಗುತ್ತಲೇ ಇವೆ.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)