ಸವಿತಾ ಧೃವರಾವ್ ತೊರವಿ ಹುಬ್ಬಳ್ಳಿ 
ಅಂಕಣ

ಫಸ್ಟ ಕ್ಲಾಸ್​ನಲ್ಲಿ ಪಾಸಾಗಿದ್ದೆ, ಅಂದು ಅಪ್ಪ ಧೈರ್ಯ ತುಂಬದಿದ್ದರೆ 1 ವರ್ಷ ಹಾಳಾಗುತ್ತಿತ್ತು

ಇಂದು ಅಪ್ಪಂದಿರ ದಿನದ ವಿಶೇಷ. ಈ ಹಿನ್ನೆಲೆಯಲ್ಲಿ ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.

ಅಪ್ಪ ಎಂದರೆ ನೆನಪಾಗುವ ಮೊದಲನೆಯ ಪದ ಧೈರ್ಯ. ನಾನು ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೆ. ಚೆನ್ನಾಗಿಯೇ ಓದಿದ್ದೆ. ಪರೀಕ್ಷೆಯ ದಿನ ಬೆಳಗ್ಗೆಯಿಂದಲೂ ಜ್ವರದಿಂದ ಮೈಸುಡುತ್ತಿತ್ತು. ಮೈಮೇಲೆಲ್ಲಾ ಗುಳ್ಳೆಗಳು ಎದ್ದಿದ್ದವು. ಹೋಗಲು ಆಗದಂಥ ಪರಿಸ್ಥಿತಿ. ವರ್ಷ ಸುಮ್ಮನೆ ಹಾಳಾಯಿತು ಎಂದು ಆಳ್ತಾ ಇದ್ದೆ. ‘ನಾನು ಪರೀಕ್ಷೆಗೆ ಹೋಗಲ್ಲ. ಮೈಯೆಲ್ಲಾ ಗುಳ್ಳೆಗಳೆದ್ದಿವೆ’ ಎಂದಾಗ ಅಪ್ಪ, ‘ಇಷ್ಟು ಓದಿದ್ದಿ, ಸುಮ್ಮನೆ ಯಾಕೆ ಒಂದು ವರ್ಷ ಹಾಳು ಮಾಡುತ್ತಿ. ಏನೂ ಆಗಲ್ಲ ಪರೀಕ್ಷೆ ಎದುರಿಸು’ ಎಂದು ಧೈರ್ಯ ತುಂಬಿದರು. ಪರೀಕ್ಷೆ ನಡೆಯುವಲ್ಲಿ ಜತೆಗೇ ಬಂದು ಪರೀಕ್ಷೆ ಕೊಠಡಿಯ ಹೊರಗಡೆ ಪರೀಕ್ಷೆ ಮುಗಿಯುವತನಕ ಕುಳಿತರು. ಮಧ್ಯದಲ್ಲಿ ಪ್ಯೂನ್ ಕಡೆ ಹಣ್ಣಿನರಸ ಕಳಿಸುತ್ತಿದ್ದರು. ಕೊನೆಗೆ ಹೇಗೋ ಪರೀಕ್ಷೆ ಮುಗಿಸಿ ಅವರ ಜತೆ ಮನೆಗೆ ಬಂದೆ. ಮುಂದೆ ರಿಸಲ್ಟ್ ಬಂತು. ಫಸ್ಟ ಕ್ಲಾಸ್​ನಲ್ಲಿ ಪಾಸಾಗಿದ್ದೆ. ಅಂದು ಅಪ್ಪ ಧೈರ್ಯ ತುಂಬದಿದ್ದರೆ ಒಂದು ವರ್ಷ ಹಾಳಾಗುತ್ತಿತ್ತು. ಇಂದಿಗೂ ಅವರ ಧೈರ್ಯ, ಮಮತೆ ನೆನಪಾಗುತ್ತೆ.

| ಸವಿತಾ ಧೃವರಾವ್ ತೊರವಿ ಹುಬ್ಬಳ್ಳಿ