ಅಂಕಣ

ಮನೋಲ್ಲಾಸ: ಧನದ ಪರಿವರ್ತನೆ ಹೇಗೆ?

| ಚಿದಂಬರ ಮುನವಳ್ಳಿ

ಉದ್ಯೋಗಪತಿಯೊಬ್ಬ ಭಾರಿ ಯಶಸ್ಸನ್ನು ಗಳಿಸಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದ. ಒಂದು ದಿನ ಅವನು ಕಾರಿನಲ್ಲಿ ಹೊರಟಾಗ ನೀರಡಿಕೆಯಾದ್ದರಿಂದ ರಸ್ತೆಬದಿ ಎಳನೀರು ಕಂಡು ಗಾಡಿ ನಿಲ್ಲಿಸಿ ಕೆಳಗಿಳಿದ. ಅಲ್ಲಿಯೇ ಹತ್ತಿರದಲ್ಲಿ ನಡೆಯುತ್ತಿದ್ದ ಸತ್ಸಂಗದ ವಿಚಾರವೊಂದು ಧ್ವನಿವರ್ಧಕದಿಂದ ಕೇಳಿ ಬರುತ್ತಿತ್ತು- ‘ವಿಚಿತ್ರವೆಂದರೆ ಅಂತ್ಯಕಾಲಕ್ಕೆ ಹಣವನ್ನು ತಮ್ಮೊಟ್ಟಿಗೆ ಒಯ್ಯಲಾಗದೆಂಬ ಸತ್ಯ ಗೊತ್ತಿದ್ದರೂ ಎಲ್ಲರೂ ಅದರ ಹಿಂದೆ ಬಿದ್ದಿದ್ದಾರೆ’. ಅದನ್ನು ಕೇಳಿದ ಈತ, ‘ಪ್ರವಚನ ಹೇಳುತ್ತಿರುವವರ ಬಳಿ ಹಣ ಇರಲಿಕ್ಕಿಲ್ಲ. ಅದಕ್ಕೆ ಹೀಗೆ ಹೇಳುತ್ತಿರಬಹುದು. ಹಣ ಗಳಿಸುವುದು ಎಷ್ಟು ಕಷ್ಟ ಎಂಬುದು ಅವರಿಗೇನು ಗೊತ್ತು?’ ಎಂದು ಗೊಣಗಿಕೊಂಡು ಹೊರಟ. ಆದರೆ ಆ ವಾಕ್ಯ ಮಾತ್ರ ಅವನ ತಲೆ ಕೊರೆಯಲಾರಂಭಿಸಿತು.

‘ನನಗೂ ವಯಸ್ಸಾಗುತ್ತ ಬಂತು. ಇಷ್ಟು ದಿವಸ ಗಳಿಸಿದ ಸಂಪತ್ತು ನನ್ನ ಮರಣಾನಂತರ ಏನಾಗಬಹುದು? ಅದನ್ನೇನಾದರೂ ಕೊಂಡೊಯ್ಯಬಹುದಾ?’ ಎಂಬ ಚಿಂತೆ ಆರಂಭವಾಯಿತು. ತನ್ನ ಮಿತ್ರರ ಸಲಹೆ ಕೇಳಿದ. ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವವರನ್ನೆಲ್ಲ ಕರೆಸಿ ಉಪಾಯ ಸೂಚಿಸಲು ಹೇಳಿದ. ಏನೂ ಪ್ರಯೋಜನವಾಗಲಿಲ್ಲ. ಕೆಲ ದಿನ ಕಳೆದ ಮೇಲೆ ಒಬ್ಬ ಜ್ಞಾನಿಯನ್ನು ಭೇಟಿ ಮಾಡಿದ.

ಆ ಜ್ಞಾನಿವ್ಯಕ್ತಿ ಕೇಳಿದ- ‘ನೀವೇನಾದರೂ ಈ ಮೊದಲು ವಿದೇಶ ಪ್ರವಾಸ ಮಾಡಿದ್ದೀರಾ?’

ಉದ್ಯಮಿ: ‘ಹೌದು. ಸುಮಾರು ದೇಶಗಳನ್ನು ಸುತ್ತಾಡಿದ್ದೇನೆ’.

ಜ್ಞಾನಿ: ‘ನೀವು ಅಲ್ಲಿ ಹೋಗಬೇಕಾದರೆ ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತೀರಾ?’ ಉದ್ಯಮಿ: ‘ಇಲ್ಲ ನನ್ನಲ್ಲಿರುವ ರೂಪಾಯಿಗಳನ್ನು ಅಲ್ಲಿ ಚಲಾವಣೆಯಲ್ಲಿ ಇರುವ ಹಣಕ್ಕೆ ಪರಿವರ್ತಿಸಿಕೊಂಡು ಹೋಗುತ್ತೇನೆ’.

ಜ್ಞಾನಿ: ‘ಹಾಗೇಕೆ ಮಾಡುತ್ತೀರಿ’?

ಉದ್ಯಮಿ: ‘ನಮ್ಮ ರೂಪಾಯಿ ಅಲ್ಲಿ ನಡೆಯುವುದಿಲ್ಲವಲ್ಲ’.

ಜ್ಞಾನಿ-‘ಮರಣಾನಂತರದ ಜಗತ್ತಿನಲ್ಲಿಯೂ ಈ ನಮ್ಮ ಸಂಪತ್ತು ಕೆಲಸಕ್ಕೆ ಬರವುದಿಲ್ಲ. ಅಲ್ಲಿ ಚಲಾವಣೆಯಾಗುವ ಒಂದೇ ನಾಣ್ಯವೆಂದರೆ ಪುಣ್ಯ. ಹೀಗಾಗಿ ನಿಮ್ಮಲ್ಲಿರುವ ಸಂಪತ್ತನ್ನು ಅವಶ್ಯಕತೆ ಇರುವವರಿಗೆ ದಾನ, ಧರ್ಮ, ಸತ್ಕರ್ಮ ಮುಂತಾದವುಗಳಿಗೆ ಸದುಪಯೋಗ ಮಾಡಿ ಪುಣ್ಯವನ್ನಾಗಿ ಪರಿವರ್ತಿಸಿಕೊಳ್ಳಿ. ಅದರ ಅಪಾರವಾದ ಫಲವನ್ನು ನೀವು ನಿಶ್ಚಿತವಾಗಿ ಅಲ್ಲಿ ಕೊಂಡೊಯ್ಯಬಹುದು’. ಉದ್ಯಮಿಗೆ ಜ್ಞಾನೋದಯವಾಯಿತು. ಇದನ್ನೂ ಓದಿ: ಮನೋಲ್ಲಾಸ: ನಿಜವಾದ ಬೆಳಕು ಯಾವುದು?

ನಾವು ಗಳಿಸಿದ ಸಂಪತ್ತನ್ನು ಉಪಯೋಗಿಸಲು ಮೂರೇ ಮೂರು ದಾರಿ. ಒಂದು, ಸ್ವತಃ ಉಪಭೋಗ ಮಾಡಿ ಆನಂದಿಸುವುದು ಅಥವಾ ಸ್ವಜನರಿಗೆ ಸಿಗುವಂತೆ ವ್ಯವಸ್ಥೆ ಮಾಡುವುದು. ಎರಡನೆಯದಾಗಿ ದಾನ ಧರ್ಮಗಳಂಥ ಸತ್ಕರ್ಮಗಳಿಂದ ಸದುಪಯೋಗಪಡಿಸಿ ಮನಃಶಾಂತಿ ಹಾಗೂ ಪುಣ್ಯ ಸಂಪಾದಿಸವುದು. ಕೊನೆಯದಾಗಿ ಇದ್ಯಾವದನ್ನೂ ಮಾಡದೆ ಜಿಪುಣತನದಿಂದ ಆ ಧನವನ್ನು ಕೂಡಿಟ್ಟು ಕೊಳೆಯಿಸಿ ಯಾರದೋ ಪಾಲಾಗುವಂತೆ ಬಿಟ್ಟು ಹೋಗುವುದು. ಸರ್ವಜ್ಞನ ವಚನದಂತೆ ‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’. ಜನೋಪಯೋಗಿ ಮಹಾನ್ ಕಾರ್ಯಗಳು ನಡೆಯುವಲ್ಲಿ ಕೈಗೂಡಿಸದಿದ್ದರೆ ನಮ್ಮ ಮುಂದಿನ ಪ್ರಯಾಣಕ್ಕೆ ಅವಶ್ಯವಾಗಿ ಬೇಕಾಗುವ ಪುಣ್ಯವೆಂಬ ದುಡ್ಡಿನಿಂದ ವಂಚಿತರಾಗಿ ಉಳಿದು ಬಿಡಬೇಕಾಗುತ್ತದೆ. ಆಯ್ಕೆ ನಮ್ಮದು.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)