ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು. 
ಅಂಕಣ

ವೇದಾಂತದ ಮಹತ್ವ ಮನಗಾಣಿಸಿದ ವೀರಸನ್ಯಾಸಿ

Webdesk - Ravikanth
ಅಮೆರಿಕ, ಯುರೋಪ್​ಗಳು ಭೋಗಜೀವನದ ತುತ್ತತುದಿಯನ್ನು ಮುಟ್ಟಿದ್ದವು. ವಾರಕ್ಕೊಂದು ದಿನ ಸಲ್ಲಿಸುವ ಪ್ರಾರ್ಥನೆಯಿಂದ ಆಂತರಿಕ ಶೂನ್ಯ ತುಂಬುವಂತಿರಲಿಲ್ಲ. ನ್ಯೂಯಾರ್ಕ್​ನಲ್ಲಿ ಸ್ವಾಮೀಜಿ ತೆಗೆದುಕೊಳ್ಳುತ್ತಿದ್ದ ಧ್ಯಾನದ ತರಗತಿಗಳಿಗೆ ಕಿಕ್ಕಿರಿದು ಜನ ಸೇರುತ್ತಿದ್ದುದಲ್ಲದೆ, ಎಷ್ಟೋ ಜನ ಸ್ಥಳದ ಅಭಾವದಿಂದ ನಿರಾಶೆಗೊಂಡು ವಾಪಸ್ ಹೋಗುತ್ತಿದ್ದರು.

ಇಂದು ಸೆಪ್ಟೆಂಬರ್ 8. ಎರಡು ಅದ್ಭುತ ಸಂದರ್ಭಗಳ ನಡುವೆ ಇವತ್ತು ನಾವು ನಿಂತಿದ್ದೇವೆ. ಸೆಪ್ಟೆಂಬರ್ 5ರಂದು ಆದರ್ಶ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನವಾದರೆ, ಸೆಪ್ಟೆಂಬರ್ 11ಕ್ಕೆ ವೇದಾಂತ ಕೇಸರಿಯೊಂದು ಭೋಗಭೂಮಿಯ ಕೇಂದ್ರ ಅಮೆರಿಕದ ಷಿಕಾಗೋದಿಂದ ತ್ಯಾಗದ ಸಂದೇಶವನ್ನು ಜಗತ್ತಿನ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುವಂತೆ ಮಾಡಿತು. ವೇದಾಂತದ ಸಾರವೇ ಉದ್ಧಾರಕ್ಕೆ ಬುನಾದಿ, ತ್ಯಾಗ ಪ್ರವೃತ್ತಿ ಎಂಬುದು. ಜಗತ್ತಿನ ಯಾವುದೇ ಮೂಲೆಯಲ್ಲಾಗಲಿ ಮಹಾನ್ ಕಾರ್ಯವೊಂದು ನಡೆದಿದ್ದರೆ ಅದರ ಹಿಂದೆ ಕೆಲವರ ತ್ಯಾಗ ಇರಲೇಬೇಕು. ತ್ಯಾಗವೇ ಏಕಮೇವ ಮಾರ್ಗವೆಂದು ಮಹಾನಾರಾಯಣ ಉಪನಿಷತ್ ಬುದ್ಧಪೂರ್ವ ಕೆಲ ಸಾವಿರ ವರ್ಷಗಳ ಹಿಂದೆಯೇ ಕಂಡುಹಿಡಿದು ಜಗತ್ತಿನ ಮುಂದೆ ಇಟ್ಟಿದೆ.

ಆದರೆ, ಷಿಕಾಗೋದ ಸರ್ವಧರ್ಮ ಸಮ್ಮೇಳನ ನಡೆದಿದ್ದು ಈ ಸಂದೇಶ ಸಾರುವುದಕ್ಕಾಗೇನೂ ಅಲ್ಲ. ಅದರ ವ್ಯವಸ್ಥಾಪಕರಿಗೆ ತಮ್ಮ ಧರ್ಮದಲ್ಲಿ ‘ತ್ಯಾಗ’ ಒಂದು ಮಹಾನ್ ಸಂದೇಶದಂತೆ ಎಂದೂ ಕಾಣಲಿಲ್ಲ. ಹಾಗೆ ಅವರಿಗೆ ಕಂಡಿದ್ದು ಸ್ವರ್ಗ ಮಾತ್ರ. ಅವರ ಉದ್ದೇಶವಿದ್ದದ್ದು ಪ್ರಪಂಚದ ಪ್ರಮುಖ ಶ್ರೀಮಂತ ರಾಷ್ಟ್ರಗಳೆಲ್ಲ ಕ್ರಿಶ್ಚಿಯನ್ ರಾಷ್ಟ್ರಗಳಾದ್ದರಿಂದ ಎಲ್ಲರೂ ಕ್ರಿಸ್ತನನ್ನೇ ಅನುಸರಿಸಬೇಕು ಎಂದು ಸಾರುವುದೇ ಆಗಿತ್ತು. ಡಕೋಟಾ ಪ್ರಾಂತ್ಯದ ರೆವರೆಂಡ್ ಜೋಸೆಫ್ ಕುಕ್ (1836-1902) ಹಾಗೆಯೇ ಸಾರಿದರು ಕೂಡ. ಆದರೆ, ಇದಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದು ವಿವೇಕಾನಂದರೇ. ‘ಮತ್ತೊಬ್ಬರನ್ನು ದರೋಡೆ ಮಾಡುವುದೇ ಶ್ರೀಮಂತರಾಗಲು ಅತ್ಯಂತ ಸುಲಭ ಮಾರ್ಗವೆಂದು ಭಾವಿಸಿ ಕೋಟ್ಯಂತರ ಏಷ್ಯನ್ನರ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ಗಟ್ಟಿಸುತ್ತಿರುವ ಕ್ರಿಶ್ಚಿಯನ್ ರಾಷ್ಟ್ರ ಇಂಗ್ಲೆಂಡಿನ ಮಾರ್ಗವನ್ನು ಅನುಸರಿಸಿ ಶ್ರೀಮಂತನಾಗಲು ಯಾವ ಹಿಂದುವೂ ಎಂದಿಗೂ ಬಯಸುವುದಿಲ್ಲ’ ಎಂದು ಹೇಳಿದಾಗ ಅಮೆರಿಕನ್ನರು ಕರತಾಡನದಿಂದಲೇ ಸಂಭ್ರಮಿಸಿದ್ದರು! ಇಂತಹ ಮಾತುಗಳಿಂದ ಮುಂದಿನ ಮೂರೂವರೆ ವರ್ಷ ವಿವೇಕಾನಂದರು ಎದುರಿಸಿದ ತೊಂದರೆಗಳ ಬಗ್ಗೆ ‘ಮತ್ತೊಬ್ಬ ಹಿಂದು ನನ್ನ ಜಾಗದಲ್ಲೇನಾದರೂ ಇದ್ದಿದ್ದರೆ ಅವನು ಸತ್ತೇಹೋಗುತ್ತಿದ್ದ’ ಎಂಬ ವಾಕ್ಯವೇ ಸಾಕಷ್ಟು ವಿವರಣೆ ನೀಡಬಲ್ಲದು. ಆದರೆ, ಅವರ ಸರಳತೆ, ಸುಸಂಸ್ಕೃತ ನಡವಳಿಕೆ, ಅಪಾರ ವಿದ್ವತ್ತಿನ ಜೊತೆಗೆ ಅವರ ಮಾತುಗಳಲ್ಲಿನ ವೈಚಾರಿಕ ಪ್ರಖರತೆ, ವೈಜ್ಞಾನಿಕ ದೃಷ್ಟಿಕೋನಗಳಿಗೆ ಮನಸೋತು ಆಜೀವ ಪರ್ಯಂತ ಅವರ ಕಟ್ಟಾ ಆಭಿಮಾನಿಗಳಾದವರ ವರ್ಗಕ್ಕೆ ಹೋಲಿಸಿದರೆ ವಿರೋಧಿಗಳ ಸಂಖ್ಯೆ ನಗಣ್ಯ. ಶ್ರೀ ರಾಮಕೃಷ್ಣರ ಅಪೂರ್ವ, ಅಸದೃಶ, ಅಪಾರ ಆಧ್ಯಾತ್ಮಿಕ ಅನುಭವಗಳನ್ನೇ ಸ್ವಾಮೀಜಿ ತಮ್ಮ ತೇಜಸ್ವಿ ವಾಗ್ಮಿತೆಯ ಮೂಲಕ ಪ್ರಸ್ತುತಪಡಿಸಿದರು. ತನ್ಮೂಲಕ ಸನಾತನ ಧರ್ಮ ಮಾನುಷ ಸಮಸ್ಯೆಗಳ-ಅದು ಲೌಕಿಕವಿರಲಿ ಪಾರಮಾರ್ಥಿಕವಿರಲಿ- ಸಾರ್ವಕಾಲಿಕ ಪರಿಹಾರ ಎಂಬುದನ್ನು ಸಂಶಯಕ್ಕೆಡೆಯಿಲ್ಲದಂತೆ ಮೊಳಗಿಸಿದರು. ಅವರದೇ ಭಾಷೆಯಲ್ಲಿ ಹೇಳಬೇಕೆಂದರೆ ‘ಕ್ರಿಶ್ಚಿಯನ್ ಒಬ್ಬ ಹಿಂದೂವಾಗಲೋ ಇಲ್ಲವೇ ಹಿಂದೂ ಕ್ರಿಶ್ಚಿಯನ್ನೋ ಅಥವಾ ಮುಸ್ಲಿಮನಾಗಲೋ, ಮುಸ್ಲಿಂ ಹಿಂದು ಅಥವಾ ಕ್ರಿಶ್ಚಿಯನ್ ಆಗಲೋ ವೇದಾಂತ ಎಂದಿಗೂ ಬಯಸುವುದಿಲ್ಲ. ಅದು ಬಯಸುವುದು ಹಿಂದುವೊಬ್ಬ ಇನ್ನೂ ಉತ್ತಮ ಹಿಂದು, ಮುಸ್ಲಿಮನೊಬ್ಬ ಇನ್ನೂ ಉತ್ತಮ ಮುಸ್ಲಿಂ, ಕ್ರಿಶ್ಚಿಯನ್ ಇನ್ನೂ ಉತ್ತಮ ಕ್ರಿಶ್ಚಿಯನ್ ಆಗಲಿ ಎಂದು ಮಾತ್ರ.’ ಅಮೆರಿಕನ್ ಯಹೂದ್ಯನೊಬ್ಬ ಮುಂದೆ ಉದ್ಗರಿಸಿದ್ದುಂಟು- ‘ಅವರ ಮಾತುಗಳೆಲ್ಲ ನನಗೆ ಅರ್ಥವಾಯಿತೆಂದು ಹೇಳಲಾರೆ. ಆದರೆ, ನನ್ನ ಧರ್ಮದಲ್ಲಿ ನನಗಿದ್ದ ಶ್ರದ್ಧೆ ಮೊದಲಿಗಿಂತ ಜಾಸ್ತಿ ಆಯಿತು’. ಇದನ್ನೇ ವೇದಾಂತ ಕೇಸರಿ ಬಯಸಿದ್ದು ಕೂಡ. ಏಕೆಂದರೆ ವೇದಾಂತದ ಉಸಿರೇ ತರ್ಕಬದ್ಧತೆ, ವೈಶಾಲ್ಯ ಮತ್ತು ಪರಿಶೀಲನಾರ್ಹತೆ. ಕಾರಣ ಅದೊಂದು ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಹಾಸು ಹೊಕ್ಕಾಗಿರುವ ಅದ್ಭುತ ಚಿಂತನೆ.

ಇದೇ ನಿಜವಾದ ಭಾರತೀಯ ಧರ್ಮ ಅಥವಾ ಹಿಂದೂ ಧರ್ಮ. ಮರುಭೂಮಿಯ ಬೇಗೆಯಲ್ಲಿ ಬೆಂದ ಜನರಿಗೆ ಅಮೃತ ಸಿಂಚನವಾದಂತಿರುತ್ತಿತ್ತು ಅವರ ಉಪನ್ಯಾಸಗಳು. ‘ಕ್ರಿಶ್ಚಿಯನ್ನರಾದ ನಾವು ಇಂಥ ಚಿಂತನೆಗಳನ್ನು ಎಂದೂ ಕೇಳಿರಲಿಲ್ಲ. ಪ್ರತಿ ಅಮೆರಿಕನ್ನನೂ ಇವುಗಳನ್ನು ಕೇಳಬೇಕು ಮತ್ತು ವಿವೇಕಾನಂದರನ್ನು ಪರಿಚಯಿಸಿಕೊಳ್ಳಬೇಕು. ಭಾರತದಲ್ಲಿ ಇಂಥವರು ಇನ್ನೂ ಇದ್ದರೆ ಅವರೆಲ್ಲಾ ಇಲ್ಲಿಗೆ ಬರಲಿ’ ಎಂದು ಕೃತಜ್ಞತಾಭಾವದಿಂದ ಹೇಳಿದ್ದು ಮಿಷಿಗನ್ ಪ್ರಾಂತ್ಯದ ಗವರ್ನರನ ಪತ್ನಿ. ಜೀವನದಲ್ಲಿ ಜಝುರಿತರಾಗಿದ್ದ, ಧರ್ಮದ ಸೋಗಿನಲ್ಲಿ ಹತ್ತಾರು ರೀತಿಯ ಮೋಸಗಳಿಗೊಳಗಾಗಿ ಇದರ ಸಹವಾಸವೇ ಬೇಡವೆಂದು ಆಜ್ಞೇಯತಾವಾದಿಗಳಾಗಿದ್ದ, ಪ್ರಾಮಾಣಿಕ ಆಸ್ಥೆಯಿಂದ ಚರಮಸತ್ಯವನ್ನು ಅರಸಿ ಜೀವನವನ್ನು ಸಾರ್ಥಕವನ್ನಾಗಿಸಿಕೊಳ್ಳಬೇಕೆಂಬ ಬಯಕೆ ಹೊತ್ತಿದ್ದ, ಅವರ ಸುಮಧುರ ಕಂಠದಿಂದ ಹೊರಹೊಮ್ಮುವ ಇಂಗ್ಲಿಷ್ ಭಾಷೆಯ ರತ್ನಗಳಂಥ ಪದಪುಂಜ (ಹೀಗೆಂದು ಪತ್ರಿಕೆಯೊಂದು ಬರೆದಿದ್ದು )ಗಳನ್ನು ಕೇಳಿ ಆನಂದಿಸಬೇಕೆಂಬ ಹಂಬಲವಿದ್ದ, ಒಟ್ಟಿನಲ್ಲಿ ಸಮಾಜದ ಪ್ರತಿ ಸ್ತರವೂ ವಿವೇಕಾನಂದರ ಭಾಷಣಗಳಿಗಾಗಿ ಮುಗಿಬೀಳುತ್ತಿತ್ತು. ಯಾವ ಊರಿಗೆ ಹೋದರೂ ಸಂಚಲನವೇ ಉಂಟಾಗುತ್ತಿತ್ತು. ‘ಸುಂಟರಗಾಳಿ ಸಂನ್ಯಾಸಿ’ ಎಂದೇ ಬಿಂಬಿಸುತ್ತಿದ್ದ ವೃತ್ತಪತ್ರಿಕೆಗಳು ಮುಖಪುಟದಲ್ಲೇ ವಿವರಗಳನ್ನು ಪ್ರಕಟಿಸುತ್ತಿದ್ದವು. ಭಾರತೀಯನೊಬ್ಬ ಇಂಥ ಭವ್ಯ, ಮಹೋನ್ನತ ವ್ಯಕ್ತಿತ್ವವನ್ನು ಹೊಂದಿರಬಲ್ಲ ಎಂದು ಭಾವಿಸುವುದಕ್ಕೂ ಸಾಧ್ಯವಿರಲಿಲ್ಲ ಅಮೆರಿಕನ್ನರಿಗೆ. ಯಾವ ಭಾರತದ ಬಗ್ಗೆ ನಮ್ಮ ಪುಸ್ತಕಗಳಲ್ಲಿ ಹಲವು ವಿಕೃತ ವಿವರಗಳನ್ನು ಓದಿದ್ದೆವೋ ಅದೇ ಭಾರತದಿಂದ ಬಂದವನೇ ಈತ? ಎಂದು ಉದ್ಗರಿಸುತ್ತಿದ್ದವರಿಗಂತೂ ಲೆಕ್ಕವಿರಲಿಲ್ಲ. ಅವರ ಜನಪ್ರಿಯತೆ ಪಾದ್ರಿಗಳ ನಿದ್ರೆ ಕೆಡಿಸಿತ್ತು. ಒಬ್ಬ ಪಾದ್ರಿ ಅವರ ಈ ವ್ಯಕ್ತಿತ್ವಕ್ಕೆ ಕಾರಣ ಅವರು ಓದಿದ್ದು ನಮ್ಮ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಎಂದು ಹಸಿಸುಳ್ಳನ್ನು ಎಬ್ಬಿಸಿದರೆ, ಡೆಟ್ರಾಯ್್ಟಲ್ಲಿ ಅವರ ಕೀರ್ತಿಗೆ ಮಸಿ ಬಳಿಯಲು ಅವಮಾನಕರ ಲೇಖನಗಳನ್ನು ಮುದ್ರಿಸಲಾಯ್ತು. ಕಾರಣವಿಷ್ಟೇ- ಜನರು ಯೋಚಿಸಲಾರಂಭಿಸಿದರು. ಇಂಥ ತಿಳಿವಳಿಕಸ್ಥ ಜನರಿರುವ ದೇಶಕ್ಕೆ ಧರ್ಮಪ್ರಚಾರಕರನ್ನು ಕಳಿಸಿ ಹಣ ಪೋಲು ಮಾಡುವುದಕ್ಕಿಂತ ಅವರೇ ನಮ್ಮಲ್ಲಿ ಬಂದು ಪ್ರಚಾರಗೈಯಲಿ. ಪರಿಣಾಮವಾಗಿ ಪಾದ್ರಿಗಳ ವರಮಾನ ಹಲವು ಮಿಲಿಯನ್ ಡಾಲರ್​ಗಳಷ್ಟು ಕುಸಿಯಿತು.

ಭಾರತೀಯ ಧರ್ಮ ಚಿಂತನೆ ಮನುಕುಲದ ಹಿತವನ್ನು ಮಾತ್ರ ನಿರಂತರ ಬಯಸಿದೆ. ದೈವತ್ವದೆಡೆಗೆ ಪಯಣಿಸದೆ ಯಾವ ಮನುಷ್ಯನೂ ದುಃಖದಿಂದ ಪಾರಾಗಲಾರ. ಆದರೆ, ಮಾನವಸ್ತರದಲ್ಲಿನ ಭೋಗ ವಿಲಾಸಗಳ ಆಕರ್ಷಣೆ ದೈವತ್ವದೆಡೆಗೆ ಮನಸ್ಸು ಹೊರಳದಂತೆ ತಡೆಯುತ್ತದೆ. ಭೋಗ ಜೀವನ ತೀವ್ರವಾದಷ್ಟೂ ಮನಸ್ಸಿನ ನೆಮ್ಮದಿ ಕಡಿಮೆಯಾಗುತ್ತಾ ಹೋಗುತ್ತದೆ. ಮಹಾಭಾರತದ ಯಯಾತಿ ಇದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾನೆ. ಆಗ ಇರುವ ಏಕಮೇವ ಮಾರ್ಗ ಮನಸ್ಸನ್ನು ಅನಂತತೆಯೆಡೆಗೆ ಹರಿಸಬೇಕು. ಅಂತಮುಖಿಯಾಗಿಸಬೇಕು. ಭೋಗ ವಸ್ತುಗಳ ಆಕರ್ಷಣೆಯನ್ನು ಕಡಿಮೆ ಮಾಡಿಕೊಂಡು ಯೋಗ ಜೀವನದ ಔನ್ನತ್ಯವನ್ನು ಸ್ಪಷ್ಟವಾಗಿ ಜನರಿಗೆ ಮನಗಾಣಿಸಬೇಕು. ಲೇಪರಹಿತ, ದಿವ್ಯ ಅನುಭೂತಿಗಳನ್ನು ಇಚ್ಛಾಮಾತ್ರದಿಂದ ತಾನೂ ಅನುಭವಿಸಿ ಇತರರಿಗೂ ಸುಲಭವಾಗಿ ಕರುಣಿಸಬಲ್ಲ ಮಹಾ ಸಂತನೊಬ್ಬನ ಸಾನ್ನಿಧ್ಯ, ಉಪದೇಶ ಮತ್ತು ಮಾರ್ಗದರ್ಶನವೇ ಏಕಮೇವ ದಾರಿ. ಈ ಉದಾತ್ತ ಉದ್ದೇಶಕ್ಕೆ ಹೇಳಿ ಮಾಡಿಸಿದಂಥ ವ್ಯಕ್ತಿಯಾಗಿದ್ದರು ವಿವೇಕಾನಂದರು. ಅಮೆರಿಕ, ಯುರೋಪ್​ಗಳು ಭೋಗಜೀವನದ ತುತ್ತತುದಿಯನ್ನು ಮುಟ್ಟಿ ಪರ್ಯಾಪ್ತ (Saturation) ಸ್ಥಿತಿ ತಲುಪಿತ್ತು. ಆದರೆ, ಅದಕ್ಕೆ ಅದರ ಅರಿವಿರಲಿಲ್ಲ. ವಾರಕ್ಕೊಂದು ದಿನ ಸಲ್ಲಿಸುವ ಪ್ರಾರ್ಥನೆಯಿಂದ ಆಂತರಿಕ ಶೂನ್ಯ ತುಂಬುವಂತಿರಲಿಲ್ಲ. ನ್ಯೂಯಾರ್ಕ್​ನಲ್ಲಿ ಸ್ವಾಮೀಜಿ ತೆಗೆದುಕೊಳ್ಳುತ್ತಿದ್ದ ಧ್ಯಾನದ ತರಗತಿಗಳಿಗೆ ಕಿಕ್ಕಿರಿದು ಜನ ಸೇರುತ್ತಿದುದಲ್ಲದೆ, ಎಷ್ಟೋ ಜನ ಸ್ಥಳದ ಅಭಾವದಿಂದ ನಿರಾಶೆಗೊಂಡು ವಾಪಸ್ ಹೋಗುತ್ತಿದ್ದರು. ಮುಂದೆ ಸೇಂಟ್ ಲಾರೆನ್ಸ್ ನದಿ ತೀರದ ಸಹಸ್ರದ್ವೀಪೋದ್ಯಾನದಲ್ಲಿ ವಿವೇಕಾನಂದರು ಮಂತ್ರದೀಕ್ಷೆ ಕೊಟ್ಟು ಶಿಷ್ಯರನ್ನು ತೀವ್ರ ಸಾಧನೆಗಳಿಗೆ ಪ್ರಚೋದಿಸಿದ ಮೇಲಂತೂ ಇಷ್ಟು ದಿನ ತಾವು ಅನುಭವಿಸುತ್ತಿದ್ದ ಶೂನ್ಯ ಯಾವುದು ಎಂದು ಅವರಿಗೆ ಸ್ಪಷ್ಟವಾಯಿತು. ಒಂದೆರಡು ವರ್ಷಗಳ ಒಳಗಾಗಿಯೇ ಎಷ್ಟೋ ಶಿಷ್ಯರು ಅತೀಂದ್ರಿಯ ಅನುಭವಗಳನ್ನು ಪಡೆಯುವುದಕ್ಕೆ ಪ್ರಾರಂಭಿಸಿದರು. ಮುಂದೆ ವಿವೇಕಾನಂದರು ‘ಬುದ್ಧ ಪೌರ್ವಾತ್ಯರಿಗೆ ಸಂದೇಶ ಕೊಟ್ಟಂತೆ ಪಾಶ್ಚಿಮಾತ್ಯರಿಗೆ ನನ್ನದೊಂದು ಸಂದೇಶವಿದೆ’ ಎಂದಿದ್ದನ್ನೂ, ‘ಇಡೀ ಪಶ್ಚಿಮಕ್ಕೆ ಬೆಳಕು ಬೇಕಾಗಿದೆ; ಅದು ಭಾರತದಿಂದಲೇ ಹೋಗಬೇಕಾಗಿದೆ’ ಎಂದು ಹೇಳಿದ್ದನ್ನೂ ಈ ಹಿನ್ನೆಲೆಯಲ್ಲಿ ಅರ್ಥೈಸಬೇಕು.

ಅದೆಲ್ಲಾ ಸರಿ! ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತಾಯ್ನಾಡಿಗೆ ಇದರಿಂದ ಪ್ರಯೋಜನವೇನಾಯ್ತು! ಯಾರಿಗಾಗಿ ಕಣ್ಣೀರು ಸುರಿಸಿದರೋ ಆ ದುರ್ಬಲ ವರ್ಗಗಳಿಗೆ ಯಾವ ಪುರುಷಾರ್ಥ ಸಿಕ್ಕಿತು? ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಒಂದು ಜನಾಂಗವಾಗಲಿ ವ್ಯಕ್ತಿಯಾಗಲಿ ನಿಜಕ್ಕೂ ಅಧಃಪತನಕ್ಕೆ ಹೋಗುವುದು ಆತ್ಮವಿಶ್ವಾಸವನ್ನು ಕಳೆದುಕೊಂಡಾಗ ಮಾತ್ರ. ಹಾಗೆಯೇ ವ್ಯಕ್ತಿಯೊಬ್ಬನನ್ನು ಮೇಲಕ್ಕೆತ್ತಲು ಇರುವ ಏಕಮೇವ ಅಥವಾ ಪರಿಣಾಮಕಾರಿ ಉಪಾಯ ಅವನ ಆತ್ಮವಿಶ್ವಾಸದ ಸ್ತರ (Confidence level) ವನ್ನು ಏರಿಸುವುದರಲ್ಲೇ.

ವಿವೇಕಾನಂದರ ಈ ಅಭೂತಪೂರ್ವ ದಿಗ್ವಿಜಯ ಭಾರತದ ಇತಿಹಾಸದಲ್ಲಿ ಇಲ್ಲಿಯವರೆಗೆ ಕಂಡು ಕೇಳರಿಯದಿದ್ದುದು. ಪರಕೀಯರ ಆಕ್ರಮಣದಿಂದ ಅತ್ಯಂತ ದೀನಸ್ಥಿತಿಗೆ ತಳ್ಳಲ್ಪಟ್ಟಿದ್ದೇ ಭಾರತೀಯ ಧರ್ಮ. ಭಾರತದ ದೇವಾಲಯಗಳು ಒಡೆಯಲ್ಪಟ್ಟಾಗ, ಭಾರತೀಯ ಗ್ರಂಥಗಳು ದಹಿಸಲ್ಪಟ್ಟಾಗ ಭಾರತೀಯರು ಶೋಕಾಕ್ರಾಂತರಾದಷ್ಟು ಅವರು ಸಿಂಹಾಸನಗಳನ್ನು ಕಳೆದುಕೊಂಡಾಗ ಆಗಲಿಲ್ಲ. ಇಲ್ಲಿ ಸಿಂಹಾಸನಗಳು ಇರುವುದೇ ಧರ್ಮರಕ್ಷಣೆಗೆ. ಇದಕ್ಕೆ ಜ್ವಲಂತ ಉದಾಹರಣೆಗಳೇ ವಿಜಯನಗರ ಸಾಮ್ರಾಜ್ಯ ಮತ್ತು ಶಿವಾಜಿಯ ಉದಯ. ಭಾರತೀಯನ ಪ್ರಾಬಲ್ಯವಿರುವುದೇ ಅವನ ಧರ್ಮದಲ್ಲಿ. ಯಾವಾಗ ಯುವ ಸಂನ್ಯಾಸಿಯೊಬ್ಬ ಉಳಿದ ಧರ್ಮಗಳು ಹೋಲಿಕೆಗೂ ಅರ್ಹವಲ್ಲದಷ್ಟು ಶ್ರೇಷ್ಠತೆ ಮತ್ತು ಔನ್ನತ್ಯಗಳಿಂದ ತನ್ನ ಧರ್ಮ ಕೂಡಿದೆ ಎಂದು ಪರನಾಡಿನಲ್ಲಿ, ಪರಧರ್ವಿುಯರ ಮುಂದೆ ಅವರ ಭಾಷೆಯಲ್ಲೇ ಅವರು ಒಪ್ಪಿ ಶರಣಾಗುವಂತೆ ಮಾಡಿದನೋ ಆಗ ಇಡೀ ಭಾರತ ಮೈ ಕೊಡವಿಕೊಂಡು ಎದ್ದಿತು. ಎಲ್ಲೋ ಕಣ್ಮರೆಯಾಗಿದ್ದ ರಾಷ್ಟ್ರಪ್ರೇಮ, ಸ್ವಜನಪ್ರೇಮ, ಆತ್ಮವಿಶ್ವಾಸಗಳು ಹಳೆಯ ಬಾಕಿಯ ಸಮೇತ ಪುಟಿದೆದ್ದು ವಿದ್ಯುತ್ ಸಂಚಾರವಾದಂತಾಯ್ತು. ಮುಂದೆ ಬಂದ ಎಲ್ಲ ರಾಷ್ಟ್ರೀಯ ಚಳವಳಿಗಳಿಗೂ ಭದ್ರ ಬುನಾದಿ ಹಾಕಿದ್ದೇ ಸ್ವಾಮಿ ವಿವೇಕಾನಂದರು.

ಮಹರ್ಷಿ ಅರವಿಂದರ ಮಾತಿನಲ್ಲಿ ಹೇಳಬೇಕೆಂದರೆ- Vivekananda's going to the west the subsequent work carried forth by his torch bearers has done more to India than one hundred round table conferences could do. ಒಟ್ಟಿನಲ್ಲಿ ಪೌರ್ವಾತ್ಯ ಪಾಶ್ಚಾತ್ಯಗಳೆರಡೂ ನಶಿಸುತ್ತಿದ್ದ ತಮ್ಮ ಜೀವಸೆಲೆಗಳಿಗೆ ಅಮೃತ ಸಿಂಚನವನ್ನು ಪಡೆದುಕೊಂಡಿದ್ದು ಗೈರಿಕ ವಸ್ತ್ರಧಾರಿ ಸಂನ್ಯಾಸಿಯೊಬ್ಬನಿಂದ. ತ್ಯಾಗದಿಂದಲೇ ಅಮೃತತ್ವ ಸಿದ್ಧಿ ಎಂಬ ವೇದ ಸಂದೇಶವೂ ಇಷ್ಟೇ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)