ಗೌರಣ್ಣ  
ಅಂಕಣ

ಕೈಮಗ್ಗದ ಕಂಬಳಿ; ಚಳ್ಳಕೆರೆಯೇ ನಂ.1

Webdesk - Ravikanth

ಸ್ವದೇಶಿ ಉತ್ಪನ್ನ ತಯಾರಿಕೆಯೇ ಈಗಿನ ಕೇಂದ್ರ ಸರ್ಕಾರದ ಮೊದಲ ಆದ್ಯತೆ. ಆ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ‘ಮೇಕ್ ಇನ್ ಇಂಡಿಯಾ’ ಕಲ್ಪನೆ ಘೋಷಿಸಿದ್ದಾರೆ. ಇದಕ್ಕೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ನೇಕಾರರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಸುಮಾರು 6,000 ನೇಕಾರರು ಸ್ವದೇಶಿ ಉತ್ಪನ್ನ ತಯಾರಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

| ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ

‘ಅಂಬಲಿಯಂಥ ಊಟವಿಲ್ಲ, ಕಂಬಳಿಯಂಥ ಹೊದಿಕೆಯಿಲ್ಲ’ ಎಂಬ ಗಾದೆ ನಮ್ಮ ಜನಪದ ಅಂಬಲಿ ಮತ್ತು ಕಂಬಳಿ ಬಗೆಗಿನ ಪ್ರೀತಿಯನ್ನು ಅಭಿವ್ಯಕ್ತಗೊಳಿಸುತ್ತದೆ. ಕಂಬಳಿಗೂ ನಮಗೂ ಅವಿನಾಭಾವ ಸಂಬಂಧವಿದೆ. ದೈನಂದಿನ ಬಳಕೆಯಿಂದ ಹಿಡಿದು ಧಾರ್ವಿುಕ ಪೂಜೆ ಪುನಸ್ಕಾರಗಳವರೆಗೆ ಈ ಉಣ್ಣೆಯ ವಸ್ತ್ರಕ್ಕೆ ಬೇಡಿಕೆ ಇದೆ. ವಿಜ್ಞಾನ ನಗರಿಯಾಗಿ ರೂಪುಗೊಳ್ಳುತ್ತಿರುವ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಉತ್ಕೃಷ್ಟ ಕಂಬಳಿಗಳ ಉತ್ಪಾದನೆಯಲ್ಲೂ ನಂ.1 ಸ್ಥಾನದಲ್ಲಿದೆ. ಪ್ರಧಾನಿ ಮೋದಿ ಘೊಷಣೆಗೂ ಮುಂಚೆಯೇ ಇಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆ ಸಾಕಾರಗೊಂಡಿದೆ. ಚಳ್ಳಕೆರೆ ತಾಲೂಕೊಂದರಲ್ಲೇ ಉಣ್ಣೆ ಕೈಮಗ್ಗ ನೇಕಾರರ 18 ಸಂಘಗಳಿವೆ. ಕಡಿಮೆ ಎಂದರೂ 6000 ನೇಕಾರರು ಸ್ವದೇಶಿ ಉತ್ಪನ್ನ ತಯಾರಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಸಣ್ಣ ಬಂಡವಾಳದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಉಣ್ಣೆ ಕಂಬಳಿಗಳ ಮಾರಾಟಕ್ಕೆ ದೇಶದ ಏಕೈಕ ದೊಡ್ಡ ಮಾರುಕಟ್ಟೆ ಎಂದರೆ ಅದು ಚಳ್ಳಕೆರೆ! ಪ್ರತಿ ಭಾನುವಾರದ ಸಂತೆಗೆ ಇಲ್ಲಿಗೆ 30 ಸಾವಿರದಷ್ಟು ಕಂಬಳಿ ಬರುತ್ತವೆ. ಈ ಪೈಕಿ ಚಳ್ಳಕೆರೆ ತಾಲೂಕಿನವೇ 10 ಸಾವಿರ ಇದ್ದರೆ, ಇನ್ನುಳಿದವು ಮೊಳಕಾಲ್ಮೂರು, ಪಾವಗಡ, ನೆರೆಯ ಆಂಧ್ರದ ಕಲ್ಯಾಣದುರ್ಗ, ರಾಯದುರ್ಗದಿಂದ ಬರುತ್ತವೆ. ಒಂದು ಸಂತೆಯ ವಹಿವಾಟು 15-20 ಲಕ್ಷ ರೂ. ಮೀರುತ್ತದೆ. ನೆರೆರಾಜ್ಯಗಳ ವರ್ತಕರೂ ಇಲ್ಲಿಗೆ ಬರುತ್ತಾರೆ. ಕೇರಳ, ಕೊಡಗು, ಕಾರವಾರ, ಮಂಗಳೂರು ಭಾಗದಲ್ಲಿ ಚಳ್ಳಕೆರೆ ಬ್ರ್ಯಾಂಡ್​ನ ಕಂಬಳಿಗಳಿಗೆ ಬೇಡಿಕೆ ಹೆಚ್ಚು.

ಬೆಳಗಾವಿಯಲ್ಲಿ ಕುಂಠಿತ: ನೇಕಾರಿಕೆಯಲ್ಲಿ ಈ ಮೊದಲು ಬೆಳಗಾವಿ ಮೊದಲ ಸ್ಥಾನದಲ್ಲಿತ್ತಾದರೂ ಇತ್ತೀಚಿಗೆ ಅಲ್ಲಿಯೂ ನೇಯ್ಗೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆ ಸ್ಥಾನವನ್ನು ಇದೀಗ ಚಳ್ಳಕೆರೆ ಆಕ್ರಮಿಸಿದೆ.

ನೇಕಾರರ ಸಂಘಗಳಿರುವ ಊರು: ದೊಡ್ಡ ಉಳ್ಳಾರ್ತಿ, ಗೊರ್ಲಕಟ್ಟೆ, ನನ್ನಿವಾಳ, ಚಿಕ್ಕಮಧುರೆ, ಗಂಜಿಗುಂಟೆ, ಗೋಪನಹಳ್ಳಿ, ಗೊರ್ಲತ್ತು, ಲಕ್ಷ್ಮೀಪುರ, ಚಿಕ್ಕಹಳ್ಳಿ, ನಾಯಕನಹಟ್ಟಿ, ಕಾಮಸಮುದ್ರ, ಪಗಡಲಬಂಡೆ, ಓಬಳಾಪುರ, ಕೆರೆಯಾಗಳ ಹಳ್ಳಿ, ಪರಶುರಾಂಪುರ, ಕೋಟೆ ಓಬಳಾಪುರ, ನೇರ್ಲಗುಂಟೆ, ರಂಗವ್ವನಹಳ್ಳಿ, ಕರೀಕೆರೆ, ಚೌಳೂರು. ಈ ಊರುಗಳಲ್ಲಿ ಈಗಲೂ ಕಲಬೆರಕೆ ಇಲ್ಲದ ಶೇ.100 ನೈಜ ಉಣ್ಣೆ ಬಳಸಿ ರಾಟೆಯಿಂದ ನೂಲು ತೆಗೆದು ಕಂಬಳಿ ಸಿದ್ಧಪಡಿಸುವ ಕಸುಬುದಾರರನ್ನು ಕಾಣಬಹುದು.

ತಮಿಳುನಾಡಿನಿಂದ ಉಣ್ಣೆ ಖರೀದಿ: ತಮಿಳುನಾಡಿನ ಆಂಬೂರಲ್ಲಿ ಚರ್ಮ ಹದ ಮಾಡುವ ಕಾರ್ಖಾನೆ ಇದೆ. ಅಲ್ಲಿ ಕುರಿ ಚರ್ಮದಿಂದ ಬೇರ್ಪಡಿಸುವ ಉಣ್ಣೆಯನ್ನು ಯಂತ್ರಗಳ ಮೂಲಕ ಕಂಬಳಿ ತಯಾರಿಸಲು ಬಳಸುತ್ತಾರೆ. ಆದರೆ ಕೈಮಗ್ಗ ಬಳಕೆ ಮಾಡುವವರು ಸ್ಥಳೀಯ ಉಣ್ಣೆಯನ್ನೇ ನೆಚ್ಚಿಕೊಂಡಿದ್ದಾರೆ.

ಯಂತ್ರಗಳ ಕೊಕ್ಕೆ: ಇತ್ತೀಚೆಗೆ ಯಂತ್ರಗಳ ಬಳಕೆ ಹೆಚ್ಚುತ್ತಿದ್ದು ಗ್ರಾಮಿಣ ಗುಡಿ ಕೈಗಾರಿಕೆಗೆ ಹೊಡೆತ ಬಿದ್ದಿದೆ. ಅವು ನಮ್ಮ ದುಡಿಮೆಯನ್ನೇ ಕಸಿದಿರುವುದು ಮಾತ್ರವಲ್ಲ. ಬೆಲೆಯಲ್ಲಿ ಕೂಡ ಪೈಪೋಟಿಗಿಳಿದಿವೆ ಎಂಬುದು ನೇಕಾರರ ಅಳಲು. ಕುಟುಂಬದ ಮೂವರು ಸೇರಿ ನೈಜ ಉಣ್ಣೆ ಬಳಸಿ ವಾರಕ್ಕೆ 46/10 ಅಡಿಯ ಮೂರು ಕಂಬಳಿ ತಯಾರಿಸಿ ಇವನ್ನು 3000-4000 ರೂ.ಗೆ ಮಾರುವಷ್ಟರಲ್ಲಿ ಸಾಕಾಗುತ್ತದೆ. ಆದರೆ, ಯಂತ್ರಗಳು ದಿನಕ್ಕೆ 20ಕ್ಕೂ ಹೆಚ್ಚು ಉತ್ಪಾದಿಸುತ್ತವೆ. ಇಲ್ಲಿ ಉಣ್ಣೆ ಜತೆ ಕರಿಬಟ್ಟೆ, ಪಾಲಿಸ್ಟರ್, ನೈಲನ್, ಸಿಲ್ಕ್ ಮಿಶ್ರಿತ ವಸ್ತು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಪೂರಕವೂ ಅಲ್ಲ ಎಂಬುದು ನೇಕಾರರ ವಾದ.

ಋಗ್ವೇದದ ಕಾಲದಿಂದಲೂ ಉಣ್ಣೆ ವಸ್ತ್ರ ಬಳಕೆ: ಋಗ್ವೇದ ಕಾಲದಿಂದಲೂ ಉಣ್ಣೆಯ ವಸ್ತ್ರ ಬಳಕೆ ಭಾರತದಲ್ಲಿ ಇತ್ತೆಂಬುದಕ್ಕೆ ಆಧಾರವಿದೆ. ಪುರಾತನ ಕಾಲದಿಂದಲೂ ಕನ್ನಡನಾಡು ಕಂಬಳಿ ತಯಾರಿಕೆಯಲ್ಲಿ ತನ್ನದೇ ಛಾಪು ಮೂಡಿಸಿತ್ತು. ಮೈಸೂರು ಅರಸರು ಸಹ ಕುರಿಸಾಕಣೆ, ಉಣ್ಣೆ ಉದ್ಯಮಕ್ಕೆ ಉದಾರ ನೆರವು ನೀಡಿದ್ದರು.

ಕತ್ತರಿ ಉಣ್ಣೆ ಡಿಮಾಂಡ್: ಚಳ್ಳಕೆರೆ ಭಾಗದಲ್ಲಿ ಕುರಿಗಳಿಗೆ ಸಣ್ಣಜೀವ ಎಂದೇ ಕರೆಯಲಾಗುತ್ತದೆ. ತಾಲೂಕಿನಲ್ಲಿ ಬಳ್ಳಾರಿ, ಡೆಕಿನಿ ತಳಿಯ ಸರಿ ಸುಮಾರು 5.25 ಲಕ್ಷ ಕುರಿ, ಮೇಕೆಗಳಿವೆ. ಈ ಪೈಕಿ ಉಣ್ಣೆ ಕುರಿಗಳ ಸಂಖ್ಯೆಯೇ 4 ಲಕ್ಷದಷ್ಟಿದೆ. ಪ್ರತಿ ಆರು ತಿಂಗಳಿಗೊಮ್ಮೆ ಜೀವಂತ ಕುರಿಗಳ ಉಣ್ಣೆ ಕತ್ತರಿಸಲಾಗುತ್ತದೆ. ಒಂದು ಕುರಿಯಿಂದ ಮುಕ್ಕಾಲು ಕೆಜಿಯಷ್ಟು ಸಿಗುತ್ತದೆ. ಕತ್ತರಿ ಬಳಸುವುದರಿಂದ ಇದಕ್ಕೆ ಕತ್ತರಿ ಉಣ್ಣೆ ಎಂದೇ ಹೇಳಲಾಗುತ್ತದೆ.

ವೆರೈಟಿಗಳು

  • ಗದ್ದಿಗೆ ಕಂಬಳಿ
  • ಕರಿ ಕಂಬಳಿ
  • ಬೆಲ್ಲದ ಅಚ್ಚು ಕಂಬಳಿ 
  • ಮಟ್ಟೆ ಕಂಬಳಿ
  • ಮಬ್ಬು (ಬೂದು) ಕಂಬಳಿ
  • ಬಿಳಿ ಕಂಬಳಿ 
  • ಕುಚ್ಚು ಕಂಬಳಿ

ನೇಕಾರರಿಗೆ ವರ್ಷಕ್ಕೆ 2 ಸಾವಿರ ರೂ. ಪೋ›ತ್ಸಾಹಧನ ನೀಡಲಾಗುತ್ತದೆ. ಇದರಿಂದ ಸಮಸ್ಯೆ ನಿವಾರಣೆ ಆಗುವುದಿಲ್ಲ. ಪ್ರತಿ ತಿಂಗಳು 3 ಸಾವಿರ ರೂ. ನೀಡಬೇಕು.

| ಪಾತಲಿಂಗಪ್ಪ ಕಾರ್ಯದರ್ಶಿ, ತಾಲೂಕು ಉಣ್ಣೆ ಕೈಮಗ್ಗ ನೇಕಾರರ ಸಂಘ, ಚಳ್ಳಕೆರೆ

ಕೈಮಗ್ಗ ನೇಕಾರರ ಕಸುಬು ಪೋಷಿಸಲು ನ್ಯಾಯಬೆಲೆ ಅಂಗಡಿಗಳ ಮೂಲಕ ಕಂಬಳಿ ವಿತರಣೆಗೆ ಅವಕಾಶ ಕಲ್ಪಿಸುವ ಜತೆಗೆ ವಿದ್ಯಾರ್ಥಿ ನಿಲಯ ಹಾಗೂ ಮಿಲಿಟರಿ ವಲಯಕ್ಕೆ ಸರಬರಾಜು ಮಾಡುವ ಮೂಲಕ ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಬಲಪಡಿಸಬೇಕು.

| ದೊಡ್ಡ ಉಳ್ಳಾರ್ತಿ ಕರಿಯಣ್ಣ ನಿರ್ದೇಶಕ, ಉಣ್ಣೆ ಕೈಮಗ್ಗ ನೇಕಾರರ ಸಂಘ, ದೊಡ್ಡ ಉಳ್ಳಾರ್ತಿ