ಅಂಕಣ

ಗುರುವಿನ ತತ್ವ ಸತ್ವ ಮಹತ್ವ

Webdesk - Manjunatha B

ಗುರು ತನ್ನ ಜೊತೆಗೆ ಇದ್ದಾನೆ ಎಂಬ ಭಾವನೆಯೇ ಭಕ್ತನಿಗೆ ಆನೆ ಬಲ ತುಂಬುತ್ತದೆ. ಜೀವನವನ್ನು ಪ್ರೀತಿಸುವ, ಎದುರಿಸುವ ಧೈರ್ಯ, ಶಕ್ತಿಯನ್ನು ವೃದ್ಧಿಸುತ್ತದೆ. ಗುರುಬಲವು ಕ್ಷಾತ್ರತೇಜಕ್ಕೆ ಬೆಂಬಲವಾಗಿ ನಿಂತು ಮುನ್ನಡೆಸಿದ ಅದೆಷ್ಟೋ ನಿದರ್ಶನಗಳು ನಮ್ಮ ಇತಿಹಾಸದಲ್ಲಿ ಇವೆ. ಹಿಂದೂ ಹೃದಯ ಸಾಮ್ರಾಟ ಶಿವಾಜಿಯ ಹೃದಯದಲ್ಲಿ ಬೆಳಗುತ್ತಿದ್ದವರು ಸಮರ್ಥ ರಾಮದಾಸರು. ಹಕ್ಕ ಬುಕ್ಕರ ಮೂಲಕ ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದವರು ವಿದ್ಯಾರಣ್ಯರು.

ನಾಗರಾಜ ಇಳೆಗುಂಡಿ
ಒಮ್ಮೆ ಒಬ್ಬ ತಾಯಿ ತನ್ನ ಮೂಕ ಮಗನನ್ನು ಕರೆದುಕೊಂಡು ಶ್ರೀಧರ ಸ್ವಾಮಿಗಳ ದರ್ಶನಕ್ಕೆ ಬಂದಿದ್ದಳು. ಅಲ್ಲಿ ಬಹಳ ಜನ ಸೇರಿದ್ದರು. ಶ್ರೀಗಳ ದೃಷ್ಟಿ ತನ್ನ ಮೇಲೆ ಬೀಳುತ್ತದೆಯೋ ಇಲ್ಲವೋ ಎಂಬ ಅನುಮಾನ ಆಕೆಗೆ. ಅಂತೂ ಶ್ರೀಧರರು ಆ ತಾಯಿ-ಮಗನನ್ನು ಗಮನಿಸಿ, ‘ಏನಪ್ಪ ಚೆನ್ನಾಗಿದ್ದೀಯಾ’ ಎಂದು ಕೇಳಿದರು. ಕೂಡಲೇ ಆ ಹುಡುಗ ‘ಎಲ್ಲ ನಿಮ್ಮ ದಯೆ ಸ್ವಾಮಿ ಚೆನ್ನಾಗಿದಿವಿ’ ಎಂದು ಹೇಳಿದ. ತಾಯಿಗೆ ಇದನ್ನು ಕಂಡು ನಂಬಲಿಕ್ಕೇ ಆಗಲಿಲ್ಲ. ಆವರೆಗೆ ಮಾತು ಬಾರದ ಹುಡುಗ ಇದ್ದಕ್ಕಿದ್ದಂತೆ ಮಾತಾಡಲು ಶುರು ಮಾಡಿದ್ದ.

ಶ್ರೀಧರರು ಕೇವಲ ಉಪದೇಶ ಮಾಡಿ ಸುಮ್ಮನಾಗುವವರಲ್ಲ. ಹೇಳಿದ್ದನ್ನು ಆಚರಿಸುವವರು. ಒಮ್ಮೆ ಅವರು ದಾರಿಯಲ್ಲಿ ಹೋಗುತ್ತಿದ್ದಾಗ, ಪಂಡಿತರೊಬ್ಬರು ಶೇಂಗಾ ಬೀಜವನ್ನು ಬಿಡಿಸಿ ತಿನ್ನುತ್ತ ಸಿಪ್ಪೆಯನ್ನು ರಸ್ತೆ ಮೇಲೆ ಎಸೆಯುತ್ತಿದ್ದರು. ಇನ್ನೊಬ್ಬ ಪಂಡಿತರು ತಾಂಬೂಲ ಜಗಿಯುತ್ತ ರಸವನ್ನು ಪಿಚಕ್ಕೆಂದು ರಸ್ತೆ ಮೇಲೆ ಉಗುಳುತ್ತಿದ್ದರು. ಇದನ್ನು ಗಮನಿಸಿದ ಶ್ರೀಧರರು ಅವರನ್ನು ಉದ್ದೇಶಿಸಿ, ‘ನೀವು ಜನಸಾಮಾನ್ಯರಿಗೆ ಆದರ್ಶರಾಗಿರಬೇಕಾದವರು. ಆದರೆ ನಿಮ್ಮ ವರ್ತನೆ ವಿಚಿತ್ರವಾಗಿದೆ. ಚರಂಡಿ ಇರುವುದೇ ಇಂಥ ಅನಾವಶ್ಯಕ ವಸ್ತುಗಳನ್ನು ಹಾಕಲಿಕ್ಕಾಗಿ. ಹೀಗೆ ರಸ್ತೆ ಮೇಲೆ ಎಸೆದರೆ ತೊಂದರೆ ಮಾತ್ರವಲ್ಲ ಆರೋಗ್ಯಕ್ಕೂ ಹಾನಿಕಾರಕ’ ಎಂದು ಹೇಳಿ ತಾವೇ ಆ ಕೊಳಕನ್ನು ಎತ್ತಿ ಸ್ವಚ್ಛ ಮಾಡಲು ಮುಂದಾದರು. ಆಗ ಆ ಪಂಡಿತರಿಗೆ ತಪ್ಪಿನ ಅರಿವಾಗಿ ಕ್ಷಮೆ ಕೇಳಿದರು. ಅಲ್ಲದೆ ತಾವು ಎಸೆದಿದ್ದ ಹೊಲಸನ್ನು ಸ್ವಚ್ಛಗೊಳಿಸಿದರು.

ಶ್ರೀ ಶ್ರೀಧರ ಸ್ವಾಮಿಗಳ ಜೀವನಯಾನದಲ್ಲಿ ನಡೆದ ಈ ಘಟನೆಗಳು ಶ್ರದ್ಧಾಳುಗಳ ನಂಬಿಕೆ, ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವಂಥವು. ಶ್ರೀಧರರ ಜೀವನಚರಿತ್ರೆಯಲ್ಲಿ ಈ ಸಂಗತಿಗಳು ಉಲ್ಲೇಖ ಆಗಿವೆ. ಅವರ ಜೀವನದಲ್ಲಿ ಇಂಥ ಎಷ್ಟೋ ಪ್ರಸಂಗಗಳು ಘಟಿಸಿವೆ. ಗುರು ಕರುಣೆ ಇದ್ದರೆ ಮೂಕನೂ ಮಾತಾಡಬಲ್ಲ; ಅಂಗವಿಕಲನು ಸಹ ಪರ್ವತವನ್ನು ಏರಬಲ್ಲ ಎಂಬುದು ಉಕ್ತಿ. ನಮ್ಮ ದೇಶದ ಅನೇಕ ಆಧ್ಯಾತ್ಮಿಕ-ಧಾರ್ವಿುಕ ಸಾಧಕರ ಬದುಕಿನಲ್ಲಿ ಇಂಥ ಪ್ರಸಂಗಗಳು ದಾಖಲಾಗಿವೆ. ಮೇಲ್ನೋಟಕ್ಕೆ ಇವೆಲ್ಲ ಒಂದು ರೀತಿಯ ಪವಾಡ ಎನಿಸಬಹುದು. ಆದರೆ ಶ್ರೀಧರರಂತಹ ಮಹಿಮರು ಈ ರೀತಿಯ ಕಾರ್ಯಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡವರಲ್ಲ. ಅವರ ಜೀವಿತೋದ್ದೇಶ ದೊಡ್ಡದಿತ್ತು; ವಿನ್ಯಾಸ ವಿಶಾಲವಾಗಿತ್ತು. ಆದರೆ ಸಮಸ್ಯೆ ಹೇಳಿಕೊಂಡು ಬರುವ ಜನರಲ್ಲಿ ಧಾರ್ವಿುಕ, ಆಧ್ಯಾತ್ಮಿಕ ಶಕ್ತಿ ಬಗ್ಗೆ ನಂಬಿಕೆಯನ್ನು ಮೂಡಿಸಿ, ಆ ಮೂಲಕ ಧರ್ಮಪಥದಲ್ಲಿ ಮುನ್ನಡೆಯಲು ಅವರಿಗೆ ಪ್ರೇರಣೆ ನೀಡುವುದು ಅವರ ಗುರಿಯಾಗಿತ್ತು. ಅಲ್ಲದೆ ಇತರರಿಗೂ ಒಂದು ಸಂದೇಶ ಇದರಿಂದ ಸಿಗುತ್ತಿತ್ತು. ಈ ಅಂಶವನ್ನು ಅವರು ಹೇಳಿದ್ದರು ಕೂಡ. ಆಧ್ಯಾತ್ಮಿಕ ಪಿಪಾಸುಗಳು ಸಾಧನೆಯ ಮಾರ್ಗದಲ್ಲಿ ಸಾಗುತ್ತಿರುವಾಗ ಕ್ರಮೇಣ ಅವರಿಗೆ ವಿವಿಧ ಬಗೆಯ ಸಿದ್ಧಿಗಳು, ಶಕ್ತಿಗಳು ಒಲಿಯುತ್ತ ಹೋಗುತ್ತವೆ ಎಂಬುದನ್ನು ಶ್ರೀ ರಾಮಕೃಷ್ಣ ಪರಮಹಂಸರು ಸಹ ಹೇಳುತ್ತಿದ್ದರು. ಜನರ ಕಷ್ಟ ಪರಿಹಾರಕ್ಕಾಗಿ, ಸಾಧಕ ಕೆಲವೊಮ್ಮೆ ಈ ಶಕ್ತಿಯನ್ನು ಬಳಸಬಹುದಾದರೂ ಬರೀ ಅದೇ ಕೆಲಸ ಮಾಡಿಕೊಂಡು ಹೋದರೆ ಅವನ ಸಾಧನಾ ಗಮನ ಚೆದುರಿ ಹಿಂದೆ ಬೀಳುವ ಅಪಾಯ ಇರುತ್ತದೆ ಎಂದು ರಾಮಕೃಷ್ಣರು ಎಚ್ಚರಿಸುತ್ತಿದ್ದರಂತೆ. ಶ್ರೀಧರರ ನಿಲುವು ಸಹ ಅದೇ ಆಗಿತ್ತು.

ಸಾಕ್ಷಾತ್ ಶಿವನೇ ಪಾರ್ವತಿಗೆ ಉಪದೇಶಿಸಿದ ಗುರುಗೀತೆಯಲ್ಲಿ ಗುರುವಿನ ಮಹಿಮೆ ಬಗ್ಗೆ ವಿವರಿಸಿದ್ದಾನೆ ಎಂದರೆ ಮತ್ತೆ ಹೇಳುವುದೇನು.... ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹೋನ್ನತ ಸ್ಥಾನ ನೀಡಲಾಗಿದೆ. ‘ಹರ ಮುನಿದರೆ ನಮ್ಮ ಗುರುವು ಕಾಯುವನು/ಗುರು ಮುನಿದರೆ ಕಾಯುವರ್ಯಾರಿನ್ನು...’ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಮಾತು ಗುರುವಿನ ಮಹತಿಯನ್ನು ಸಾರುತ್ತದೆ. ಹಾಗಂತ ಗುರು ವಿನಾಕಾರಣ ಕೋಪ ಮಾಡಿಕೊಳ್ಳುವವವನಲ್ಲ. ಅವನು ಕರುಣಾ ಸಾಗರ; ಮಮತೆಯ ಮಡಿಲು. ಗುರುವಿನಲ್ಲಿ ತ್ರಿಮೂರ್ತಿಗಳನ್ನು ಕಾಣುವುದು ವಿಶೇಷ. ಹಾಗೆಂದು ಈ ಗೌರವ ಭಾವನೆ ಸುಮ್ಮನೆ ಬಂದಿಲ್ಲ. ನಿರಂತರ ಅನುಷ್ಠಾನ, ತಪೋಬಲದ ಮೂಲಕ ಇಂಥ ಸಿದ್ಧಿಯನ್ನು ಗುರು ಗಳಿಸುತ್ತಾನೆ. ಆ ಹಂತಕ್ಕೆ ತಲುಪಿದಾಗ ಅವನು ಪ್ರತ್ಯಕ್ಷ ದೇವರೇ ಆಗುತ್ತಾನೆ. ಕೇವಲ ಗುರು ಎಂದು ಕರೆಸಿಕೊಂಡರೆ ಸಾಲದು. ಅವರ ಆಚಾರ, ವಿಚಾರ-ಸಾಧನೆಗಳು ಹಾಗಿರಬೇಕು. ಇಂಥ ಅಗಣಿತ ಗುರು ಮಹಿಮಾನ್ವಿತರು ನಮ್ಮ ದೇಶದಲ್ಲಿ ಆಗಿಹೋಗಿದ್ದಾರೆ, ಈಗಲೂ ಇದ್ದಾರೆ. ಗುರು ದೈಹಿಕವಾಗಿ ಮುಕ್ತನಾಗಬಹುದು. ಆದರೆ ಅವನ ಚೈತನ್ಯ ಚಿರಂತನ; ಅದು ಸದಾ ಇರುತ್ತದೆ ಎಂಬುದು ಶ್ರದ್ಧಾಳುಗಳ ಗಾಢನಂಬಿಕೆ. ಅನನ್ಯ ಭಕ್ತಿಯಿಂದ ಬೇಡಿಕೊಂಡರೆ ಗುರು ಒಲಿಯುತ್ತಾನೆ ಎಂಬುದು ಅವರ ವಿಶ್ವಾಸ. ಹೀಗಾಗಿಯೇ ಗುರು ಮುಕ್ತನಾಗಿ ಶತ ಶತಮಾನ ಕಳೆದರೂ ಭಕ್ತರ ಈ ವಿಶ್ವಾಸದಲ್ಲಿ ಕುಂದು ಬರುವುದಿಲ್ಲ.

ಗುರು-ಶಿಷ್ಯರ ಸಂವಾದ ಅಥವಾ ಪ್ರಶ್ನೋತ್ತರ ಎಂಬ ಪರಿಕಲ್ಪನೆಯೇ ನಮ್ಮಲ್ಲಿ ಇದೆ. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎಂಬುದು ನಮ್ಮ ಪ್ರಾಚೀನ ಆದರ್ಶಗಳಲ್ಲಿ ಒಂದು. ‘ಮಠದ ಸ್ವಾಮಿಗಳಿಗೆ ಏನೂ ತೊಂದರೆ ಇಲ್ಲ ಬಿಡಿ. ಭಕ್ತರು ದೇಣಿಗೆ ನೀಡುತ್ತಾರೆ. ಅಕ್ಕಿಬೇಳೆ, ಕಾಯಿ, ಇತ್ಯಾದಿ ಕೊಡುತ್ತಾರೆ. ಇದಲ್ಲದೆ ವಿಐಪಿ ಭಕ್ತರು ಕೊಡುವ ದೇಣಿಗೆ ಬೇರೆ...’ ಹೀಗೆಲ್ಲ ಹಲವರು ಟೀಕೆ ಮಾಡುವುದುಂಟು. ಹೀಗೆ ಹೇಳುವುದು ಸುಲಭ. ಆದರೆ ಒಂದು ಮಠವನ್ನು ನಡೆಸುವ ಕಷ್ಟ ನಡೆಸಿದವರಿಗೇ ಗೊತ್ತು. ದಿನನಿತ್ಯ ಅನ್ನಸಂತರ್ಪಣೆ ಆಗಬೇಕು. ಇತರ ನಿರ್ವಹಣೆ ಖರ್ಚು ಇದ್ದೇ ಇರುತ್ತವೆ. ಕೆಲವು ಮಠಗಳು ಆರ್ಥಿಕ ಸಬಲತೆ ಹೊಂದಿರಬಹುದು. ಇನ್ನೂ ಒಂದು ಸಂಗತಿ ಎಂದರೆ ಎಷ್ಟೋ ಸಂನ್ಯಾಸಿಗಳು ಊಟ ಮಾಡುವ ಪ್ರಮಾಣವೇ ಬಹಳ ಕಡಿಮೆ. ಅವರ ಆಹಾರಕ್ಕೆ ಉಪಯೋಗಿಸುವ ವಸ್ತುಗಳು ಕೂಡ ಕೆಲವು ಮಾತ್ರ.

ಸ್ವರ್ಣವಲ್ಲಿ ಮಠದಲ್ಲಿ ಕಲಸಿ ನರಸಿಂಹಾನಂದ ಸರಸ್ವತೀ ಸ್ವಾಮಿಗಳು ಎಂಬುವವರಿದ್ದರು. ಖೇಚರಿ ಎಂಬ ವಿಶಿಷ್ಟ ಯೋಗಸಾಧಕರಾಗಿದ್ದ ಅವರ ಆಹಾರಕ್ರಮವೂ ವಿಶಿಷ್ಟವಾಗಿತ್ತು. ಗೋಧಿಹಿಟ್ಟಿಗೆ ಬಾಳೆಹಣ್ಣು ಕಲಸಿಕೊಂಡು ದೋಸೆ ಹಾಗೆ ಮಾಡಿಕೊಂಡು ಸೇವಿಸುತ್ತಿದ್ದರು. ಅಷ್ಟೇ ಆಹಾರ. ಸನ್ಯಾಸತ್ವ ಎಂದರೆ ಸುಲಭದ್ದಲ್ಲ. ಇದು ಅಪಾರ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಬೇಡುವಂತಹದು. ಬೆಳಗ್ಗೆ ಬೇಗನೆ ಎದ್ದು ಅನುಷ್ಠಾನ ಪೂರೈಸಬೇಕು. ಮಠದ ದೈನಂದಿನ ಕಾರ್ಯಚಟುವಟಿಕೆ ಗಮನಿಸಬೇಕು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಮಠದ ಭಕ್ತರು, ಅಭಿಮಾನಿಗಳ ಕಷ್ಟಸುಖಕ್ಕೆ ಸ್ಪಂದಿಸಬೇಕು. ಆಗೀಗ ಪ್ರವಾಸ ಬೇರೆ. ಕುಟುಂಬ, ಬಂಧುಬಳಗ, ಲೌಕಿಕ ಆಕರ್ಷಣೆ... ಈ ಎಲ್ಲವನ್ನೂ ತ್ಯಜಿಸಿ ವೈರಾಗ್ಯದತ್ತ ಹೆಜ್ಜೆ ಹಾಕಲು ಗಟ್ಟಿ ಮನಸ್ಥಿತಿಯೇ ಬೇಕು. ಏಕೆಂದರೆ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ ನಂತರ ಬದುಕು ಸಂಪೂರ್ಣವಾಗಿ ಬೇರೆಯದೇ ಆಯಾಮ ಪಡೆಯುತ್ತದೆ.

ಕೊನೇ ಮಾತು: ಒಬ್ಬ ಮಠಾಧೀಶ ಮನಸು ಮಾಡಿದರೆ ತನ್ನ ಸಮುದಾಯದ ಪ್ರಜ್ಞೆ ಯನ್ನು ಎತ್ತರಿಸಬಲ್ಲ ಮತ್ತು ಹೊಸ ಹಾದಿಯನ್ನು ತೋರಿಸಬಲ್ಲ. ಅಂಥ ಶಕ್ತಿಯನ್ನು ಅನುಷ್ಠಾನದ ಮೂಲಕ ಗಳಿಸಿಕೊಂಡಿರಬೇಕು. ಹಲವು ಏಳುಬೀಳುಗಳ ನಡುವೆಯೂ ಭಾರತ ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಂಡು ಬರುವಲ್ಲಿ ಈ ನೆಲದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕತೆ ಮತ್ತು ಧರ್ಮ ಕಾರಣ. ಈ ಆಧ್ಯಾತ್ಮಿಕತೆ ಹಾಗೂ ಧರ್ಮದ ನಿರಂತರ ಹರಿವಿನಲ್ಲಿ ಸನ್ಯಾಸಿಗಳು ಹಾಗೂ ಮಠಮಾನ್ಯಗಳ ಕೊಡುಗೆ ದೊಡ್ಡದು ಎಂಬುದನ್ನು ನಾವು ಮರೆಯಬಾರದು.

ವಿಶೇಷ ಸಮಾರಂಭಕ್ಕೆ ಸ್ವರ್ಣವಲ್ಲೀ ಸಿಂಗಾರ: ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳಿಂದ ಶಿಷ್ಯ ಸ್ವೀಕಾರದ ಪ್ರಮುಖ ಧಾರ್ವಿುಕ ಕಾರ್ಯಕ್ರಮ ಫೆ.22ರಂದು ನಡೆಯಲಿದೆ. ಮೂರು ದಶಕಕ್ಕಿಂತ ಹೆಚ್ಚು ಸಮಯದ ನಂತರ ಏರ್ಪಾಟಾಗಿರುವ ಈ ಸಮಾರಂಭಕ್ಕಾಗಿ ಸ್ವರ್ಣವಲ್ಲೀ ಮಠ ಹಾಗೂ ಗ್ರಾಮ ವಿಶೇಷವಾಗಿ ಸಿಂಗರಿಸಲ್ಪಟ್ಟಿದೆ. ಸಂಸ್ಥಾನದ ಕಂಬ, ಗೋಡೆ, ತಲುಪುವ ಮಾರ್ಗಗಳೆಲ್ಲ ಈಗ ಪುಷ್ಪಾದಿಗಳಿಂದ ಅಲಂಕಾರಗೊಂಡಿವೆ. ಮಠದ 16 ಸೀಮೆಗೆಳ ವ್ಯಾಪ್ತಿಯ ಸಾವಿರಾರು ಪುರುಷ ಮತ್ತು ಮಹಿಳಾ ಕಾರ್ಯಕರ್ತರು ಅನೇಕ ದಿನಗಳಿಂದ ವಿವಿಧ ಜವಾಬ್ದಾರಿಗಳಲ್ಲಿ ತೊಡಗಿಕೊಂಡಿದ್ದು, ಗುರುವಾರದ ಪ್ರಮುಖ ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ. ಬುಧವಾರ ಮಠದಲ್ಲಿ ಬೆಳಗ್ಗೆ ಸನ್ಯಾಸಗ್ರಹಣ ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನಾಂದಿಶ್ರಾದ್ಧ, ಮಾತೃಕಾಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿ ಹವನ ನಡೆಯಿತು. ಮಧ್ಯಾಹ್ನ ಬ್ರಹ್ಮಾನ್ವಾಧಾನ, ಪ್ರಾಣಾದಿಹೋಮ, ಪುರುಷಸೂಕ್ತ ಹವನ, ವಿರಜಾಹೋಮ, ಶ್ರೀಲಕ್ಷ್ಮೀ ನೃಸಿಂಹ ಜಪ ನಡೆದವು.

ಸ್ವರ್ಣವಲ್ಲೀಯಲ್ಲಿ ಸಂಭ್ರಮ: ಸುಮಾರು 1200 ವರ್ಷಗಳ ಇತಿಹಾಸ ಇರುವ, ಶಂಕರ ಪರಂಪರೆಯ ಸ್ವರ್ಣವಲ್ಲೀ ಮಠ ಈಗ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸಾವಿರಾರು ಭಕ್ತರ ಸಂಗಮವಾಗಿದೆ. ಸೇವೆಯ ಸಾಕ್ಷಾತ್ಕಾರವಾಗುತ್ತಿದೆ. ಶಿಷ್ಯ ಸ್ವೀಕಾರ ಸಮಾರಂಭ ಫೆಬ್ರವರಿ 18ರಿಂದ ನಡೆಯುತ್ತಿದ್ದು, ಇಂದು (ಫೆ.22) ಮುಖ್ಯ ಕಾರ್ಯಕ್ರಮ ಇದೆ. ಯಲ್ಲಾಪುರ ತಾಲೂಕಿನ ಕಳಚೆಯ ಈರಾಪುರದ ಗಂಗೆಮನೆಯ ವೇ.ನಾಗರಾಜ ಭಟ್ಟ ಅವರನ್ನು ನೂತನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಇಂದು ಅವರಿಗೆ ನೂತನ ನಾಮಧೇಯ ನೀಡಲಾಗುತ್ತಿದೆ. ಹಾಲಿ ಪೀಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ 33 ವರ್ಷಗಳಿಂದ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಧಾರ್ವಿುಕ, ಆಧ್ಯಾತ್ಮಿಕ ಸಂಗತಿಗಳ ಆಚೆಗೂ ಅವರ ಕಾರ್ಯ ವಿಸ್ತರಿಸಿರುವುದು ವಿಶೇಷ. ಒಬ್ಬ ಯತಿ ಸಮಾಜದ ನೋವು, ನಲಿವುಗಳಿಗೆ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಅವರೊಂದು ಮಾದರಿ. ಬೇಡ್ತಿ ನದಿಗೆ ಅಣೆಕಟ್ಟು ನಿರ್ವಿುಸಲು ಸರ್ಕಾರ ಮುಂದಾದಾಗ 1990ರ ದಶಕದಲ್ಲಿ ಶ್ರೀಗಳ ನೇತೃತ್ವದಲ್ಲಿ ಜನಾಂದೋಲನವೇ ನಡೆಯಿತು. ಆಗ ನಡೆದ ಪಾದಯಾತ್ರೆ ಮತ್ತು ಸಮಾವೇಶ ಐತಿಹಾಸಿಕ ಎನಿಸಿತು. ಪರಿಣಾಮವಾಗಿ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಸರ್ಕಾರ ಕೈಬಿಟ್ಟಿತು. ಭಗವದ್ಗೀತಾ ಅಭಿಯಾನ ಅವರ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ. ಈ ಅಭಿಯಾನ ರಾಜ್ಯದ ಹಲವು ಭಾಗಗಳಲ್ಲಿ ನಡೆದುಕೊಂಡು ಬರುತ್ತಿದೆ. ಮಕ್ಕಳು, ಯುವಜನರು, ಮಹಿಳೆಯರು... ಹೀಗೆ ಎಲ್ಲ ಜನರು ಭಾಗವಹಿಸುವ ಮೂಲಕ ಇದೊಂದು ಬೃಹತ್ ಅಭಿಯಾನವಾಗಿ ಮಾರ್ಪಟ್ಟಿದೆ.

ಇಂದು ಪ್ರಮುಖ ವಿಧಿಗಳು: ಗುರುವಾರ ಬೆಳಗ್ಗೆ ಜಲಾಶಯಾಗಮನ, ಸಾವಿತ್ರೀಪ್ರವೇಶ, ಪ್ರೇಷೋಚ್ಛಾರಣೆ, ಕಾಷಾಯವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂಕಶೌಚ, ಯೋಗಪಟ್ಟ, ಅಕ್ಷರಾಯುತ, ಶ್ರೀಲಕ್ಷ್ಮೀ ನೃಸಿಂಹಮಂತ್ರ ಹವನ, ಪೂರ್ಣಾಹುತಿ, ತೀರ್ಥ ಪ್ರಸಾದ ಕಾರ್ಯಕ್ರಮಗಳು ನಡೆಯಲಿವೆ. ಜಲಾಶಯಗಮನವು ಸಮೀಪದ ಶಾಲ್ಮಲಾ ನದಿಯಲ್ಲಿ ನಡೆಯುವುದು ಶಿಷ್ಯತ್ವ ಸ್ವೀಕಾರದ ವಿಶೇಷ ಕಾರ್ಯಕ್ರಮವಾಗಿದೆ. ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಯೋಗವಾಸಿಷ್ಠ ಪ್ರಥಮ ಸಂಪುಟ ಬಿಡುಗಡೆ ಮಾಡಲಾಗುವುದು. ಹಲವಾರು ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಹಲವು ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ.